ಕರ್ನಾಟಕ ಅರಣ್ಯ ಸಚಿವ ಉಮೇಶ್ ಕತ್ತಿ ಸದನದಲ್ಲಿ ತಪ್ಪು ಮಾಹಿತಿ ನೀಡುವ ಮೂಲಕ ಸದನವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿ ಶಿರಸಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಫರೆಸ್ಟ್ ರೇಂಜ್ ಆಫೀಸರ್ ಆಗಲು ಅಥವಾ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಯಾಗಿ ನೇಮಕವಾಗಲು ಕನಿಷ್ಠ ವಿದ್ಯಾರ್ಹತೆ ಬಿಎಸ್ಸಿ(ಅರಣ್ಯಶಾಸ್ತ್ರ) ಓದಿರಬೇಕು ಎಂದು ಇತೀಚಿಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಹೇಳಿದ್ದರು. ವಿದ್ಯಾರ್ಥಿಗಳು 35-40 ಅಂಕಗಳನ್ನು ಪಡೆಯುತ್ತಿರುವುದರಿಂದ ನಾವು ಮೀಸಲಾತಿಯನ್ನು 75% ರಿಂದ 50ಕ್ಕೆ ಇಳಿಸಿದ್ದೇವೆ ಎಂದು ಸದನದಲ್ಲಿ ಸಚಿವ ಕತ್ತಿ ಮಾಹಿತಿ ನೀಡಿದ್ದರು.
ಕಳೆದ ಮೂರು ವರ್ಷಗಳಲ್ಲಿ ಶಿರಸಿ ಹಾಗೂ ಪೊನ್ನಂಪೇಟೆ ಕಾಲೇಜು ವಿದ್ಯಾರ್ಥಿಗಳು ತೆಗೆದಿರುವ ಅಂಕ ಪಟ್ಟಿಯನ್ನು ತೋರಿಸಿದ ವಿದ್ಯಾರ್ಥಿಗಳು ನಾವುಗಳು ಕನಿಷ್ಠ 82% ಗಳಿಸಿದ್ದೇವೆ. ಆದರೆ, ಕರ್ನಾಟಕ ಸರ್ಕಾರ 2022ರಲ್ಲಿ ಹೊರಡಿಸಿರುವ ಗೆಜೆಟ್ ಅಧಿಸೂಚನೆಯಲ್ಲಿ ಮೀಸಲಾತಿಯನ್ನು ಶೇ 75ರಿಂದ 50ಕ್ಕೆ ಇಳಿಸಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ಸರ್ಕಾರ ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೆ 10 ಲಕ್ಷ ರೂಪಾಯಿಯನ್ನು ಖರ್ಚು ಮಾಡುತ್ತದೆ ಓದು ಮುಗಿಸಿದ ನಂತರ ವಿದ್ಯಾರ್ಥಿಗೆ ಭವಿಷ್ಯವೇ ಇಲ್ಲ ಎಂದ ಮೇಲೆ ಸರ್ಕಾರ ಯಾವ ಕಾರಣಕ್ಕೆ ಇಷ್ಟು ವ್ಯಯಿಸುತ್ತಿದೆ. ಆದ ಕಾರಣ ಅರಣ್ಯ ಇಲಾಖೆಗೆ ಗರಿಷ್ಠ ನೇಮಕಾತಿಗಳು ಆಗುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಕಳೆದ ಎಂಟು ದಿನಗಳಿಂದ ವಿದ್ಯಾರ್ಥಿಗಳು ತರಗತಿಯನ್ನು ಬಹಿಷ್ಕರಿಸಿ ಪ್ರತಿಭಟನೆಯನ್ನ ನಡೆಸುತ್ತಿದ್ದು ಸರ್ಕಾರ ಕೂಡಲೇ ತಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು. ಕಳೆದ ಎರಡು ವರ್ಷಗಳಿಂದ ಎರಡು ಸರ್ಕಾರಿ ಅರಣ್ಯ ಕಾಲೇಜುಗಳಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೇರಗಡೆಯಾಗಿದ್ದಾರೆ. ಆದರೆ, ಅವರುಗಳ ನೇಮಕಾತಿಯಾಗದೆ ಭವಿಷ್ಯದ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ ಎಂದು ವದ್ಯಾರ್ಥಿಗಳು ಆತಂಕವನ್ನು ಹೊರಹಾಕಿದ್ದಾರೆ.