ನವದೆಹಲಿ (Newdelhi): ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಲವು ರಾಜ್ಯಗಳ ರೈತರು ಇಂದು ‘ದಿಲ್ಲಿ ಚಲೋ’ (Delhi Chalo) ಹಮ್ಮಿಕೊಂಡಿದ್ದಾರೆ.
ರೈತರ ಈ ಹೋರಾಟವನ್ನು ತಡೆಯಲು ಕೇಂದ್ರ ಸಚಿವರು ರೈತ ಮುಖಂಡರೊಂದಿಗೆ ನಡೆಸಿದ ಐದು ಗಂಟೆಗಳ ಸುದೀರ್ಘ ಸಭೆ ಫಲ ಪ್ರದವಾಗಿಲ್ಲ. ರೈತರ ಪ್ರಮುಖ ಬೇಡಿಕೆಯಾದ ‘ಬೆಳೆಗಳಿಗೆ ಗರಿಷ್ಠ ಬೆಂಬಲ ಬೆಲೆ’ಯ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ.
ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ (Piyush Goyal) ಮತ್ತು ಕೃಷಿ ಸಚಿವ ಅರ್ಜುನ್ ಮುಂಡಾ (ArjunvMunda) ಅವರು ರೈತ ಮುಖಂಡರೊಂದಿಗೆ ಚಂಡೀಗಢದಲ್ಲಿ ಸೋಮವಾರ ಮಧ್ಯರಾತ್ರಿಯವರೆಗೆ ಸಭೆ ನಡೆಸಿದ್ದು, ಪ್ರಯೋಜನವಾಗಿಲ್ಲ.
ಸುದೀರ್ಘ ಚರ್ಚೆ ನಡೆದು ರಾತ್ರಿ 11 ಗಂಟೆಯ ನಂತರ, ರೈತ ಮುಖಂಡರು ಮತ್ತು ಸಚಿವರು ವಿದ್ಯುತ್ ಕಾಯ್ದೆ 2020 ರದ್ದತಿ, ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಮೃತಪಟ್ಟ ರೈತರಿಗೆ ಪರಿಹಾರ ಮತ್ತು ರೈತರ ಚಳವಳಿಯ ಸಂದರ್ಭದಲ್ಲಿ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಒಂದು ಒಪ್ಪಂದಕ್ಕೆ ಬಂದಿದ್ದಾರೆ.
ಆದರೆ, ರೈತರ ಮೂರು ಪ್ರಮುಖ ಬೇಡಿಕೆಗಳಾದ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಕಾನೂನನ್ನು ಜಾರಿಗೊಳಿಸುವುದು, ರೈತರ ಸಾಲ ಮನ್ನಾ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನದ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ.
ಸಭೆಯ ಬಳಿಕ ತಡರಾತ್ರಿ ಮಾಧ್ಯಮಗಳೊಂದಿಗೆ ಮಾತನಾಡಿದ, ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಸರ್ವಾನ್ ಸಿಂಗ್ ಪಂಧೇರ್ ‘ದಿಲ್ಲಿ ಚಲೋ’ ಮೆರವಣಿಗೆ ನಡೆಯಲಿದೆ. ಎರಡು ವರ್ಷಗಳ ಹಿಂದೆ ಸರ್ಕಾರವು ನಮ್ಮ ಅರ್ಧದಷ್ಟು ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತವಾಗಿ ಭರವಸೆ ನೀಡಿತ್ತು. ನಾವು ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ಬಯಸಿದ್ದೇವೆ. ಆದರೆ, ಸರ್ಕಾರವು ಪ್ರಾಮಾಣಿಕವಾಗಿಲ್ಲ. ಅವರು ಸಮಯ ವ್ಯರ್ಥ ಮಾಡಲು ಬಯಸುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಪ್ರತಿಭಟನಾ ಮೆರವಣಿಗೆ ಕೈಗೊಂಡಿರುವ ರೈತರು ದೆಹಲಿ ಪ್ರವೇಶಿಸದಂತೆ ತಡೆಯಲು ಪೊಲೀಸರು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದ್ದಾರೆ. ಸಿಂಘು, ಟಿಕ್ರಿ ಮತ್ತು ಗಾಝಿಪುರ ಗಡಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಾರ್ವಜನಿಕ ಸಭೆಗಳು ನಡೆಸುವುದಕ್ಕೆ ಮತ್ತು ಟ್ರ್ಯಾಕ್ಟರ್, ಟ್ರಾಲಿಗಳು ನಗರಕ್ಕೆ ಪ್ರವೇಶಿಸದಂತೆ ಪೊಲೀಸರು ಒಂದು ತಿಂಗಳ ಕಾಲ ನಿಷೇಧ ಹೇರಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ‘ದಿಲ್ಲಿ ಚಲೋ’ ಘೋಷಿಸಿದೆ. ಇದೇ ಸಂಘಟನೆಗಳ ನೇತೃತ್ವದಲ್ಲಿ 2020-21 ರಲ್ಲಿ ವರ್ಷವಿಡೀ ನಡೆದ ಆಂದೋಲನದ ನಂತರ ಕೇಂದ್ರ ಸರ್ಕಾರ ಮೂರು ಕೃಷಿ ಕಾನೂಗಳನ್ನು ಹಿಂದೆಗೆದುಕೊಂಡಿತ್ತು.
#delhichalo #farmers #farmersprotest #newdelhi













