ಪ್ರಧಾನಿ ನರೇಂದ್ರ ಮೋದಿ ಮತ್ತು ಸುಳ್ಳು ಸುದ್ದಿಗಳಿಗೂ ಇರುವ ನಂಟು ಹೊಸದೇನಲ್ಲ. ಮೋದಿ ಕೂತರೆ, ನಿಂತರೆ ಅವರನ್ನು ಅವತಾರ ಪುರುಷ, ಜಗದೋದ್ಧಾರಕ ಎಂದು ಬಿಂಬಿಸುವ ಅವರದೇ ಪೇಯ್ಡ್ ಟ್ರೋಲ್ ಪಡೆಗಳು ಒಂದು ಕಡೆಯಾದರೆ, ಅವರ ಪ್ರತಿ ನಡೆ, ನುಡಿಯನ್ನೂ ಟ್ರೋಲ್ ಮಾಡುವ ಗುಂಪುಗಳು ಮತ್ತೊಂದು ಕಡೆ. ಹಾಗಾಗಿ, ಮೋದಿಯವರ ಪ್ರತಿ ಮಾತು, ಪ್ರತಿ ಪ್ರವಾಸ, ಪ್ರತಿ ಕಾರ್ಯಕ್ರಮಗಳ ವಿಷಯದಲ್ಲೂ ಅವರೇನು ಮಾಡಿದರು, ಹೇಳಿದರು ಎಂಬುದಕ್ಕಿಂತ ಅವರನ್ನು ವಿಜೃಂಭಿಸುವ ಅಥವಾ ವ್ಯಂಗ್ಯವಾಡುವ ವಿಷಯಗಳೇ ಹೆಚ್ಚು ಸದ್ದು ಮಾಡುತ್ತವೆ.
ಇದೀಗ ಕ್ವಾಡ್ ಸಮ್ಮೇಳನ ಹಾಗೂ ದ್ವಿಪಕ್ಷೀಯ ಮಾತುಕತೆಗಳ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಕೈಗೊಂಡಿದ್ದ ಮೂರು ದಿನಗಳ ಅಮೆರಿಕ ಭೇಟಿ ಕೂಡ ಇಂತಹ ಸಾಲುಸಾಲು ಸುಳ್ಳು ಮಾಹಿತಿ, ಸುದ್ದಿಗಳ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.
ಮೋದಿಯವರಿಗೆ ಅಮೆರಿಕದಲ್ಲಿ ಸಿಕ್ಕ ಸ್ವಾಗತ, ಅಲ್ಲಿನ ಭಾರತೀಯ ಸಂಜಾತರು ಮೋದಿ ಆಗಮನಕ್ಕೆ ನೀಡಿದ ಪ್ರತಿಕ್ರಿಯೆ, ಅಮೆರಿಕ ಶ್ವೇತಭವನದ ‘ವಿಜಿಟರ್ಸ್ ಬುಕ್’ನಲ್ಲಿ ಸಹಿ ಹಾಕಿದ ಸಂಗತಿ, ಅಮೆರಿಕ ಅಧ್ಯಕ್ಷ ಜೊ ಬಿಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಮೋದಿಯವರ ಭೇಟಿಯ ಕುರಿತು ನಿರೀಕ್ಷಿತ ಮಟ್ಟದ ಉತ್ಸಾಹ ತೋರದೆ ಇರುವುದು ಸೇರಿದಂತೆ ಎಲ್ಲವೂ ಸುಳ್ಳು ಸುದ್ದಿ ಮತ್ತು ವಿಡಂಬನೆಯ ವಸ್ತುವಾದವು.
ಅದರಲ್ಲೂ ಸೆ.26ರಂದು ಅಮೆರಿಕ ಪ್ರವಾಸ ಮುಗಿಸಿ ಮೋದಿ ಸ್ವದೇಶಕ್ಕೆ ವಾಪಸ್ಸಾಗುವ ದಿನ, ಅಮೆರಿಕದ ಪ್ರಭಾವಿ ದಿನಪತ್ರಿಕೆ ‘ದ ನ್ಯೂಯಾರ್ಕ್ ಟೈಮ್ಸ್’ನಲ್ಲಿ ಪ್ರಕಟವಾಗಿದೆ ಎಂಬ ಹೆಸರಿನಲ್ಲಿ, ಆ ಪತ್ರಿಕೆಯ ಮುಖಪುಟದ ಪಿಡಿಎಫ್ ಪ್ರತಿಯ ಚಿತ್ರದೊಂದಿಗೆ ಪ್ರಸಾರವಾದ ಒಂದು ಸುದ್ದಿಯಂತೂ ಮೋದಿ ಕುರಿತ ಈವರೆಗಿನ ಸುಳ್ಳು ಸುದ್ದಿಗಳಲ್ಲೇ ತೀರಾ ಹಾಸ್ಯಾಸ್ಪದ ಎನಿಸಿಕೊಂಡಿದೆ.
ಸೆಪ್ಟೆಂಬರ್ 26 ನ್ಯೂಯಾರ್ಕ್ ಟೈಮ್ಸ್ ನ ಮುಖಪುಟದಲ್ಲಿ ಪೂರಾ ಅರ್ಧ ಪುಟದ ಲೀಡ್ ಸುದ್ದಿಯಾಗಿ ಮೋದಿವರ ದೊಡ್ಡ ಫೋಟೋದೊಂದಿಗೆ ‘Lost, Best Hope of Earth’ ಎಂಬ ತಲೆಬರಹ ಮತ್ತು ‘World’s most loved & most powerful leader is here to bless us’ ಎಂಬ ಉಪ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟವಾಗಿರುವಂತೆ ಬಿಂಬಿಸಲಾಗಿದೆ. ಅಲ್ಲದೆ ಆ ವರದಿಯಲ್ಲಿ ಮೋದಿಯವರನ್ನು ಅಮೆರಿಕವನ್ನು ಹರಸಲು ಬಂದ ಅವತಾರ ಪುರುಷ, ಅಂತಹ ಮಹಾನ್ ನಾಯಕ ಅಮೆರಿದ ನೆಲದ ಮೇಲೆ ಪಾದಸ್ಪರ್ಶ ಮಾಡಿರುವುದೇ ಅಮೆರಿಕನ್ನರ ಪಾಲಿನ ಮಹಾಪುಣ್ಯ, ಅವರ ಜೀವನ ಪಾವನವಾದಂತೆ ಎಂದೆಲ್ಲಾ ಬಣ್ಣಿಸುತ್ತಾ, ಅಮರಿಕನ್ನರನ್ನು ಆಶೀರ್ವದಿಸಿ ಮೋದಿಯವರು ಎ4 ಅಳೆಯ ಖಾಲಿ ಕಾಗದದ ಮೇಲೆ ಸ್ವ ಹಸ್ತಾಕ್ಷರ ಹಾಕಿದ್ದಾರೆ ಎಂದೂ ಬಣ್ಣಿಸಲಾಗಿದೆ.
ಅಮೆರಿಕದ ಜನಪ್ರಿಯ ಪತ್ರಿಕೆಯ ಯಥಾ ಮುಖಫುಟದ ರೀತಿಯಲ್ಲೇ ಹರಿದಾಡುತ್ತಿರುವ ಈ ಸುದ್ದಿ ಮತ್ತು ಆ ವರದಿಯ ಚಿತ್ರ ಎಷ್ಟು ವೈರಲ್ ಆಗಿದೆ ಎಂದರೆ, ಪ್ರಮುಖ ಸುಳ್ಳು ಸುದ್ದಿ ಪತ್ತೆ ವೆಬ್ ತಾಣ, ‘ಆಲ್ಟ್ ನ್ಯೂಸ್’ಗೆ ಕಳೆದ 24 ತಾಸುಗಳಲ್ಲಿ ವಾಸ್ತವಾಂಶ ಪತ್ತೆ ಮಾಡಿ ವರದಿ ಮಾಡುವಂತೆ ನೂರಾರು ಕೋರಿಕೆಗಳು ಬಂದಿವೆ.
ಅಂತಹ ಕೋರಿಕೆಗಳ ಹಿನ್ನೆಲೆಯಲ್ಲಿ ‘ಆಲ್ಟ್ ನ್ಯೂಸ್’, ‘ಐಬಿ ಟೈಮ್ಸ್’ ಮುಂತಾದ ಜಾಗತಿಕ ಮಾಧ್ಯಮಗಳು ಪರಿಶೀಲನೆ ನಡೆಸಿ ಇದೊಂದು ಶುದ್ಧ ಸುಳ್ಳು ಮಾಹಿತಿ, ಫೇಕ್ ನ್ಯೂಸ್ ಎಂದು ಖಚಿತಪಡಿಸಿವೆ.
ಮೊದಲನೆಯದಾಗಿ ನ್ಯೂಯಾರ್ಕ್ ಟೈಮ್ಸ್ ನ ಭಾನುವಾರದ ಮುಖಪುಟದ ಸ್ಕ್ರೀನ್ ಶಾಟ್ ಸಾಕ್ಷ್ಯ ಒದಗಿಸಲಾಗಿದ್ದು, ಆ ಪುಟದಲ್ಲಿ ಅರ್ಧಪುಟದ ವರದಿ ಇರಲಿ, ಮೋದಿ ಕುರಿತ ಒಂದೇ ಒಂದು ಸಾಲಿನ ವರದಿಯೂ ಇಲ್ಲ. ಜೊತೆಗೆ ಮೋದಿ ಹೊಗಳಿ ವರದಿ ಮಾಡಿದೆ ಎಂದು ಬಿಜೆಪಿ ಮತ್ತು ಮೋದಿ ಅಭಿಮಾನಿಗಳು ಸಂಭ್ರಮದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವ ನ್ಯೂಯಾರ್ಕ್ ಟೈಮ್ಸ್ ಹೆಸರಿನ ಕ್ಲಿಪಿಂಗ್ ನಲ್ಲಿ ಸಂಚಿಕೆಯ ಮಾಹಿತಿಯಲ್ಲಿ ‘september’ ಎಂಬ ಪದವನ್ನು ‘setpember’ ಎಂದು ತಪ್ಪಾಗಿ ಬರೆಯಲಾಗಿದೆ ಎಂಬುದನ್ನು ಫ್ಯಾಕ್ಟ್ ಚೆಕ್ ವರದಿಗಳು ಗುರುತಿಸಿವೆ. ಹಾಗೇ ವರದಿಯ ಶೀರ್ಷಿಕೆ ಮತ್ತು ಇಡೀ ವರದಿಯ ಭಾಷೆ, ಭಾಷಾ ದೋಷಗಳನ್ನು ಕೂಡ ಉಲ್ಲೇಖಿಸಿ ಇದು ನ್ಯೂಯಾರ್ಕ್ ಟೈಮ್ಸ್ ನಂತಹ ಅತ್ಯುನ್ನತ ಗುಣಮಟ್ಟದ ವಿಶ್ವಾಸಾರ್ಹ ಪತ್ರಿಕೆಯ ವರದಿಯಾಗಿರಲು ಸಾಧ್ಯವೇ ಇಲ್ಲ ಎಂದೂ ಹೇಳಲಾಗಿದೆ.
ಈ ನಡುವೆ ಸ್ವತಃ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಕೂಡ ಈ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ತನ್ನದು ಎನ್ನಲಾದ ವರದಿಗೆ ಪ್ರತಿಕ್ರಿಯಿಸಿ ಇದು ತನ್ನ ವರದಿಯಲ್ಲ, ತನಗೂ ಈ ವರದಿಗೂ ಸಂಬಂಧವಿಲ್ಲ ಎಂದು ಸಾರಾಸಗಟಾಗಿ ಅದೊಂದು ಟ್ರೋಲ್ ಪಡೆಗಳ ಸೃಷ್ಟಿ, ಫೇಕ್ ನ್ಯೂಸ್ ಎಂದು ತಳ್ಳಿ ಹಾಕಿದೆ.
ಮೋದಿಯವರ ಅವತಾರ ಪುರುಷ, ಗುಜರಾತಿನ ಸಿಂಹ, ಭಾರತದ ಭಾಗ್ಯ ವಿಧಾತ, ಆಪತ್ಬಾಂಧವ, ವಿಶ್ವಗುರು ಎಂದೆಲ್ಲಾ ಬಿಂಬಿಸುವ ಮೂಲಕ ಅವರ ಸುತ್ತಾ ಪ್ರಭಾವಳಿ ಕಟ್ಟಿ, ನಕಲಿ ವರ್ಚಸ್ಸು ಬೆಳೆಸಿ ದೇಶದ ಜನರ ಕಣ್ಣಿಗೆ ಮಣ್ಣೆರಚುವ ಬಿಜೆಪಿ ಐಟಿ ಸೆಲ್ ಮತ್ತು ಅವರ ಟ್ರೋಲ್ ಪಡೆಗಳ ನಗೆಪಾಟಲಿನ ದುಃಸ್ಸಾಹಸಗಳ ಮುಂದುವರಿದ ಭಾಗ ಈ ಹೊಸ ಫೇಕ್ ನ್ಯೂಸ್ ಪ್ರಕರಣ ಎಂಬುದು ಇದೀಗ ಜಾಗತಿಕ ಮಟ್ಟದಲ್ಲೂ ತಮಾಷೆಯ ವಸ್ತುವಾಗಿದೆ.
ಹಾಗೇ ನೋಡಿದರೆ ಮೋದಿಯವರ ವರ್ಚಸ್ಸು ವೃದ್ಧಿಯ, ಹುಸಿ ಪ್ರಭಾವಳಿ ಹೆಣೆಯುವ ಇಂತಹ ಕ್ಷುಲ್ಲಕ ನಡೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ಮೋದಿಯವರ ಘನತೆಯನ್ನು ನಗೆಪಾಟಲಿಗೆ ಈಡುಮಾಡುತ್ತಿವೆ. ಜೊತೆಗೆ ದೇಶದ ಘನತೆಯನ್ನೂ ಕಳೆಯುತ್ತಿವೆ. ಅಂತಾರಾಷ್ಟ್ರೀಯ ಮಾಧ್ಯಮಗಳ ಮುಂದೆ ಇಂತಹ ಫೇಕ್ ಸರಕು ಮೋದಿಯವರನ್ನು ಪ್ರಧಾನಿಯಾಗಿ ಆರಿಸಿದ ಭಾರತೀಯರ ಮರ್ಯಾದೆಯನ್ನು ಕೂಡ ಹರಾಜು ಹಾಕುತ್ತಿದೆ.
ಹಾಗಾಗಿ ತಾವೇನು ಮಾಡುತ್ತಿದ್ದೇವೆ? ಅದರ ಪರಿಣಾಮಗಳೇನಾಗಬಹುದು ಎಂಬ ಕನಿಷ್ಟ ವಿವೇಚನೆಯೂ ಇಲ್ಲದ ಐಟಿ ಸೆಲ್ ಗಳು ಸೃಷ್ಟಿಸುವ ಈ ಸರಕು ಚೋರ್ ಬಜಾರ್ ಮಾಲಿನಂತೆ ಧರಿಸಿದವರ ಮಾನವನ್ನು ಮುಚ್ಚುವ ಬದಲು ಹರಾಜಿಗಿಡುತ್ತಿವೆ! ಆದರೆ ಐಟಿ ಸೆಲ್ ಎಂಬ ಚೋರ್ ಬಜಾರಿಗೆ ಮಾತ್ರ ಮಾನ ಮತ್ತು ಮರ್ಯಾದೆ ಎಂಬುದರ ಲವಲೇಷವೂ ಇಲ್ಲ!