ಐತಿಹಾಸಿಕ ರೈತ ಆಂದೋಲನಕ್ಕೆ ಒಂದು ವರ್ಷ ತುಂಬಿದೆ. ಯಾವುದೇ ರಾಜಕೀಯ ಶಕ್ತಿಗಳ ಬೆಂಬಲವಿಲ್ಲದೇ, ದೇಶದ ರಾಜಕೀಯ ವ್ಯವಸ್ಥೆಯ ಬುಡವನ್ನೇ ಅಲುಗಾಡಿಸುವ ಶಕ್ತಿ ರೈತರಿಗಿದೆ ಎಂದು ಈ ಆಂದೋಲನ ಸಾಬೀತು ಮಾಡಿದೆ. ಆಂದೋಲನದ ಮೊದಲ ದಿನದಿಂದ ಹಿಡಿದು ಇತ್ತೀಚಿನವರೆಗೂ ಧರಣಿ ನಿರತ ರೈತರ ವಿರುದ್ದ ಒಂದಲ್ಲ ಒಂದು ರೀತಿಯಲ್ಲಿ ಸಂಚು ರೂಪಿಸುತ್ತಿದ್ದ ಬಿಜೆಪಿ ನೇತೃತ್ವದ ಸರ್ಕಾರ ಕೊನೆಗೂ ಅನ್ನದಾತರ ಶಕ್ತಿಯ ಎದುರು ಮಣಿದಿದೆ. ಆದರೆ, ಈ ಆಂದೊಲನ ಇನ್ನೂ ಮುಗಿದಿಲ್ಲ. ರೈತರ ಎಲ್ಲಾ ಬೇಡಿಕೆಗಳು ಇನ್ನೂ ಈಡೇರಿಲ್ಲ.
ಒಂದು ಹಂತದಲ್ಲಿ ರೈತ ಹೋರಾಟಕ್ಕೆ ಖಲಿಸ್ತಾನಿ, ನಕಲಿ ರೈತರು ಎಂಬೆಲ್ಲಾ ಹಣೆಪಟ್ಟಿ ಕಟ್ಟುವ ಪ್ರಯತ್ನವೂ ನಡೆದಿತ್ತು. ಆದರೆ, ಈ ಎಲ್ಲಾ ಸಂಚುಗಳನ್ನು ಮೀರಿ ಇಂದು ಭಾರತೀಯ ರಾಜಕಾರಣದ ದಿಕ್ಕನ್ನೇ ಬದಲಾಯಿಸುವ ಹಂತಕ್ಕೆ ರೈತ ಹೋರಾಟ ಬೆಳೆದು ನಿಂತಿದೆ. ಬಿಜೆಪಿಯ ಹಿಂದುತ್ವವಾದಿ ರಾಜಕಾರಣಕ್ಕೆ ಕೊಡಲಿ ಪೆಟ್ಟು ನೀಡುವ ಹಂತಕ್ಕೆ ಈ ಹೋರಾಟ ತಲುಪಿದೆ.
ಕಳೆದ ಏಳು ವರ್ಷಗಳಿಂದ ದೇಶದ ಆರ್ಥಿಕ ಸ್ಥಿತಿ ಹದೆಗೆಟ್ಟರೂ, ಯಾವುದೇ ದೂರಾಲೋಚನೆ ಇಲ್ಲದ ನೀತಿಗಳನ್ನು ಜಾರಿಗೊಳಿಸಿದರೂ, ಕೋವಿಡ್ ಸಂಕಷ್ಟವನ್ನು ಅಸಮರ್ಪಕವಾಗಿ ನಿಭಾಯಿಸಿದರೂ ಹಿಂದುತ್ವದ ಆಧಾರದ ಮೇಲೆ ಬಿಜೆಪಿಯ ತಳಪಾಯ ಭದ್ರವಾಗಿ ಉಳಿದಿತ್ತು. ಹಿಂದುತ್ವ ಎಂಬುದು ಚುನಾವಣೆಯ ಕೇಂದ್ರ ಬಿಂದುವಾಗಿತ್ತು. ಇದನ್ನು ಮೀರಿ ಬೆಳೆಯಲು ವಿಪಕ್ಷಗಳಿಗೆ ಯಾವುದೇ ವಿಷಯವೇ ದಕ್ಕದಂತಾಗಿತ್ತು. ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಲೋಕಸಭೆಯಲ್ಲಿ ಸ್ವತಂತ್ರವಾಗಿ ಅಧಿಕೃತ ವಿಪಕ್ಷ ಸ್ಥಾನ ಉಳಿಸುಕೊಳ್ಳಲೂ ಒದ್ದಾಡುವಂತಾಗಿತ್ತು. ಆದರೆ, ರೈತ ಹೊರಾಟ ಈ ವ್ಯಾಖ್ಯನವನ್ನು ಬದಲಾಯಿಸುವ ತಾಕತ್ತು ಹೊಂದಿದೆ.
ಇತ್ತೀಚಿಗೆ ಲಕ್ನೋದಲ್ಲಿ ನಡೆದ ಕಿಸಾನ್ ಮಹಾಪಂಚಾಯತ್ನಲ್ಲಿ ರಾಕೇಶ್ ಟಿಕಾಯತ್ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದರು. ಎಂಎಸ್’ಪಿಗೆ ಕಾನೂನಿನ ಮಾನ್ಯತೆ, ಕೇಂದ್ರ ಸಚಿವ ಅಜಯ್ ಮಿಶ್ರಾ ರಾಜಿನಾಮೆ, ಹುತಾತ್ಮ ರೈತರ ಕುಟುಂಬಕ್ಕೆ ಪರಿಹಾರ, ಹುತಾತ್ಮ ರೈತರ ಸ್ಮಾರಕ ಸ್ಥಾಪನೆಗೆ ಜಮೀನು, ವಿದ್ಯುತ್ ನಿಯಂತ್ರಣ ಕಾಯ್ದೆ ವಾಪಸಾತಿ ಹಾಗೂ ರೈತರ ಮೇಲಿನ ಪ್ರಕರಣಗಳ ರದ್ದತಿಗೆ ಬೇಡಿಕೆಯಿಟ್ಟಿದ್ದರು.

ಅಸಲಿಗೆ ಈಗ ರೈತ ಆಂದೋಲನ ಇನ್ನಷ್ಟು ವೇಗವನ್ನು ಪಡೆದಿದೆ. ಮುಖ್ಯವಾಗಿ ಎಂ ಎಸ್ ಪಿಗೆ ಕಾನೂನಿನ ಮಾನ್ಯತೆ ನೀಡಲು ಸರ್ಕಾರದ ಮೇಲೆ ರೈತರು ಒತ್ತಡ ಹೇರುತ್ತಿದ್ದಾರೆ. ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಘೋಷಣೆ ಮಾಡಿದರೂ, ರೈತರು ಪ್ರಧಾನಿಯ ಮಾತುಗಳ ಮೇಲೆ ನಂಬಿಕೆ ಇಟ್ಟಿಲ್ಲ. ಸಂಸತ್ತಿನಲ್ಲಿ ಅಧಿಕೃತವಾಗಿ ಕಾಯ್ದೆಗಳು ವಾಪಸ್ ಆಗುವವರೆಗೂ ನಂಬುವುದಿಲ್ಲ ಎಂಬ ಖಡಾಖಂಡಿತವಾದ ಸಂದೇಶವನ್ನು ರವಾನಿಸಿದ್ದಾರೆ.
ರೈತರಲ್ಲಿ ವಿಶ್ವಾಸ ತುಂಬಬೇಕಿದ್ದ ಬಿಜೆಪಿ ನಾಯಕರು, ಕೃಷಿ ಕಾಯ್ದೆಗಳನ್ನು ಮತ್ತೆ ಜಾರಿಗೆ ತರುವ ಸಾಧ್ಯತೆಗಳಿವೆ ಎಂಬ ಬೇಜವಾಬ್ದಾರಿತನದ ಹೇಳಿಕೆಗಳನ್ನು ನೀಡಿ ಮತ್ತೆ ರೈತರಲ್ಲಿ ಸಂದೇಹ ಹುಟ್ಟುವಂತೆ ಮಾಡಿದ್ದಾರೆ. ಅದರಲ್ಲಿಯೂ ಹುತಾತ್ಮ ರೈತರ ಕುರಿತು ಬಿಜೆಪಿ ನಾಯಕರಿಗೆ ಕಾಳಜಿಯೇ ಇಲ್ಲದಿರುವುದು ರೈತರನ್ನು ಮತ್ತೂ ಕೆರಳಿಸಿದೆ. ಸುಮಾರು ಏಳುನೂರು ಜನ ರೈತರ ಜೀವಕ್ಕಿಂತ ಒಬ್ಬ ಮೋದಿಯ ಸ್ವಪ್ರತಿಷ್ಠೆ ಮಿಗಿಲಾಯಿತೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯಲಿದ್ದು, ಈ ಎಲ್ಲಾ ವಿಚಾರಗಳು ಚುನಾವಣೆಯಲ್ಲಿ ಪ್ರತಿಧ್ವನಿಸಲಿವೆ. ವಿಪಕ್ಷಗಳಿಗೆ ರೈತರ ಆಂದೋಲನ ಪ್ರಮುಖ ಅಸ್ತ್ರವಾಗಿ ಪರಿಣಮಿಸಿದೆ. ಉತ್ತರ ಪ್ರದೇಶದ ಪ್ರಮುಖ ರೈತ ಮುಖಂಡರು ಸಕ್ರಿಯವಾಗಿ ಆಂದೋಲನದಲ್ಲಿ ತೊಡಗಿಕೊಂಡಿರುವುದರಿಂದ ಬೃಹತ್ ರೈತ ಸಮೂಹ ಅವರ ಬೆನ್ನಿಗೆ ಬೆಂಬಲವಾಗಿ ನಿಂತಿದೆ.
ಈ ಚುನಾವಣೆ ಬಿಜೆಪಿಯ ಪಾಲಿಗೆ ಜಿಜಕ್ಕೂ ಅಗ್ನಿಪರೀಕ್ಷೆ. ರಾಜ್ಯದ ಬಹುದೊಡ್ಡ ರೈತ ಸಮೂಹ ಸದ್ಯದ ಮಟ್ಟಿಗೆ ಬಿಜೆಪಿಯ ಹಿಂದುತ್ವ ಅಜೆಂಡಾಕ್ಕೆ ಮಾರುಹೋಗುವ ಸ್ಥಿತಿಯಲ್ಲಿಲ್ಲ. ಕಳೆದ ಐದು ವರ್ಷಗಳಲ್ಲಿ ನಡೆದ ಕೊಲೆ, ಅತ್ಯಾಚಾರ, ಎನ್ಕೌಂಟರ್ ನಂತಹ ಪ್ರಕರಣಗಳು ರಾಜ್ಯದ ಆಡಳಿತ ಸ್ಥಿತಿಯನ್ನು ಬೆತ್ತಲು ಮಾಡಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿಗೂ ರೈತ ಪರ ಎಂದು ಅನ್ನಿಸಿಕೊಳ್ಳದೇ ವಿಧಿ ಇಲ್ಲ ಎಂಬಂತಾಗಿದೆ.
ಈ ಕಾರಣಕ್ಕಾಗಿ ಆತುರಾತುರವಾಗಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದು, ಅದರ ಮೂಲಕ ಸರ್ಕಾರಕ್ಕೆ ರೈತರ ಕುರಿತು ಕಾಳಜಿಯಿದೆ ಎಂಬ ಸಂದೇಶವನ್ನು ರವಾನಿಸಲು ಹೊರಟಿದೆ. ಆದರೆ, ಈಗಾಗಲೇ ಸರ್ಕಾರದ ಮೇಲಿರುವ ಭರವಸೆಯನ್ನು ಕಳೆದುಕೊಂಡಿರುವ ರೈತರು ಇಂತಹ ಚುನಾವಣಾ ಗಿಮಿಕ್’ಗಳಿಗೆ ಮಾರುಹೋಗದಂತೆ ರೈತ ಮುಖಂಡರು ಶತಪ್ರಯತ್ನ ಪಡುತ್ತಿದ್ದಾರೆ. ರೈತ ಆಂದೋಲನವನ್ನು ಮತ್ತಷ್ಟು ಸದೃಢವಾಗಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಜಾತಿ, ಧರ್ಮದ ಹೆಸರಿನಲ್ಲಿ ಚುನಾವಣೆ ಎದುರಿಸುತ್ತಿದ್ದ ರಾಜಕೀಯ ಪಕ್ಷಗಳು ಈಗ ಅನಿವಾರ್ಯವಾಗಿ ರೈತರ ವಿಷಯವನ್ನು ಪ್ರಸ್ತಾಪಿಸಲೇಬೇಕಿದೆ. ಅದರಲ್ಲೂ ಕೇವಲ ಧರ್ಮಾಧಾರಿತ ರಾಜಕಾರಣದಿಂದಲೇ ಅಧಿಕಾರ ಪಡೆದ ಬಿಜೆಪಿ ತನ್ನ ಹಿಂದುತ್ವ ಅಜೆಂಡಾವನ್ನು ಬದಿಗೆ ಸರಿಸಿ ರೈತರ ಕುರಿತು ಮಾತನಾಡಬೇಕಾದ ಅನಿವಾರ್ಯಕ್ಕೆ ತಲುಪಿದೆ.