ದೆಹಲಿ ಗಡಿಯಲ್ಲಿ ಕಳೆದ 66 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಷ್ಟೇ ದಿನಗಳಿಂದ ಅವ್ಯಾಹತವಾಗಿ ರೈತ ಹೋರಾಟ ಸತ್ಯಾಸತ್ಯತೆಯನ್ನು ಪ್ರಶ್ನಿಸುವಂತೆ ಅದರ ವಿರುದ್ಧ ಹಲವು ಸುಳ್ಳುಸುದ್ದಿಗಳು ಹರಿದಾಡಿದನ್ನು ನೋಡಿದ್ದೇವೆ.
ಯಾವುದೇ ಒಂದು ಹೋರಾಟದ ವಿರುದ್ಧ ಈ ಪ್ರಮಾಣದಲ್ಲಿ ಸುದ್ದಿಗಳನ್ನು ಹುಟ್ಟುತ್ತಿರುವುದು ಏಕೆ? ಎಲ್ಲಿಂದ ಸುಳ್ಳು ಸುದ್ದಿಗಳು ಬರುತ್ತಿವೆ? ಮಾಸ್ ಮೀಡಿಯಾ ಫೌಂಡೇಷನ್ ಅಂತಹ ಕೆಲವು ಸುದ್ದಿಗಳನ್ನು ಇಲ್ಲಿ ವಿಶ್ಲೇಷಿಸುವ ಪ್ರಯತ್ನ ಮಾಡಿದೆ.
ನವೆಂಬರ್ ಕೊನೆಯ ವಾರ ಪಂಜಾಬ್ -ಹರ್ಯಾಣದ ರೈತರ ಹೋರಾಟಗಾರು ದೆಹಲಿಯ ನಾಲ್ಕು ದಿಕ್ಕಿನ ಗಡಿಗಳಲ್ಲಿ ಸೇರಿ ಹೋರಾಟ ಆರಂಭಿಸಿದರು. ಅವರ ವೇಷಭೂಷಣಗಳೇ ಮೊದಲ ಬಾರಿಗೆ ಚರ್ಚೆಯ ಕೇಂದ್ರವಾದವು. ಜೀನ್ಸ್ ಪ್ಯಾಂಟ್ ಧರಿಸಿದ ಇವರೆಲ್ಲಾ ರೈತರೇ ಎಂದು ಪ್ರಶ್ನಿಸಿ, ಹೋರಾಟದ ಪ್ರಾಮಾಣಿಕತೆಯನ್ನು ಪ್ರಶ್ನಿಸಲಾಯಿತು. ಈ ಮೂಲಕ ಹೋರಾಟವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಎಲ್ಲರ ಮನಸ್ಸಿನಲ್ಲಿ ಹೋರಾಟ ನಿರತರು ರಾಜಕೀಯ ಪ್ರೇರಿತರೇ ಹೊರತು, ನಿಜವಾದ ರೈತರಲ್ಲ ಎಂಬ ಅಭಿಪ್ರಾಯ ರೂಪಿಸುವ ಪ್ರಯತ್ನ ಮಾಡಲಾಯಿತು.
ಹೀಗೆ ಶುರುವಾದ ಸುಳ್ಳುಸುದ್ದಿಗಳ ಹಾವಳಿ ನಿಧಾನವಾಗಿ ಹೆಚ್ಚು ಹೆಚ್ಚು ವ್ಯಾಪಕವಾಯಿತು ಮತ್ತು ತೀವ್ರವೂ ಆಯಿತು. ಇದರಲ್ಲಿ ಆಳುವ ಸರ್ಕಾರದ ಪ್ರತಿನಿಧಿಗಳು, ಆಡಳಿತ ಪಕ್ಷದ ಮುಖಂಡರು ಮುಖ್ಯವಾಗಿ ಭಾಗಿಯಾಗಿದ್ದರು ಎಂಬುದನ್ನು ಗಮನಿಸಬೇಕು. ಬಿಜೆಪಿಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಕುಮಾರ್ ಗೌತಮ್, ರೈತ ಪ್ರತಿಭಟನೆಯಲ್ಲಿ ‘ಖಾಲಿಸ್ತಾನ್ ಝಿಂದಾಬಾದ್’ ಮತ್ತು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಲಾಯಿತು ಎಂದು ಹೇಳಿಕೆ ನೀಡಿದರು. ಇದರ ಬೆನ್ನಲ್ಲೇ ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಶಾಂತಿಯುತ ಪ್ರತಿಭಟನೆಯಲ್ಲಿ ಖಾಲಿಸ್ತಾನಿ ಉಗ್ರರ ಬೆಂಬಲಿಗರು ಕಾಣಿಸಿಕೊಂಡರು ಎಂದು ಆರೋಪಿಸಿದರು.
ಈ ಆರೋಪಗಳಿಗೆ ಸ್ಪಂದಿಸಿದ ರೈತ ನಾಯಕರು ಹಾಗೂ ರೈತರು ಬಿಜೆಪಿ ಹಾಗೂ ಬಿಜೆಪಿ ನೇತೃತ್ವದ ಸರ್ಕಾರ ನಮ್ಮ ಹೋರಾಟದ ಬಗ್ಗೆ ತಪ್ಪು ಅಭಿಪ್ರಾಯ ರೂಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಪ್ರತಿಕ್ರಿಯಿಸಿದರು. ಇದೇ ವೇಳೆ ಇಂಡಿಯಾ ಟುಡೆ ಮತ್ತು ಆಲ್ಟ್‌ನ್ಯೂಸ್ ಸಂಸ್ಥೆ ನಡೆಸಿದ ಸತ್ಯ ಶೋಧನೆಯ ಪ್ರಯತ್ನದಲ್ಲಿ ಎರಡೂ ಆರೋಪಗಳು ಸುಳ್ಳು ಎಂಬ ಅಂಶವನ್ನು ಬಯಲು ಮಾಡಿದವು. ಈ ಸುಳ್ಳಿ ಸುದ್ದಿಗಳನ್ನು ಹರಡಲು 2013ರ ಫೋಟೋಗಳನ್ನು ಬಳಸಿಕೊಳ್ಳಲಾಗಿದೆ ಎಂಬ ಅಂಶವನ್ನು ಹೊರಹಾಕಿದವು.
ಮುಖ್ಯವಾಹಿನಿ ಮಾಧ್ಯಮಗಳನ್ನು ಗೋದಿ ಮೀಡಿಯಾ ಎಂದು ಟೀಕಿಸಿದ ಹೋರಾಟಗಾರರು, ”ಮೋದಿ ಸಾಕಿದ ಮಾಧ್ಯಮ ನಮ್ಮನ್ನು ಖಾಲಿಸ್ತಾನಿಗಳು’ ಎಂದು ಕರೆಯುತ್ತಿದೆ. ತೀವ್ರವಾಗಿ ಟೀಕಿಸಿದರು. ಮುಖ್ಯ ವಾಹಿನಿಗಳು ರೈತ ಹೋರಾಟವನ್ನು ಬಿಂಬಿಸಲು ಯತ್ನಿಸಿದ ರೀತಿಯೇ ಅಸಮಾಧಾನಕ್ಕೆ ಕಾರಣವಾಗಿತ್ತು. ಹಾಗಾಗಿ ಆಯ್ದ ಕೆಲವು ಮಾಧ್ಯಮ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡ ರೈತ ಹೋರಾಟಗಾರರು, ಆ ಮಾಧ್ಯಮ ಸಂಸ್ಥೆಗಳಿಗೆ ಯಾವುದೇ ರೀತಿಯ ಮಾಹಿತಿ ಮತ್ತು ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಿಬಿಟ್ಟರು.
ಆದರೆ ರೈತ ಹೋರಾಟವನ್ನು ಅವ್ಯಾಹತವಾಗಿ ದೂಷಿಸುವ ಪ್ರಯತ್ನ ನಡೆದೇ ಇತ್ತು. ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಲವೀಯ, ರೈತರ ಮೇಲೆ ಯಾವುದೇ ರೀತಿಯಲ್ಲಿ ಪೊಲೀಸ್ ಹಿಂಸಾಚಾರ ನಡೆದಿಲ್ಲ ಎಂದು ವಿಡಿಯೋ ಟ್ವೀಟ್ ಮಾಡಿದ್ದರು. ಆದರೆ ಅದು ಸುಳ್ಳೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿಜವಾದ ವಿಡಿಯೋ ಪ್ರಕಟಿಸಿದರು. ಇದಾದ ಬಳಿಕ ಸುಳ್ಳು ವಿಡಿಯೋ ಇದ್ದ ಮಾಲವಿಯ ಅವರ ಟ್ವೀಟ್ ಅನ್ನು ಟ್ವಿಟರ್ ತೆಗೆದುಹಾಕಿತು.
ಕೇಂದ್ರ ಮಂತ್ರಿ ಗಿರಿರಾಜ್ ಸಿಂಗ್ ಒಂದು ಸುಳ್ಳು ವಿಡಿಯೋ ಟ್ವೀಟ್ ಮಾಡಿ ಸಿಕ್ಕಿಬಿದ್ದರು. ಪೊಲೀಸರು ವ್ಯಕ್ತಿಯೊಬ್ಬನ ಪಗಡಿಯನ್ನು ಬಿಚ್ಚಿ, ಆತ ಸಿಖ್ ಅಲ್ಲ, ಮುಸ್ಲಿಮ್ ಎಂದು ಹೇಳುವಂತಿದ್ದ ವಿಡಿಯೋ ಅದು. ಈ ಮೂಲಕ ರೈತರ ಹೋರಾಟ ಮುಸ್ಲೀಂ ಪ್ರೇರಿತ ಪ್ರತಿಭಟನೆ ಎಂದು ಹೇಳಿದ್ದರು. ವಿಚಿತ್ರವೆಂದರೆ ಈ ವಿಡಿಯೋ 2019ರಲ್ಲಿ ನಡೆದ ಸಿಎಎ ಪ್ರತಿಭಟನೆಯ ಸಂದರ್ಭದಲ್ಲಿ ಹರಿದಾಡಿತ್ತು ಮತ್ತು ಆಗಲೂ ಇದು ಆಗಿನ ವಿಡಿಯೋ ಅಲ್ಲ, ದುರುದ್ದೇಶಕ್ಕೆ ಬಳಸಲಾಗಿದೆ ಎಂದು ಸಾಬೀತಾಗಿತ್ತು. ಅದೇ ವಿಡಿಯೋವನ್ನು ಕೇಂದ್ರ ಮಂತ್ರಿ ರೈತರ ಹೋರಾಟವನ್ನು ಭಿನ್ನವಾಗಿ ವ್ಯಾಖ್ಯಾನಿಸುವುದಕ್ಕೆ ಬಳಸಿದ್ದು ಅಚ್ಚರಿ ಉಂಟು ಮಾಡಿತ್ತು.
ಇಷ್ಟೇ ಅಲ್ಲ, ಪಂಜಾಬಿ ರೈತರು ದಾಂಧಲೆ ಮಾಡಿದರು, ಕಮಲ ಹ್ಯಾರಿಸ್‌ನಲ್ಲಿ ಟ್ವೀಟ್ ಹೀಗೆ ಹಲವು ರೀತಿಯಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ರಾಜಕೀಯ ಪ್ರೇರಿತ, ದುರುದ್ದೇಶದಿಂದ ಕೂಡಿದ ಹೋರಾಟ ಎಂದು ಬಿಂಬಿಸುವ ಪ್ರಯತ್ನ ನಡೆಯಿತು. ಈ ಪ್ರಯತ್ನಕ್ಕೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ದನಿಗೂಡಿಸಿದ್ದು, ಇದು ಸರ್ಕಾರದಿಂದಲೇ ಪ್ರೇರಿತ ಪ್ರಯತ್ನವೇ ಎಂಬ ಪ್ರಶ್ನೆ ಹುಟ್ಟುಹಾಕಿತು.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈ ಹೋರಾಟ ಇನ್ನೊಂದು ನಡೆದಿಲ್ಲ ಎಂಬ ಮೆಚ್ಚುಗೆಯ ಮಾತುಗಳು ವ್ಯಕ್ತವಾಗುತ್ತಿವೆ. ಇದಕ್ಕೆ ಕಾರಣ ಗಡಿಗಳಲ್ಲಿ ನೆರೆದ ರೈತರು ಯಾವುದೇ ರೀತಿಯಲ್ಲೂ ಶಾಂತಿ ಕದಡುವ, ಶಿಸ್ತು ಉಲ್ಲಂಘಿಸುವ ಚಟುವಟಿಕೆಗಳಲ್ಲಿ ತೊಡಗಿಲ್ಲ. ಕೇಂದ್ರ ಸರ್ಕಾರದೊಂದಿಗೆ 10 ಸುತ್ತುಗಳಿಗೂ ಹೆಚ್ಚು ಮಾತುಕತೆಗಳಲ್ಲಿ ಭಾಗವಹಿಸಿ ತಮ್ಮ ಬೇಡಿಕೆಯಲ್ಲಿ ರಾಜಿಯಾಗದೆ ಪಟ್ಟು ಹಿಡಿದಿವೆ. ಇದರ ಹೊರತಾಗಿ ಯಾವುದೇ ಉಗ್ರ, ತೀವ್ರತೆರನಾದ ಪ್ರತಿಕ್ರಿಯೆ ಇವರಿಂದ ವ್ಯಕ್ತವಾಗಿಲ್ಲ. ‘ಈ ಕಾರಣಕ್ಕೆ ಸರ್ಕಾರ ಹಾಗೂ ಸರ್ಕಾರದ ಪರವಾಗಿರುವ ಎಲ್ಲ ಶಕ್ತಿಗಳು, ರೈತರುನ್ನು ಕೆರಳಿಸುವ ಪ್ರಯತ್ನ ಮಾಡಿವೆ. ರೈತರು ಪ್ರತಿಕ್ರಿಯಿಸಿದರೆ ತಮ್ಮ ಉದ್ದೇಶ ಸಾಧಿಸುವುದು ಸುಲಭ ಎಂಬ ಲೆಕ್ಕಾಚಾರದಲ್ಲಿ ಹಲವು ಕುತಂತ್ರಗಳನ್ನು, ಸುಳ್ಳು ಹರಡುವ ಪ್ರಯತ್ನ ಮಾಡುತ್ತಲೇ ಇದ್ದಾರೆ’ ಎಂದು ಹೋರಾಟ ನಿರತ ರೈತರು ಹೇಳುತ್ತಾರೆ.
ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ.