ಮಹಾರಾಷ್ಟ್ರ ಭಾಗದಲ್ಲಿ ಅಬ್ಬರಿಸುತ್ತಿರುವ ಮಳೆ (Rain) ಉತ್ತರ ಕರ್ನಾಟಕದಲ್ಲಿ ಅವಾಂತರವನ್ನೇ ಸೃಷ್ಟಿಸಿದೆ. ನದಿಗಳೆವೂ ಬೋರ್ಗರೆಯುತ್ತಿದ್ದು ಸೇತುವೆಗಳು ಮುಳುಗಿದ್ದರೆ, ಗ್ರಾಮಗಳು ಜಲಾವೃತ ಆಗುತ್ತಿವೆ. ಮಳೆ ಬರಲಿ ಎನ್ನುತ್ತಿದ್ದವರು ಸಾಕಪ್ಪ ಸಾಕು ಎನ್ನುವಂತಾಗಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಭಾರಿ ಮಳೆಯಿಂದ ಕರ್ನಾಟಕದ (Karnataka) ಬಹುತೇಕ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಹೆಚ್ಚುವರಿ ನೀರನ್ನು ನದಿಗಳಿಗೆ ಬಿಡಲಾಗುತ್ತಿದ್ದು, ಉಕ್ಕಿಹರಿಯುತ್ತಿವೆ. ಹೀಗಾಗಿ ಆತಂಕ ಶುರುವಾಗಿದೆ.
ಕೃಷ್ಣಾ ನದಿಗೆ 2.5 ಲಕ್ಷ ಕ್ಯೂಸೆಕ್ ಒಳಹರಿವು ಸಾಧ್ಯತೆ
ಕೃಷ್ಣಾ ನದಿಗೆ ಕ್ಷಣ ಕ್ಷಣಕ್ಕೂ ಒಳ ಹರಿವು ಹೆಚ್ಚುತ್ತಿದ್ದು, ನದಿ ಪಾತ್ರದ ಪ್ರದೇಶಗಳಿಗೆ ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ ರೋಷನ್ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣ ಭೇಟಿ ನೀಡಿದ್ದಾರೆ. ಪರಿಶೀಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಿಂದ ಇಂದು ಸಂಜೆ ಕೃಷ್ಣಾ ನದಿಗೆ 2.5 ಲಕ್ಷ ಕ್ಯೂಸೆಕ್ ಒಳಹರಿವು ಸಾಧ್ಯತೆ ಇದೆ. ಆಲಮಟ್ಟಿ ಡ್ಯಾಂವರೆಗೂ ನಾವು ಪ್ರವಾಹ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದೇವೆ ಎಂದರು.
ಆಲಮಟ್ಟಿ ಡ್ಯಾಂನಿಂದ ಈಗಾಗಲೇ ಎರಡೂವರೆ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಆಗಿದೆ. ಘಟಪ್ರಭಾ ನದಿ ಹಿಡಕಲ್ ಡ್ಯಾಂನಿಂದ 25 ಸಾವಿರ ಕ್ಯೂಸೆಕ್ ಬಿಡುಗಡೆ ಮಾಡಲಾಗಿದ್ದು, ಲೋಳಸೂರ್ ಬ್ರಿಡ್ಜ್‌ನಿಂದ 25 ಸಾವಿರ ಕ್ಯೂಸೆಕ್ ಒಳಹರಿವು ಇದೆ. ಹೀಗಾಗಿ ರಾತ್ರಿ ವೇಳೆ ಕೃಷ್ಣಾ ನದಿಗೆ 3 ಲಕ್ಷ ಕ್ಯೂಸೆಕ್ ನೀರು ರಿಲೀಸ್ ಸಾಧ್ಯತೆ ಇದೆ. ಹೀಗಾಗಿ ನದಿಪಾತ್ರದ ಗ್ರಾಮಗಳಲ್ಲಿ ಮುಂಜಾಗ್ರತಾ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಅಧಿಕಾರಿಗಳ ಜೊತೆ ಮಾತನಾಡಿದ್ದೇವೆ. ಕೋಯ್ನಾ ಡ್ಯಾಂ ಶೇಕಡ 70ರಷ್ಟು ಭರ್ತಿ ಇದ್ದು ಇನ್ನೂ ಶೇಖಡ 30ರಷ್ಟು ಬಾಕಿ ಇದೆ. ನಾವು ಹೇಳಿದ ಬಳಿಕೆ ನದಿ ತೀರದ ಗ್ರಾಮಗಳ ಜನ ಕಾಳಜಿ ಕೇಂದ್ರಕ್ಕೆ ಹೋಗಬೇಕು. ನಾವು ಈಗಾಗಲೇ ಬೋಟ್ ವ್ಯವಸ್ಥೆ ಸೇರಿ ಎಲ್ಲ ವ್ಯವಸ್ಥೆ ಮಾಡಿದ್ದೇವೆ ಎಂದಿದ್ದಾರೆ.
ಮುಳುಗಡೆ ಹಂತಕ್ಕೆ ತಲುಪಿದ ರಾಯಚೂರು-ಯಾದಗಿರಿ-ಕಲಬುರಗಿ ಜಿಲ್ಲೆಗೆ ಸಂಪರ್ಕಿಸುವ ಸೇತುವೆ
ಯಾದಗಿರಿಯ ನಾರಾಯಣಪುರ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಡ್ಯಾಂನಿಂದ ಕೃಷ್ಣಾ ನದಿಗೆ 2.5 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ರಾಯಚೂರಿನ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ.
ಡ್ಯಾಂನಿಂದ ಕೃಷ್ಣಾ ನದಿಗೆ 2.5 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರು ಬಳಿಯ ಸೇತುವೆ ಮುಳುಗಡೆ ಹಂತಕ್ಕೆ ತಲುಪಿದೆ. ರಾಯಚೂರು-ಯಾದಗಿರಿ-ಕಲಬುರಗಿ ಜಿಲ್ಲೆಗೆ ಸಂಪರ್ಕಿಸುವ ಸೇತುವೆ ಆಗಿದೆ. ಸದ್ಯ ಕೊಳ್ಳೂರು ಬಳಿಯ ಸೇತುವೆಗೆ ಅಧಿಕಾರಿಗಳು ಭೇಟಿ ನೀಡಿದ್ದು, ಸಂಜೆ ಬಳಿಕ ಸಂಚಾರ ನಿರ್ಬಂಧ ಸಾಧ್ಯತೆ ಇದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕರಕಲಗಡ್ಡಿ ಸೇರಿ ಕೆಲ ನಡುಗಡ್ಡೆ ಗ್ರಾಮಗಳಿಗೆ ಬೋಟ್ ಮೂಲಕ ವೈದ್ಯಕೀಯ ಕಿಟ್, ಫುಡ್ ಕಿಟ್ಗಳ ಅಗತ್ಯವಸ್ತು ಪೂರೈಕೆ ಮಾಡಲಾಗಿದೆ. ಲಿಂಗಸಗೂರು ಸಹಾಯಕ ಆಯುಕ್ತ ಅವಿನಾಶ್ ಶಿಂಧೆ, ತಹಶೀಲ್ದಾರ್ ಶಂಶಾಲಂ, ಡಿವೈಎಸ್ಪಿ ದತ್ತಾತ್ರೇಯ ನೇತೃತ್ವದಲ್ಲಿ ವಿತರಣೆ ಮಾಡಲಾಗಿದೆ.