ಕಲಬುರಗಿ. ಜಿಲ್ಲೆ ಸೇರಿದಂತೆ ಮಹಾರಾಷ್ಟ್ರ ದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ಭೀಮಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹವಾಗಿದೆ. ಮಹಾರಾಷ್ಟ್ರದಲ್ಲಿ ರೆಡ್ ಅಲರ್ಟ್ ಹಾಗೂ ಜಿಲ್ಲೆಯಲ್ಲಿ ಆರೆಂಜ್ ಅಲೆರ್ಟ್ ಘೋಷಿಸಲಾಗಿದೆ. ಪ್ರವಾಹ ಪರಿಹಾರ ಸಮೋರಾಪದಿಯಲ್ಲಿ ನಡೆಯುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಪ್ರವಾಹ ಪೀಡಿತ ಅಫಜಲ್‌ಪುರ ತಾಲೂಕಿನ ವಿವಿಧ ಭಾಗಗಳಿಗೆ ಭೇಟಿ ನೀಡಿ ಹಾನಿಗೊಳಗಾದ ಪ್ರದೇಶ ಹಾಗೂ ಬೆಳೆ ಹಾನಿ ಜಮೀನುಗಳ ಪರಿಶೀಲನೆ ನಡೆಸಿದ ನಂತರ ಕಲಬುರಗಿ ಯ ಜಿಲ್ಲಾಧಿಕಾರಿ ಕಚೇರಿಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ವಾಡಿಕೆಗಿಂತ ಹೆಚ್ಚು ಮಳೆ:
ಜಿಲ್ಲೆಯಲ್ಲಿ ಜನೇವರಿ 2025 ರಿಂದ ಸೆಪ್ಟೆಂಬರ್ 25.ರವೆಗಿನ ವಾಡಿಕೆ ಮಳೆ 614 ಮಿಮಿ ಇದ್ದು 901 ಮಿಮಿ (ಶೇ 47%) ಹೆಚ್ಚುವರಿ ಮಳೆಯಾಗಿದೆ. ಅಗಷ್ಟ್ ತಿಂಗಳ ವಾಡಿಕೆ 156 ಮಿಮಿ ಇದ್ದು 263 ಮಿಮಿ ( ಶೇ 69%) ಹೆಚ್ಚುವರಿಯಾಗಿದೆ. ಸೆಪ್ಟೆಂಬರ್ 1 ರಿಂದ 25 ರವರೆಗೆ ವಾಡಿಕೆ ಮಳೆ 145 ಮಿಮಿ ಇದ್ದು 202 ಮಿಮಿ (39% ) ಹೆಚ್ಚುವರಿ ಯಾಗಿದೆ. ಕಳೆದ ಒಂದು ವಾರದಿಂದ ವಾಡಿಕೆ ಮಳೆ 47 ಮಿಮಿ ಇದ್ದು 88 ಮಿಮಿ ಮಳೆಯಾಗಿದ್ದು, 85% ಹೆಚ್ಚುವರಿಯಾಗಿದೆ. ಇದರಿಂದಾಗಿ ತೊಗರಿ, ಉದ್ದು, ಹತ್ತಿ, ಹೆಸರು ಸೇರಿದಂತೆ ಪ್ರಮುಖ ಬೆಳೆಗಳು ಹಾನಿಯಾಗಿವೆ ಎಂದರು.

ಪುನರ್ ವಸತಿ ಬೇಡಿಕೆ ಪರಿಶೀಲನೆ:
ಇನ್ನು ಮುಂದಿನ ಮೂರುದಿನಗಳ ಕಾಲ ಜಿಲ್ಲೆಯಲ್ಲಿ ಮಳೆ ಮುಂದುವರೆಯಲಿದ್ದು ನದಿ ಪಾತ್ರದ ಜನರು ಯಾವುದೇ ಕಾರಣಕ್ಕೂ ನದಿಗೆ ಇಳಿಯಬಾರದು ಎಂದು ಮನವಿ ಮಾಡಿದ ಸಚಿವರು, ನದಿ ಪಾತ್ರದ ಕೆಲವು ಕಡೆ ಜನರು ಪುನರ್ ವಸತಿಗಾಗಿ ಆಗ್ರಹಿಸಿದ್ದಾರೆ. ಯಾವ ಗ್ರಾಮದ ಜನರು ಪುನರ್ ವಸತಿ ಬಯಸಿದ್ದಾರೆ ಅವರು ಜಿಲ್ಲಾಡಳಿತಕ್ಕೆ ವಿವರ ಒದಗಿಸಿದರೆ ಆ ಬಗ್ಗೆಯೂ ಕೂಡಾ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
3.45 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ:
ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ 45,000 ಕ್ಯೂಸೆಕ್ಸ್, ಸಿನಾ ಜಲಾಶಯದಿಂದ 2,70,000 ಕ್ಯೂಸೆಕ್ಸ್, ವಿರಾ ಜಲಾಶಯದಿಂದ 30,000 ಕ್ಯೂಸೆಕ್ಸ್ ಹಾಗೂ ಭೋರಿ ಹಳ್ಳದಿಂದ 5,000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿದ್ದರಿಂದ ಭೀಮಾ ನದಿಗೆ 3,50,000 ಕ್ಯೂಸೆಕ್ಸ್ ನೀರು ಹರಿದು ಬಂದಿದೆ. ಅಫಜಲ್ ಪುರ ತಾಲೂಕಿನ ಸೊನ್ನ ಬ್ಯಾರೇಜ್‌ನಿಂದ 3.45 ಲಕ್ಷ ಕ್ಯೂಸೆಕ್ಸ್ ನೀರು ಭೀಮಾ ನದಿಗೆ ಬಿಡಲಾಗಿದೆ ಹಾಗಾಗಿ ನದಿ ಪಾತ್ರದಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಕಾಳಜಿ ಕೇಂದ್ರಗಳ ಸ್ಥಾಪನೆ:
ಜಿಲ್ಲೆಯಲ್ಲಿ ಒಟ್ಟು 36 ಗ್ರಾಮಗಳು ಪ್ರವಾಹ ಪೀಡಿತವಾಗಿವೆ.ಇವುಗಳಲ್ಲಿ ಅಫಜಲ್‌ಪುರ ತಾಲೂಕಿನ 17, ಜೇವರ್ಗಿ ತಾಲೂಕಿನ 8 ಹಾಗೂ ಕಲಬುರಗಿ ಮತ್ತು ಚಿತ್ತಾಪುರ ತಾಲೂಕಿನಲ್ಲಿ ತಲಾ 5 ಗ್ರಾಮಗಳು ಸೇರಿವೆ. ಜಿಲ್ಲೆಯಲ್ಲಿ 31 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದ್ದು, ಅಫಜಲ್‌ಪುರ ತಾಲೂಕಿನ 17, ಜೇವರ್ಗಿ ತಾಲೂಕಿನ 8 ಹಾಗೂ ಕಲಬುರಗಿ ಮತ್ತು ಚಿತ್ತಾಪುರ ತಾಲೂಕಿನಲ್ಲಿ ತಲಾ 5 ಗ್ರಾಮಗಳು ಸೇರಿವೆ.
ಜಿಲ್ಲೆಯಲ್ಲಿ ಒಟ್ಟು 12 ಕಾಳಜಿ ಕೇಂದ್ರಗಳನ್ನು ತೆಗೆಯಲಾಗಿದೆ. ಅಫಜಲ್‌ಪುರ ತಾಲೂಕಿನ 3 ಜೇವರ್ಗಿ ತಾಲೂಕಿನ 8 ಹಾಗೂ ಕಲಬುರಗಿ ತಾಲೂಕಿನಲ್ಲಿ 1 ತೆರೆಯಲಾಗಿದೆ. ಒಟ್ಟು 1436 ಜನರಿಗೆ ಈ ಕಾಳಜಿ ಕೇಂದ್ರಗಳಲ್ಲಿ ವಾಸಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಿಯಾಂಕ್ ವಿವರಿಸಿದರು.

ಆಹಾರ ಪದಾರ್ಥ ಗಳ ಕಿಟ್ ವಿತರಣೆ:
ಮಳೆ ಹಾಗೂ ಪ್ರವಾಹದಿಂದ ಹಾನಿಗೊಳಗಾದ ಗ್ರಾಮಗಳ ಜನರಿಗೆ ಸುಮಾರು 2500 ಆಹಾರ ಸಾಮಗ್ರಿಗಳ ಕಿಟ್ ನ್ನು ಕಲಬುರಗಿ ಸಂಸದರಾದ ರಾಧಾಕೃಷ್ಣ ದೊಡ್ಡಮನಿ ಅವರು ಜಿಲ್ಲಾಡಳಿತದ ಮೂಲಕ ವಿತರಿಸಲಾಗುತ್ತಿದೆ.
ಪರಿಹಾರ ತಂಡ ನಿಯೋಜನೆ:
ಪ್ರವಾಹ ಸಂದರ್ಭದಲ್ಲಿ ರಕ್ಷಣೆ ಕಾರ್ಯ ಕೈಗೊಳ್ಳಲು 20 ಅಧಿಕಾರಿಗಳ ಒಳಗೊಂಡ ಪರಿಣಿತ 1 ಎನ್ ಡಿ ಆರ್ ಎಫ್ ತಂಡವನ್ನು ದೇವಲಗಾಣಗಾಪುರಲ್ಲಿ ಇರಿಸಲಾಗಿದೆ. ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಕಂದಾಯ ಇಲಾಖೆ ಸೇರಿದಂತೆ ಇತರೆ ಇಲಾಖೆ ಗಳ ಅಧಿಕಾರಿಗಳನ್ನು ಸೇವೆಗೆ ನಿಯೋಜಿಸಲಾಗಿದೆ ಎಂದರು.

ಜಂಟಿ ಸಮೀಕ್ಷೆ
ಮಳೆಯಿಂದ ಜಿಲ್ಲೆಯಲ್ಲಿ ಮೇಲ್ಮೋಟದ ಅಂದಾಜಿನಂತೆ 1.05 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿದೆ. ಕೃಷಿ, ಕಂದಾಯ, ತೋಟಗಾರಿಕೆ ಸೇರಿದಂತೆ ಇತರೆ ಇಲಾಖೆಗಳ ಜಂಟಿ ಸಮೀಕ್ಷೆ ನಡೆಸಲಾಗುತ್ತಿದ್ದು ಶೇ 90 ರಷ್ಟು ಸಮೀಕ್ಷೆ ಮುಗಿದಿದೆ. ಪೂರ್ಣ ಸಮೀಕ್ಷೆ ಮುಗಿದ ನಂತರ ಬೆಳೆ ಹಾನಿ ಗೊತ್ತಾಗಲಿದೆ. ಈ ನಡುವೆ ಸೆಪ್ಟೆಂಬರ್ 17 ರಂದು ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ನವರಿಗೆ ಬೆಳೆ ಹಾನಿ ಬಗ್ಗೆ ವಿವರಿಸಲಾಗಿದೆ ಎಂದರು.
ಬೆಳೆವಿಮೆ:
2025-26 ನೇ ಸಾಲಿನ 3,00,952 ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದು, ಶೇ 59 ರೈತರು ಬೆಳೆ ಹಾನಿ ಬಗ್ಗೆ ದೂರು ಸಲ್ಲಿಸಿರುತ್ತಾರೆ. ದೂರು ನೀಡಿದ ರೈತರ ಬೆಳೆ ಹಾನಿ ಸಮೀಕ್ಷೆ ಶೇ 75 ಮುಗಿದಿದೆ. ಈಗಾಗಲೇ 2024-25 ನೇ ಸಾಲಿನ ಎರಡನೆಯ ಕಂತಿನ ಬೆಳೆವಿಮೆ ಪರಿಹಾರವಾಗಿ ರೂ 315.64 ಕೋಟಿ ಬಿಡುಗಡೆಯಾಗಿದ್ದು ಸಧ್ಯದಲ್ಲೇ ರೈತರ ಅಕೌಂಟ್ ಗೆ ಜಮೆಮಾಡಲಾಗುವುದು ಎಂದು ಸಚಿವರು ಹೇಳಿದರು.

ಪರಿಹಾರ:
ಬೆಳೆ ಪರಿಹಾರ ಸೇರಿದಂತೆ ರೈತರಿಗೆ ಸೇರಬೇಕಾಗಿರುವ ಪರಿಹಾರ ಒದಗಿಸಿಕೊಡುವಲ್ಲಿ ಕಾಂಗ್ರೆಸ್ ಸರ್ಕಾರ ಬಿಜೆಪಿಗಿಂತಲೂ ಮುಂದಿದೆ ಆದರೂ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಚಿವರು, 2023-24 ರ ಸಾಲಿನಲ್ಲಿ ಇನ್ ಪುಟ್ ಸಬ್ಸಿಡಿ ಹಾಗೂ ಬೆಳೆ ವಿಮೆ ಸೇರಿದಂತೆ 8,91,277 ರೈತರಿಗೆ ರೂ 1417 ಕೋಟಿ ಪರಿಹಾರ ಒದಗಿಸಲಾಗಿದೆ. 2023-24 ಹಾಗೂ 2014-25 ರ ಸಾಲಿನ ಬೆಳೆ ವಿಮೆಯಾಗಿ 3,63,368 ರೈತರಿಗೆ ರೂ 846.03 ಕೋಟಿ ಪರಿಹಾರ ಒದಗಿಸಲಾಗಿದೆ.ಕಲಬುರಗಿ ಜಿಲ್ಲೆಯಲ್ಲಿ ನೆಟೆರೋಗದಿಂದ ತೊಗರಿ ಬೆಳೆ ಹಾನಿಯಾದಾಗ 1,78,354 ರೈತರಿಗೆ ರೂ 182 ಕೋಟಿ ಪರಿಹಾರ ನೀಡಲಾಗಿದೆ. ಬರ/ ನೆರೆಪರಿಹಾರವಾಗಿ ರೂ 389.14 ಕೋಟಿ ಪರಿಹಾರ ನೀಡಲಾಗಿದೆ. ಬಿಜೆಪಿಯ ಅಧಿಕಾರವಾಧಿಯಲ್ಲಿ ರೂ 206 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿತ್ತು. ಬಿಜೆಪಿ ನಾಯಕರು ಎನ್ ಡಿ ಆರ್ ಎಫ್ ನಿಯಮಾವಳಿಗಳ ಸರಳೀಕರಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಿ ಎಂದರು.

ಬಿಜೆಪಿಗೆ ಉತ್ತರದಾಯಿಯಲ್ಲ:
ಸಚಿವ ಖರ್ಗೆ ಕಾಣೆಯಾಗಿದ್ದಾರೆ ಎನ್ನುವ ಬಿಜೆಪಿ ಸೋಷಿಯಲ್ ಮೀಡಿಯಾ ಪೋಸ್ಟ್ ವಿಚಾರ, ನಾನು ಬಿಜೆಪಿಗೆ ಉತ್ತರದಾಯಿಯಲ್ಲ. ನಾನು ಜನರಿಗೆ ಮಾತ್ರ ಉತ್ತರದಾಯಿಯಾಗಿರುತ್ತೇನೆ. ನನ್ನ ಹೆಸರು ಹೇಳಿದರೆ ಅವರಿಗೆ ಮುಂಬಡ್ತಿ ಸಿಗುತ್ತದೆ. ಹಾಗಾಗಿ, ಮೊದಲು ಸಿಎಂ, ನಂತರ ಡಿಸಿಎಂ ಹಾಗೂ ತದನಂತರ ನನಗೆ ಅವರು ಬೈಯುತ್ತಾರೆ ಎಂದು ಟೀಕಿಸಿದರು.