ಮಾಜಿ ಮುಖ್ಯಮಂತ್ರಿ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಹಗಲಿರುಳು ಶ್ರಮಿಸಿದ ಮುಖಂಡ, ರಾಜ್ಯದ ಪ್ರಮುಖ ಜಾತಿಗಳಲ್ಲೊಂದಾದ ಲಿಂಗಾಯತರ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನೀಗ ಮೂಲೆಗುಂಪು ಮಾಡಲಾಗಿದೆ. ಆದರೂ ಅವರ ಮೇಲಿನ ಸಿಟ್ಟು ಬಿಜೆಪಿ ನಾಯಕರಿಗೆ, ವಿಶೇಷವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೆ ಕಡಿಮೆ ಆಗಿಲ್ಲವೇ? ಎಂಬ ಅನುಮಾನ ಮೂಡುತ್ತಿದೆ.
ಬಿ.ಎಲ್. ಸಂತೋಷ್ ಇತ್ತೀಚೆಗೆ ಹೊಸಪೇಟೆ ಮತ್ತು ಮೈಸೂರಿನಲ್ಲಿ ಆಡಿರುವ ಮಾತುಗಳು ಇಂಥದೊಂದು ಅನುಮಾನವನ್ನು ಹುಟ್ಟುಹಾಕಿವೆ. ಎರಡೂ ಕಡೆ ಸಂತೋಷ್ ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ತನ್ನ ಬಳಿ ಹೇಳಿಕೊಳ್ಳಲು ಸಾಧನೆ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ, ಅಥವಾ ಸಮಸ್ಯೆಗೆ ಸಿಲುಕಿದಾಗ ಕಾಂಗ್ರೆಸ್ ಮೇಲೆ ವಂಶಪಾರಂಪರ್ಯ ಎಂಬ ಕಲ್ಲನ್ನು ಎಸೆಯುತ್ತದೆ. ಆದರೆ ಈ ಬಾರಿ ಬಿ.ಎಲ್. ಸಂತೋಷ್ ಗುರಿ ಕಾಂಗ್ರೆಸ್ ಅಲ್ಲ, ಬಿ.ಎಸ್. ಯಡಿಯೂರಪ್ಪ ಎಂಬುದು ಸ್ಪಷ್ಟವಾಗಿದೆ.
ರಾಜ್ಯ ಬಿಜೆಪಿ ಈಗ ಹಲವು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದೆ. ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಎಂದು ಒಪ್ಪಿಕೊಳ್ಳಲು ಬಹುತೇಕರಿಗೆ, ಮುಖ್ಯವಾಗಿ ಆರ್ ಎಸ್ ಎಸ್ ಹಿನ್ನೆಲೆಯಿಂದ ಬಂದವರಿಗೆ ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಬಹಳ ದುರ್ಬಲರಾಗಿದ್ದಾರೆ. ‘ಪೆನ್ ಲೆಸ್ ಸಿಎಂ’ ಎಂಬು ಕುಖ್ಯಾತಿ ಅವರದಾಗಿದೆ. ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುವುದು ದುಸ್ಸಾಹಸವಾದೀತು. ಹಾಗಂತ ಲಿಂಗಾಯತ ಸಮುದಾಯದ ಅವರನ್ನು ಬದಲಿಸುವುದು ಕೂಡ ಬಿಜೆಪಿಗೆ ಕಷ್ಟ. ಮೇಲಾಗಿ ಇದೇ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುವುದಾಗಿ ಅಮಿತ್ ಶಾ ಘೋಷಿಸಿಬಿಟ್ಟಿದ್ದಾರೆ. ಅದರಿಂದಾಗಿ ಪ್ರತಿಷ್ಠೆಯ ಪ್ರಶ್ನೆ ಕೂಡ ಹೌದು.
ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಇರುವುದು ಯಡಿಯೂರಪ್ಪ ಅವರಲ್ಲಿ ಮಾತ್ರ. ಹೇಗೆಂದರೆ ಮುಂಚೂಣಿಯಲ್ಲಿ ಬಸವರಾಜ ಬೊಮ್ಮಾಯಿ ಇರಲಿ, ಅಥವಾ ಮತ್ತೊಬ್ಬರಿರಲಿ ಯಡಿಯೂರಪ್ಪ ಸಹಕರಿಸಿದರೆ ಮಾತ್ರ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಗೆಲುವಿನ ಬಳಿ ಬರಬಹುದು. ಮತ್ತು ಈಗ ಪಕ್ಷ ಮತ್ತು ಸರ್ಕಾರದಲ್ಲಿರುವ ಸಮಸ್ಯೆಗಳೂ ಬಗೆಹರಿಯಬಹುದು. ಆದರೆ ಮತ್ತೆ ಯಡಿಯೂರಪ್ಪ ಬಳಿ ಹೋದರೆ ಅವರ ಪ್ರಭಾವ ಹೆಚ್ಚಾಗುತ್ತದೆ. ಅವರಿಂದಾಗಿ ಬಿಜೆಪಿ ಗೆಲ್ಲಲಿದೆ ಎಂಬ ಸಂದೇಶ ಹೋಗುತ್ತದೆ ಎಂಬ ಕಾರಣಕ್ಕೆ ಬಿ.ಎಲ್. ಸಂತೋಷ್ ಮತ್ತಿತರರಿಗೆ ಯಡಿಯೂರಪ್ಪ ಬೇಡವಾಗಿದ್ದಾರೆ.
ಯಡಿಯೂರಪ್ಪ ಅವರನ್ನು ಬಿಟ್ಟು ಬಿಜೆಪಿ ಕಟ್ಟಬೇಕು. ಅಧಿಕಾರದಿಂದ ಯಡಿಯೂರಪ್ಪ ಅವರನ್ನು ದೂರ ಇಡಬೇಕು ಎಂಬುದು ಈಗಿನ ಪರಿಸ್ಥಿತಿಯೇನೂ ಅಲ್ಲ. ಹಿಂದೆ ಅನಂತಕುಮಾರ್ ಕೂಡ ಇಂತಹ ತಂತ್ರ-ಕುತಂತ್ರಗಳನ್ನು ಮಾಡುತ್ತಿದ್ದರು. ಈಗ ಬಿ.ಎಲ್. ಸಂತೋಷ್, ಪ್ರಹ್ಲಾದ್ ಜೋಷಿ ಮತ್ತಿತರರ ಸರದಿ. ಕಾಕತಾಳೀಯ ಎಂದರೆ ಲಿಂಗಾಯತ ನಾಯಕ ಯಡಿಯೂರಪ್ಪ ಅವರ ವಿರುದ್ಧ ಅಂದಿಗೂ-ಇಂದಿಗೂ ಷಡ್ಯಂತ್ರ ರೂಪಿಸುತ್ತಿರುವವರು ಬ್ರಾಹ್ಮಣ ಸಮುದಾಯದ ನಾಯಕರು. ಇದೇ ಉದಾಹರಣೆ ನೀಡಿ ‘ಪ್ರತಿಧ್ವನಿ’ ಜೊತೆ ಮಾತನಾಡಿದ ಹೆಸರು ಹೇಳಲಿಚ್ಚಿಸದ ನಾಯರೊಬ್ಬರು (ಲಿಂಗಾಯತ) ‘ಲಿಂಗಾಯತರ ಓಟು-ಬ್ರಾಹ್ಮಣರಿಗೆ ಸೀಟು’ ಎಂದು ಹೇಳಿದ್ದಾರೆ. ಜೊತೆಗೆ ‘ಇದು ಪಕ್ಷದ ಹುಟ್ಟುಗುಣ, ಬ್ರಾಹ್ಮಣ-ಬನಿಯಾ ಪಾರ್ಟಿ. ಕಡೆಯಪಕ್ಷ ‘ನಾವು ಇದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ’ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.

ಸದ್ಯ ಪುತ್ರ ಬಿ.ವೈ. ವಿಜಯೇಂದ್ರನನ್ನು ಮಂತ್ರಿ ಮಾಡುವಂತೆ ಯಡಿಯೂರಪ್ಪ ಒತ್ತಡ ಹಾಕುತ್ತಿದ್ದಾರೆ. ಮಗನನ್ನು ಮಂತ್ರಿ ಮಾಡದಿದ್ದರೆ ಅವರು ಮುನಿದು ಮನೆಯಲ್ಲೇ ಕುಳಿತುಕೊಳ್ಳಬಹುದು. ಅದು ಮುಂಬರುವ ಚುನಾವಣೆ ಮೇಲೂ ಪರಿಣಾಮ ಬೀರಬಹುದು. ಚುನಾವಣೆ ಹೊಸ್ತಿಲಿನಲ್ಲೇ ಮಗನಿಗೆ ಮಂತ್ರಿ ಸ್ಥಾನ ಕೊಡಿಸಿ ರಾಜಕೀಯವಾಗಿ ಭದ್ರವಾದ ಬುನಾದಿ ಹಾಕಬೇಕೆಂಬುದು ಯಡಿಯೂರಪ್ಪ ಅವರ ಲೆಕ್ಕಾಚಾರ. ಆದ್ದರಿಂದ ವಿಜಯೇಂದ್ರನ ವಿಷಯಕ್ಕೆ ರಾಜ್ಯ ಸಚಿವ ಸಂಪುಟ ಪುನರ್ ರಚನೆ ಕಸರತ್ತು ನೆನೆಗುದಿಗೆ ಬಿದ್ದಿದೆ ಎಂಬ ಮಾತು ದಟ್ಟವಾಗಿ ಕೇಳಿಬರುತ್ತಿವೆ.
ಯಡಿಯೂರಪ್ಪ ಬಹಳ ದಿನಗಳಿಂದ ಒತ್ತಡ ಹೇರುತ್ತಿದ್ದರೂ ಬಿ.ಎಲ್. ಸಂತೋಷ್ ಅವರಿಗೆ ಪರೋಕ್ಷವಾಗಿಯಾದರೂ ಖಂಡಿಸುವ ಧೈರ್ಯ ಇರಲಿಲ್ಲ. ಉತ್ತರ ಪ್ರದೇಶ ಗೆಲುವಿನ ಬಳಿಕ ಪ್ರಧಾನಿ ಮೋದಿ ‘ಮಕ್ಕಳಿಗೆ ಟಿಕೆಟ್ ತಪ್ಪಿಸಿದ್ದು ನಾನೇ. ಬೇಕಿದ್ದರೆ ನನ್ನನ್ನು ಬೈದುಕೊಳ್ಳಿ. ವಂಶಪಾರಂಪರ್ಯ ಕೊನೆಯಾಗಬೇಕು’ ಎಂದು ಹೇಳಿದ ಬಳಿಕ ಸಂತೋಷ್ ಗೆ ಧೈರ್ಯ ಬಂದಿದೆ. ಹಾಗಾಗಿ ಈಗ ಪದೇ ಪದೇ ವಂಶಪಾರಂಪರ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ‘ಯಡಿಯೂರಪ್ಪ ಅವರನ್ನು ಬಿಟ್ಟು ಬಿಜೆಪಿ ಗೆಲ್ಲಿಸಬೇಕು’ ಎಂಬ ಅವರ ಅಜೆಂಡಾವನ್ನು ಪರೋಕ್ಷವಾಗಿ ಅನುಷ್ಠಾನಕ್ಕೆ ತರಲು ಹೊರಟಿದ್ದಾರೆ.
ಈಗ ಹೇಗಾದರೂ ಮಾಡಿ ವಿಜಯೇಂದ್ರ ಮಂತ್ರಿ ಮಂಡಳ ಸೇರುವುದನ್ನು ತಪ್ಪಿಸಿದರೆ ಯಡಿಯೂರಪ್ಪ ವಿರುದ್ಧ ಯುದ್ಧದಲ್ಲಿ ಬಿ.ಎಲ್. ಸಂತೋಷ್ ಅರ್ಧ ಗೆದ್ದಂತೆ. ಹೇಗೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಸ್ಪರ್ಧೆ ಮಾಡಲ್ಲ. ಒಂದೊಂದು ಸೀಟು ಮುಖ್ಯವಾಗಿರುವುದರಿಂದ ಅಗತ್ಯ ಬಿದ್ದರೆ ವಿಜಯೇಂದ್ರನಿಗೆ ಶಿಕಾರಿಪುರದ ಟಿಕೆಟ್ ನೀಡಬಹುದು. ಅಥವಾ ಅವರಿಗೆ ಟಿಕೆಟ್ ತಪ್ಪಿಸಿ ‘ಪಕ್ಷದ ಕಾರ್ಯಕರ್ತ’ನಿಗೆ ನೀಡಬಹುದು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಮಾಡಿದಂತೆ.
ಬ್ರಾಹ್ಮಣ, ಆರ್ ಎಸ್ಎಸ್ ಹಿನ್ನೆಲೆಯಿಂದ ಬಂದು, ರಾಷ್ಟ್ರ ರಾಜಕೀಯದಲ್ಲೂ ಪ್ರಭಾವ ಹೊಂದಿದ್ದ ಅನಂತುಕುಮಾರ್ ಅವರನ್ನೇ ಸಹಿಸದ, ತೇಜಸ್ವಿನಿ ಅನಂತಕುಮಾರ್ ಅವರಿಗೆ ಬೆಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ನೀಡದೆ ಅವರ ರಾಜಕೀಯ ಭವಿಷ್ಯವನ್ನು ಮೊಳಕೆಯಲ್ಲೇ ಚಿವುಟಿಹಾಕಿದ ಬಿ.ಎಲ್. ಸಂತೋಷ್ ಲಿಂಗಾಯತ ಸಮುದಾಯದ ನಾಯಕ ಯಡಿಯೂರಪ್ಪ ಅವರನ್ನು ಸಹಿಸುವರೇ? ವಿಜಯೇಂದ್ರನನ್ನು ಬೆಳೆಯಲು ಬಿಡುವರೆ? ಎಂಬ ಅನುಮಾನಗಳು ಶುರುವಾಗಿವೆ. ಈಗ ಮಂತ್ರಿ ಸ್ಥಾನ ತಪ್ಪಿಸಲು ಮತ್ತು ಮುಂದೆ ಶಿಕಾರಿಪುರದಲ್ಲಿ ಸೀಟು ತಪ್ಪಿಸಲು ವಂಶಪಾರಂಪರ್ಯದ ವಿಚಾರ ಚರ್ಚೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಯಡಿಯೂರಪ್ಪ ಅವರ ನೆರಳು ಕೂಡ ಸುಳಿಯದಂತೆ ನೋಡಿಕೊಳ್ಳಲು ವಂಶಪಾರಂಪರ್ಯ ಎಂಬ ವಿಷಯದ ಮೂಲಕ ವೇದಿಕೆ ಸಿದ್ದಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಯಡಿಯೂರಪ್ಪ ನಡೆ ನಿಗೂಢ.