ಖ್ಯಾತ ಸಾಹಿತಿ ಕಮಲಾ ಹಂಪನಾ ನಿಧನರಾಗಿದ್ದಾರೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಹೃದಯಾಘಾತದಿಂದ 88 ವರ್ಷd ಕಮಲಾ ಹಂಪನಾ ನಿಧನರಾಗಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿರುವ ಹಿರಿಯ ಪುತ್ರಿ ರಾಜಶ್ರೀ ಅವರ ನಿವಾಸದಲ್ಲಿ ನೆಲೆಸಿದ್ದರು. ಕಮಲಾ ಹಂಪನಾ ಅವರ ಪಾರ್ಥಿವ ಶರೀರವನ್ನು ರಾಜಾಜಿನಗರದ 18ನೇ ಕ್ರಾಸ್ ನಲ್ಲಿರುವ ನಿವಾಸಕ್ಕೆ ತರಲಾಗುವುದು. ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.
ಕಮಲಾ ಹಂಪನಾ ಅವರು ಖ್ಯಾತ ವಾಗ್ಮಿಯಾಗಿದ್ದು, ಇವರ ಪತಿ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅವರನ್ನು ಅಗಲಿದ್ದಾರೆ. ಕಮಲಾ ಹಂಪನಾ ಅವರು ಬೆಂಗಳೂರಿನ ಮಹಾರಾಣಿ ಕಾಲೇಜಿನ ಪ್ರಿನ್ಸಿಪಾಲ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಪತಿ ಪ್ರೊ. ಹಂಪ ನಾಗರಾಜಯ್ಯ ಹಾಗು ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಮಗನನ್ನು ಅಗಲಿದ್ದಾರೆ. ಸಾಹಿತ್ಯ ಅಕಾಡಮಿ, ರಾಜ್ಯೋತ್ಸವ, ಅತ್ತಿಮಬ್ಬೆ ಪ್ರಶಸ್ತಿ, ಪ್ರತಿಷ್ಟಿತ ನಾಡೋಜ ಪುರಸ್ಕೃತರಾಗಿದ್ದರು. ಜೈನ ಸಾಹಿತ್ಯದ ವಿದ್ವಾಂಸರಾಗಿದ್ದ ಕಮಲಾ ಹಂಪನಾ, 71ನೇ ಮೂಡಬಿದರೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 60ಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಕಮಲಾ ಹಂಪನಾ, ಬಿಂದಲಿ, ಬುಗುಡಿ, ಬಯಲು ಇವರ ಮಹತ್ವದ ಕೃತಿಗಳು. ಕಮಲಾ ಅವರು ತಮ್ಮ ದೇಹವನ್ನು ಖಾಸಗಿ ಆಸ್ಪತ್ರೆಗೆ ದಾನ ಮಾಡಿದ್ದಾರೆ.