ವರದಿಗಾರಿಕೆ ಮತ್ತು ರಾಜಕೀಯ ಪಕ್ಷಗಳ ಜಾಹಿರಾತನ್ನು ಗುರುತಿಸಲಾಗದಷ್ಟು ಭಾರತೀಯ ಮಾಧ್ಯಮಗಳ ವರದಿಗಳು, ನ್ಯೂಸ್ಗಳು ಢಾಳು ಢಾಳಾಗಿವೆ. 2014ಕ್ಕೆ ಮೊದಲೂ ಈ ದೇಶದಲ್ಲಿ ಹಲವು ಪ್ರತಿಭಟನೆಗಳು ನಡೆದಿವೆ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಗಿದೆ, ಮೆರವಣಿಗೆ ಸಂಘಟಿಸಲಾಗಿದೆ. ಆದರೆ ಆಗ ಯಾವ ಮಾಧ್ಯಮಗಳೂ ಪ್ರತಿಭಟನಾಕಾರರನ್ನು ‘ಉಗ್ರಗಾಮಿ’ಗಳು ಎಂದು ಕರೆದಿರಲಿಲ್ಲ.
ನಿರ್ಭಯಾ ಪ್ರಕರಣದಲ್ಲಿ ಹತಾಶ ಮತ್ತು ಆಕ್ರೋಶಿತ ಪ್ರತಿಭಟನಾಕಾರರು ರಾಷ್ಟ್ರಪತಿ ಭವನಕ್ಕೂ ನುಗ್ಗಲು ಪ್ರಯತ್ನಿಸಿದ್ದರು. ಆಗ ಮಾಧ್ಯಮಗಳು ಸರ್ಕಾರದ ಪರವಹಿಸದೆ ಪ್ರತಿಭಟನಾಕಾರರನ್ನು ಬೆಂಬಲಿಸಿದ್ದವು. ಪ್ರಜಾಪ್ರಭುತ್ವ ದೇಶವೊಂದರ ಮಾಧ್ಯಮಗಳು ಕಾರ್ಯ ನಿರ್ವಹಿಸಬೇಕಾದದ್ದೂ ಹಾಗೆಯೇ.
ಆದರೆ ಜನವರಿ 26ರಂದು ದೇಶದ ಬಹುತೇಕ ಸುದ್ದಿ ಮನೆಗಳು ತೀರಾ ಕಳವಳಕಾರಿಯಾಗಿ ನಡೆದುಕೊಂಡವು. ಪ್ರತಿಭಟನಾ ನಿರತ ರೈತರನ್ನು ದೇಶದ್ರೋಹಿಗಳಂತೆ, ಖಾಲಿಸ್ತಾನಿಗಳಂತೆ ಬಿಂಬಿಸಲು ಪ್ರಯತ್ನಿಸಿತು. ರೈತರ ಎರಡು ತಿಂಗಳುಗಳ ನಿರಂತರ ಪ್ರತಿಭಟನೆಯ ಬಗ್ಗೆ ಸೊಲ್ಲೆತ್ತದ ಮಾಧ್ಯಮಗಳು ರೈತರು ‘ಅಕ್ರಮಿಗಳು’, ‘ಗೂಂಡಾಗಳು’ ಎಂದು ಶರಾ ಬರೆದುಬಿಟ್ಟವು.
ಸುಶಾಂತ್ ಸಿಂಗ್ ಪ್ರಕರಣದಲ್ಲೇ ಮುಂಬೈ ಹೈಕೋರ್ಟ್ ಪತ್ರಿಕಾಲಯದ ಪ್ರತಿನಿಧಿಗಳು ನ್ಯಾಯಾಧೀಶರಂತೆ ವರ್ತಿಸಬಾರದು ಎಂದು ಕಟುವಾಗಿ ಎಚ್ಚರಿಸಿತ್ತು. ಆದರೆ ನಮ್ಮ ಮಾಧ್ಯಮಕ್ಕೆ ಅವೆಲ್ಲಾ ಅಷ್ಟು ಸುಲಭದಲ್ಲಿ ಅರ್ಥವಾಗುವುದಿಲ್ಲ.
ಅಸಲಿಗೆ ಕೃಷಿ ಕಾಯ್ದೆ ಮಾಡುವ ಅಧಿಕಾರವೇ ಕೇಂದ್ರ ಸರ್ಕಾರಕ್ಕಿಲ್ಲ, ಅದರ ಸಂಪೂರ್ಣ ಹಕ್ಕಿರುವುದು ರಾಜ್ಯ ಸರ್ಕಾರಕ್ಕೆ. ರಾಜ್ಯಗಳ ಹಕ್ಕನ್ನು ಕಸಿದುಕೊಂಡದ್ದೇ ಅಲ್ಲದೆ ಪಂಜಾಬ್ ಸರ್ಕಾರವು ಬೇರೆಯದೇ ಕಾನೂನು ರೂಪಿಸಿದಾಗ ರಾಷ್ಟ್ರಪತಿಗಳು ಅಂಕಿತ ಹಾಕದೇ ಸತಾಯಿಸಿದ್ದು ಸಂವಿಧಾನದ ಸ್ಪಷ್ಟ ಉಲ್ಲಂಘನೆ. ತಮ್ಮ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಿ ಅದನ್ನು ಒಕ್ಕೂಟ ಸರ್ಕಾರ ಗಣನೆಗೆ ತೆಗೆದುಕೊಳ್ಳಲಿಲ್ಲ ಅಂದಾದ ಮೇಲಷ್ಟೇ ರೈತರು ರಾಜಧಾನಿಗೆ ಬಂದದ್ದು. ದೆಹಲಿಯ ಗಡಿ ಭಾಗಗಳಲ್ಲಿ ಸತತ ಎರಡು ತಿಂಗಳುಗಳ ಕಾಲ ಅತ್ಯಂತ ಶಾಂತಿಯುತ ಪ್ರತಿಭಟನೆಯನ್ನೇ ನಡೆಸಿದ್ದರು. ಆಗಲೂ ಸರ್ಕಾರ ಅವರ ಬೇಡಿಕೆಯ ಬಗ್ಗೆ ಗಮನ ಹರಿಸಿಲ್ಲ, ಮಾಧ್ಯಮಗಳಿಗೂ ಅವುಗಳ ಬಗ್ಗೆ ವರದಿ ಮಾಡಬೇಕು ಅನ್ನಿಸಲಿಲಲ್ಲ. ಪ್ರತಿಭಟನಾ ನಿರತ ರೈತರ ಸರಣಿ ಸಾವುಗಳೂ ಮಾಧ್ಯಮಗಳನ್ನು ಭಾದಿಸಲಿಲ್ಲ.
ಗಣರಾಜ್ಯೋತ್ಸವದಂದೂ ದೆಹಲಿಯಲ್ಲಿ ಲಕ್ಷಾಂತರ ರೈತರು ಸಾವಿರಾರು ಟ್ರಾಕ್ಟರ್ಗಳೊಂದಿಗೆ ಬೀದಿಗಿಳಿದಿದ್ದರು. ಉಳಿದ ರಾಜ್ಯಗಳಲ್ಲೂ ಕೋಟ್ಯಾಂತರ ರೈತರು ದೆಹಲಿ ಪ್ರತಿಭಟನೆಗೆ ಬೆಂಬಲ ಸೂಚಿಸಿ ಪ್ರತಿಭಟಿಸಿದ್ದರು. ಆದರೆ ಮಾಧ್ಯಮಗಳು ಅವುಗಳ ಬಗ್ಗೆ ಮಾತೇ ಆಡದೆ ‘ಖಾಲಿಸ್ತಾನ’, ‘ಆಕ್ರಮಣ’, ‘ಭಯೋತ್ಪಾದಕರು’ ಎಂಬೆಲ್ಲಾ ಪದ ಬಳಸಿ ಒಟ್ಟು ರೈತ ಚಳವಳಿಯನ್ನೇ ಕೆಟ್ಟ ರೀತಿಯಲ್ಲಿ ಬಿಂಬಿಸಲು ಪ್ರಯತ್ನಿಸಿದವು.
ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೆಯ ಅಂಗ ಎಂದು ತನ್ನನ್ನು ತಾನು ಕರೆದುಕೊಳ್ಳುವ ಮಾಧ್ಯಮಗಳು ತಮಗಿರುವ ಎಲ್ಲಾ ಮೌಲ್ಯಗಳನ್ನು ಮರೆತಿರುವುದು ಗಣತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲನೇ ಬಾರಿಯೇನೋ. ತುರ್ತುಪರಿಸ್ಥಿತಿಯ ಸಮಯದಲ್ಲೂ ಸರ್ಕಾರದ ತುತ್ತೂರಿ ಊದದ ಮಾಧ್ಯಮಗಳಿದ್ದವು, ಅದಕ್ಕಾಗಿ ಜೈಲು ಸೇರಿದ ಸಂಪಾದಕರೂ ಇದ್ದರು. ಆದರೆ ಈಗ ವೈಯಕ್ತಿಕ ಲಾಭ, ಆಕಾಂಕ್ಷೆಗಾಗಿ ಪತ್ರಿಕೋದ್ಯಮದ ಘನತೆಯನ್ನು ಮೂಲೆಪಾಲು ಮಾಡಲಾಗುತ್ತಿದೆ.
ರೈತರು ಹಾರಾಡಿಸಿದ್ದು ಖಾಲಿಸ್ತಾನದ ಧ್ವಜ ಅಲ್ಲ, ಸಿಖ್ಖರ ಧ್ವಜ ಅನ್ನುವುದು ಗೊತ್ತಿಲ್ಲದಷ್ಟು ಮಾಧ್ಯಮಗಳು ತಿಳಿವುಗೇಡಿಗಳೇ? ಪ್ಯಾನೆಲ್ನಲ್ಲಿ ಕೂತು ಗಂಟೆ ಗಟ್ಟಲೆ ಚರ್ಚೆ ಮಾಡುವ, ಕಿರುಚಾಡುವ ಮಂದಿ ಅಷ್ಟು ಅರಿವನ್ನೂ ದಕ್ಕಿಸಿಕೊಂಡಿರುವುದಿಲ್ಲವೇ? ತಿಳಿದೂ ತಿಳಿದೂ ಜನರ ದಾರಿ ತಪ್ಪಿಸುವ ಅತ್ಯಂತ ಹೀನ ಹುನ್ನಾರವೇ ಇದು? ಪ್ರತಿಭಟನಾ ನಿರತರ ಉದ್ದೇಶ ಹಿಂಸೆಯೇ ಆಗಿದ್ದರೆ ಇಷ್ಟು ದೀರ್ಘ ಕಾಲ, ಸಾಕಷ್ಟು ಸಾವು ನೋವನ್ನು ಅನುಭವಿಸಿಯೂ ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದರೇ? ರೈತರ ಉದ್ದೇಶ ಖಾಲಿಸ್ತಾನವೇ ಆಗಿದ್ದರೆ ಪಂಜಾಬ್ ಗಡಿಯಲ್ಲಿ ಜಮಾಯಿಸಬೇಕಿದ್ದವರು ದೆಹಲಿಗೆ ಬಂದು ಕೊರೆಯುವ ಚಳಿಯಲ್ಲಿ ಕೂರುತ್ತಿದ್ದರೇ?
ತ್ರಿವರ್ಣ ಧ್ವಜವನ್ನು ಇಳಿಸಿ ‘ಖಾಲಿಸ್ತಾನ’ದ ಧ್ವಜವನ್ನು ಹಾರಿಸಲಾಯಿತು ಎಂದೇ ಸುಳ್ಳು ಸುಳ್ಳು ವರದಿ ಮಾಡಿದ ಮಾಧ್ಯಮಗಳಿಗೆ ತಾವು ಊಳಿಗರಾಗಿರುವ ಪಕ್ಷ ಮತ್ತದರ ಮಾತೃ ಸಂಘಟನೆಯು ಐವತ್ತು ಚಿಲ್ಲರೆ ವರ್ಷಗಳಷ್ಟು ಕಾಲ ತ್ರಿವರ್ಣ ಧ್ವಜವನ್ನು ಒಪ್ಪಿಕೊಂಡಿರಲಿಲ್ಲ, ಈಗಲೂ ಭಗವಾಧ್ವಜವನ್ನು ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲೇ ಹಾರಿಸುವುದನ್ನು ಪ್ರೈಂ ಟೈಂ ಚರ್ಚೆಗೆ ಎತ್ತಿಕೊಳ್ಳಬೇಕು, ಮೈಕ್ ಮುಂದೆ ಕಿರುಚಿ ಕಿರುಚಿ ಹೇಳಬೇಕು ಎಂದು ಅನ್ನಿಸುವುದಿಲ್ಲ.
ಸರ್ಕಾರಿ ಕೃಪಾ ಪೋಷಿತ ಮಾಧ್ಯಮಗಳು ಒಂದು ಕಡೆಯಲ್ಲಿ ಜನಪರವಾದ ಎಲ್ಲಾ ಪ್ರತಿಭಟನೆಗಳನ್ನು ದೇಶದ್ರೋಹಕ್ಕೆ ಗಂಟು ಹಾಕುತ್ತಾ ಹೋಗುತ್ತಿದೆ. ಇನ್ನೊಂದೆಡೆ ಸರ್ಕಾರ ತನ್ನನ್ನು ವಿಮರ್ಶಿಸುವ ಯಾವ ಚಾನೆಲ್ಗಳಿಗೂ ಪ್ರಸಾರದ ಪರವಾನಿಗೆಯನ್ನೇ ಕೊಡುತ್ತಿಲ್ಲ. ಇದಕ್ಕೆ ಉತ್ತಮ ಉದಾಹರಣೆಯಾಗಿ ಕರ್ನಾಟಕದ ಪವರ್ ಟಿ.ವಿ ಬ್ಯಾನ್ ಮಾಡಿರುವ ಘಟನೆಯನ್ನು ನೆನಪಿಸಿಕೊಳ್ಳಬಹುದು.
ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಮಾಲಿಕತ್ವದ, ಅರ್ನಾಬ್ ನೇತೃತ್ವದ ರಿಪಬ್ಲಿಕ್ ಟಿವಿ ಗೆ 2018ರಲ್ಲಿ ತಕ್ಷಣ ಅನುಮತಿ ದೊರೆತರೆ, ರಾಘವ್ ಬಾಹ್ಲ್ ಮತ್ತು ಬ್ಲೂಂಬರ್ಗ್ ಕ್ವಿಂಟ್ ಸಹಭಾಗಿತ್ವದ ಚಾನೆಲ್ಗೆ ಇನ್ನೂ ಅನುಮತಿ ಸಿಕ್ಕಿಲ್ಲ. ಸರ್ಕಾರ ತನ್ನ ಪರ ಒಲವಿರುವವರಿಗೆ, ತನಗೆ ಬೆಂಬಲವಾಗಿ ನಿಲ್ಲುವ ಚಾನೆಲ್ಗಳಿಗೆ ಮಾತ್ರ ಅನುಮತಿ ನೀಡುವ ಕೆಟ್ಟ ಚಾಳಿ ಮುಂದುವರಿಸಿದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸರ್ಕಾರವು ಉಗಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಈಗಾಗಲೇ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ, ಜೆಎನ್ಯು ವಿಚಾರದಲ್ಲಿ ಭಾರತದ ಮಾಧ್ಯಮಗಳು ಸರ್ಕಾರದ ಪರ ನಿಂತು ತಮ್ಮ ಮೌಲ್ಯವನ್ನು ಕಳೆದುಕೊಂಡಿವೆ. ಪ್ರತಿ ಪ್ರತಿಭಟನಾಕರಾರರು ಬಲಿಷ್ಠ ಸರ್ಕಾರವನ್ನು ಎದುರು ಹಾಕಿಕೊಳ್ಳುವುದರ ಜೊತೆಗೆ ಸರ್ಕಾರದ ತುತ್ತೂರಿ ಊದುವ ಮಾಧ್ಯಮಗಳನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ ಎಂಬಲ್ಲಿಗೆ ಈ ದೇಶವನ್ನು ತಂದು ನಿಲ್ಲಿಸಿದ ಕೀರ್ತಿ ಮಾತ್ರ ನರೇಂದ್ರ ಮೋದಿ ಮತ್ತವರ ಸರ್ಕಾರಕ್ಕೆ ಸಲ್ಲುತ್ತದೆ.