ಕನ್ನಡ ಚಿತ್ರರಂಗದ ನಟಿಗೆ ಮಾನಸಿಕ ಕಿರುಕುಳ ನೀಡಿದ ಆರೋಪದ ಮೇಲೆ ಎವಿಆರ್ ಗ್ರೂಪ್ ಸಂಸ್ಥಾಪಕ ಹಾಗೂ ನಿರ್ಮಾಪಕ ಆಗಿರುವ ಅರವಿಂದ್ ವೆಂಕಟೇಶ ರೆಡ್ಡಿನ ಬಂಧಿಸಲಾಗಿದೆ.

ಮಾಜಿ ಬಿಗ್ ಬಾಸ್ ಸ್ಪರ್ಧಿ ಹಾಗೂ ಕನ್ನಡದ ಕೆಲ ಸಿನಿಮಾಗಳಲ್ಲಿ ನಟಿಸಿದ್ದ ಜನಪ್ರಿಯ ನಟಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಕಳೆದ ತಿಂಗಳು ಅರವಿಂದ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಆರೋಪಿ ವಿದೇಶ ಪ್ರವಾಸದಲ್ಲಿದ್ದ ಕಾರಣ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಇದೀಗ ಶ್ರೀಲಂಕಾದಿಂದ ಬೆಂಗಳೂರಿಗೆ ಬರುವಾಗ ಎಸಿಪಿ ಚಂದನ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದ್ದಾರೆ.

2021ರಲ್ಲಿ ನಟಿಗೆ ಪರಿಚಯವಾಗಿದ್ದ ಅರವಿಂದ್ 2022ರವರೆಗೂ ಆಕೆಯ ಜೊತೆಗೆ ಚೆನ್ನಾಗಿದ್ದು, ಬಳಿಕ ಏಕಾಏಕಿ ಸಂಪರ್ಕ ಕಳೆದುಕೊಂಡಿದ್ದು, ನಟಿಯಿಂದ ದೂರಾಗಿದ್ದಾರೆ. ಬಳಿಕ 2024ರಲ್ಲಿ ಮತ್ತೆ ನಟಿಯ ಸಂಪರ್ಕಕ್ಕೆ ಬಂದ ಅರವಿಂದ್ ನಟಿಗೆ ಕರೆ ಮಾಡಿ ಮದುವೆ ಆಗುತ್ತೇನೆ ಎಂದು ಹಠಕ್ಕೆ ಬಿದ್ದಿದ್ದು, ಆತನ ಕಿರುಕುಳ ತಾಳಲಾರದೇ ನಟಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಅಲ್ಲದೇ ನಟಿ ನನ್ನಿಂದ ಸಾಕಷ್ಟು ಖರ್ಚು ಮಾಡಿಸಿದ್ದಾಳೆ. ಕೋಟಿ ರೂಪಾಯಿ ಕೊಡಬೇಕು ಎಂದು ಬೆದರಿಕೆ ಹಾಕಿದ್ದಾರೆ ಎಂದು ಅರವಿಂದ್ ರೆಡ್ಡಿ ವಿರುದ್ಧ ದಾಖಲಾದ ದೂರಿನಲ್ಲಿ ತಿಳಿಸಲಾಗಿದೆ.













