ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಕಬ್ಬು ಬೆಳಗಾರರು ಕಳೆದ 22 ದಿನಗಳಿಂದ ಬೆಂಗಳೂರಿನಲ್ಲಿ ಧರಣಿ ನಡೆಸುತ್ತಿದ್ದರು
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಜಿ20 ಹಣಕಾಸು ಶೃಂಗಸಭೆ ನಡೆಯುವ ಸ್ಥಳದಲ್ಲಿ ಕಪ್ಪುಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲು ತೆರಳುತ್ತಿದ್ದ ರೈತರನ್ನ ತಡೆದು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಕಬ್ಬು ಬೆಳಗಾರರು ಕಳೆದ 22 ದಿನಗಳಿಂದ ಬೆಂಗಳೂರಿನಲ್ಲಿ ಧರಣಿ ನಡೆಸುತ್ತಿದ್ದರು. ಆದರೆ ಕಬ್ಬು ಬೆಳೆಗಾರರ ಹೋರಾಟಕ್ಕೆ ಸರ್ಕಾರ ಅಥವಾ ಸಂಬಂಧಪಟ್ಟ ಸಚಿವರಿಂದ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ರಾಜ್ಯ ಸರ್ಕಾರದ ನೀತಿಯ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಧರಣಿನಿರತರು ಎಚ್ಚರಿಕೆ ನೀಡಿದ್ದರು.
ಅದರಂತೆ ತಮ್ಮ ಹಕ್ಕೊತ್ತಾಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಹೊರಟಿದ್ದ ರೈತರನ್ನು ಹೆಬ್ಬಾಳ್ ಫ್ಲೈ ಓವರ್ ಬಳಿ ತಡೆದ ಪೊಲೀಸರು, ಮುಂದೆ ಹೋಗದಂತೆ ತಡೆದರು. ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಯಾವ ಕಾರಣದಿಂದ ಪೊಲೀಸರು ನಮ್ಮನ್ನು ತಡೆದಿದ್ದೀರಾ? ಎಂದು ಪ್ರಶ್ನಿಸಿದರು ಪೊಲೀಸರು ಯಾವುದೇ ಉತ್ತರ ನೀಡಲಿಲ್ಲ. ಈ ವೇಳೆ ಪೊಲೀಸರು ಹಾಗೂ ಕಬ್ಬು ಬೆಳೆಗಾರರ ನಡುವೆ ವಾಗ್ವಾದ ಸಹ ನಡೆಯಿತು. ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಹೆಬ್ಬಾಳ ವಲಯ ಪೊಲೀಸ ಆರಕ್ಷಕ ನಿರೀಕ್ಷಕರು ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನೆ ನಡೆಸಲು ತೆರಳುತ್ತಿದ್ದ ರೈತರ ತಂಡಗಳನ್ನು ಬಂಧಿಸಿ ಕೆಎಸ್ಆರ್ಪಿ ಮೈದಾನಕ್ಕೆ ಕರೆದೊಯ್ದರು.