ಕೋವಿಡ್ ನಿಯಂತ್ರಣದ ಹೆಸರಲ್ಲಿ ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಸಂವಿಧಾನಬದ್ಧ ನಾಗರಿಕ ಹಕ್ಕುಗಳನ್ನೇ ಮೊಟಕುಗೊಳಿಸಿದ, ಲಾಕ್ ಡೌನ್ ಹೇರಿ ಜನ ಪ್ರತಿಭಟಿಸಲಾಗದ ಅಸಹಾಯಕ ಸ್ಥಿತಿಯನ್ನೇ ಬಳಸಿಕೊಂಡು ಕರಾಳ ಕಾನೂನುಗಳನ್ನು ಜಾರಿಗೆ ತಂದ ಬೆನ್ನಲ್ಲೇ, ಲಸಿಕೆ ವಿಷಯದಲ್ಲಿ ಮತ್ತೊಂದು ಅಂತಹದ್ದೇ ಅನಾಹುತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಕೋವಿಡ್ ಲಸಿಕೆ ನೀಡುವಾಗ ಫಲಾನುಭವಿಗಳ ಗುರುತು ಖಚಿತಪಡಿಸಿಕೊಳ್ಳಲು ಆಧಾರ್ ಮತ್ತು ಅವರ ಮುಖಚರ್ಯೆ ಸ್ಕ್ಯಾನ್ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ. ಹೀಗೆ ಕಣ್ಣಿನ ಪಾಪೆ ಸೇರಿದಂತೆ ವ್ಯಕ್ತಿಯೊಬ್ಬರ ಮುಖದ ಸೂಕ್ಷ್ಮ ಚಹರೆಗಳನ್ನು ದಾಖಲಿಸಿಕೊಂಡು, ಅದನ್ನು ಅವರ ಆಧಾರ್ ಡೇಟಾದೊಂದಿಗೆ ಹೋಲಿಸಿ, ಆಧಾರ್ ನೋಂದಾಯಿತ ವ್ಯಕ್ತಿ ಮತ್ತು ಲಸಿಕೆ ಪಡೆಯಲು ಬಂದಿರುವ ವ್ಯಕ್ತಿ ಒಬ್ಬರೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಆಧಾರ್ ಯುಐಡಿಎಐ ದತ್ತಾಂಶಕೋಶದಲ್ಲಿ ಸಂಗ್ರಹಿಸಿಡುವ ಮೂಲಕ ಲಸಿಕೆ ದುರುಪಯೋಗ ತಡೆಯುವುದು ಈ ಇಡೀ ವ್ಯವಸ್ಥೆಯ ಉದ್ದೇಶ.

ಆದರೆ, ಇದೀಗ ಹೀಗೆ ವ್ಯಕ್ತಿಯೊಬ್ಬರ ಮುಖಚರ್ಯೆಯಂತಹ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಬಳಸುವ ‘ಫೇಸಿಯಲ್ ರೆಕಗ್ನಿಷನ್ ಟೆಕ್ನಾಲಜಿ(ಎಫ್ ಆರ್ ಟಿ)’ಯ ಬಳಕೆಗಾಗಿ ಸರ್ಕಾರ ಯಾವುದೇ ರೀತಿಯ ಕಾನೂನು ಮಾನ್ಯತೆ ಪಡೆದಿಲ್ಲ! ಅಷ್ಟೇ ಅಲ್ಲ, ಆ ಸಂಬಂಧ ಯಾವುದೇ ಕಾಯ್ದೆ- ಕಾನೂನಿನ ಪ್ರಕ್ರಿಯೆಯನ್ನೂ ನಡೆಸಿಲ್ಲ ಎಂಬ ಆಘಾತಕಾರಿ ಸಂಗತಿ ಆರ್ ಟಿಐ ಅರ್ಜಿಯೊಂದಕ್ಕೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿದ ಉತ್ತರದಿಂದ ಬಹಿರಂಗವಾಗಿದೆ.
ವ್ಯಕ್ತಿಯ ತೀರಾ ಖಾಸಗಿಯಾದ ಮತ್ತು ಸೂಕ್ಷ್ಮವಾದ ಈ ಡೇಟಾದ ವಿಷಯದಲ್ಲಿ ಕೇಂದ್ರ ಸರ್ಕಾರ ಎಷ್ಟು ನಿರ್ಲಕ್ಷ್ಯವಹಿಸಿದೆ ಎಂದರೆ; ಇಂತಹ ಎಫ್ ಆರ್ ಟಿ ತಂತ್ರಜ್ಞಾನವನ್ನು ಬಳಸಿಕೊಂಡು ಲಸಿಕೆ ಕಾರ್ಯಕ್ರಮದಂತಹ ಸಾರ್ವಜನಿಕ ಯೋಜನೆಯ ಜಾರಿಗೊಳಿಸುವುದರಿಂದಾಗಿ, ಸೂಕ್ಷ್ಮ ಡೇಟಾ ಸೋರಿಕೆ ಮತ್ತು ಅದು ತರಬಹುದಾದ ಅಪಾಯಗಳ ಬಗ್ಗೆಯಾಗಲೀ, ಅದರ ಅನಾನುಕೂಲಗಳ ಬಗ್ಗೆಯಾಗಲೀ ಬಳಕೆಗೆ ಮುಂಚೆ ಕೂಡ ಯಾವುದೇ ಅಧ್ಯಯನಗಳು ನಡೆದಿಲ್ಲ ಎಂಬುದನ್ನೂ ಆರೋಗ್ಯ ಸಚಿವಾಲಯವೇ ಖಚಿತಪಡಿಸಿದೆ!
‘ಇಂಟರ್ ನೆಟ್ ಫ್ರೀಡಂ ಫೌಂಡೇಷನ್(ಐ ಎಫ್ ಎಫ್)’ ಎಂಬ ನೆಟ್ಟಿಗರ ಹಕ್ಕುಗಳ ಕುರಿತ ಸ್ವಯಂಸೇವಾ ಸಂಸ್ಥೆಗೆ ನೀಡಿರುವ ಆರ್ ಟಿಐ ಮಾಹಿತಿಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಈ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ.
ಡಿಜಿಟಲ್ ತಂತ್ರಜ್ಞಾನದ ಈ ಹೊತ್ತಿನಲ್ಲಿ ವ್ಯಕ್ತಿಗಳ ಬೆರಳಚ್ಚು, ಕಣ್ಣಿನ ಪಾಪೆಯ ಮಾದರಿ, ಮುಖಚರ್ಯೆ ಮತ್ತಿತರ ಸೂಕ್ಷ್ಮ ಡೇಟಾ ಕದಿಯುವ, ಸಂಗ್ರಹಿಸುವ ಮತ್ತು ಖರೀದಿಸಿ ಹಲವು ಅಕ್ರಮ ಚಟುವಟಿಕೆಗಳಿಗೆ, ದೇಶ-ವಿದೇಶದ ಬೇಹುಗಾರಿಕೆಯಂತಹ ಕೃತ್ಯಗಳಲ್ಲಿ ಬಳಸಲಾಗುತ್ತಿದೆ. ಆ ಕಾರಣಕ್ಕೆ ಇಂದು ಡೇಟಾ ಮೈನಿಂಗ್ ಮತ್ತು ಪ್ರೊಸೆಸಿಂಗ್ ಎಂಬುದು ಬಹುಕೋಟಿ ಅಕ್ರಮ ವಹಿವಾಟು ಉದ್ಯಮವಾಗಿ ಹೊರಹೊಮ್ಮಿದೆ. ಆ ಹಿನ್ನೆಲೆಯಲ್ಲೇ ಆಧಾರ್ ನಂತಹ ವ್ಯವಸ್ಥೆಯ ಬಗ್ಗೆಯೇ ಅದು ಸಂಗ್ರಹಿಸುವ ಡೇಟಾ ಸುರಕ್ಷತೆ, ಅದರಿಂದಾಗುವ ವ್ಯಕ್ತಿಯ ಖಾಸಗೀತನದ ಹಕ್ಕಿನ ಉಲ್ಲಂಘನೆಯಂತಹ ವಿಷಯಗಳನ್ನು ಮುಂದಿಟ್ಟುಕೊಂಡು ಸುಪ್ರೀಂಕೋರ್ಟಿನಲ್ಲಿ ವರ್ಷಗಟ್ಟಲೆ ವಾದ- ವಿವಾದ ನಡೆದಿತ್ತು.

ಪರಿಸ್ಥಿತಿ ಇಷ್ಟು ಸೂಕ್ಷ್ಮವಿರುವಾಗ ಕೇವಲ ಲಸಿಕೆ ನೀಡಿಕೆಯಂತಹ ಒಂದು ಕಾರ್ಯಕ್ರಮಕ್ಕೆ ಎಫ್ ಆರ್ ಟಿ ತಂತ್ರಜ್ಞಾನ ಬಳಸಿ ವ್ಯಕ್ತಿಗಳ ಮುಖಚರ್ಯೆಗೆ ಸಂಬಂಧಿಸಿದ ಸೂಕ್ಷ್ಮ ಡೇಟಾ ಸಂಗ್ರಹಿಸಿರುವುದು, ಹಾಗೆ ಮಾಡುವ ಮುಂಚೆ ಅದಕ್ಕೆ ಕಾನೂನು ಬಲವಾಗಲೀ, ಆ ಡೇಟಾ ಸುರಕ್ಷಿತವಾಗಿರಲಿದೆ ಎಂಬ ಯಾವುದೇ ಖಾತರಿಯನ್ನಾಗಲೀ ನೀಡದೆ ಮತ್ತು ದೇಶದ ನಾಗರಿಕರಿಗೆ ಅಂತಹ ವ್ಯವಸ್ಥೆಯ ಬಗ್ಗೆ ಯಾವುದೇ ಮಾಹಿತಿ ನೀಡದೆ, ಜನರನ್ನು ಕತ್ತಲಲ್ಲಿಟ್ಟು ಅವರ ಸೂಕ್ಷ್ಮ ಮಾಹಿತಿಯನ್ನು ದೋಚಿರುವುದು ಇದೀಗ ಚರ್ಚೆಗೆ ಒಳಗಾಗಿದೆ. ಈ ಹಿಂದೆ ಇದೇ ಸರ್ಕಾರದ ಕೆಲವು ಇಲಾಖೆಗಳು ವಿವಿಧ ಉದ್ದೇಶಗಳಿಗಾಗಿ ಸಂಗ್ರಹಿಸಿದ್ದ ದೇಶದ ನಾಗರಿಕರ ಸೂಕ್ಷ್ಮ ಮಾಹಿತಿ-ಡೇಟಾವನ್ನು ಖಾಸಗೀ ಕಂಪನಿಗಳಿಗೆ ಮತ್ತು ಸಾರ್ವಜನಿಕ ವೇದಿಕೆಗಳೊಂದಿಗೆ ಹಂಚಿಕೊಳ್ಳುವ ಮೂಲಕ ಡೇಟಾ ಮೈನಿಂಗ್ ನಲ್ಲಿ ಭಾಗಿಯಾದ ಗಂಭೀರ ಆರೋಪಗಳು ಕೇಳಿಬಂದಿದ್ದವು. ಕೋವಿಡ್ ಸಂದರ್ಭದಲ್ಲಿ ದೇಶದ ನಾಗರಿಕರಿಗೆ ಕಡ್ಡಾಯಗೊಳಿಸಿದ ‘ಆರೋಗ್ಯ ಸೇತು’ ಆ್ಯಪ್ ವಿಷಯದಲ್ಲಿ ಕೂಡ ಇಂತಹ ದೂರುಗಳು ಕೇಳಿಬಂದಿದ್ದವು.
ಇದೀಗ ಲಸಿಕೆ ಕಾರ್ಯಕ್ರಮದಲ್ಲಿ ಕೂಡ ಯಾವುದೇ ರೀತಿಯ ಅಡ್ಡಪರಿಣಾಮಗಳನ್ನು ಅಧ್ಯಯನ ಮಾಡದೆ, ಕನಿಷ್ಟ ಕಾನೂನು ರಕ್ಷಣೆಯನ್ನೂ ನೀಡದೆ ಏಕಾಏಕಿ ಮುಗುಮ್ಮಾಗಿ ಜನರ ವ್ಯಕ್ತಿಗತ ಸೂಕ್ಷ್ಮ ಡೇಟಾವನ್ನು ಸರ್ಕಾರ ಸಂಗ್ರಹಿಸಿದೆ. ಹಾಗೆ ಸಂಗ್ರಹಿಸಿದ ಟೇಟಾದ ಸುರಕ್ಷತೆ ಬಗ್ಗೆಯಾಗಲೀ, ದುರ್ಬಳಕೆಯಾಗದು ಎಂಬ ಬಗ್ಗೆಯಾಗಲೀ ಯಾವುದೇ ಖಾತ್ರಿಯನ್ನೂ ನೀಡದೆ ಸರ್ಕಾರ ಮಾಡಿರುವ ಈ ಡೇಟಾ ಮೈನಿಂಗ್ ಪರಿಣಾಮಗಳು ಇದೀಗ ಡಿಜಿಟಲ್ ಜಗತ್ತಿನ ಅಪಾಯಗಳ ಅರಿವಿರುವವರಲ್ಲಿ ಆತಂಕ ಹುಟ್ಟಿಸಿವೆ.