ಬ್ರೇಜಿಲ್ ನಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಪ್ರವಾಹ ಉಂಟಾಗಿದೆ. ಪ್ರವಾಹದಿಂದಾಗಿ ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಬ್ರೆಜಿಲ್‌ನ ದಕ್ಷಿಣ ರಾಜ್ಯವಾದ ರಿಯೊ ಗ್ರಾಂಡೆ ಡೊ ಸುಲ್‌ನಲ್ಲಿ ಉಂಟಾದ ಪ್ರವಾಹಕ್ಕೆ ಸಿಲುಕಿ ಸುಮಾರು 105 ಜನ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೀಗಾಗಿ ಸುಮಾರು 1,15,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಕುಸಿದ ಮನೆಗಳು, ಸೇತುವೆಗಳು ಮತ್ತು ರಸ್ತೆಗಳ ಅವಶೇಷಗಳ ಕೆಳಗೆ ಸಿಲುಕಿರುವವರನ್ನು ಪತ್ತೆಹಚ್ಚಲು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. 3 ಸಾವಿರಕ್ಕೂ ಅಧಿಕ ಸೈನಿಕರು (Rescue Official), ಅಗ್ನಿಶಾಮಕ ಸಿಬ್ಬಂದಿ ಮತ್ತು ಇತರ ರಕ್ಷಕರಿಂದ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ನೀರು, ವಿದ್ಯುತ್ ಇಲ್ಲದೆ ಮನೆಗಳಲ್ಲಿ ಸಿಲುಕಿರುವ ಜನರ ರಕ್ಷಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಲವೆಡೆ ಭೂಕುಸಿತ ಉಂಟಾಗಿ ರಸ್ತೆಗಳು ಬಂದ್ ಆಗಿವೆ. ರಿಯೊ ಗ್ರಾಂಡೆ ಡೊ ಸುಲ್ ಹೆಚ್ಚು ಪರಿಣಾಮ ಬೀರಿದೆ. ಈ ನಡುವೆ ಡಾಟ್‌ಕಾಂ ಎಂಬ ಕಂಪನಿಯ ಕಟ್ಟಡದಲ್ಲಿ ಕೆಲವರು ಸಿಲುಕಿಕೊಂಡಿದ್ದಾರೆ. ಕೆಲವಡೆ ಹಸಿವಿನಿಂದ ಮಕ್ಕಳು, ವಯೋವೃದ್ಧರು ಬಳಲುತ್ತಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಗವರ್ನರ್ ಲೀಟ್ ತಿಳಿಸಿದ್ದಾರೆ.