ಫೇಸ್ಬುಕ್ ಕಂಪನಿಯ ಮಾಜಿ ಉದ್ಯೋಗಿ ಫ್ರಾನ್ಸಸ್ ಹೌಗನ್ ಇದೀಗ ಕಂಪನಿಯ ರಹಸ್ಯಗಳನ್ನು ಬಯಲಿಗೆಳೆಯುವ ರಟ್ಟುಗಾರರಾಗಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘವವು ‘ಮುಸಲ್ಮಾನ ವಿರೋಧಿ’ ವಿಷಯಗಳನ್ನು ಫೆಸ್ಬುಕ್ ಮೂಲಕ ಪ್ರಸರಿಸುವುದು ಕಂಪನಿಗೆ ತಿಳಿದಿದ್ದರೂ ಯಾವುದೇ ಮಹತ್ವದ ಕ್ರಮವನ್ನು ಈ ವರೆಗೂ ತೆಗೆದುಕೊಳ್ಳಲಾಗಿಲ್ಲ ಎಂದು ಹೌಗನ್ ಆರೋಪಿಸಿದ್ದಾರೆ. ಯು.ಎಸ್. ಸೆಕ್ಯುರಿಟಿ ಆಂಡ್ ಎಕ್ಸ್ಚೇಂಜ್ ಕಮಿಷನ್ ಬಳಿ ದಾಖಿಸಿರುವ ದೂರುಗಳಲ್ಲಿ ಈ ಅಂಶವನ್ನು ಹಂಚಿಕೊಂಡಿದ್ದಾರೆ. ಇವರು ಒಟ್ಟಾರೆ ಎಂಟು ದೂರುಗಳನ್ನು ಸಲ್ಲಿಸಿದ್ದು, ದ ವೈರ್ ನ ಪ್ರಕಾರ ನಾಕು ದೂರುಗಳು ಭಾರತಕ್ಕೆ ಸಂಬಂಧಪಟ್ಟಿರುವವು.
“ಆರ್.ಎಸ್.ಎಸ್. ನ ಬಳಕೆದಾರರು, ಗುಂಪುಗಳು ಮತ್ತು ಪೇಜ್ ಗಳು ಭಯವನ್ನು ಹುಟ್ಟಿಸುತ್ತಾ ಮುಸಲ್ಮಾನ ವಿರೋಧಿ ವಿಷಯಗಳನ್ನು ಪ್ರಸರಿಸುತ್ತಾ ಹಿಂಸಾತ್ಮಕ ಪ್ರಚೋದನೆಯ ಉದ್ದೇಶದೊಂದಿಗೆ ಹಿಂದೂಪರ ಧೃವೀಕರಣವನ್ನು ನಡೆಸುತ್ತಿದ್ದಾರೆ,” ಎಂದು ಹೇಳುವ ಫೆಸ್ಬುಕ್ ಕಂಪನಿಯ ಆಂತರಿಕ ದಾಖಲೆಗಳನ್ನು ಹೌಗನ್ ಉಲ್ಲೇಖಿಸಿದ್ದಾರೆ.
“ಮುಸಲ್ಮಾನರನ್ನು ಹಂದಿಗಳಿಗೆ ಮತ್ತು ನಾಯಿಗಳಿಗೆ ಹೋಲಿಸುವ ಹಲವಾರು ಪೋಸ್ಟ್ ಗಳು ಈ ಖಾತೆಗಳಿಂದ ಪೋಸ್ಟಾಗಿವೆ. ಜೊತೆಗೆ ಕುರಾನ್ ಪುರುಷರಿಗೆ ತಮ್ಮ ಕುಟುಂಬದ ಮಹಿಳೆಯರ ಮೇಲೆ ಅತ್ಯಾಚರ ನಡೆಸುವಂತೆ ಸೂಚಿಸುತ್ತದೆ ಎಂಬ ಅಮಾನವೀಯ ಸುಳ್ಳು ಸುದ್ದಿಗಳನ್ನು ಈ ಖಾತೆಗಳು ಪ್ರಚಾರ ಮಾಡುತ್ತವೆ,” ಎಂಬ ಮಾಹಿತಿಯನ್ನು ‘ಅಡ್ವರ್ಸರಿಯಲ್ ಹಾರ್ಮ್ಫುಲ್ ನೆಟ್ವರ್ಕ್ಸ್ – ಇಂಡಿಯಾ ಕೇಸ್ ಸ್ಟಡಿ’ ಎಂಬ ಆಂತರಿಕ ದಾಖಲೆ ನೀಡುತ್ತದೆ.
“ಹಿಂದಿ ಮತ್ತು ಬೆಂಗಾಲಿ ಭಾಷೆಗಳನ್ನಾಡುವ ವಿಂಗಡಕರ ಕೊರತೆ ನಮ್ಮಲ್ಲಿರುವುದರಿಂದ ಇಂತಹ ಬಹುತೇಕ ವಿಷಯಗಳು ಫ್ಲಾಗ್ ಆಗುವುದಿಲ್ಲ,” ಎಂಬುದನ್ನೂ ದಾಖಲೆ ತಿಳಿಸುತ್ತದೆ.
ತನ್ನ ಬಳಕೆದಾರರಲ್ಲಿ ಸುಮಾರು ಮೂರನೇ ಎರಡು ಭಾಗದಷ್ಟು ಬಳಕೆದಾರರು ಇಂಗ್ಲಿಷ್ ಬಳಸದೇ ಇದ್ದರೂ ಜಾಗತಿಕ ವಿಷಯಗಳೊಂದಿಗೆ ಸೆಣೆಸಾಡಲು ಅಗತ್ಯವಿರುವಷ್ಟು ಸಂಪನ್ಮೂಲಗಳು ಫೇಸ್ಬುಕ್ ಬಳಿ ಇಲ್ಲ ಎಂಬುದನ್ನೂ ಹೌಗನ್ ಅವರ ದೂರು ಒಳಗೊಳ್ಳುತ್ತದೆ.
ಆರ್.ಎಸ್.ಎಸ್.ನ ವಿಷಯದಲ್ಲಿ ‘ರಾಜಕೀಯ ಪರಿಗಣನೆಗಳಿಂದ’ ಫೇಸ್ಬುಕ್ ಈ ರೀತಿ ವರ್ತಿಸುತ್ತಿದೆ ಎಂಬುದಾಗಿ ಹೌಗನ್ ಆರೋಪಿಸಿದ್ದಾರೆ. ಹೌಗನ್ ಅವರು ಉಲ್ಲೇಖಿಸಿರುವ ಆಂತರಿಕ ದಾಖಲೆಗಳ ಪ್ರಕಾರ ಫೇಸ್ಬುಕ್ ಭಾರತವನ್ನು ಟೈರ್-0 ದೇಶವಾಗಿ ಪರಿಗಣಿಸುತ್ತದೆ. ಎಂದರೆ ಪ್ರಮುಖ ಚುನಾವಣೆಗಳ ಸಂದರ್ಬದಲ್ಲಿ ಫೇಸ್ಬುಕ್ ಈ ದೇಶಗಳ ಕುರಿತು ಹೆಚ್ಚಿನ ಗಮನವನ್ನು ಹರಿಸುತ್ತದೆ. ಭಾರತವನ್ನು ಹೊರತುಪಡಿಸಿ ಯು.ಎಸ್. ಮತ್ತು ಬ್ರೆಜಿಲ್ ದೇಶಗಳನ್ನು ಮಾತ್ರ ಈ ಗುಂಪಿನಲ್ಲಿ ವಿಂಗಡಿಸಲಾಗಿದೆ.
ಆರ್.ಎಸ್.ಎಸ್. ಸಂಘಟನೆಯನ್ನು ಇನ್ನೂ ‘ಅಪಾಯಕಾರಿ’ ಎಂದು ಪರಿಗಣಿಸಲಾಗಿಲ್ಲ ಎಂಬುದನ್ನು ಫೇಸ್ಬುಕ್ ನ ಆಂತರಿಕ ದಾಖಲೆಗಳು ತೋರಿಸುತ್ತವೆ. ಸಾಮಾನ್ಯವಾಗಿ ತನ್ನ ಬಳಕೆದಾರರ ಆನ್ಲೈನ್ ಬಳಕೆ ನೈಜ ಜಗತ್ತಿನಲ್ಲಿ ಹಾನಿಕಾರಕ ವಾತಾವರಣವನ್ನು ಪ್ರಚೋದಿಸಿದರೆ ಫೇಸ್ಬುಕ್ ಅಂತಹ ಬಳಕೆದಾರರನ್ನು ‘ಅಪಾಯಕಾರಿ’ ಎಂದು ಪರಿಗಣಿಸುತ್ತದ.
‘ಹಾನಿಕಾರಕ ವಿಷಯಗಳನ್ನು ಮತ್ತು ಸುಳ್ಳು ಸುದ್ದಿಗಳನ್ನು ಜಗತ್ತಿನಾದ್ಯಂತ ಪ್ರಸರಿಸಲು’ ಫೇಸ್ಬುಕ್ ಸಹಾಯ ಮಾಡುತ್ತಿದೆ ಎಂಬುದು ಹೌಗನ್ ಅವರ ವಾದಗಳಲ್ಲಿ ಇನ್ನೊಂದು. ಉದಾಹರಣೆಗೆ ಪಶ್ಚಿಮ ಬಂಗಾಳದಲ್ಲಿ ಫೇಸ್ಬುಕ್ ನ ಅಲ್ಗೋರಿಥಂಗಳು ನೀಡುತ್ತಿದ್ದ ಸಲಹೆ-ಶಿಫಾರಸ್ಸುಗಳಲ್ಲಿ 40% “ನಕಲಿ ಅಥವಾ ಅನಧಿಕೃತ”ವಾಗಿದ್ದವು.
ಈ ಫ್ರಾನ್ಸಸ್ ಹೌಗನ್ ಯಾರು?
ಹೌಗನ್ ಅವರು ಕಂಟೆಂಟ್ ರಾಂಕಿಗ್ ಅಲ್ಗೋರಿಥಂ ತಂತ್ರಜ್ಞರು. ಈ ಹಿಂದೆ ಅವರು “ಪ್ರಜಾಪ್ರಭುತ್ವ ಮತ್ತು ಸುಳ್ಳುಸುದ್ದಿ” ಯ ಕುರಿತು ಕಾರ್ಯ ನಿರ್ವಹಣೆ ಮಾಡುತ್ತಿದ ಫೇಸ್ಬುಕ್ಕಿನ ತಂಡವೊಂದರಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.
ಮೇ ತಿಂಗಳಲ್ಲಿ ಈ ಕಂಪನಿಯಿಂದ ಹೊರನಡೆಯುವ ಮುನ್ನ ಅವರು ಫೇಸ್ಬುಕ್ಕಿನ ಆಂತರಿಕ ದಾಖಲೆಗಳ ಸಾವಿರಾರು ಪ್ರತಿಗಳನ್ನು ಕಾಪಿ ಮಾಡಿಕೊಂಡಿದ್ದರು ಎಂದು ಸಿ.ಬಿ.ಎಸ್. ನ್ಯೂಸ್ ವರದಿ ಮಾಡಿದೆ. ಈ ವಾಹಿನಿಯೊಂದಿಗೆ ಅವರ ಮೊದಲ ಸಂದರ್ಶನವನ್ನು ಅಕ್ಟೋಬರ್ 3 ರಂದು ಪ್ರಸಾರ ಮಾಡಲಾಯಿತು.
ಅಕ್ಟೋಬರ್ 4ರಂದು ಫೇಸ್ಬುಕ್ ವಿರುದ್ಧ ಹೌಗನ್ ಅವರು ದಾಖಲಿಸಿದ್ದ ದೂರುಗಳನ್ನು ಅದೇ ವಾಹಿನಿ ಪ್ರಕಟಿಸಿತು. ಆ ಆಂತರಿಕ ದಾಖಲೆಗಳನ್ನು ಆಧರಿಸಿದ ದೂರುಗಳನ್ನು ಹೌಗನ್ ಅವರ ಪರವಾಗಿ ವಾಷಿಂಗ್ಟನ್ ಡಿ.ಸಿ. ಯ ಲಾಭರಹಿತ ಸಂಸ್ಥೆಯಾದ ‘ವಿಸಲ್ ಬ್ಲೋವರ್ ಏಡ್’ ಸಂಸ್ಥೆ ಸಲ್ಲಿಸಿದೆ.
“ಕಂಪನಿಗೆ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ವೇದಿಕೆಗಳನ್ನು ಹೇಗೆ ಭದ್ರಗೊಳಿಸಬೇಕು ಎಂಬುದು ತಿಳಿದಿದೆ ಆದರೆ ಅವರು ಸಾರ್ವಜನಿಕ ಒಳಿತನ್ನು ಆಯ್ಕೆ ಮಾಡದೆ ಲಾಭದ ಹಾದಿ ಹಿಡಿದಿರುವುದರಿಂದ ಹಾಗೆ ಮಾಡುವುದಿಲ್ಲ,” ಎಂದು ಹೌಗನ್ ಅಕ್ಟೋಬರ್ 5 ರಂದು ಯು.ಎಸ್. ನ ಸೆನೇಟ್ ಸಮಿತಿಯೊಂದಕ್ಕೆ ಹೇಳಿಕೆಯನ್ನು ನೀಡಿದ್ದಾರೆ.
ಆದರೆ ಫೇಸ್ಬುಕ್ ನ ಸಿ.ಇ.ಒ. ಆದ ಮಾರ್ಕ್ ಜುಕ್ಕರ್ಬರ್ಗ್ ಅವರು ಈ ಆರೋಪವನ್ನು ನಿರಾಕರಿಸಿದ್ದಾರೆ. “ಭದ್ರತೆ, ಯೋಗಕ್ಷೇಮ ಮತ್ತು ಮಾನಸಿಕ ಆರೋಗ್ಯದಂತಹ ವಿಷಯಗಳ ಬಗ್ಗೆ ನಮಗೆ ಆಳವಾದ ಕಳಕಳಿ ಇದೆ. ನಮ್ಮ ಕೆಲಸಗಳನ್ನು ಮತ್ತು ನಮ್ಮ ಉದ್ದೇಶಗಳನ್ನು ತಪ್ಪಾಗಿ ಬಿಂಬಿಸುವುದನ್ನು ನಮಗೆ ನೋಡುವುದು ಕಷ್ಟವಾಗುತ್ತದೆ… ನಾವು ಭದ್ರತೆ ಮತ್ತು ಯೋಗಕ್ಷೇಮದ ಬದಲು ಲಾಭಕ್ಕೆ ಆದ್ಯತೆ ನೀಡುತ್ತೇವೆ ಎಂಬ ಪರಿಕಲ್ಪನೆ ಈ ಎಲ್ಲಾ ಆಪಾದನೆಗಳ ಮೂಲದಲ್ಲಿದೆ. ಆದರೆ ಇದು ಸತ್ಯವಲ್ಲ,” ಎಂಬುದು ಜುಕ್ಕರ್ಬರ್ಗ್ ಅವರ ಪ್ರತಿಕ್ರಿಯೆ.
ಸಿ.ಬಿ.ಎಸ್. ನ್ಯೂಸ್ ಗೆ ಫೇಸ್ಬುಕ್ ನೀಡಿದ ಹೇಳಿಕೆ ಹೀಗಿದೆ, “ನಮ್ಮ ವೇದಿಕೆಯನ್ನು ಭದ್ರವಾಗಿರಿಸಿಕೊಳ್ಳಲು ನಾವು ಮಾನವ ಸಂಪನ್ಮೂಲಗಳ ಮೇಲೆ ಮತ್ತು ತಂತ್ರಜ್ಞಾನದ ಮೇಲೆ ಬಹಳಷ್ಟು ಖರ್ಚುಗಳನ್ನು ಮಾಡಿದ್ದೇವೆ. ಸುಳ್ಳುಸುದ್ದಿಗಳ ವಿರುದ್ಧ ಹೋರಾಡಿ ಅಧೀಕೃತ ಮಾಹಿತಿಯನ್ನು ಮಾತ್ರ ನೀಡುವುದು ನಮ್ಮ ಆದ್ಯತೆಯಾಗಿದೆ. ಇಂತಹ ಕ್ಲಿಷ್ಟಕರವಾದ ಸವಾಲುಗಳನ್ನು ಸಮರ್ಪಕವಾಗಿ ಎದುರಿಸುವ ಮಾರ್ಗವನ್ನು ಯಾವುದಾದರೂ ಸಂಶೋಧನೆಗಳು ಹುಡುಕಿದ್ದರೆ, ತಂತ್ರಜ್ಞಾನ ಉದ್ಯಮ, ಸರಕಾರಗಳು ಮತ್ತು ನಾಗರೀಕ ಸಮಾಜ ಇದನ್ನು ಬಹಳ ಹಿಂದೆಯೇ ಪರಿಹರಿಸುತ್ತಿತ್ತು.”
ಆದರೆ, ಸುಳ್ಳುಸುದ್ದಿಗಳ ಬಗ್ಗೆ ಇರುವ ದಾಖಲೆಗಳ ಪ್ರತ್ಯೇಕ ವಿಭಾಗವೊಂದು 87% ಸಂಪನ್ಮೂಲಗಳನ್ನು ಯು.ಎಸ್. ಗೆ ಮಾತ್ರ ಬಳಸಲಾಗುತ್ತಿದೆ ಮತ್ತು ಮಿಕ್ಕ 13% ಸಂಪನ್ಮೂಲಗಳನ್ನು ಇತರೆ ಎಲ್ಲಾ ದೇಶಗಳಿಗೆ ಉಪಯೋಗಿಸಲಾಗುತ್ತಿದೆ ಎಂದು ಹೇಳುತ್ತದೆ.
ಕೃಪೆ: ದ ಪ್ರಿಂಟ್ / ಸ್ಕ್ರಾಲ್