ಬಡವರ ಭೂಮಿ-ಮನೆಯ ಹಕ್ಕು ಉಳಿಸಿಕೊಳ್ಳುವ ಸಲುವಾಗಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಬುಧವಾರ ಪ್ರತಿಭಟನೆ ನಡೆಸಿದೆ.
ದಶಕಗಳ ಕಾಲದಿಂದ ಬಡವರು ವಿವಿಧ ರೀತಿಯ ಸರ್ಕಾರಿ ಭೂಮಿಗಳಲ್ಲಿ ಮನೆ ಕಟ್ಟಿಕೊಂಡು ಹಾಗೂ ಬೇಸಾಯ ಮಾಡಿಕೊಂಡು, ಅವುಗಳ ಮಂಜೂರಾತಿಗಾಗಿ ಸರ್ಕಾರಕ್ಕೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅವುಗಳ ಇತ್ಯರ್ಥಕ್ಕಾಗಿ ಸರ್ಕಾರವು ನಿಗದಿಪಡಿಸಿದ ಫಾರಂ ನಂ 50, 53, 57ರಲ್ಲಿ ಸುಮಾರು 30 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಹಾಗೆಯೇ “ಅಕ್ರಮ-ಸಕ್ರಮ” ಯೋಜನೆಯಡಿ (94ಸಿ/94ಸಿಸಿ) ಮನೆ ನಿವೇಶನದ ಹಕ್ಕುಪತ್ರಕ್ಕಾಗಿಯೂ ಲಕ್ಷಾಂತರ ಅರ್ಜಿಗಳನ್ನು ಸರ್ಕಾರ ಸ್ವೀಕರಿಸಿದೆ. ಇದಲ್ಲದೆ ಅರಣ್ಯ ಹಕ್ಕು ಕಾಯ್ದೆ 2006ರಡಿಯಲ್ಲೂ ಅಂದಾಜು ಎರಡು ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಈವರೆಗೂ ಇವುಗಳಲ್ಲಿ ಬಡವರ ಯಾವುದೇ ಅರ್ಜಿಗಳಿಗೆ ಅರ್ಜಿಗಳಿಗೆ ಹಕ್ಕುಪತ್ರಗಳನ್ನು ನೀಡಿಲ್ಲ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹೇಳಿದೆ.

ಹೋರಾಟ ಸಮಿತಿಯ ಮುಖಂಡರಾದ ಅಭಯ್, ನೂರ್ ಶ್ರೀಧರ್, ನಾಗರಾಜ್ ಸಿರಿಮನೆ ನೇತೃತ್ವದಲ್ಲಿ ವಸತಿ ಸಚಿವ ವಿ ಸೋಮಣ್ಣರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ನಾಗರಾಜ್ ಸಿರಿಮನೆ, ರಾಜ್ಯದಲ್ಲಿ ಲಕ್ಷಗಟ್ಟಲೆ 94 ಸಿ, 94ಸಿಸಿ ಅರ್ಜಿಗಳು ಪೆಂಡಿಗ್ ಇವೆ. ಇದರ ಕುರಿತು ಚರ್ಚೆಯಾಗಿ ಪಾಲಿಸಿ ಮಟ್ಟದಲ್ಲಿ ತೀರ್ಮಾನವಾಗಬೇಕೆಂದು ಸಚಿವರಲ್ಲಿ ಆಗ್ರಹಿಸಿದ್ದಾಗಿ ತಿಳಿಸಿದ್ದಾರೆ.
ಎಲ್ಲ “ಅರ್ಹವಲ್ಲದ” ಭೂ ಮಂಜೂರಾತಿ ಅರ್ಜಿಗಳನ್ನೂ ಕೂಡಲೇ ರದ್ದುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿ ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಅದೇ ರೀತಿ, ಒತ್ತುವರಿ/ ಕಬಳಿಕೆ ಆಗಿರುವ ಎಲ್ಲ ಭೂಮಿಯನ್ನೂ ತೆರವುಗೊಳಿಸಿ, ಹರಾಜು ಅಥವಾ ಮಾರಾಟ ಮಾಡಲು ತೀರ್ಮಾನಿಸಿದ್ದು ಅದರ ಬಗ್ಗೆಯೂ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಇಂತಹ ಒತ್ತುವರಿಗಳಲ್ಲಿ ಬಡವರು “ಅಕ್ರಮ” ಮನೆ-ಜಮೀನುಗಳನ್ನು ಮಾಡಿಕೊಂಡಿರುವ ಭೂಮಿಗಳೂ ದೊಡ್ಡ ಪ್ರಮಾಣದಲ್ಲಿ ಸೇರಿವೆ ಎಂದು ಹೋರಾಟ ಸಮಿತಿ ಹೇಳಿದೆ.
ಸರ್ಕಾರ ಬಡವರಿಗೆ ವಸತಿ ಒದಗಿಸುವ ಬದಲು ಇದೀಗ “ಅನರ್ಹ” ಎಂಬ ಹೆಸರಿನಲ್ಲಿ ಎಲ್ಲ ಅರ್ಜಿಗಳನ್ನೂ ರದ್ದುಪಡಿಸಿ, ಲಕ್ಷಾಂತರ ಬಡ ಕುಟುಂಬಗಳನ್ನು ಶಾಶ್ವತವಾಗಿ ಭೂರಹಿತ-ವಸತಿ ರಹಿತರನ್ನಾಗಿಸಿ ಬೀದಿಪಾಲು ಮಾಡಲು ಹೊರಟಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆರೋಪಿಸಿದೆ.