ತಮಿಳು ನಾಡಿನ ವಿಧಾನ ಸಭೆಯು ನ್ಯಾಷನಲ್ ಎಂಟ್ರೆನ್ಸ್ ಕಮ್ ಎಲಿಜಿಬಿಲಿಟಿ ಟೆಸ್ಟ್ (NEET) ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕರಡು ಮಸೂದೆಯನ್ನು ಅನುಮೋದಿಸಿದೆ. ತಮಿಳು ನಾಡಿನಲ್ಲಿ NEETನಿಂದ ಶಾಶ್ವತ ವಿನಾಯಿತಿ ಬಯಸುವ ಈ ಕರಡು ಮಸೂದೆಯ ಕರಾರುಗಳನ್ನು ಇಲ್ಲಿ ವಿವರಿಸಲಾಗಿದೆ.
ತಮಿಳು ನಾಡಿನ ವಿಧಾನಸಭೆ ಸೋಮವಾರದಂದು ನ್ಯಾಷನಲ್ ಎಂಟ್ರೆನ್ಸ್ ಕಮ್ ಎಲಿಜಿಬಿಲಿಟಿ ಟೆಸ್ಟ್ (NEET) ಪರೀಕ್ಷೆಯಿಂದ ವಿನಾಯಿತಿ ಬಯಸುವ ಕರಡು ಮಸೂದೆಯೊಂದನ್ನು ಅನುಮೋದಿಸಿದೆ. 12ನೇ ತರಗತಿಯ ಅಂಕಗಳನ್ನು ಆಧರಿಸಿ ವೈದ್ಯಕೀಯ ಪದವಿಗಳಿಗೆ ದಾಖಲಾತಿ ನಡೆಸುವುದಕ್ಕೆ ಅನುಮತಿ ನೀಡಿ ‘ಸಾಮಾಜಿಕ ನ್ಯಾಯ’ವನ್ನು ಖಾತ್ರಿ ಪಡಿಸುವುದು ಈ ನಡೆಯ ಹಿಂದಿನ ಉದ್ದೇಶವಾಗಿದೆ.
ಮುಖ್ಯಮಂತ್ರಿ ಸ್ಟಾಲಿನ್ ಈ ಕರಡು ಮಸೂದೆಯನ್ನು ಸಭೆಯಲ್ಲಿ ಪ್ರಸ್ತಾಪಿಸಿದಾಗ AIADMK ಮತ್ತು ಅದರ ಮಿತ್ರಪಕ್ಷವಾದ PMK ಒಳಗೊಂಡಂತೆ ಸುಮಾರು ಎಲ್ಲಾ ಪಕ್ಷಗಳೂ ಸಮ್ಮತ ಸೂಚಿಸಿದರು. ಆದರೆ ಬಿಜೆಪಿ ಅದರ ವಿರುದ್ಧ ಪ್ರತಿಭಟಿಸಿ ಸಭೆಯಿಮದ ಹೊರನಡೆಯಿತು.
ನಿವೃತ್ತ ನ್ಯಾಯಾಧೀಶರಾದ ಎ.ಕೆ.ರಾಜನ್ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿಯೊಂದರ ಸಲಹೆಯ ಮೇರೆಗೆ ಸ್ಟಾಲಿನ್ ಅವರು ಈ ಕರಡು ಮಸೂದೆಯನ್ನು ಪ್ರಸ್ತಾಪಿಸಿದರು. ಜುಲೈ ಮಾಸದಲ್ಲಿ ಆ ಸಮಿತಿ ವರದಿ ಸಲ್ಲಿಸಿತ್ತು.
86,000 ವಿವಿಧ ರೀತಿಯ ಪಾಲುದಾರರ ಪ್ರಾತಿನಿಧ್ಯವನ್ನು ಗಣನೆಗೆ ತೆಗೆದುಕೊಂಡು ಈ ವರದಿಯನ್ನು ತಯಾರಿಸಲಾಗಿದೆ ಎಂದು ಮದ್ರಾಸ್ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎ.ಕೆ.ರಾಜನ್ ಅವರು ಹೇಳಿದ್ದಾರೆ. ಅವರಲ್ಲಿ ಬಹುತೇಕರು NEET ಅನವಶ್ಯಕವೆಂಬ ಅಭಿಪ್ರಾಯವನ್ನು ಸೂಚಿಸಿದ್ದಾರೆ.
ತಮಿಳು ನಾಡಿನಲ್ಲಿ ಶಾಶ್ವತ ವಿನಾಯಿತಿಯ ಕರಡುಮಸೂದೆಯ ಕರಾರುಗಳು
- ಹೋಮಿಯೋಪತಿ, ಭಾರತೀಯ ಔಷಧ ಮತ್ತು ದಂತಚಿಕಿತ್ಸಾ ಶಿಕ್ಷಣ ಕ್ಷೇತ್ರಗಳಲ್ಲಿ ಯು.ಜಿ. ಪದವಿ ಪಡೆಯಲು ತಮಿಳು ನಾಡಿನ ವಿದ್ಯಾರ್ಥಿಗಳು NEET ಬರೆಯುವ ಅವಶ್ಯಕತೆ ಇಲ್ಲ.
- ’ಸಾಧಾರಣೀಕರದ ವಿಧಾನ’ಗಳ ಮೂಲಕ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದಂತಹ ಅಂಕಗಳ ಆಧಾರದ ಮೇಲೆ ಇಂತಹ ಪದವಿಗಳಿಗೆ ದಾಖಲಾತಿ ನಡೆಸಲಾಗುತ್ತದೆ.
- ಈ ಕರಡು ಮಸೂದೆಯ ಉದ್ದೇಶ “ಸಾಮಾಜಿಕ ನ್ಯಾಯವನ್ನು, ಸಮಾನತೆಯನ್ನು ಮತ್ತು ಸಮಾನ ಅವಕಾಶಗಳನ್ನು ಖಾತ್ರಿ ಪಡಿಸುತ್ತಾ ಎಲ್ಲಾ ದುರ್ಬಲ ವಿದ್ಯಾರ್ಥಿ ಸಮುದಾಯಗಳನ್ನು ತಾರತಮ್ಯದಿಂದ ರಕ್ಷಿಸುವುದಾಗಿದೆ” ಎಂದು ಸರಕಾರ ಹೇಳಿದೆ.
- ದುರ್ಬಲ ವಿದ್ಯಾರ್ಥಿ ಸಮುದಾಯಗಳನ್ನು ದಂತಚಿಕಿತ್ಸೆ ಮತ್ತು ವೈದ್ಯಕೀಯ ಶಿಕ್ಷಣದ ಮುಖ್ಯವಾಹಿನಿಗೆ ಕರೆತಂದು ರಾಜ್ಯದೆಲ್ಲಡೆ ಒಂದು ಗಟ್ಟಿಯಾದ ಆರೋಗ್ಯಸೇವಾ ವ್ಯವಸ್ಥೆಯನ್ನು ಸ್ಥಾಪಿಸವುದು ಈ ಕರಡು ಮಸೂದೆಯ ಮುಖ್ಯೋದ್ದೇಶವಾಗಿದೆ.
- NEET ಪರೀಕ್ಷೆಯು ಸಮಾಜದ ವೈವಿಧ್ಯ ಪ್ರಾತಿನಿಧ್ಯವನ್ನು ಕಡಿಮೆಯೆಣಿಸಿ ಎಂ.ಬಿ.ಬಿ.ಎಸ್. ಮತ್ತು ಉನ್ನತ ವೈದ್ಯಕೀಯ ಶಿಕ್ಷಣವನ್ನು ಸಮಾಜದ ಉಳ್ಳವರಿಗೆ ಸೀಮಿತಗೊಳಿಸಿ ಉಳ್ಳದೇ ಇರುವವರ ಕನಸುಗಳಿಗೆ ಅಡ್ಡಗಲ್ಲಾಗಿದೆ ಎಂದು NEET ಪರೀಕ್ಷೆಯನ್ನು ಕರಡುಮಸೂದೆ ವಿರೋಧಿಸುತ್ತದೆ.
- ಕರಡು ಮಸೂದೆಯ ಪ್ರಸ್ತಾವನೆಯು NEET ಶ್ರೀಮಂತ ವರ್ಗಗಳ ಪರವಾಗಿದ್ದು ಸಮಾನ ಮತ್ತು ನ್ಯಾಯವಾದ ಪರೀಕ್ಷಾ ವಿಧಾನವಲ್ಲವೆಂದು ಹೇಳುತ್ತದೆ.
- NEET ಕುರಿತು ವಿಸ್ತಾರವಾಗಿ ಅಧ್ಯಯಿಸಿರುವ ಸಮಿತಿಯ ವರದಿಯ ಪ್ರಕಾರ ಈ ವ್ಯವಸ್ಥೆಯನ್ನು ಇನ್ನು ಕೆಲವು ವರ್ಷಗಳ ಕಾಲ ಮುಂದುವರೆಸಿದರೆ, ತಮಿಳು ನಾಡಿನ ಆರೋಗ್ಯ ವಲಯ ತೀವ್ರ ಪರಿಣಾಮಕ್ಕೊಳಗಾಗುತ್ತದೆ. ಗ್ರಾಮೀಣ ಪ್ರದೇಶದ ಮತ್ತು ನಗರಗಳ ಬಡಜನರು ವೈದ್ಯಕೀಯ ಶಿಕ್ಷಣವನ್ನು ಪಡೆಯುವುದು ಅಸಾಧ್ಯವಾಗುವುದಲ್ಲದೆ ಸರಕಾರಿ ಆಸ್ಪತ್ರೆಗಳಲ್ಲಿ ಹಾಗು ಪ್ರಾಥಮಿಕ ಆರೋಗ್ಯಸೇವಾ ಕೇಂದ್ರಗಳಲ್ಲಿ ಅಗತ್ಯವಿದ್ದಷ್ಟು ವೈದ್ಯರು ಇರುವುದಿಲ್ಲ ಎಂದು ಪ್ರಸ್ತಾವನೆ ತಿಳಿಸುತ್ತದೆ.
- ವೈದ್ಯಕೀಯ ಶಿಕ್ಷಣಕ್ಕೆ ದಾಖಲಾತಿ ಪ್ರಕ್ರಿಯೆ ಸಂವಿಧಾನದ 7ನೇ ಶೆಡ್ಯೂಲಿನ 3ನೇ ಪಟ್ಟಿಯ 25ನೇ ಎಂಟ್ರಿಗೆ ಸೇರುತ್ತದೆ. ಹಾಗಾಗಿ ರಾಜ್ಯಗಳ ವಿಧಾನ ಸಭೆಗಳು ಇದರ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
ಈ ನಡೆಯನ್ನು ಕೂಡಲೆ ಪ್ರಚೋದಿಸಿದ್ದೇನು?
ಭಾನುವಾರದಂದು NEET ಪರೀಕ್ಷೆಯನ್ನು ಮೂರನೇ ಬಾರಿ ಪ್ರಯತ್ನಿಸಲು ಮುಂದಾಗಿದ್ದ 19 ವರ್ಷದ ತಮಿಳು ನಾಡಿನ ಗ್ರಾಮೀಣ ಯುವಕನೊಬ್ಬ ಪರೀಕ್ಷೆಗೂ ಮುಂಚೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
ಪ್ರಮುಖ ವಿರೋಧ ಪಕ್ಷವಾಗಿರುವ AIADMK ಆ ಸಾವಿಗೆ DMKಯ ಆಡಳಿತನ್ನು ದೂಷಿಸಿದಾಗ ಮುಖ್ಯಮಂತ್ರಿ ಸ್ಟಾಲಿನ್ ಕೇಂದ್ರ ಸರಕಾರದ ಮೊಂಡುತನವನ್ನು ದೂಷಿಸಿದರು. ಹಾಗೆಯೆ, ಸೆಪ್ಡೆಂಬರ್ 13ರ ಅಧಿವೇಶನದಲ್ಲಿ ಈ ಕುರಿತು ಕರಡು ಮಸೂದೆಯೊಂದನ್ನು ಅನುಮೋದಿಸುವದಾಗಿ ಭರವಸೆ ನೀಡಿದ್ದರು.