ರೈತರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ. ಆದರೆ ಅನಿರ್ದಿಷ್ಟಾವಧಿಗೆ ರಸ್ತೆಗಳನ್ನು ತಡೆಯುವ ಹಕ್ಕಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ರೈತ ಸಂಘಟನೆ ನೇತೃತ್ವದಲ್ಲಿ ಕಳೆದೊಂದು ವರ್ಷದಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಈ ವೇಳೆ ರೈತರು ರೈಲು ಮಾರ್ಗ, ರಸ್ತೆ ಮಾರ್ಗಗಳನ್ನು ನಿರ್ಬಂಧಿಸಿ ಹಲವು ಬಾರಿ ಧರಣಿ ನಡೆಸಿದ್ದರು. ರೈತರ ಈ ರೀತಿಯ ಹೋರಾಟಗಳ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ರೈಲು-ರಸ್ತೆ ಮಾರ್ಗಗಳಲ್ಲಿ ತಡೆದಿರುವ ಪ್ರತಿಭಟನಾ ನಿರತ ರೈತರನ್ನು ಅಲ್ಲಿಂದ ತೆರವುಗೊಳಿಸುವಂತೆ ಅರ್ಜಿಯಲ್ಲಿ ಆಗ್ರಹಿಸಲಾಗಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಸಿ.ಟಿ.ರವಿಕುಮಾರ್ ಅವರ ನೇತೃತ್ವದ ನ್ಯಾಯಪೀಠವು, ಸಂಯುಕ್ತ ಕಿಸಾನ್ ಮೋರ್ಚಾಗೆ ರಸ್ತೆ ತಡೆಯುವ ಹಕ್ಕು ಇದೆಯೇ ಎಂದು ಪ್ರಶ್ನಿಸಿದೆ. ರೈತರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ. ಆದರೆ ಅನಿರ್ದಿಷ್ಟಾವಧಿಗೆ ರಸ್ತೆಗಳನ್ನು ತಡೆಯುವ ಹಕ್ಕಿಲ್ಲ ಎಂದು ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಎಸ್ಕೆಎಂ, ರಸ್ತೆ ನಿರ್ವಹಣೆಯನ್ನು ಪೊಲೀಸರು ಉತ್ತಮವಾಗಿ ಮಾಡಬಹುದು. ಅವರಿಗೆ ನಿರ್ವಹಿಸಲು ಸಾಧ್ಯವಾಗದಿದ್ದರೆ ರೈತರಿಗೆ ದೆಹಲಿಯ ರಾಮ್ ಲೀಲಾ ಮೈದಾನ ಅಥವಾ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮಾಡಲು ಅವಕಾಶ ನೀಡಬೇಕು ಎಂದು ತಿಳಿಸಿತು.
ಈ ಅರ್ಜಿಗೆ ಅಫಿಡವಿಟ್ ಸಲ್ಲಿಸುವಂತೆ ರೈತ ಸಂಘಗಳಿಗೆ ಕೇಳಿರುವ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಡಿಸೆಂಬರ್ 7ಕ್ಕೆ ಮುಂದೂಡಿದೆ