ತಿರುವನಂತಪುರಂ: ಬೆರಳುಗಳ ಶಸ್ತ್ರಚಿಕಿತ್ಸೆಗೆ ತೆರಳಿದ್ದ ಮಗುವಿನ ನಾಲಿಗೆಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿರುವ ವಿಚಿತ್ರ ಘಟನೆಯೊಂದು ನಡೆದಿದೆ.
ಆರು ಬೆರಳುಗಳಿರುವ ಮಗುವನ್ನು ಕುಟುಂಬಸ್ಥರು ಶಸ್ತ್ರ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಈ ವೇಳೆ ವೈದ್ಯರು ಯಡವಟ್ಟು ಮಾಡಿದ್ದಾರೆ. ಈ ಘಟನೆ ಕೇರಳದ (Kerala) ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರದಲ್ಲಿ ನಾಲ್ಕು ವರ್ಷದ ಬಾಲಕಿಯ ಕೈಯಲ್ಲಿರುವ ಆರನೇ ಬೆರಳನ್ನು ತೆಗೆಯುವ ಶಸ್ತ್ರ ಚಿಕಿತ್ಸೆ ನಡೆಸಬೇಕಿತ್ತು.
ಆದರೆ, ಬಾಲಕಿಯ ನಾಲಿಗೆಗೆ ಯಾವುದೇ ತೊಂದರೆ ಇರಲಿಲ್ಲ. ವೈದ್ಯರು ಆಕೆಯ ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಭಾರೀ ಎಡವಟ್ಟು ಮಾಡಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಆಕೆಯ ಬಾಯಿಯಲ್ಲಿದ್ದ ಹತ್ತಿಯನ್ನು ನೋಡಿದಾಗ ವೈದ್ಯರ ಎಡವಟ್ಟು ಬಯಲಾಗಿದೆ. ಘಟನೆ ಕುರಿತು ತಕ್ಷಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಆರೋಗ್ಯ ಸಚಿವೆ ವೀಣಾ (Health Minister Veena) ಸೂಚಿಸಿದ್ದಾರೆ.