ವಿಜಯಪುರ ಜಿಲ್ಲೆಗೆ ಭೇಟಿ ನೀಡಿದ ಮೊದಲ ದಿನವೇ ರೈತರ ಕೆಂಗಣ್ಣಿಗೆ ಸಚಿವ ಉಮೇಶ ಕತ್ತಿ ಗುರಿಯಾಗಿದ್ದಾರೆ. ಕಾರಲ್ಲೇ ಕುಳಿತು ರೈತರ ಮನವಿ ಸ್ವೀಕರಿಸಿದ ಕತ್ತಿ ಅವರ ನಡೆ ಕಂಡು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಈ ಘಟನೆ ನಡೆದಿದ್ದು, ಮುದ್ದೇಬಿಹಾಳ ತಾಲ್ಲೂಕಿನ ಡವಳಗಿ ಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ಕತ್ತಿಗೆ ಮನವಿ ನೀಡಲು ರೈತರು ಕಾಯುತ್ತಿದ್ದರು. ಬಸವನಬಾಗೇವಾಡಿಯ ವಿಧಾನ ಸೌಧದ ಮುಂಬಾಗದಲ್ಲಿ ನಿಂತಿದ್ದ ರೈತರು, ರೈತ ಸಂಘದ ಕಾರ್ಯಕರ್ತರು ಸಚಿವರ ಕಾರು ಬರುತ್ತಿದ್ದಂತೆ ಕಾರು ನಿಲ್ಲಿಸಿ ಮನವಿ ನೀಡಲು ಮುಂದಾದರು.
ಕಾರಲ್ಲೇ ಕುಳಿತು ಮನವಿ ನೀಡುವಂತೆ ಸಚಿವ ಉಮೇಶ ಕತ್ತಿ ರೈತರಿಗೆ ಸೂಚಿಸಿದಾಗ ಕಾರಿನಿಂದ ಕೆಳಗಿಳಿದು ಮನವಿ ಸ್ವೀಕರಿಸುವಂತೆ ರೈತ ಸಂಘದ ಕಾರ್ಯಕರ್ತರು ಒತ್ತಾಯಿಸಿದರು. ಸೌಜನ್ಯಕ್ಕೂ ಸಚಿವರು ಕಾರಿಂದ ಇಳಿಯಲಿಲ್ಲ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಇಷ್ಟೇಲ್ಲ ಘಟನೆ ನಡೆಯುತ್ತಿದ್ದರು ಸಚಿವರ ಪಕ್ಕದಲ್ಲೇ ಕುಳಿತಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತುಟಿ ಬಿಚ್ಚಲಿಲ್ಲ ಎನ್ನುವ ಮಾತುಗಳು ಕೇಳಿಬಂದವು.





