ರಾಷ್ಟ್ರ ರಾಜಧಾನಿ ದೆಹಲಿಯ ಮೂರು ಗಡಿ ಭಾಗಗಳಲ್ಲಿ ಕಳೆದ ಒಂದು ವರ್ಷದಿಂದ ಪ್ರತಿಭಟನೆಯನ್ನು ನಡೆಸುತ್ತಿರುವ ರೈತರು ತಮ್ಮ ಹೋರಾಟದ ಮುಂದಿನ ಹೆಜ್ಜೆ ಕುರಿತು ಮತ್ತು ಕೇಂದ್ರ ಸರ್ಕಾರ ತಮ್ಮ 6 ಬೇಡಿಕೆಗಳಿಗೆ ಇನ್ನು ಸ್ಪಂದಿಸದ ಕಾರಣ ಮುಂದಿನ ನಡೆ ಬಗ್ಗೆ ಚರ್ಚಿಸಲು ಡಿಸೆಂಬರ್ 8 ಬುಧವಾರದಂದು ಸಭೆ ನಡೆಸಲು ಉದ್ದೇಶಿಸಿದೆ.
ಮಂಗಳವಾರ ಸಭೆ ನಡೆಸಿದ ರೈತ ಸಂಘಟನೆಗಳು ತಮ್ಮ ಬೇಡಿಕೆಗಳು ಇನ್ನು ಬಾಕಿ ಉಳಿದಿರುವ ಕಾರಣ ನಾವು ಸರ್ಕಾರಕ್ಕೆ ಕೆಲವು ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಕಳುಹಿಸಿದ್ದೇವೆ ಎಂದು ಸಭೆಯ ನಂತರ ರೈತ ಸಂಘದ ಮುಖಂಡರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಂಯುಕ್ತ ಕಿಸಾನ್ ಮೋರ್ಚಾ ಅಧ್ಯಕ್ಷರಾದ ರಾಕೇಶ್ ಟಿಕಾಯತ್, ರೈತರ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಆದರೆ, ಪ್ರಸ್ತಾವನೆಯ ರೂಪುರೇಷೆಗಳು ಇನ್ನು ಸ್ಪಷ್ಟವಾಗಿ ಸಿದ್ದವಾಗಿಲ್ಲ ಎಂದು ಹೇಳಿದ್ದಾರೆ.
ನಾವು ನಮ್ಮ ಸ್ಪಷ್ಟ ನಿಲುವನ್ನು ಹೊಂದಿದ್ದೇವೆ ಅದನ್ನು ನಾಳೆ ಮಧ್ಯಾಹ್ನ 2 ಘಂಟೆಗೆ ಚರ್ಚಿಸಲಾಗುವುದು ಮತ್ತು ನಮ್ಮ ಚಳುವಳಿ ಎಲ್ಲಿಗೂ ಹೋಗುವುದಿಲ್ಲ ನಾವು ಇಲ್ಲೇ ಇರುತ್ತೇವೆ ಎಂದು ಟಿಕಾಯತ್ ಹೇಳಿದ್ದಾರೆ.
ಪ್ರತಿಭಟನೆಯನ್ನು ಹಿಂಪಡೆದರೆ ರೈತರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಲಾಗುವುದು ಎಂಬ ಸರ್ಕಾರದ ಷರತ್ತನ್ನು ಯಾವುದೇ ಕಾರಣಕ್ಕು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ ನಂತರ ರೈತರು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದರು. ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಖಾತ್ರಿಪಡಿಸುವ ಕಾನೂನು ಖಾತರಿ ರೈತರ ಪ್ರಮುಖ ಬೇಡಿಕೆಯಾಗಿತ್ತು.
ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕು, ವಾಯು ಮಾಲಿನ್ಯ ಮಸೂದೆಯಿಂದ ದಂಡವನ್ನ ತೆಗೆದು ಹಾಕಬೇಕು, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾನನ್ನು ಬಂಧಿಸಿ ಸಚಿವ ಸಂಪುಟದಿಂದ ವಜಾಗೊಳಿಸಬೇಕು ರೈತರ ವಿರುದ್ದ ನಕಲಿ ಪ್ರಕರಣಗಳನ್ನು ಹಿಂಪಡೆಯಬೇಕು ಮತ್ತು ಹೋರಾಟದಲ್ಲಿ ಮೃತಪಟ್ಟ ರೈತರಿಗೆ ಸ್ಮಾರಕ ನಿರ್ಮಿಸಿ ಮತ್ತು ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರ ರೈತರಿಗೆ ಬರೆದಿರುವ ಪತ್ರದಲ್ಲಿ ಎಂಎಸ್ಪಿ ಸಮಸ್ಯೆಯನ್ನು ಚರ್ಚಿಸಲು ಸಮಿತಿಯನ್ನು ರಚಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಉತ್ತರ ಪ್ರದೇಶ ಮತ್ತು ಹರಿಯಾಣ ಸರ್ಕಾರಗಳು ರೈತರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯುತ್ತವೆ ಎಂದು ಪತ್ರದಲ್ಲಿ ಹೇಳಿದೆ.