ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಮಂಗಳೂರು ನಗರ ಹಾಗೂ ಹೊರವಲಯದ ಹೋಟೆಲ್‌ಗಳು ಮತ್ತು ಆಹಾರ ತಯಾರಿಕಾ ಘಟಕಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ಕಾರ್ಯಾಚರಣೆ ವೇಳೆ ಆಹಾರ ಸುರಕ್ಷತಾ ನಿಯಮಗಳ ಪಾಲನೆಯಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಪ್ರಸಿದ್ಧ ಐಡಿಯಲ್ ಐಸ್‌ಕ್ರೀಮ್ ಸಂಸ್ಥೆಯ ಕೋಲ್ಡ್ ಸ್ಟೋರೇಜ್ ಘಟಕಕ್ಕೆ ನೋಟಿಸ್ ಜಾರಿಗೊಳಿಸಲಾಗಿದೆ. ಇನ್ನು ತೊಕ್ಕೊಟ್ಟಿನ ಎಂ.ಆರ್. ಸ್ವೀಟ್ಸ್ ಘಟಕದಲ್ಲಿ ಅಶುಚಿತ್ವದ ವಾತಾವರಣದಲ್ಲಿ ತಯಾರಿಸಲಾಗಿದ್ದ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಮಂಗಳೂರು ಹೊರವಲಯದ ಕೊಲ್ಯದಲ್ಲಿರುವ ಐಡಿಯಲ್ ಐಸ್‌ಕ್ರೀಮ್ ಸಂಸ್ಥೆಯ ಕೋಲ್ಡ್ ಸ್ಟೋರೇಜ್ ಘಟಕಕ್ಕೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಐಸ್‌ಕ್ರೀಮ್ ಸಂಗ್ರಹಿಸುವಾಗ ಪಾಲಿಸಬೇಕಾದ ಆಹಾರ ಸುರಕ್ಷತಾ ಕ್ರಮಗಳು ಹಾಗೂ ತಾಪಮಾನ ನಿರ್ವಹಣೆಯ ಕುರಿತು ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ಕೋಲ್ಡ್ ಸ್ಟೋರೇಜ್ ಘಟಕದಲ್ಲಿ ಅನುಸರಿಸಬೇಕಾದ ಅಗತ್ಯ ಸುರಕ್ಷತಾ ಮಾನದಂಡಗಳ ಪಾಲನೆಯಲ್ಲಿ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಸಂಸ್ಥೆಗೆ ನೋಟಿಸ್ ನೀಡಲಾಗಿದೆ.

ತೊಕ್ಕೊಟ್ಟು ಸಮೀಪದ ಸೇವಂತಿ ಗುಡ್ಡೆಯಲ್ಲಿರುವ ಎಂ.ಆರ್. ಸ್ವೀಟ್ಸ್ ಘಟಕದ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪರಿಶೀಲನೆ ವೇಳೆ ಘಟಕದಲ್ಲಿ ಕನಿಷ್ಠ ನೈರ್ಮಲ್ಯವನ್ನೂ ಕಾಪಾಡಿಕೊಳ್ಳದೆ ಸಿಹಿತಿಂಡಿ ಹಾಗೂ ಇತರ ಆಹಾರ ಪದಾರ್ಥಗಳನ್ನು ತಯಾರಿಸುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ.ಅಶುಚಿತ್ವದ ವಾತಾವರಣದಲ್ಲಿ ತಯಾರಿಸಲಾಗಿದ್ದ ಆಹಾರ ಪದಾರ್ಥಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡದಂತೆ ತಡೆಹಿಡಿದ ಅಧಿಕಾರಿಗಳು, ಘಟಕದಲ್ಲಿದ್ದ ಆಹಾರ ಸಾಮಗ್ರಿಗಳ ದಾಸ್ತಾನನ್ನು ಜಪ್ತಿ ಮಾಡಿದ್ದಾರೆ.
ಇದೇ ವೇಳೆ ಕೇರಳ ಗಡಿಭಾಗದ ತಲಪಾಡಿಯಲ್ಲಿರುವ ಉಡುಪಿ ಕೆಫೆ ರೆಸ್ಟೋರೆಂಟ್‌ನ ಅಡುಗೆಮನೆಯನ್ನೂ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದು, ಗುಣಮಟ್ಟದ ಪರೀಕ್ಷೆಗಾಗಿ ಕೆಲವು ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಸೂಚನೆ ಮೇರೆಗೆ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ಅವರ ನೇತೃತ್ವದಲ್ಲಿ ಐದು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಬೇಕರಿಗಳು ಹಾಗೂ ಆಹಾರ ತಯಾರಿಕಾ ಘಟಕಗಳ ಮೇಲೆ ನಿರಂತರವಾಗಿ ದಾಳಿ ನಡೆಸಿ ಪರಿಶೀಲನೆ ಕೈಗೊಳ್ಳುತ್ತಿವೆ.

ಆಹಾರ ತಯಾರಿಕೆಯಲ್ಲಿ ನೈರ್ಮಲ್ಯ ಮತ್ತು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದರೆ ಸಂಬಂಧಪಟ್ಟ ಉದ್ಯಮಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಹೆಚ್ಚುವರಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.






