ವೈ ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ಆಂಧ್ರಪ್ರದೇಶವನ್ನು ಆರ್ಥಿಕ ತುರ್ತುಪರಿಸ್ಥಿಯತ್ತ ಕೊಂಡೊಯ್ದಿದೆ ಎಂದು ವಿಪಕ್ಷಗಳು ಗಂಭೀರ ಆರೋಪ ಮಾಡಿವೆ. ಮಾತ್ರವಲ್ಲದೇ, ಆರ್ಟಿಕಲ್ 360ರ ಪ್ರಕಾರ ರಾಜ್ಯದಲ್ಲಿ ಆರ್ಥಿಕ ತುರ್ತುಪರಿಸ್ಥಿತಿಯನ್ನು ಹೇರಿ, ರಾಜ್ಯವನ್ನು ಜಗನ್ ನೇತೃತ್ವದ ಸರ್ಕಾರದ ಕಳಪೆ ಹಣಕಾಸು ನಿರ್ವಹಣೆಯಿಂದ ಪಾರು ಮಾಡಿ ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿವೆ.
ಈ ಕುರಿತಾಗಿ ಗಂಭೀರ ಆರೋಪಗಳನ್ನು ಮಾಡಿರುವ ತೆಲುಗು ದೇಶಂ ಪಾರ್ಟಿಯು ಆರ್ಥಿಕ ತುರ್ತಪರಿಸ್ಥಿತಿಯನ್ನು ಹೇರುವುದರ ಜತೆಗೆ, ರೂ. 48,000 ಕೋಟಿಯ ಅವ್ಯವಾಹರದ ಕುರಿತು ಸಿಬಿಐ ತನಿಖೆಯನ್ನೂ ನಡೆಸಬೇಕು ಎಂದು ಹೇಳಿದೆ. ಟಿಡಿಪಿಯ ಈ ಆಗ್ರಹಕ್ಕೆ ಕಾಂಗ್ರೆಸ್ ಕೂಡಾ ದನಿಗೂಡಿಸಿದೆ.
“360ನೇ ವಿಧಿಯ ಅಡಿಯಲ್ಲಿ ಆಂಧ್ರ ಪ್ರದೇಶದ ಸಂಪತ್ತು ಹಾಗೂ ಜನರನ್ನು ರಕ್ಷಿಸಲು ಕೇಂದ್ರ ತಕ್ಷಣವೇ ಆರ್ಥಿಕ ತುರ್ತುಪರಿಸ್ಥಿಯನ್ನು ಹೇರಬೇಕು. ಜಗನ್ ಆಡಳಿತದಲ್ಲಿ ರಾಜ್ಯವು ಅತ್ಯಂತ ಆಳವಾದ ಬಿಕ್ಕಟ್ಟಿಗೆ ಸಿಲುಕಿಕೊಳ್ಳುತ್ತಿದೆ. ಇದಕ್ಕೆ ಸರ್ಕಾರದ ಕಳಪೆ ಆರ್ಥಿಕ ನಿರ್ವಹಣೆಯೇ ಕಾರಣ,” ಎಂದು ಆಂಧ್ರ ವಿಧಾಣ ಪರಿಷತ್ ವಿಪಕ್ಷ ನಾಯಕ ಯನಮಾಲ ರಾಮಕೃಷ್ಣುಡು ಹೇಳಿದ್ದಾರೆ.
ವಿಶೇಷ ಬಿಲ್ ಹೆಸರಿನಲ್ಲಿ ವೆಚ್ಚವಾದ ರೂ. 48,284 ಕೋಟಿ ಯಾರ ಜೇಬಿಗೆ ಹೋಗಿದೆ? ರಾಜ್ಯದ ಆಡಿಟರ್ ಜನರಲ್ ಪ್ರಕಾರ ವಿಶೇಷ ಬಿಲ್’ಗೆ ಅವಕಾಶ ಇಲ್ಲದಿದ್ದರೂ, ಅವು ಹೇಗೆ ಸೃಷ್ಟಿಯಾದವು? ಇದು ಹಣಕಾಸಿನ ದುರ್ಬಳಕೆಯಲ್ಲದೆ ಮತ್ತೇನು? ಈ ಕುರಿತಾಗಿ ಸಿಬಿಐ ತನಿಖೆ ನಡೆದು ಎಲ್ಲಾ ಸತ್ಯಗಳು ಹೊರಬರಬೇಕು, ಎಂದು ಅವರು ಹೇಳಿದ್ದಾರೆ.

“ರಾಜ್ಯದ ಆದಾಯದಲ್ಲಿ ಯಾವುದೇ ಇಳಿಕೆಯಾಗಿಲ್ಲ. ಆದರೂ, ಆದಾಯ ಕೊರತೆ ಏರುತ್ತಲೇ ಇದೆ. ಬಜೆಟ್’ಯೇತರ ಸಾಲ ರೂ. 1.09 ಕೋಟಿಯಷ್ಟಾಗಿದೆ. ತೆರೆದ ಮಾರುಕಟ್ಟೆಯಿಂದ ರೂ. 58,000 ಹಣವನ್ನು ಪಡೆಯಲಾಗಿದೆ. ಈ ಹಣ ಎಲ್ಲಿ ಖರ್ಚಾಗಿದೆ ಎಂಬುದರ ಕುರಿತು ಯಾರಿಗೂ ಮಾಹಿತಿಯಿಲ್ಲ. ರಾಜ್ಯ ಸರ್ಕಾರವು ವಾರ್ಷಿಕ ರೂ. 21,000 ಕೋಟಿಯನ್ನು ಕೇವಲ ಬಡ್ಡಿಯ ರೂಪದಲ್ಲಿ ಕಟ್ಟುತ್ತಿದೆ. ಹೆಚ್ಚುವರಿ ರೂ. 10,000 ಕೋಟಿಯನ್ನು ಅಸಲಿನ ರೂಪದಲ್ಲಿ ಕಟ್ಟುತ್ತಿದೆ. ಕೇಂದ್ರ ಸರ್ಕಾರದ ಮಧ್ಯಪ್ರವೇಶ ಈಗ ತುರ್ತಾಗಿ ಅಗತ್ಯವಿದೆ. ಇಲ್ಲದಿದ್ದರೆ ರಾಜ್ಯವು ಮತ್ತಷ್ಟು ಆಳವಾದ ಸಂಕಷ್ಟಕ್ಕೆ ಸಿಲುಕುತ್ತದೆ,” ಎಂದು ಯನಮಾಲಾ ಹೇಳಿದ್ದಾರೆ.
ಈ ಕುರಿತಾಗಿ ಟಿಡಿಪಿ ಜತೆ ದನಿಗೂಡಿಸಿರುವ ಆಂಧ್ರ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ತುಳಸಿ ರೆಡ್ಡಿ, ಜಗನ್ ಆಡಳಿತವು ತನ್ನ ಪ್ರತಿಯೊಂದು ಹೆಜ್ಜೆಯಲ್ಲಿ ಸಂವಿಧಾನವನ್ನು ಉಲ್ಲಂಘಿಸುತ್ತಿದೆ. ಸಿಎಜಿ ವರದಿಯು ಈ ಅಂಶವನ್ನು ದೃಢಪಡಿಸುತ್ತದೆ. ಅಸಾಂವಿಧಾನಿಕವಾಗಿ ಆಂಧ್ರ ಸರ್ಕಾರವು ರೂ. 1.10 ಲಕ್ಷ ಕೋಟಿಯಷ್ಟು ಸಾರ್ವಜನಿಕರ ಹಣವನ್ನು ವ್ಯಯಿಸಿದೆ, ಎಂದು ಹೇಳಿದ್ದಾರೆ.