ಬೆಂಗಳೂರು : ಕಳೆದ ಜನವರಿ 30-2026 ರಂದು ಯುಎಸ್ ನ್ಯಾಯಾಂಗ ಇಲಾಖೆಯಿಂದ ಜೆಫ್ರಿ ಎಪ್ಸ್ಟೀನ್ ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ಅಮೆರಿಕದ ನ್ಯಾಯಾಲಯ ಬಿಡುಗಡೆ ಮಾಡಿದೆ. ಅದು ಸದ್ಯ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿದ್ದು, ಅಲ್ಲದೆ ಈ ಎಫ್ಸ್ಟೀನ್ ಫೈಲ್ನಲ್ಲಿ ನಮ್ಮ ಹೆಸರೇನಾದರೂ ಥಳಕು ಹಾಕುತ್ತಾ ಎನ್ನುವ ಚಿಂತೆ ಜಾಗತಿಕ ನಾಯಕರಲ್ಲಿ ಮನೆ ಮಾಡಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಉದ್ಯಮಿ ಅನಿಲ್ ಅಂಬಾನಿ ಹೆಸರು ಇದರಲ್ಲಿ ಕೇಳಿ ಬಂದಿವೆ.
ಇನ್ನೂ ಯಾವಾಗ ಈ ದಾಖಲೆಗಳು ಬಿಡುಗಡೆಯಾದವೋ ಆಗಿನಿಂದಲೇ ಈ ಸುದ್ದಿ ವ್ಯಾಪಕವಾಗಿ ಹಬ್ಬಿ ದೇಶದಲ್ಲಿಯೂ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ಹೆಸರು ಎಪ್ಸ್ಟೀನ್ ಫೈಲ್ನಲ್ಲಿ ಕೇಳಿಬಂದ ಹಿನ್ನೆಲೆಯಲ್ಲಿ ವಿಪಕ್ಷಗಳು ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಒತ್ತಾಯಿಸುತ್ತಿವೆ.
ಅಲ್ಲದೆ ಕೂಡಲೇ ಪ್ರಧಾನಿ ಸ್ಥಾನದಿಂದ ನಿರ್ಗಮಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿವೆ. ಈ ನಡುವೆಯೇ ಇದೇ ಫೈಲ್ಗೆ ಸಂಬಂಧಿಸಿದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಯುವತಿಯ ಪಕ್ಕದಲ್ಲಿ ನಿಂತು ಕೂ ಹಿಡಿದಿರುವ ಭಾವಚಿತ್ರ ಎಲ್ಲೆಡೆಯೂ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಂತೂ ಈ ಬಗ್ಗೆ ಪರ- ವಿರೋಧದ ಚರ್ಚೆಗಳು, ಟೀಕೆಗಳು ವ್ಯಕ್ತವಾಗುತ್ತಿವೆ. ಸಾಕಷ್ಟು ಜನರು ಈ ಫೋಟೋ ಹಂಚಿಕೊಂಡು ಮೋದಿ ಕುರಿತು ಆಕ್ಷೇಪಾರ್ಹವಾಗಿ ತಲೆ ಬರಹ ನೀಡುತ್ತಿರುವುದು ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದೆ.
ಆದರೆ ಹೀಗೆ ಹರಿದಾಡುತ್ತಿರುವ ಭಾವಚಿತ್ರದ ಬಗ್ಗೆ ಹಲವು ರಾಷ್ಟ್ರೀಯ ಮಾಧ್ಯಮಗಳು ಫ್ಯಾಕ್ಟ್ ಚೆಕ್ ಮಾಡಿದ್ದು, ಈ ಫೋಟೋ ಎಡಿಟ್ ಮಾಡಲಾಗಿದೆ, ಎಪ್ಸ್ಟೀನ್ ಫೈಲ್ಗೂ ಮೋದಿಯ ಭಾವಚಿತ್ರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ತಂತ್ರಜ್ಞಾನದ ದುರ್ಬಳಕೆಯಿಂದ ಇದನ್ನು ತಯಾರು ಮಾಡಲಾಗಿದೆ ಎಂಬ ಅಂಶ ಸತ್ಯಾನ್ವೇಷಣೆಯಲ್ಲಿ ಬಯಲಾಗಿದೆ. ಅತ್ಯಂತ ವೈರಲ್ ಆಗಿರುವ ಪೋಸ್ಟ್ಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಕಾಣಿಸಿಕೊಂಡಂತೆ ಎಡಿಟ್ ಮಾಡಲಾಗಿದೆ ಎಂಬುದು ತಿಳಿದುಬಂದಿದೆ.
ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಇದು ಸುಳ್ಳು ಎಂದು ಕಂಡುಹಿಡಿದಿದೆ. ಈ ಚಿತ್ರಗಳನ್ನು ಕೃತಕ ಬುದ್ಧಿಮತ್ತೆಯನ್ನು ಬಳಸಿ ರಚಿಸಲಾಗಿದೆ ಮತ್ತು ಅಧಿಕೃತ ಎಪ್ಸ್ಟೀನ್ ಫೈಲ್ಗಳಿಗೆ ಯಾವುದೇ ಸಂಬಂಧವಿಲ್ಲ.
ಇನ್ಸ್ಟಾಗ್ರಾಮ್ ಬಳಕೆದಾರರು ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳು ಫೆಬ್ರವರಿ 2026ರ ಆರಂಭದಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದು, ಅವು ಹೊಸದಾಗಿ ಬಿಡುಗಡೆಯಾದ ಎಪ್ಸ್ಟೀನ್ ಫೈಲ್ಗಳ ಭಾಗವೆಂದು ಬರೆದುಕೊಂಡು ಜನರನ್ನು ತಪ್ಪು ದಾರಿಗೆಳೆದು ದೇಶದಲ್ಲಿನ ಶಾಂತಿಗೆ ಭಂಗ ತರುವ ಪ್ರಯತ್ನ ಮಾಡುತ್ತಿದ್ದಾರೆ.

ವೈರಲ್ ಆಗಿರುವ ಈ ಫೋಟೋ ಬಗ್ಗೆ ನಿಜಾಂಶ ತಿಳಿದುಕೊಳ್ಳಲು ಮೊದಲು ಗೂಗಲ್ನಲ್ಲಿ ಕೀವರ್ಡ್ ಹುಡುಕಾಟ ನಡೆಸಿದ್ದೇವೆ, ಆದರೆ ಎರಡು ಫೋಟೋಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿ ವರದಿಗಳು ನಮಗೆ ಸಿಗಲಿಲ್ಲ. ಪ್ರಧಾನಿ ಮೋದಿ ಫೋಟೋ ಕಾಣಿಸಿಕೊಂಡಿದ್ದರೆ, ಖಂಡಿತವಾಗಿಯೂ ಅದಕ್ಕೆ ಸಂಬಂಧಿಸಿದ ಸುದ್ದಿ ವರದಿ ಇರುತ್ತಿತ್ತು. ನಂತರ ನಾವು ಗೂಗಲ್ ಲೆನ್ಸ್ ಬಳಸಿ ಫೋಟೋವನ್ನು ಹುಡುಕಿದೆವು, ಆದರೆ ಏನೂ ಸಿಗಲಿಲ್ಲ. ಫೋಟೋಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಎಐ ತಂತ್ರಜ್ಞಾನ ಬಳಸಿ ಎಡಿಟ್ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಫೋಟೋ ಕುರಿತ ಸತ್ಯಾಸತ್ಯತೆ ಅರಿಯಲು ಎಐ ಪತ್ತೆ ಸಾಧನ ‘ಹಗ್ಗಿಂಗ್ ಫೇಸ್’ ಬಳಸಿ ಪರಿಶೀಲಿಸಿದ್ದೇವೆ. ಈ ಉಪಕರಣವು ಎಐ ನಿಂದ ಫೋಟೋ ರಚಿಸಿರುವ ಶೇ.100ರಷ್ಟು ಸಂಭವನೀಯತೆಯನ್ನು ತೋರಿಸಿದೆ. ನಾವು ‘ಡಿಕಾಪಿ’ ಎಂಬ ಇನ್ನೊಂದು ಉಪಕರಣವನ್ನು ಸಹ ಬಳಸಿದ್ದೇವೆ. ಈ ಸಾಧನವು ಕೂಡ ಭಾವಚಿತ್ರವನ್ನು ಎಐ ಬಳಸಿ ಮಾರ್ಪ್ ಮಾಡಲಾಗಿದೆ ಎಂಬುದಾಗಿ ತಿಳಿಸಿದೆ.
ನಿಜವಾದ ಎಪ್ಸ್ಟೀನ್ ಫೈಲ್ಗಳಲ್ಲಿ ಏನಿದೆ..?
ಲೈಂಗಿಕ ಅಪರಾಧಗಳಲ್ಲಿ ಶಿಕ್ಷೆಗೊಳಗಾದ ಜೆಫ್ರಿ ಎಪ್ಸ್ಟೀನ್ಗೆ ಸಂಬಂಧಿಸಿದ ಲಕ್ಷಾಂತರ ಪುಟಗಳ ದಾಖಲೆಗಳನ್ನು ಯುಎಸ್ ನ್ಯಾಯ ಇಲಾಖೆ ಬಿಡುಗಡೆ ಮಾಡಿದೆ. ಜಾಗತಿಕ ಮಟ್ಟದ ಹಲವು ವರದಿಗಳು ಈ ಫೈಲ್ಗಳಲ್ಲಿ ಪುಸ್ತಕ, ವೀಡಿಯೊಗಳು ಮತ್ತು ಫೋಟೋಗಳು ಸೇರಿದ್ದು, ಪ್ರಪಂಚದ ಅನೇಕ ಪ್ರಭಾವಿ ವ್ಯಕ್ತಿಗಳ ಹೆಸರೂ ಉಲ್ಲೇಖವಿರುವುದಾಗಿ ತಿಳಿಸಿವೆ.
ಎಪ್ಸ್ಟೀನ್ 2019 ರಲ್ಲಿ ನಿಧನರಾದರು, ಆದರೆ ಅವರ ಮರಣದ ಆರು ವರ್ಷಗಳ ನಂತರವೂ, ಎಪ್ಸ್ಟೀನ್ ಅವರ ಫೈಲ್ಗಳು ಸರ್ಕಾರಗಳು, ರಾಜಕಾರಣಿಗಳು, ಉದ್ಯಮಿಗಳು ಮತ್ತು ಪ್ರಪಂಚದಾದ್ಯಂತದ ಪ್ರಮುಖ ವ್ಯಕ್ತಿಗಳಿಗೆ ಕಳವಳಕಾರಿಯಾಗಿ ಪರಿಣಮಿಸಿವೆ. ಅವರೆಲ್ಲರ ನೆಮ್ಮದಿಯನ್ನು ಕಸಿದುಕೊಂಡಿದೆ ಎಂದು ಬಿಬಿಸಿ ಹೇಳಿದೆ.
ಎಪ್ಸ್ಟೀನ್ ಫೈಲ್ಸ್ಗೆ ಸಂಬಂಧಿಸಿದ ಮೂರು ಮಿಲಿಯನ್ ಹೊಸ ದಾಖಲೆಗಳನ್ನು ಬಿಡುಗಡೆ ಮಾಡಲಾಗಿದೆ. ಛಾಯಾಚಿತ್ರಗಳು ಸೇರಿದಂತೆ ಕೆಲವು ವಸ್ತುಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಈ ಹಿಂದೆ, ಎಪ್ಸ್ಟೀನ್ ಅವರ ಎಸ್ಟೇಟ್ನಿಂದ ಸಾವಿರಾರು ದಾಖಲೆಗಳನ್ನು ಸ್ವೀಕರಿಸಲಾಗಿತ್ತು, ಅದರಲ್ಲಿ ಹೆಚ್ಚಾಗಿ ಇಮೇಲ್ಗಳೇ ಪತ್ತೆಯಾಗಿದ್ದವು ಎಂದು ತಿಳಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಹೀಗೆ ನಕಲಿ ಪೋಟೋ ಎಡಿಟ್ ಮಾಡಿರುವ ಬಳಕೆದಾರರಿಗೆ ಸುಮಾರು 100,000 ಕ್ಕೂ ಹೆಚ್ಚು ಅಧಿಕ ಜನರು ಅನುಸರಿಸುತ್ತಿದ್ದಾರೆ ಎಂಬ ಅಂಶ ಬಯಲಿಗೆ ಬಂದಿದೆ. ಫಾಲೋವರ್ಸ್ಗಳನ್ನು ಹೆಚ್ಚಿಸಿಕೊಂಡು ಇನ್ಸ್ಟಾಗ್ರಾಮ್ ಸೇರಿದಂತೆ ಇನ್ನಿತರ ಸಾಮಾಜಿಕ ಮಾಧ್ಯಮಗಳಲ್ಲಿ ಹೀಗೆ ಭಾವಚಿತ್ರಗಳನ್ನು ಹರಿಬಿಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.






