
ಜೀವನದಲ್ಲಿ ನಂಬಿಕೆ ಬಹಳ ಮುಖ್ಯ
ಈ ಸೃಷ್ಟಿಯಲ್ಲಿ ನಾವು ಬದುಕಬೇಕು ಅಂದರೆ ಮೊದಲಿಗೆ ನಮ್ಮ ಮೇಲಿನ ನಂಬಿಕೆ ನಮ್ಮಲ್ಲಿ ಗಟ್ಟಿಯಾಗಿರಬೇಕು. ಆಗಲೇ ನಮ್ಮ ಬದುಕಿಗೊಂದು ಅರ್ಥ ಸಿಗಲು ಸಾಧ್ಯ.
ನಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಯನ್ನೇ ನೆನೆದು ಕೊರಗುತ್ತಾ, ನೊಂದುಕೊಳ್ಳುತ್ತಾ, ಕಣ್ಣೀರು ಸುರಿಸುತ್ತಾ, ಎಲ್ಲಾ ಮುಗಿದುಹೋಯಿತು ಇನ್ನೇನೂ ಉಳಿದಿಲ್ಲ ಎಂದುಕೊಂಡು ಕುಳಿತರೆ ನಮ್ಮ ಬದುಕು ಇರುವಲ್ಲಿಯೇ ಕೊನೆಗೊಳ್ಳಬಹುದೇ ಹೊರತು ಯಾವುದೇ ಬದಲಾವಣೆ ಕಾಣಲು ಸಾಧ್ಯವಿಲ್ಲ.
ಆದರೆ ನಾವು ಮತ್ತೆ ಯಾವಾಗ ಪುನಃ ಸಂತೋಷದಿಂದ , ಖುಷಿಯಿಂದ ಎಂದಿನಂತೆ ಬಾಳುವುದು. ಸರಿಪಡಿಸಿಕೊಂಡು ಬದುಕುವುದು ಹೇಗೆ ಎಂದು ಯೋಚಿಸತೊಡಗಿದರೆ ಮಾತ್ರ ನಮ್ಮನ್ನೇ ನಾವು ಬದಲಾಯಿಸಿಕೊಳ್ಳಲು ಸಾಧ್ಯವಾಗುತ್ತದೆ.

ಬದುಕು ಅಂದರೇನೇ ನಮ್ಮನ್ನು ನಾವು ಸುಧಾರಿಸಿಕೊಳ್ಳಲು ಅವಕಾಶ ಎಂದು ಅರಿತು ಬದುಕನ್ನು ಎಂದಿಗೂ ದ್ವೇಷಿಸದೆ ಅದೇ ಬದುಕನ್ನು ಪ್ರೀತಿಸತೊಡಗಬೇಕು . ಹೀಗೆ ನಮ್ಮಲ್ಲಿ ಸಕಾರಾತ್ಮಕತೆಯನ್ನು ಬೆಳೆಸಿಕೊಂಡರೆ ನಮ್ಮ ಬದುಕಿನಲ್ಲಿ ಅನೇಕ ಬದಲಾವಣೆಗಳು ಕಂಡುಕೊಳ್ಳಬಹುದು.
ಬದುಕೆಂದರೆ ನೋವು-ನಲಿವುಗಳ ಸಂಗಮ. ಇಲ್ಲಿ ಎಲ್ಲರ ಜೀವನದಲ್ಲಿಯೂ ಸಮಸ್ಯೆಗಳು ಸಹಜ. ಇವುಗಳೆಲ್ಲವೂ ನಮ್ಮ ಧೈರ್ಯ, ಸಂತೋಷ, ಆಸಕ್ತಿ ಇತ್ಯಾದಿಗಳನ್ನು ವೃದ್ಧಿಸಲು ಬೇಕಾದ ಅವಕಾಶಗಳನ್ನು ಕಲ್ಪಿಸುವಂತದ್ದು. ಈ ಬದುಕು ಎಲ್ಲರಿಗೂ ಅವಕಾಶದ ಬಾಗಿಲನ್ನು ತೆರೆದಿಡುತ್ತದೆ. ಒಳಹೊಕ್ಕು ಸ್ವೀಕರಿಸುವುದು ನಮ್ಮ ಕೈಯಲ್ಲಿಯೇ ಇರುತ್ತದೆ.
ನಾವು ನಮ್ಮ ಜೀವನದಲ್ಲಿ ಏನೇ ಸಮಸ್ಯೆ ಬಂದರೂ ಸಮರ್ಥವಾಗಿ ಎದುರಿಸುವಂತಾಗಬೇಕು. ಅದು ನೋವಿರಲಿ, ನಲಿವಿರಲಿ, ಯಾವುದೇ ಚಿಂತೆಯಿರಲಿ ಎಲ್ಲವನ್ನೂ ಸಮನಾಗಿ ನಿಭಾಯಿಸಿಕೊಂಡು ಹೋಗುವಂತಾಗಬೇಕು. ಯಾವತ್ತೂ ಜೀವನದಲ್ಲಿ ಎಂತಹ ಸಂದರ್ಭ ಬಂದರೂ ಆತ್ಮವಿಶ್ವಾಸ ಕಳೆದುಕೊಳ್ಳದೆ, ಆಶಾವಾದದಿಂದ ಹಾಗು ನಮ್ಮೊಳಗಿನ ಆತ್ಮವಿಶ್ವಾಸದಿಂದ ಬದುಕಬೇಕು.
ನಮ್ಮ ಜೀವನವನ್ನು ನಾವೇ ಸ್ವಂತವಾಗಿ ಸಮರ್ಥವಾಗಿ ರೂಪಿಸಿಕೊಳ್ಳಬೇಕು ಹಾಗೂ ನಮ್ಮಂತೆ ಕಷ್ಟದಲ್ಲಿರುವವರಿಗೆ ಸ್ಫೂರ್ತಿ ತುಂಬುತ್ತ ಇತರರಿಗೆ ಮಾದರಿಯಾಗಿ ಸಾರ್ಥಕ ಬದುಕನ್ನು ಬಾಳಬೇಕು. ನಮ್ಮಲ್ಲಿನ ಆತ್ಮವಿಶ್ವಾಸ ಹಾಗು ನಮ್ಮಲ್ಲಿನ ಸಾಧನೆಯ ಬಗೆಗೆ ಸದಾ ಮೆಲುಕು ಹಾಕುತ್ತ ಸುಪ್ತ ಮನಸ್ಸಲ್ಲಿ ಧೈರ್ಯವನ್ನು ನಾವೇ ತುಂಬಿಕೊಳ್ಳಬೇಕು. ಇದೇ ನಮ್ಮನ್ನು ನಾವು ಬದಲಾಯಿಸಿಕೊಳ್ಳಲು, ನಮ್ಮ ಜೀವನದ ಹೊಸ ದಿಕ್ಕಿಗೆ ಹೊಸ
ಭರವಸೆಯೊಂದಿಗೆ ಸಾಗಲು ಹೊಸದೊಂದು ಅಧ್ಯಾಯದ ಮುನ್ನುಡಿ ಸಿಕ್ಕಂತೆ.

ನಾನು ಸಹ ಪರಿಹಾರವಿಲ್ಲದ ಸಮಸ್ಯೆಗಳ ಸುಳಿಗೆ ಸಿಲುಕಿದ್ದೇನೆ. ಆದರೆ ಕೊನೆಗೆ ಪರಿಹಾರವಿಲ್ಲದ ಸಮಸ್ಯೆಗಳನ್ನು ಇದೇ ಜೀವನ ಎಂದು ಅರಿತು ಉಳಿದ ವಿಷಯದಲ್ಲಿ ಅದನ್ನು ಸುಧಾರಿಸಲು ಪ್ರಯತ್ನಮಾಡುತ್ತ ಇದ್ದೇನೆ. ಈಗ ಈ ಕ್ಷಣ ನನ್ನದು ಇದನ್ನು ಆನಂದದಿಂದ ಕಳೆಯಬೇಕು. ನಾನು ಸಂತೋಷದಿಂದ ಇದ್ದು ಇತರರನ್ನು ಸಂತೋಷಪಡಿಸಬೇಕು ಎಂದು ನಾನು ಪ್ರಯತ್ನಿಸುತ್ತಿದ್ದೇನೆ.
ಇವತ್ತು ಜೀವನದಲ್ಲಿ ಒಂದು ಚಿಕ್ಕ ಸಮಸ್ಯೆ ಬಂದರೂ ಸಾಕು, ಆಕಾಶವೇ ತಲೆಮೇಲೆ ಬಿದ್ದಂತೆ ಇದ್ದು ಆತ್ಮಹತ್ಯೆಗೆ ಮುಂದಾಗುತ್ತಾರೆ. ಜೀವನ ಎಂದ ಮೇಲೆ ಸಮಸ್ಯೆಗಳು ಎಲ್ಲರ ಜೀವನದಲ್ಲಿಯೂ ಸಹಜವೇ ಅಲ್ಲವೇ…
ಬದುಕು ಬದಲಾಗದಿದ್ದರೂ ನಾವೇ ನಮ್ಮೊಳಗಿನ ಸ್ಫೂರ್ತಿಯಿಂದ ನಮ್ಮನ್ನೇ ನಾವು ಬದಲಾಯಿಸಿಕೊಂಡರೆ ಬದುಕು ತನ್ನಿಂದ ತಾನೆ ಬದಲಾಗುತ್ತದೆ. ಇದಕ್ಕೆ ಬೇಕು ಗಟ್ಟಿ ಮನಸ್ಸು ಹಾಗೂ ದೃಢ ನಿರ್ಧಾರ. ಪ್ರತಿಯೊಬ್ಬರಲ್ಲೂ ಎರಡು ಮನಸ್ಸಿದೆ. ಜಾಗೃತ ಮನಸ್ಸು ಮತ್ತು ಸುಪ್ತ ಮನಸ್ಸು. ಜಾಗೃತ ಮನಸ್ಸಿನಲ್ಲಿ ಪದೇ ಪದೇ ಒಂದು ವಿಷಯವನ್ನು ಗ್ರಹಿಸುತ್ತಿದ್ದರೆ ಅದುವೇ ಸುಪ್ತ ಮನಸ್ಸಿನಲ್ಲಿ ಬೇರೂರಿ ನಮ್ಮನ್ನು ಬದಲಾಯಿಸುತ್ತದೆ. ಜಾಗೃತ ಮನಸ್ಸು ಮತ್ತು ಸುಪ್ತ ಮನಸ್ಸು ಸೌಹಾರ್ಧದಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಹೊಸ ನಿರ್ಣಯದ ಅಭ್ಯಾಸ ಸಾಧ್ಯ. ಹೊಸ ವಿಷಯವನ್ನು ಸುಪ್ತ ಮನಸ್ಸಿನಲ್ಲಿ ಅಂತರ್ಗತ ಮಾಡಿಕೊಂಡು ಪ್ರಯತ್ನಪಟ್ಟರೆ ಯಶಸ್ಸು ಗಳಿಸಲು ಸಾಧ್ಯ.
ಮನಸ್ಸು ಅನೇಕ ರೀತಿಯ ಭಾವನೆಗಳನ್ನು ಒಳಗೊಂಡಿರುತ್ತದೆ. ಸತ್ಯಾಸತ್ಯತೆಯನ್ನು ವಿಮರ್ಶಿಸಲು ಅದಕ್ಕೆ ಸಾಧ್ಯವಾಗದು. ನಂಬಿಕೆಯಿಟ್ಟು ಯಾವುದೇ ವಿಷಯವನ್ನು ಮತ್ತೆ ಮತ್ತೆ ಕಲ್ಪಿಸಿಕೊಂಡರೂ ಅದನ್ನು ಸತ್ಯವೆಂದೇ ನಂಬುತ್ತದೆ. ಬದಲಾಗಬೇಕಾದ ವಿಷಯವನ್ನು ಮನದಲ್ಲಿ ಆಗಾಗ ಕಲ್ಪಿಸುತ್ತಾ ಮನದಲ್ಲಿ ಬೇರೂರುವಂತೆ ಮಾಡುವುದರಿಂದ ಅದನ್ನು ಸರಿಯಾಗಿ ಅರಿತು ಪ್ರಯತ್ನಿಸಿದರೆ ಪ್ರತಿಯೊಬ್ಬರೂ ತಮ್ಮನ್ನು ಬದಲಾಯಿಸಿಕೊಳ್ಳಬಹುದು.

ನಾವೇ ಬದಲಾದರಾಯಿತು ಅಥವಾ ನಾವೇ ಬದಲಾಗಬೇಕು? ಅನ್ನುವ ನಿಟ್ಟಿನಲ್ಲಿ ಯೋಚಿಸಿ, ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಿಕೊಂಡು , ಬದುಕುವ ರೀತಿಯನ್ನೇ ಬದಲಾಯಿಸಿಕೊಂಡರೆ ನೆಮ್ಮದಿ, ಶಾಂತಿ, ಸಾರ್ಥಕತೆಯಿಂದ ಕೂಡಿದ ಅರ್ಥಪೂರ್ಣ ಬದುಕನ್ನ ನಮ್ಮದಾಗಿಸಿಕೊಳ್ಳಬಹುದು ಅಲ್ವಾ…?
ಜೀವನದ ಪ್ರತಿ ಕ್ಷಣವನ್ನು ನಾವು ಸಂಭ್ರಮದಂತೆ ಆಚರಿಸಬೇಕು ಮತ್ತು ಪ್ರತಿಕ್ಷಣವನ್ನೂ ಆನಂದಿಸಬೇಕು ಏಕೆಂದರೆ ಜೀವನದ ಒಂದು ಕ್ಷಣವೂ ನಮಗಾಗಿ ಕಾಯುವುದಿಲ್ಲ.
ನಾವು ನಮ್ಮ ಜೀವನದಲ್ಲಿನ ಪ್ರತಿಯೊಂದು ಕ್ಷಣ ಹಾಗು ಪ್ರತಿಯೊಂದು ದಿನವನ್ನು ಸಂತೋಷದಾಯಕ ಮತ್ತು ಅದ್ಭುತ ಪ್ರಕ್ರಿಯೆಯನ್ನಾಗಿ ಮಾಡುವುದು ಬಹಳ ಮುಖ್ಯ. ಆದರೆ ಅದು ಬಹಳ ಕಷ್ಟದ ಕೆಲಸ.
ಈ ಸೃಷ್ಟಿಯಲ್ಲಿ ನಮ್ಮೆಲ್ಲರ ಜೀವನ ನಶ್ವರ ಮತ್ತು ಪ್ರತಿ ಕ್ಷಣವೂ ನಿಲ್ಲದೆ ಓಡುತ್ತಿರುತ್ತದೆ. ನಾವು ಶಾಶ್ವತವಾಗಿ ಇರುತ್ತೇವೆ ಎಂದು ನಾವು ಭಾವಿಸಿದರೆ, ನಮ್ಮದೇ ಸ್ವಂತ ಮಾನಸಿಕ ಅಸಂಬದ್ಧತೆಗೆ ಸಿಲುಕಿಕೊಂಡು ಜೀವನವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದಂತೆ, ನಮ್ಮ ಕಲ್ಪನೆಯ ಶಾಶ್ವತವಾದ ಬದುಕು ವಾಸ್ತವದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ. ಅದೇ, ಮುಂದಿನ ಒಂದು ಗಂಟೆಯಲ್ಲಿ ನಾವು ಸಾಯುತ್ತೇವೆ ಎಂದು ನಮಗೆ ತಿಳಿದಿರೆ, ನಾವು ಜೀವನದ ಪ್ರತಿಯೊಂದು ಸಣ್ಣ ಭಾಗವನ್ನೂ ಗಮನಿಸುತ್ತೇವೆ, ಅಂತಹ ಕೊನೆಯ ಹಂತದಲ್ಲಿ ನಾವು ಏನನ್ನೂ ಕಳೆದುಕೊಳ್ಳಲು ಬಯಸುವುದಿಲ್ಲ.

ಇದೊಂದು ಭಯಪಡಿಸುವ ಅಥವಾ ಆಲೋಚಿಸುವ ಸಂದೇಶವಲ್ಲ, ಇದು ಜೀವನಕ್ಕೆ ಪೂರಕವಾದ ಸಂದೇಶ. ಈ ಸೃಷ್ಟಿಯಲ್ಲಿ ನಮ್ಮ ಜೀವನವು ಬಹಳ ಸೀಮಿತ ಸಮಯಕ್ಕೆ ಮಾತ್ರ ಮೀಸಲು ಎಂಬುದನ್ನು ನಾವೆಲ್ಲರೂ ತಿಳಿದುಕೊಂಡರೆ ಮಾತ್ರ, ನಿಜವಾಗಿಯೂ ಜೀವನ ನಮಗೆ ಪೂರಕವಾಗಿ ಬದಲಾಗಲು ಅಥವಾ ನಮಗೆ ಪೂರಕವಾಗಿರುವಂತೆ ಬದಲಾಯಿಸಿಕೊಳ್ಳಲು ಸಾಧ್ಯ.
ಯಾವಾಗ ನಮಗೆ ನಮ್ಮ ಜೀವನ ಅಹಿತಕರವಾಗಿರುವಂತೆ ಕಾಣುತ್ತದೆಯೋ ಮತ್ತು ಅಂತಹ ಪರಿಸ್ಥಿತಿಯಲ್ಲಿ ನಾವು ಖಿನ್ನತೆಗೆ ಒಳಗಾಗುತ್ತೇವೆಯೋ ಅಂತಹ ಪರಿಸ್ಥಿತಿಯಲ್ಲಿ ನಾವು ಸಾವಿನ ಬಗ್ಗೆಯೇ ಆಲೋಚಿಸುತ್ತೇವೆ ?
ನಾವು ಅಸಹಾಯಕರು? ಒಂಟಿಗರು ಎಂಬ ತಪ್ಪು ಭಾವನೆ ಅಥವಾ ಕಲ್ಪನೆ ನಮ್ಮಲ್ಲಿ ಇರುವುದರಿಂದ ಮಾತ್ರ ಈ ಸಾವಿನ ಬಗೆಗಿನ ಆಲೋಚನೆ ನಮಗೆ ಸಮಯ ಮತ್ತು ಅವಕಾಶ ಮಾಡಿಕೊಡಬಹುದು.
ಹತಾಶೆಗೆ, ಖಿನ್ನತೆಗೆ, ಆತಂಕಕ್ಕೆ ಅಥವಾ ಕೋಪಕ್ಕೆ ನಮ್ಮ ಜೀವನದಲ್ಲಿ ಹೆಚ್ಚು ಸಮಯ ನೀಡಲೇಬಾರದು. ಈ ಜೀವನದಲ್ಲಿ ಯಾವುದೇ ರೀತಿ ಅಹಿತ ವಿಷಯಗಳಿಗೆ ಸಮಯವನ್ನು ನೀಡದೆ ನಮ್ಮನ್ನು ನಾವು ಇನ್ಯಾವುದೋ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು.
ನವೀನ ಎಚ್ ಎ ಹನುಮನಹಳ್ಳಿ ಕೆಆರ್ ನಗರ