ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಲೆಟರ್ ಹೆಡ್‌ನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರನ್ನು ಅಬಕಾರಿ ಇಲಾಖೆಗೆ ವರ್ಗಾಯಿಸಿದ್ದ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಇದೇ ವಿಚಾರವನ್ನು ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ ಸಿದ್ದರಾಮಯ್ಯ ಅನುಭವಿ ಆಡಳಿತಗಾರ ಹೀಗೆಲ್ಲ ಆದೇಶ ಹೊರಡಿಸಲು ಸಾಧ್ಯವೇ ಇಲ್ಲ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿದ್ದವು. ಆದರೆ ಇದೀಗ ಆ ಲೆಟರ್ ಹೆಡರ್‌ನ ಅಸಲಿಯತ್ತು ಬಯಲಾಗಿದ್ದು, ನಕಲಿ ಲೆಟರ್ ಸೃಷ್ಟಿಸಿರುವ ಕಿಡಿಗೇಡಿಗಳ ವಿರುದ್ಧ ಸಿಎಂ ಜಂಟಿ ಕಾರ್ಯದರ್ಶಿ ಅರುಣ್ ಪುಟಾರ್ಡೊ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದೂರಿನ ಸಾರಾಂಶವು ಈ ಕೆಳಗಿನಂತೆ ಇದೆ.

ಡಾ। ಕೆ. ಮೋಹನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಮಂಡ್ಯ ಜಿಲ್ಲೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರನ್ನು ಅಬಕಾರಿ ಉಪ ಆಯುಕ್ತರು, ಮೈಸೂರು ಗ್ರಾಮಾಂತರ ಜಿಲ್ಲೆ ಮೈಸೂರು ಇಲ್ಲಿಗೆ ನಿಯೋಜಿಸುವ ಕುರಿತ ಸಂ.ಮು.ಮಂ.(ಕೃ) /2024ರ ಹೆಸರಿನ ಟಿಪ್ಪಣಿಯು ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮಾದ್ಯಮಗಳಲ್ಲಿ ಹರಿದಾಡುತ್ತಿರುವುದನ್ನು ಗಮನಿಸಲಾಗಿದೆ. (ಸದರಿ ಟಿಪ್ಪಣಿಯನ್ನು ಇದರೊಂದಿಗೆ ಲಗತ್ತಿಸಿದೆ) ಹಾಗೂ ಅಧಿಕೃತ ಸಂಖ್ಯೆ ಮತ್ತು ದಿನಾಂಕವಿಲ್ಲದ ಈ ಟಿಪ್ಪಣಿಯು ಮಾನ್ಯ ಮುಖ್ಯಮಂತ್ರಿಯವರ ಸಚಿವಾಲಯದಲ್ಲಿ ಇ-ತಂತ್ರಾಂಶ(E-Office)ದಲ್ಲಿ ನೊಂದಾಯಿಸಿರುವುದಿಲ್ಲ ಟಿಪ್ಪಣಿಯನ್ನು ಯಾವುದೇ ಇಲಾಖೆಗೆ ರವಾನಿಸಿರುವುದಿಲ್ಲ ಎಂದು ದೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ : ದಳಪತಿ ವಿಜಯ್ ರ‍್ಯಾಲಿಯಲ್ಲಿ ಮತ್ತೊಂದು ದುರಂತ: ಹೀಟ್‌ಸ್ಟ್ರೋಕ್‌ದಿಂದ ವ್ಯಕ್ತಿ ಸಾ**
ಇದರ ಆಧಾರದಲ್ಲಿ ಯಾವುದೇ ಆದೇಶ ಸಹ ಹೊರಡಿಸಿರುವುದಿಲ್ಲ. ಆದಾಗ್ಯೂ ಮಾನ್ಯ ವರ್ಗಾವಣೆ/ನಿಯೋಜನೆ ಮುಖ್ಯಮಂತ್ರಿಯವರಿಗೆ ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರನ್ನು ತರುವ ದುರುದ್ದೇಶದಿಂದ ಈ ತರಹದ ಕೃತ್ಯವನ್ನು ಎಸಗಿರುವುದು ಕಂಡುಬಂದಿರುವುದರಿಂದ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆಹಚ್ಚಿ ತುರ್ತಾಗಿ ಸದರಿಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪುಟಾರ್ಡೊ ದೂರಿನಲ್ಲಿ ಮನವಿ ಮಾಡಿದ್ದಾರೆ.






