ತಮ್ಮ ಬೇಡಿಕೆಗಳನ್ನು ಈಡೇರಿಸದೆ ರೈತರಿಗೆ ದ್ರೋಹ ಬಗೆದಿರುವ ಬಿಜೆಪಿಯನ್ನು ಮುಂಬರುವ ರಾಜ್ಯ ಚುನಾವಣೆಯಲ್ಲಿ ಶಿಕ್ಷಿಸುವಂತೆ (ಸೋಲಿಸುವಂತೆ) ಉತ್ತರ ಪ್ರದೇಶದ ರೈತರಿಗೆ ಸಂಯುಕ್ತ ಕಿಸಾನ್ ಮೋರ್ಚಾ (SKM) ಮನವಿ ಮಾಡಿದೆ ಎಂದು ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಎಸ್ಕೆಎಂ ನೀಡಿದ ಕರೆಗೆ 57 ರೈತ ಸಂಘಟನೆಗಳು ಬೆಂಬಲ ನೀಡಿವೆ ಎಂದು ಯೋಗೇಂದ್ರ ಯಾದವ್ ಹೇಳಿದರು. ಆದರೆ, ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಮತ ಹಾಕುವಂತೆ ನಾವು ಸೂಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಂತಿಮವಾಗಿ ಹಿಂತೆಗೆದುಕೊಳ್ಳಲಾದ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಆಂದೋಲನದ ನೇತೃತ್ವ ವಹಿಸಿದ್ದ ಎಸ್ಕೆಎಂ, ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಸಮಿತಿ ರಚನೆ ಮತ್ತು ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದು ಸೇರಿದಂತೆ ತಮ್ಮ ಉಳಿದ ಬೇಡಿಕೆಗಳು ಇನ್ನೂ ಈಡೇರಿಲ್ಲ ಎಂದು ಆರೋಪಿಸಿ ಕಿಡಿಕಾರಿದ್ದಾರೆ.
“ರೈತರಿಗೆ ದ್ರೋಹ ಎಸಗಿರುವ ಬಿಜೆಪಿಯನ್ನು ಮುಂಬರುವ ಚುನಾವಣೆಯಲ್ಲಿ ಶಿಕ್ಷಿಸುವಂತೆ ಎಸ್ಕೆಎಂ ಯುಪಿಯ ರೈತರಿಗೆ ಮನವಿ ಮಾಡಿದೆ. ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸಿಲ್ಲ. ಎಂಎಸ್ಪಿಗಾಗಿ ಇನ್ನೂ ಯಾವುದೇ ಸಮಿತಿಯನ್ನು ರಚಿಸಿಲ್ಲ ಮತ್ತು ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆದಿಲ್ಲ” ಎಂದು ಯೋಗೇಂದ್ರ ಯಾದವ್ ಹೇಳಿದರು.

“ನಾವು ಮುಂಬರುವ ದಿನಗಳಲ್ಲಿ ಮೀರತ್, ಕಾನ್ಪುರ್, ಸಿದ್ಧಾರ್ಥನಗರ, ಗೋರಖ್ಪುರ ಮತ್ತು ಲಕ್ನೋ ಸೇರಿದಂತೆ ಒಂಬತ್ತು ಸ್ಥಳಗಳಲ್ಲಿ ಪತ್ರಿಕಾಗೋಷ್ಠಿಗಳನ್ನು ಆಯೋಜಿಸುತ್ತೇವೆ. ನಮ್ಮ ಮನವಿಯನ್ನು ಹೊಂದಿರುವ ಕರಪತ್ರಗಳನ್ನು ಯುಪಿಯಾದ್ಯಂತ ವಿತರಿಸಲಾಗುವುದು” ಮುಖ್ಯವಾಗಿ, ಎಸ್ಕೆಎಂ ಯಾವುದೇ ಪಕ್ಷಕ್ಕೆ ಮತ ಹಾಕಿ ಎಂದು ಸೂಚಿಸುವುದಿಲ್ಲ. “ಮೋರ್ಚಾ ರಾಜಕೀಯದಲ್ಲಿ ಒಳಗೊಳ್ಳುವುದಿಲ್ಲ ದೂರವೇ ಉಳಿಯುತ್ತದೆ ಮತ್ತು ಹೋರಾಟ ಮುಂದುವರಿಯುತ್ತದೆ” ಎಂದು ಹೇಳಿದರು.