
ಬೀದರ್/ಚಿಟಗುಪ್ಪ: ಅಧುನಿಕತೆ ಹಾಗೂ ತಂತ್ರಜ್ಞಾನ ಬೆಳೆದಂತೆ ಗ್ರಾಮೀಣ ದೇಶಿ ಆಟಗಳು ಒಂದೊಂದಾಗಿ ಕಣ್ಮರೆಯಾಗುತ್ತಿವೆ. ದೇಶೀಯ ಆಟಗಳಾದ ಬುಗರಿ, ಚೆಂಡುದಾಂಡು, ಹಗ್ಗದಾಟ, ಗಿಲ್ಲಿದಾಂಡು, ಚಿನ್ನಿ ದಾಂಡು, ಲಗೋರಿ, ಸಾಲುಚೆಂಡು, ಹಗ್ಗ ಜಗ್ಗಾಟ, ಕುಂಟಬಿಲ್ಲೆ, ಕಪ್ಪೆ ಓಟ, ಮರಕೋತಿಯಂತಹ ಇತರ ಕ್ರೀಡೆಗಳು ನಮ್ಮ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅಪ್ಪಟ ದೇಶೀಯ ಆಟಗಳು.ಕುಟುಂಬದ ಸದಸ್ಯರೆಲ್ಲರೂ ಒಟ್ಟುಗೂಡಿ ಆಟಗಳಲ್ಲಿ ಪಾಲ್ಗೊಳ್ಳುತ್ತಿದ್ದರಿಂದ ಕೌಟುಂಬಿಕ ಬಾಂಧವ್ಯ ಹಾಗೂ ಮಾನಸಿಕ ನೆಮ್ಮದಿ ನೀಡುತ್ತಿದ್ದವು. ಆದರೆ ದಿನದಿಂದ ದಿನಕ್ಕೆ ಆಟಗಳು ಮರೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇತಿಹಾಸದ ಪುಟ ಸೇರುವ ದಿನಗಳು ದೂರ ಉಳಿದಿಲ್ಲ.

ಕ್ರಿಕೆಟ್, ಫುಟ್‌ಬಾಲ್ ಸೇರಿದಂತೆ ಅಧುನಿಕ ಕ್ರೀಡೆಗಳು, ದೇಶೀಯ ಆಟಗಳನ್ನು ಒಂದೊಂದಾಗಿ ನುಂಗಿ ಹಾಕುತ್ತಿವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಪೋಷಕರಲ್ಲೂ ಕೂಡ ಗ್ರಾಮೀಣ ಕ್ರೀಡೆಗಳ ಬಗ್ಗೆ ನಿರುತ್ಸಾಹ ತುಂಬಿದೆ. ಕೇವಲ ಮಕ್ಕಳ ಓದು ಬರಹದ ಬಗ್ಗೆ ಆಸಕ್ತಿ ವಹಿಸುವ ಪರಿಪಾಠ ಹೆಚ್ಚಾಗಿದೆ. ಇದು ಗ್ರಾಮೀಣ ಕ್ರೀಡೆಗಳು ಕಣ್ಮರೆ ಆಗುವುದಕ್ಕೆ ಪ್ರಮುಖ ಕಾರಣವಾಗಿದೆ.ಯುವಜನ ಸೇವೆ ಮತ್ತು ಕ್ರೀಡೆ ಇಲಾಖೆಯವರು ಕೇವಲ ದಸರಾ ಹಬ್ಬದ ಸಂದರ್ಭದಲ್ಲಿ ಮಾತ್ರ ತಾಲ್ಲೂಕು ಮಟ್ಟದಲ್ಲಿ ಹೆಚ್ಚಿನ ಪ್ರಚಾರ ನೀಡದೇ ಬೇಕಾಬಿಟ್ಟಿಯಾಗಿ ಗ್ರಾಮೀಣ ದೇಶೀಯ ಆಟಗಳನ್ನು ಆಯೋಜಿಸುತ್ತಿದ್ದಾರೆ. ಬದಲಿಗೆ ವರ್ಷದಲ್ಲಿ ನಾಲ್ಕೈದು ಬಾರಿ ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿದರೆ ಮಾತ್ರ ಜೀವಂತವಾಗಿಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೇಶೀಯ ಆಟಗಳ ಬಗ್ಗೆ ನಮ್ಮ ಮಕ್ಕಳಿಗೆ ಚಿತ್ರ ತೋರಿಸಿ ವಿವರಿಸುವ ಸಂದರ್ಭ ಬರುವುದರಲ್ಲಿ ಸಂಶಯ ಇರುವುದಿಲ್ಲ.