ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರ ದೀದಿ-ಭಾಯಿಪೊ ಹೇಳಿಕೆಗೆ ತಿರುಗೇಟು ನೀಡಿರುವ ಮಮತಾ ಬ್ಯಾನರ್ಜಿ ತನ್ನ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿ ಗೆಲ್ಲುವಂತೆ ಸವಾಲು ಹಾಕಿದ್ದಾರೆ.
ಪೈಲಾನ್‌ನಲ್ಲಿ ನಡೆದ ಪಕ್ಷದ ರ್ಯಾಲಿ ವೇಳೆ ಕಾರ್ಯರ್ತರನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ ʼಅಭಿಷೇಕ್ ಬ್ಯಾನರ್ಜಿಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸಂಸದರಾಗಲು ಸುಲಭವಾದ ಹಾದಿಯನ್ನು ಹಿಡಿಯಬಹುದಿತ್ತು. ಆದರೆ ಅವರು ಹಾಗೆ ಮಾಡದೇ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜನಾದೇಶವನ್ನು ಪಡೆದೇ ಸಂಸದರಾಗಿದ್ದಾರೆʼ ಎಂದು ಹೇಳಿದ್ದಾರೆ.

ದೀದಿ-ಭತಿಜಾ ಕುರಿತು ಹಗಲೂ ಇರುಳು ಅವರು ಮಾತನಾಡುತ್ತಿದ್ದಾರೆ. ನಾನು ಅಮಿತ್ ಶಾ ಅವರಿಗೆ ಸವಾಲು ಹಾಕುತ್ತೇನೆ. ಮೊದಲಿಗೆ ಅಭಿಷೇಕ್ ಬ್ಯಾನರ್ಜಿಯನ್ನು ಅವರು ಎದುರಿಸಿ ಗೆಲ್ಲಲಿ, ಆ ಬಳಿಕ ನನ್ನನ್ನು ಎದುರಿಸಲು ಬರಲಿ ಎಂದು ಸವಾಲು ಹಾಕಿದ್ದಾರೆ.
ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ವಂಶ ಪಾರಂಪರ್ಯದ ಕುರಿತು ಮಾತನಾಡುತ್ತಿದ್ದಾರೆ. ನಿಮ್ಮ ಮಗ ಹೇಗೆ ನೂರಾರು ಕೋಟಿ ಒಡೆಯನಾದನೆಂದೂ, ಕ್ರಿಕೆಟ್ ಸಂಸ್ಥೆಯ ಆಡಳಿತದ ಭಾಗವಾದನೆಂದೂ ನಾನು ಅಮಿತ್ ಶಾ ಅವರಲ್ಲಿ ಕೇಳಲಿಚ್ಚಿಸುತ್ತೇನೆ ಎಂದು ಹೇಳಿದ್ದಾರೆ.