ಲೋಕಸಭಾ ಚುನಾವಣೆಗಳ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ರಾಜ್ಯದಲ್ಲಿ ಗ್ಯಾರಂಟಿ (Guarantee) ಯೋಜನೆಗಳ ಬಗ್ಗೆ ಚರ್ಚೆ ಶುರುವಾಗಿದೆ. ಈಗಾಗಲೇ ಸರ್ಕಾರದ ಕೆಲ ಶಾಸಕರು ಪರೋಕ್ಷವಾಗಿ ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸುವ ಬಗ್ಗೆ ಮಾತನಾಡಿದಂತಿದೆ.
ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿ ರಾಜ್ಯದಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದ ಕಾಂಗ್ರೆಸ್ ಪಕ್ಷ (Congress party),ಅಧಿಕಾರಕ್ಕೆ ಬಂದ ನಂತರ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೊಳಿಸಿತ್ತು. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಕಾಂಗ್ರೆಸ್ ಕೈಹಿಡಿಯಲಿದ್ದಾರೆ ಎಂಬ ಆತ್ಮವಿಶ್ವಾಸದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಇದ್ದರು .ಆದರೆ ಫಲಿತಾಂಶ ಕಾಂಗ್ರೆಸ್ ನಾಯಕರಿಗೆ ಶಾಕ್ ಕೊಟ್ಟಿದೆ.
ರಾಜ್ಯದಲ್ಲಿ 20ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್ ಕೇವಲ ಏಳು ಸ್ಥಾನಗಳಿಗೆ ಸೀಮಿತವಾಗಿದೆ . ಹೀಗಾಗಿ ರಾಜ್ಯದ ಜನರು ಗ್ಯಾರಂಟಿ ಯೋಜನೆಗಳ ಪರವಾಗಿ ಇಲ್ಲ ಎಂಬ ಮಾತುಗಳನ್ನ ಈಗಾಗಲೇ ಕೆಲ ರಾಜ್ಯ ಕಾಂಗ್ರೆಸ್ ನಾಯಕರು ಮಾತನಾಡಿದ್ದಾರೆ . ಆ ಮೂಲಕ ಪರೋಕ್ಷವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬ್ರೇಕ್ ಹಾಕಲಿದ್ಯಾ? ಎಂಬ ಚರ್ಚೆ ಶುರುವಾಗಿದೆ.
ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಮಾತನಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್ (Dcm Dk shivakumar) ರಾಜ್ಯದ ಜನ ಗ್ಯಾರಂಟಿಗಳ ಪರವಾಗಿ ಇಲ್ಲ ಎಂಬುದನ್ನ ಹೇಳಿದರು . ಇನ್ನುಳಿದ ಹಾಗೆ ಮಾಗಡಿ ಬಾಲಕೃಷ್ಣ (Magadi balakrishna) ಸೇರಿದಂತೆ ಕೆಲ ಕಾಂಗ್ರೆಸ್ ಶಾಸಕರು ಗ್ಯಾರಂಟಿ ಯೋಜನೆಗಳನ್ನ ಮುಂದುವರಿಸಬೇಕಾ ಬೇಡ್ವಾ ಎಂಬುದರ ಬಗ್ಗೆ ರಾಜ್ಯ ಸರ್ಕಾರ ಪರಾಮರ್ಶಿಸಲಿದೆ ಎಂಬ ಹೇಳಿಕೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಪ್ರಮುಖವಾಗಿ ರಾಜ್ಯ ಸರ್ಕಾರ ಶಕ್ತಿ ಯೋಜನೆ (Shakti project) ಮತ್ತು ಮಹಿಳೆಯರಿಗೆ ಪ್ರತಿ ತಿಂಗಳು 2000 ನೀಡುತ್ತಿದ್ದ ಗೃಹಲಕ್ಷ್ಮಿ ಯೋಜನೆಗೆ (Gruha lakshmi) ಬ್ರೇಕ್ ಹಾಕುವ ಚಿಂತನೆಯಲ್ಲಿದೆ ಎಂಬ ಚರ್ಚೆಗಳು ಗರಿಗೆದರಿದ್ದು ಮುಂದಿನ ದಿನಗಳಲ್ಲಿ ಸರ್ಕಾರದ ನಡೆಯನ್ನ ಕಾದು ನೋಡಬೇಕಿದೆ.