ಒಂದು ಕಡೆ ಕಾಂಗ್ರೆಸ್ ಪಾಲಿಗೆ ಭಾರೀ ಸವಾಲಾಗಿರುವ ಪಶ್ಚಿಮಬಂಗಾಳ, ತಮಿಳು ನಾಡು, ಕೇರಳ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಹೊರಬಿದ್ದಿದೆ. ಅದರ ಬೆನ್ನಲ್ಲೇ ಮತ್ತೊಂದು ಕಡೆ, ಕಾಂಗ್ರೆಸ್ಸಿನ ಭಿನ್ನಮತೀಯರ ಬಳಗ ಜಿ-23 ಜುಮ್ಮುವಿನಲ್ಲಿ ಸಭೆ ನಡೆಸಿ, ಕಾಂಗ್ರೆಸ್ ಪಕ್ಷ ದಿನದಿಂದ ದಿನಕ್ಕೆ ದುರ್ಬಲವಾಗುತ್ತಿದೆ ಎಂದು ಘೋಷಿಸಿದ್ದಾರೆ!
ಐದು ರಾಜ್ಯಗಳ ಮೊದಲ ಹಂತದ ಚುನಾವಣೆಗೆ ಸರಿಯಾಗಿ ಒಂದು ತಿಂಗಳು ಉಳಿದಿರುವಾಗ ಆಡಳಿತಾರೂಢ ಬಿಜೆಪಿಯ ಬಾಹುಬಲಿ ಶಕ್ತಿಯ ಎದುರು ಸೆಣೆಸಿ ಆ ರಾಜ್ಯಗಳಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಹೆಣಗಾಡುತ್ತಿರುವ ನಡುವೆ, ಪಕ್ಷದ 23 ಮಂದಿ ಅತ್ಯಂತ ಹಿರಿಯ ನಾಯಕರ ಗುಂಪು ಹೀಗೆ ವ್ಯತಿರಿಕ್ತ ಹೇಳಿಕೆ ನೀಡಿ ಸಮರಕ್ಕೆ ಮುಂಚೆಯೇ ಶರಣಾದ ಸಂದೇಶ ರವಾನಿಸಿದೆ. ಹಾಗಾಗಿ ಸಹಜವಾಗೇ ಜಿ -23 ಗುಂಪಿನ ಈ ಹೇಳಿಕೆ ದೊಡ್ಡ ಮಟ್ಟದಲ್ಲಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗೆ ತಾನೆ ರಾಜ್ಯಸಭೆಯ ಸದಸ್ಯತ್ವದಿಂದ ನಿವೃತ್ತರಾದ ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್, ಆನಂದ್ ಶರ್ಮಾ, ಭೂಪಿಂದರ್ ಸಿಂಗ್ ಹೂಡಾ, ರಾಜ್ ಬಬ್ಬರ್ ಮತ್ತಿತರ ಘಟಾನುಘಟಿ ನಾಯಕರು ಜಮ್ಮುವಿನಲ್ಲಿ ಸಭೆ ಸೇರಿ, ಪಕ್ಷದ ನಾಯಕತ್ವ ಮತ್ತು ಸಂಘಟನೆಯ ಕುರಿತು ಈ ಹಿಂದೆ ತಾವು ವ್ಯಕ್ತಪಡಿಸಿದ್ದ ಆತಂಕ ಪರಿಹಾರವಾಗಿಲ್ಲ ಮತ್ತು ನಾಯಕತ್ವ ಬದಲಾವಣೆಯ ಬೇಡಿಕೆ ಈವರೆಗೂ ಈಡೇರಿಲ್ಲ ಎಂದಿದ್ದಾರೆ. “ಕಾಂಗ್ರೆಸ್ ದೇಶದಲ್ಲಿ ಬಲಹೀನಗೊಳ್ಳುತ್ತಿದೆ ಎಂಬುದು ವಾಸ್ತವ. ಹಾಗಾಗಿ ನಾವಿಲ್ಲ ಸೇರಿದ್ದೇವೆ. ಈ ಹಿಂದೆಯೂ ನಾವು ಪಕ್ಷದ ಮೇಲಿನ ಕಾಳಜಿಯಿಂದ ಒಂದಾಗಿದ್ದೆವು. ನಾವು ಒಟ್ಟಾಗಿ ಪಕ್ಷವನ್ನು ಬಲಪಡಿಸಲೇಬೇಕಾಗಿದೆ” ಎಂದು ಸಿಬಲ್ ಹೇಳಿದ್ದಾರೆ.

ಆ ಹೇಳಿಕೆಗೆ ದನಿ ಗೂಡಿಸಿದ ಮತ್ತೊಬ್ಬ ಹಿರಿಯ ನಾಯಕ ಆನಂದ್ ಶರ್ಮಾ, ಕಳೆದ ಒಂದು ದಶಕದಲ್ಲಿ ಕಾಂಗ್ರೆಸ್ ಬಲಹೀನವಾಗಿದೆ, ದುರ್ಬಲಗೊಂಡಿದೆ ಎಂಬುದು ತಳ್ಳಿಹಾಕಲಾಗದ ನಿಜ. ನಾವಿಲ್ಲಿ ಒಂದಾಗಿ ದನಿ ಎತ್ತುತ್ತಿರುವುದು ಕೂಡ ಪಕ್ಷದ ಹಿತಕ್ಕಾಗಿಯೇ. ದೇಶಾದ್ಯಂತ ಪಕ್ಷವನ್ನು ಬಲಪಡಿಸುವ ಅಗತ್ಯವಿದೆ. ಹೊಸ ತಲೆಮಾರನ್ನು ಪಕ್ಷದೊಂದಿಗೆ ಬೆಸೆಯುವ ಅನಿವಾರ್ಯತೆ ಇದೆ. ನಮ್ಮ ಇಳಿಗಾಲದಲ್ಲಿ ಪಕ್ಷ ಮತ್ತಷ್ಟು ದುರ್ಬಲವಾಗುವುದನ್ನು ನೋಡಲು ನಾವು ಸಿದ್ಧರಿಲ್ಲ ಎಂದಿದ್ದಾರೆ.
ಶಾಂತಿ ಸಭೆಯ ಹೆಸರಿನಲ್ಲಿ ನಡೆದ ನಾಯಕರ ಈ ಸಭೆಯಲ್ಲಿ, ಮುಖ್ಯವಾಗಿ ಗುಲಾಂ ನಬಿ ಆಜಾದ್ ಅವರ ಅನುಭವ ಮತ್ತು ರಾಜಕೀಯ ಅರಿವನ್ನು ಪಕ್ಷ ಬಳಸಿಕೊಳ್ಳಬೇಕಿದೆ. ಅಂಥ ನಾಯಕ ಮತ್ತೆ ಸಂಸತ್ತಿಗೆ ಹೋಗುವ ಅವಕಾಶ ಸಿಗುತ್ತಿಲ್ಲ. ಕಾಂಗ್ರೆಸ್ ಅವರ ಅನುಭವವನ್ನು ಬಳಸಿಕೊಳ್ಳಲು ಯಾಕೆ ಮನಸ್ಸು ಮಾಡುತ್ತಿಲ್ಲ ಎಂಬುದು ಅರ್ಥವಾಗದ ಸಂಗತಿ ಎಂದು ಸಿಬಲ್ ಅವರು ಆಜಾದ್ ಪರ ಮಾತನಾಡಿದ್ದಾರೆ.
ಅದೇ ವೇಳೆ, ಕೇರಳ ಮತ್ತು ಉತ್ತರಪ್ರದೇಶ ಮತದಾರರ ಕುರಿತು ಪಕ್ಷದ ನಾಯಕ ರಾಹುಲ್ ಗಾಂಧಿಯವರು ಇತ್ತೀಚೆಗೆ ನೀಡಿದ ಹೇಳಿಕೆಯ ಕುರಿತೂ ಈ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು, “ಅದು ಜಮ್ಮು ಇರಬಹುದು, ಕಾಶ್ಮೀರ ಅಥವಾ ಲಡಾಕ್ ಇರಬಹುದು. ನಾವು ಎಲ್ಲಾ ಪ್ರದೇಶಗಳನ್ನು ಸಮಾನ ಗೌರವದಿಂದಲೇ ಕಾಣುತ್ತೇವೆ. ಎಲ್ಲಾ ಧರ್ಮ, ಜಾತಿಯ ಜನರನ್ನು ಏಕರೀತಿಯಲ್ಲೇ ನೋಡುತ್ತೇವೆ. ಎಲ್ಲರನ್ನೂ ಸಮಾನವಾಗಿ ಗೌರವಿಸುತ್ತೇವೆ. ಆ ಸಮಾನತೆಯೇ ನಮ್ಮ ಬಲ ಮತ್ತು ಆ ದಿಸೆಯಲ್ಲೇ ಮುಂದೆಯೂ ಹೆಜ್ಜೆ ಹಾಕುತ್ತೇವೆ” ಎಂದು ಹೇಳಿದ್ದಾರೆ. ಆ ಮೂಲಕ ರಾಹುಲ್ ಹೇಳಿಕೆ ಕುರಿತು ಬಿಜೆಪಿ ಎತ್ತಿದ್ದ ಪ್ರಶ್ನೆಗಳಿಗೆ ಪರೋಕ್ಷವಾಗಿ ಸಮಜಾಯಿಸಿ ನೀಡುವ ಪ್ರಯತ್ನ ನಡೆದಿದೆ.
ಆದರೆ, ಅದೇ ವೇಳೆ, “ನಾವು ಈಗಲೂ ಎಲ್ಲರೂ ಒಟ್ಟಾಗಿ ಇದ್ದೇವೆ ಎಂಬುದನ್ನು ಪಕ್ಷದ ನಾಯಕತ್ವಕ್ಕೆ ಹೇಳಬಯಸುತ್ತೇವೆ. ಪಕ್ಷದ ವಿಷಯದಲ್ಲಿ ನಮಗೆ ಕೆಲವು ಆತಂಕ ಮತ್ತು ಪ್ರಶ್ನೆಗಳಿವೆ. ಪಕ್ಷದ ನಾಯಕತ್ವ ಆ ಬಗ್ಗೆ ಏನಾದರೂ ಮಾಡಲೇಬೇಕಿದೆ” ಎಂದೂ ಹೇಳುವ ಮೂಲಕ ನಾಯಕತ್ವ ಬದಲಾವಣೆ ಮತ್ತು ಪಕ್ಷದ ಬಲವರ್ಧನೆ ವಿಷಯದಲ್ಲಿ ತಾವು ಈ ಹಿಂದೆ ಎತ್ತಿದ್ದ ವಿಷಯಗಳಲ್ಲಿ ಯಾವುದೇ ರಾಜಿ ಇಲ್ಲ ಎಂಬುದನ್ನು ಪುನರುಚ್ಚರಿಸಿದ್ದಾರೆ.

ಜಿ-23 ಎಂಬ ಹೆಸರಿನಿಂದ ಕರೆಯಲಾಗುತ್ತಿರುವ ಕಾಂಗ್ರೆಸ್ಸಿನ ಹಿರಿಯ ನಾಯಕರ ಗುಂಪು ಕಳೆದ ವರ್ಷದ ಆಗಸ್ಟ್ ನಲ್ಲಿ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು, ಪಕ್ಷಕ್ಕೆ ‘ಪೂರ್ಣಾವಧಿ’ಯ ಮತ್ತು ಎದ್ದುಕಾಣುವ ‘ವರ್ಚಸ್ವಿ ನಾಯಕತ್ವ’ ಬೇಕಿದೆ ಎಂದು ಹೇಳುವ ಮೂಲಕ ಪಕ್ಷದಲ್ಲಿ ಹಿರಿಯರು ಮತ್ತು ಎರಡನೇ ತಲೆಮಾರಿನ ನಾಯಕರ ನಡುವಿನ ಕಂದಕವನ್ನು ಜಗಜ್ಜಾಹೀರುಮಾಡಿದ್ದರು. ಆ ವಿಷಯದ ದೊಡ್ಡ ಮಟ್ಟದ ರಾಜಕೀಯ ಚರ್ಚೆಗೆ ನಾಂದಿ ಹಾಡಿತ್ತು. ಗಾಂಧಿ ಕುಟುಂಬದ ಹಿಡಿತದಿಂದ ಪಕ್ಷವನ್ನು ಪಾರು ಮಾಡಬೇಕಾದ ಮತ್ತು ಅದಕ್ಕೆ ಪ್ರಭಾವಿ ನಾಯಕರ ನಾಯಕತ್ವ ನೀಡಬೇಕಾದ ಜರೂರತ್ತಿನ ಬಗ್ಗೆ ಈ ಜಿ 23 ಗುಂಪು ಪಟ್ಟು ಹಿಡಿದಿದೆ ಎಂದೇ ಆ ಬಂಡಾಯವನ್ನು ವ್ಯಾಖ್ಯಾನಿಸಲಾಗಿತ್ತು.
ಬಳಿಕ ಕಳೆದ ಡಿಸೆಂಬರಿನಲ್ಲಿ ಸೋನಿಯಾ ಗಾಂಧಿಯವರು ಈ ಜಿ-23 ಗುಂಪಿನೊಂದಿಗೆ ಪ್ರತ್ಯೇಕ ಸಭೆ ನಡೆಸಿ ಅವರ ಬೇಡಿಕೆ ಮತ್ತು ಪಕ್ಷದ ಬಲವರ್ಧನೆ ಕುರಿತ ಸಲಹೆಗಳನ್ನು ಆಲಿಸಿದ್ದರು. ನಂತರ ಐದು ರಾಜ್ಯಗಳ ಚುನಾವಣೆಯ ಬಳಿಕ ಮುಂದಿನ ಜೂನ್ ಹೊತ್ತಿಗೆ ಪಕ್ಷದ ಪೂರ್ಣಾವಧಿ ಅಧ್ಯಕ್ಷರ ಆಯ್ಕೆ ಮಾಡುವುದಾಗಿ ಪಕ್ಷ ಹೇಳಿತ್ತು.
ಈ ನಡುವೆ ಐದು ರಾಜ್ಯಗಳ ಚುನಾವಣೆ ಘೋಷಣೆ ಹೊತ್ತಲ್ಲೇ ಹಿರಿಯ ನಾಯಕರು ಮತ್ತೆ ಸಭೆ ನಡೆಸಿ ತಮ್ಮ ಬೇಡಿಕೆಯನ್ನು ಪುನರುಚ್ಛರಿಸಿರುವುದು ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುವ ಮುನ್ನ ಪಕ್ಷದ ನಾಯಕತ್ವದಿಂದ ಖಚಿತ ಭರವಸೆ ಪಡೆಯುವ ತಂತ್ರಗಾರಿಕೆ ಎನ್ನಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಜಮ್ಮುವಿನಿಂದ ಜಿ 23 ನಾಯಕರ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಅದಕ್ಕೆ ನಾಜೂಕು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ, ಆ ನಾಯಕರ ಬಗ್ಗೆ ಹೆಮ್ಮೆ ಇದೆ. ಆದರೆ, ಐದು ರಾಜ್ಯಗಳ ಚುನಾವಣೆ ಘೋಷಣೆಯಾಗಿರುವಾಗ, ಪಕ್ಷದ ಬಗೆಗಿನ ಅಪಾರ ಕಾಳಜಿಯ ನಾಯಕರು ಚುನಾವಣಾ ರಾಜ್ಯಗಳಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರೆ ಚೆನ್ನಾಗಿತ್ತು” ಎಂದು ಹೇಳಿದ್ದಾರೆ!
ಜೊತೆಗೆ, ಗುಲಾಂ ನಬಿ ಆಜಾದ್ ಅವರ ನಿವೃತ್ತಿಯ ದಿನ ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿಯವರು ಅವರ ಸೇವೆಯನ್ನು ಬಣ್ಣಿಸುತ್ತಾ ಕಣ್ಣೀರುಗರೆದಿದ್ದರು. ಈ ಹಿಂದೆ ಗುಜರಾತ್ ವಿಧಾನಸಭಾ ಚುನಾವಣೆಯ ವೇಳೆ ಪಾಕಿಸ್ತಾನದ ಐಎಸ್ ಎಸ್ ಜೊತೆ ಕೈಜೋಡಿಸಿ ಗುಜರಾತ್ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಲು ಸಂಚು ಹೂಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ ಅದೇ ಮೋದಿಯವರೇ, ಅದೇ ಆಜಾದ್ ಅವರನ್ನು ಹಾಗೆ ಹೊಗಳಿ ಕಣ್ಣೀರುಗರೆದದ್ದರ ಹಿಂದೆ ಅವರನ್ನು ಬಿಜೆಪಿಗೆ ಸಳೆಯುವ ತಂತ್ರಗಾರಿಕೆ ಇದೆ ಎನ್ನಲಾಗಿತ್ತು. ಆ ಹಿನ್ನೆಲೆಯಲ್ಲಿ ಕೂಡ ಜಮ್ಮುವಿನಲ್ಲಿ ನಡೆದಿರುವ ಈ ಜಿ-23 ಸಭೆ ಹಲವು ರಾಜಕೀಯ ವಿಶ್ಲೇಷಣೆಗಳಿಗೆ, ಲೆಕ್ಕಾಚಾರಗಳಿಗೆ ಚಾಲನೆ ನೀಡಿದೆ.
ಈ ನಡುವೆ, ಕಳೆದ ವರ್ಷದ ಡಿಸೆಂಬರಿನಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿಯಲ್ಲಿ ಕೈಗೊಂಡ ನಿರ್ಣಯಕ್ಕೆ ವಿರುದ್ಧ ದಿಕ್ಕಿನಲ್ಲಿ ಈಗಿನ ಬೆಳವಣಿಗೆಗಳು ಸಾಗುತ್ತಿವೆ. ಇದು ಖಂಡಿತವಾಗಿಯೂ ಸಿಡಬ್ಲ್ಯೂಸಿ ನಿರ್ಣಯದ ಉಲ್ಲಂಘನೆ. ಪಕ್ಷದ ಸ್ಥಾನಗಳಿಗೆ ಚುನಾವಣೆಯನ್ನಾಗಲೀ, ಅಥವಾ ವ್ಯವಸ್ಥೆಯಲ್ಲಿ ಸುಧಾರಣೆಯನ್ನಾಗಲೀ ತರುವ ದಿಕ್ಕಿನಲ್ಲಿ ಯಾವ ಬೆಳವಣಿಗೆಗಳೂ ಕಾಣುತ್ತಿಲ್ಲ” ಎಂದು ಜಿ-23 ನಾಯಕರು ಅಭಿಪ್ರಾಯಪಟ್ಟಿರುವುದಾಗಿ ವರದಿಯಾಗಿದೆ. ಹಾಗಾಗಿ ಈ ಹಿರಿಯ ನಾಯಕರ ತೀವ್ರ ಅಸಮಾಧಾನ ತತಕ್ಷಣಕ್ಕೆ ಐದು ರಾಜ್ಯಗಳ ಚುನಾವಣೆಯಲ್ಲಿ ಮತ್ತು ಭವಿಷ್ಯದಲ್ಲಿ ಪಕ್ಷದ ಮೇಲೆ ಬೀರಬಹುದಾದ ಪರಿಣಾಮಗಳು ಕುತೂಹಲ ಮೂಡಿಸಿವೆ!