ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಾಕಿ ಇರುವ ಜಿ ಎಸ್ ಟಿ ಪರಿಹಾರ ಮೊತ್ತವನ್ನ ಬಿಡುಗಡೆ ಮಾಡಲು ಒಪ್ಪಿದ್ದಾರೆ ಎಂದು ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮುಖ್ಯಮಂತ್ರಿಗಳು ಹೇಳುವ ಪ್ರಕಾರ ನಿರ್ಮಲಾ ಸೀತಾರಾಮನ್ ಅವರು 11,800 ಕೋಟಿ ರೂಪಾಯಿ ಜಿ ಎಸ್ ಟಿ ಪರಿಹಾರ ಮೊತ್ತವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ವರ್ಷದ ಬಾಕಿ 11,400 ಕೋಟಿ ರೂಪಾಯಿ ಜಿ ಎಸ್ ಟಿ ಪರಿಹಾರ ಮೊತ್ತವನ್ನ ಬಿಡುಗಡೆ ಮಾಡಲು ಸಚಿವರನ್ನು ವಿನಂತಿಸಿದ್ದೇನೆ ಅದ್ದರಂತೆ ಅವರು ಅದನ್ನು ಕಂತುಗಳಲ್ಲಿ ನೀಡಲು ಒಪ್ಪಿಕೊಂಡಿದ್ದು ತಕ್ಷಣ ಬಿಡುಗಡೆ ಮಾಡಲು ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 18,000 ಕೋಟಿ ರೂಪಾಯಿಗಳ ಜಿ ಎಸ್ ಟಿ ಪರಿಹಾರವನ್ನು ಬಿಡುಗಡೆ ಮಾಡಲು ಮತ್ತು ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳಿಗೆ ಹಣವನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಈ ಸಮಯದಲ್ಲಿ ಕೋರಿದ್ದಾರೆ.
ಸೀತಾರಾಮನ್ ಅವರೊಂದಿಗೆ ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತು ಚರ್ಚಿಸಿದ್ದೇನೆ, ನಬಾರ್ಡ್ ಅಡಿಯಲ್ಲಿ ಹೆಚ್ಚಿನ ಹಣವನ್ನು ರಾಜ್ಯಕ್ಕೆ ಬಿಡುಗಡೆ ಮಾಡುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆಂದು ಮುಖ್ಯಮಂತ್ರಿಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ.