ಕೇಂದ್ರ ಸರ್ಕಾರ ಬೃಹತ್ ಪ್ರಮಾಣದಲ್ಲಿ ಖರೀದಿ ಮಾಡುವ ಡೀಸೆಲ್ ದರವನ್ನು 25 ರೂಪಾಯಿಗಳಷ್ಟು ಏರಿಕೆ ಮಾಡಿದಾಗಲೇ ಚಿಲ್ಲರೆ ಮಾರಾಟ ದರವೂ ಏರಿಕೆಯಾಗುವುದು ಖಚಿತವಾಗಿತ್ತು. ಬೃಹತ್ ಮಾರಾಟ ದರ ಏರಿಕೆ ಮಾಡಿದ 24 ಗಂಟೆಗಳಲ್ಲೇ ಚಿಲ್ಲರೆ ಮಾರಾಟದರ ಏರಿಕೆ ಮಾಡಲಾಗಿದೆ. ಇದು ಅನಿರೀಕ್ಷಿತವೇನೂ ಆಗಿರಲಿಲ್ಲ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ತಟಸ್ಥಗೊಳಿಸಲಾಗಿತ್ತು. ಅಂದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತ ಏನಿದ್ದರೂ ದೇಶೀಯ ಮಾರುಕಟ್ಟೆಯಲ್ಲಿನ ದರಗಳಲ್ಲಿ ಯಾವುದೇ ಏರಿಳಿತ ಇರಲಿಲ್ಲ. ನರೇಂದ್ರ ಮೋದಿ ಸರ್ಕಾರದ ಈ ತಂತ್ರ ಹೊಸದೇನೂ ಅಲ್ಲ. ಈ ಹಿಂದೆ 2017ರಲ್ಲಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆ ಜನವರಿ 1ರಿಂದ ಏಪ್ರಿಲ್ 1ರವರೆಗೆ ದರ ಏರಿಕೆ ಮಾಡರಿಲಿಲ್ಲ. ಗುಜರಾತ್ ವಿಧಾನಸಭಾ ಚುನಾವಣೆ ವೇಳೆ 2017 ಡಿಸೆಂಬರ್ ನಲ್ಲಿ ಎರಡುವಾರಗಳ ಕಾಲ ದರ ಏರಿಕೆ ಮಾಡಿರಲಿಲ್ಲ. ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ 2018ರಲ್ಲಿ ಕೂಡಾ ಪೆಟ್ರೋಲ್, ಡಿಸೇಲ್ ದರ ತಟಸ್ಥವಾಗಿತ್ತು.
ನಾಲ್ಕು ತಿಂಗಳು ಹತ್ತು ದಿನಗಳ ಕಾಲ ತಟಸ್ಥವಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಕೇಂದ್ರ ಸರ್ಕಾರ ಏರಿಸಲು ಆರಂಭಿಸಿದೆ. ಅಂದರೆ, ಇದು ಆರಂಭ ಮಾತ್ರ. ಮೊದಲ ದಿನ ಪೆಟ್ರೋಲ್ 84 ಪೈಸೆ ಮತ್ತು ಡೀಸೆಲ್ 79 ಪೈಸೆ ಏರಿಕೆ ಮಾಡಲಾಗಿದೆ. ಪೈಸೆಗಳ ಲೆಕ್ಕದಲ್ಲೋ ಅಥವಾ ರೂಪಾಯಿ ಲೆಕ್ಕದಲ್ಲೋ ನಿತ್ಯವೂ ಏರುತ್ತಲೇ ಇರುತ್ತದೆ. ಏರಿಕೆ ಎಲ್ಲಿ ಹೋಗಿ ನಿಲ್ಲುತ್ತದೆ? ಕೇಂದ್ರ ಸರ್ಕಾರವಾಗಲೀ, ತೈಲ ಮಾರುಕಟ್ಟೆ ಕಂಪನಿಗಳಾಗಲೀ ನಿಖರವಾಗಿ ಹೇಳುವ ಸ್ಥಿತಿಯಲ್ಲಿ ಇಲ್ಲ. ಈ ಹಿಂದೆ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಮಾಡಿದ್ದಾಗಿನ ಸ್ಥಿತಿಗೂ ಪ್ರಸ್ತುತ ಪರಿಸ್ಥಿತಿಗೂ ಬಹಳ ವ್ಯತ್ಯಾಸ ಇದೆ. ರಷ್ಯಾ ಉಕ್ರೇನ್ ಮೇಲೆ ಆಕ್ರಮ ಮಾಡಿದ ನಂತರ ಉದ್ಭವಿಸಿರುವ ಜಾಗತಿಕ ರಾಜಕೀಯ ಆರ್ಥಿಕ ಅಸ್ಥಿರತೆಗಳ ಫಲಶೃತಿಯ ಸಮಸ್ಯೆ ಇದಾಗಿದೆ. ಉಕ್ರೇನ್ ಮೇಲೆ ಆಕ್ರಮಣ ಮಾಡಿರುವ ರಷ್ಯಾ ಆ ದೇಶವನ್ನು ವಶಕ್ಕೆ ಪಡೆಯಲು ಶತಾಯಗತಾಯ ಪ್ರಯತ್ನಿಸುತ್ತಿದೆ. ಉಕ್ರೇನ್ ಒಡ್ಡಿದ ತಿರೋಧಕ್ಕೆ ಪುಟಿನ್ ಪಡೆಗೆ ತೀವ್ರ ಹಿನ್ನಡೆಯಾಗಿದೆ. ಹೀಗಾಗಿ ತಿಂಗಳ ದಿನಗಳ ಹಿಂದೆ ಆರಂಭವಾಗಿರುವ ಯುದ್ಧ ಮುಗಿಯುತ್ತಿಲ್ಲ. ಯುದ್ಧ ಮುಗಿದರೂ ಜಾಗತಿಕ ರಾಜಕೀಯ ಆರ್ಥಿಕ ಅಸ್ಥಿರತೆ ನಿವಾರಣೆಯಾಗುತ್ತದೆಂದು ನಿರೀಕ್ಷಿಸುವಂತಿಲ್ಲ. ರಷ್ಯಾದ ಮೇಲೆ ಅಮೆರಿಕ ಮತ್ತು ಯೂರೋಪ್ ರಾಷ್ಟ್ರಗಳು ಹೇರಿರುವ ಕಠಿಣ ಆರ್ಥಿಕ ನಿರ್ಬಂಧಗಳೂ ಸಹ ಜಾಗತಿಕ ಆರ್ಥಿಕ ಅಸ್ಥಿರತೆಯನ್ನು ಹೆಚ್ಚಿಸುತ್ತಿವೆ. ಈ ಅಸ್ಥಿರತೆ ಮುಂದುವರೆದಷ್ಟೂ ತೈಲದರ ಏರಿಕೆಗೆ ಮಿತಿಯೇ ಇರುವುದಿಲ್ಲ. ಈ ಕಾರಣಗಳಿಂದಾಗಿ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಜಿಗಿದಿದೆ.
ತಿಂಗಳೊಂದರಲ್ಲೇ ಪ್ರತಿ ಬ್ಯಾರಲ್ಲಿಗೆ 80 ಡಾಲರ್ ಗಳಿಂದ 140 ಡಾಲರ್ ಗಳಿಗೆ ಜಿಗಿದಿದೆ. ಅತಿ ಹೆಚ್ಚು ವಹಿವಾಟಾಗುವ ಬ್ರೆಂಟ್ ಕ್ರೂಡ್ 115 ಡಾಲರ್ ಗಳಲ್ಲಿ ವಹಿವಾಟಾಗುತ್ತಿದೆ. ನಿತ್ಯವೂ ಬೆಲೆ ತೀವ್ರ ಏರಿಳಿತವಾಗುತ್ತಿರುವುದರಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಬಹುವಾಗಿ ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರಗಳಲ್ಲೂ ಆರ್ಥಿಕ ಅಸ್ಥಿರತೆ ಕಾಣಿಸಲಾರಂಭಿಸಿದೆ. ಶ್ರೀಲಂಕಾದಲ್ಲಿ 200 ರೂಪಾಯಿ ಗಡಿದಾಟಿಯಾಗಿದೆ.
ಉಕ್ರೇನ್ ಆಕ್ರಮಣದ ನಂತರವೂ ಭಾರತ ರಷ್ಯಾದೊಂದಿಗೆ ಉತ್ತಮ ಸಂಬಂಧ ಹೊಂದಿದೆ. ಹೀಗಾಗಿ ಆರ್ಥಿಕ ನಿರ್ಬಂಧಗಳ ನಡುವೆಯೂ ರಷ್ಯಾದಿಂದ ತೈಲ ಆಮದಾಗುತ್ತಿದೆ. ಆದರೆ, ರಷ್ಯಾದಿಂದ ಭಾರತ ಆಮದು ಮಾಡಿಕೊಳ್ಳುತ್ತಿರುವ ಪ್ರಮಾಣ ತೀರಾ ಅತ್ಯಲ್ಪ. ಶೇ.1ರಷ್ಟು ಕಚ್ಚಾ ತೈಲ, ಶೇ.1.3ರಷ್ಟು ಕಲ್ಲಿದ್ದಲು ಮತ್ತು 2.5 ದಶಲಕ್ಷ ಟನ್ ಎಲ್ಎನ್ಜಿ ಆಮದು ಮಾಡಿಕೊಳ್ಳುತ್ತಿದೆ. ರಿಯಾಯ್ತಿ ದರದಲ್ಲಿ ಸಿಕ್ಕರೂ ಅದು ಒಟ್ಟಾರೆ ದೇಶೀಯ ದರದ ಮೇಲೆ ಯಾವುದೇ ಪರಿಣಾಮ ಬೀರದು.

ಕಚ್ಚಾ ತೈಲ ಪ್ರತಿ ಬ್ಯಾರೆಲ್ಲಿಗೆ 140 ರೂಪಾಯಿಗೆ ಏರಿಕೆಯಾಗಿದ್ದಾಗ ತೈಲ ವಿತರಣಾ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲಿಗೆ 15 ರೂಪಾಯಿ ನಷ್ಟಮಾಡಿಕೊಂಡು ವಿತರಣೆ ಮಾಡುತ್ತಿದ್ದವು. ಆದರೆ, ಇಡೀ ತಿಂಗಳಲ್ಲಿ ಖರೀದಿ ಮಾಡಿದ ಸರಾಸರಿ ದರವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದರಿಂದ ಸರಾಸರಿ ಪ್ರತಿ ಬ್ಯಾರೆಲ್ಲಿಗೆ 110 ಡಾಲರ್ ಗಳಷ್ಟಾಗುತ್ತದೆ. ಆ ಲೆಕ್ಕಚಾರದಲ್ಲೂ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ಲೀಟರ್ ಗೆ ಏಳು ರೂಪಾಯಿಗಳಷ್ಟು ನಷ್ಟ ಮಾಡಿಕೊಳ್ಳುತ್ತವೆ.
ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ 32.90 ಡಿಸೇಲ್ ಮೇಲೆ 31.80 ರೂಪಾಯಿ ಸುಂಕ ಹೇರುತ್ತಿದೆ. ಇದು ಒಟ್ಟುದರದ ಶೇ.34 ಮತ್ತು ಶೇ.31ರಷ್ಟಿದೆ. ಒಂದು ವೇಳೆ ಸರ್ಕಾರ ಸುಂಕ ಕಡಿತ ಮಾಡಿದರೆ, ದರ ಏರಿಕೆ ಮಾಡುವುದನ್ನು ತಪ್ಪಿಸಬಹುದು.
ದರ ಏರಿಕೆ ಮಾಡದೇ ಇರುವುದು ಸರ್ಕಾರಕ್ಕೂ ಬೇಕಿದೆ. ಏಕೆಂದರೆ ಈಗಾಗಲೇ ಹಣದುಬ್ಬರ ಆರ್ಬಿಐ ವಿಧಿಸಿರುವ ಶೇ.6ರ ಮಿತಿ ಮೀರಿದೆ. ಹೀಗಾಗಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಆದರೆ ಮತ್ತಷ್ಟು ಹಣದುಬ್ಬರ ಏರಿಕೆ ಆಗಲಿದೆ. ಕಚ್ಚಾ ತೈಲ ದರ ಏರಿಕೆ ಮತ್ತು ಹಣದುಬ್ಬರ ಏರಿಕೆ ಮತ್ತು ಒಟ್ಟು ರಾಷ್ಟ್ರೀಯ ಉತ್ಪನ್ನದ ನಡುವೆ ಸಂಬಂಧ ಇದೆ. ಕಚ್ಚಾ ತೈಲ ದರ ಏರಿಕೆಯಾಗಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿದರೆ, ಹಣದುಬ್ಬರ ಹೆಚ್ಚುತ್ತದೆ. ಅದು ಜಿಡಿಪಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.. ಈಗಾಗಲೇ ಕಚ್ಚಾ ತೈಲದರ ಏರಿರುವ ಹಿನ್ನೆಲೆಯಲ್ಲಿ ಭಾರತದ ಜಿಡಿಪಿ ಮುನ್ನಂದಾಜನ್ನು ಗಣನೀಯವಾಗಿ ತಗ್ಗಿಸಲಾಗುತ್ತಿದೆ. ಫಿಡ್ಜ್ ರೇಟಿಂಗ್ ಏಜೆನ್ಸಿ ಶೇ.10.5 ರಿಂದ ಶೇ.8.5ಕ್ಕೆ ತಗ್ಗಿಸಿದೆ.
ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಬರೀ ಈ ಎರಡು ಉತ್ಪನ್ನಗಳಿಗೆ ಮಾತ್ರ ಸೀಮಿತವಾಗುವುದಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಇಡೀ ಆರ್ಥಿಕ ಚಟುವಟಿಕೆಗಳಿಗೆ ಆಧಾರವಾಗಿರುವುದರಿಂದ ಇಡೀ ಸರಕು ಮತ್ತು ಸೇವಾ ವಲಯದ ಮೇಲೆ ತ್ವರಿತವಾಗಿ ಪರಿಣಾಮ ಬೀರುತ್ತವೆ. ಸಮೂಹ ಸಾರಿಗೆ ಸೇವೆಗಳ ದರ ಏರಿಕೆಯಾಗುತ್ತದೆ. ಸರಕು ಸಾಗಣೆ ದರವು ಹೆಚ್ಚುತ್ತದೆ. ದರ ಏರಿಕೆಯ ಸರಣಿಗೆ ದಿನಸಿ, ಹಾಲು, ಹಣ್ಣು, ತರಕಾರಿ ಸೇರಿದಂತೆ ಅಗತ್ಯವಸ್ತುಗಳೂ ಸೇರುತ್ತವೆ. ಕೊನೆಗೆ ಹೋಟೆಲ್ ಗಳಲ್ಲಿನ ಕಾಫಿ, ಟೀ, ತಿಂಡಿ ತಿನಿಸುಗಳ ದರ ಏರಿಕೆಯವರೆಗೂ ಮುಂದುವರೆಯುತ್ತದೆ. ಅಂತಿಮವಾಗಿ ಇಲ್ಲಿ ಎಲ್ಲಾ ದರ ಏರಿಕೆಯ ಭಾರವನ್ನು ಹೊರ ಬೇಕಾದವರು ಜನಸಾಮಾನ್ಯರು. ಇಂತಹ ಪರಿಸ್ಥಿತಿ ಬರುವುದನ್ನು ಕೇಂದ್ರ ಸರ್ಕಾರ ತಡೆಗಟ್ಟಬಹುದು. ಅದು ತಾನು ಹೇರುತ್ತಿರುವ ಶೇ.30ಕ್ಕಿಂತ ಹೆಚ್ಚಿನ ಸುಂಕದ ಪೈಕಿ ಶೇ.15ರಷ್ಟು ತಗ್ಗಿಸಿದರೂ ಪೆಟ್ರೋಲ್ ಡೀಸೆಲ್ ದರ ಬಹುತೇಕ ತಟಸ್ಥವಾಗಿರುತ್ತದೆ. ಆದರೆ, ಶೀಘ್ರದಲ್ಲಿ ಯಾವುದೇ ಪ್ರಮುಖ ಚುನಾವಣೆ ಇಲ್ಲದಿರುವ ಕಾರಣ ಕೇಂದ್ರ ಸರ್ಕಾರ ಸುಂಕ ಕಡಿತ ಮಾಡುತ್ತದೆಂದು ನಿರೀಕ್ಷಿಸುವಷ್ಟು ಆಶಾವಾದಿಗಳಾರೂ ಇಲ್ಲ. ಅಂದರೆ, ಹೆಚ್ಚಿನ ಹೊರೆ ಹೊರಲು ಬಡಪಾಯಿ ಜನಸಾಮಾನ್ಯರು ಸಿದ್ದರಾಗುವುದೊಂದೆ ಇದಕ್ಕೆ ಪರಿಹಾರ.

