ಕೇಂದ್ರದಲ್ಲಿ ಮೀನುಗಾರಿಕಾ ಸಚಿವಾಲಯ ಸ್ಥಾಪನೆ ಕುರಿತಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರ ಮತ್ತೆ ಮುಂದುವರೆದಿದೆ. ಪುದುಚೆರಿಯಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ನಿರತರಾಗಿರುವ ಅಮಿತ್ ಶಾ ಅವರು, ಕಾಂಗ್ರೆಸ್ ನಾಯಕ ರಾಃಉಲ್ ಗಾಂಧಿ ವಿರುದ್ದ ಕಿಡಿಕಾರಿದ್ದಾರೆ.
ಕಳೆದ ವಾರ ಪುದುಚೆರಿಯಲ್ಲಿ ಪ್ರಚಾರದಲ್ಲಿ ತೊಡಗಿದ್ದ ರಾಹುಲ್ ಗಾಂಧಿ ಅವರು, ಕೇಂದ್ರ ಸರ್ಕಾರ ಮೀನುಗಾರರಿಗಾಗಿ ಕೇಂದ್ರ ಸರ್ಕಾರದಲ್ಲಿ ಮೀನುಗಾರಿಕಾ ಸಚಿವಾಲಯವನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಉತ್ತರ ನೀಡಿರುವ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಶಾ ಅವರು, ಎರಡು ವರ್ಷಗಳ ಹಿಂದೆಯೇ ಮೀನುಗಾರಿಕಾ ಸಚಿವಾಲಯವನ್ನು ಸ್ಥಾಪಿಸಲಾಗಿದೆ. ರಾಹುಲ್ ಗಾಂಧಿ ಅವರು ಆ ಸಂದರ್ಭದಲ್ಲಿ ರಜೆಯಲ್ಲಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ರಾಹುಲ್ ಗಾಂಧಿ ಹಲವು ಬಾರಿ ವಿದೇಶ ಪ್ರವಾಸ ಕೈಗೊಂಡದ್ದನ್ನು ಉಲ್ಲೇಖಿಸದೇಯೇ ಈ ರೀತಿ ಹೇಳಿದ್ದಾರೆ.
“ಎರಡು ವರ್ಷಗಳ ಹಿಂದೆಯೇ ಮೀನುಗಾರಿಕಾ ಇಲಾಖೆಯನ್ನು ಸ್ಥಾಪಿಸಲಾಗಿದೆ ಎಂಬ ಮಾಹಿತಿಯೂ ಇಲ್ಲದಿರುವ ವ್ಯಕ್ತಿಯ ಪಕ್ಷದಿಂದ ಪುದುಚೆರಿಯ ಹಿತವನ್ನು ಕಾಪಾಡಲು ಸಾಧ್ಯವೇ,” ಎಂದು ಅಮಿತ್ ಶಾ ಸಮಾವೇಶದ ವೇಳೆ ಪ್ರಶ್ನಿಸಿದ್ದಾರೆ.
ಇನ್ನು ಈ ಬಾರಿ ಪುದುಚೆರಿಯಲ್ಲಿ ಚುನಾವಣೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿರುವ ಅಮಿತ್ ಶಾ ಅವರು, ಏಪ್ರಿಲ್‌ನಲ್ಲಿ ನಡೆಯಲಿರುವ ಚುನಾವಣೆಯನ್ನು ಬಿಜೆಪಿ ಗೆಲ್ಲಲಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ರಾಹುಲ್ ಗಾಂಧಿ ಹೇಳಿಕೆ ಕುರಿತಾಗಿ ಮಾತನಾಡಿದ್ದರು. ಮೀನುಗಾರಿಕಾ ಸಚಿವಾಲಯವನ್ನು ಎರಡು ವರ್ಷಗಳ ಹಿಂದೆಯೇ ಸ್ಥಾಪಿಸಿರುವ ವಿಚಾರ ರಾಹುಲ್ ಗಾಂಧಿಗೆ ಗೊತ್ತಿಲ್ಲದೇ ಇರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ ಎಂದು ಹೇಳಿದ್ದರು.