EXCLUSIVE : ದಸರಾ ಬಳಿಕ ಶಾಲಾ ಮಕ್ಕಳಿಗೆ ಮತ್ತೆ ಮಧ್ಯಾಹ್ನದ ಬಿಸಿಯೂಟ : ಪ್ರತಿಧ್ವನಿಗೆ ಮಾಹಿತಿ ನೀಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ !
ಕೊರೋನಾ ಕಡಿಮೆಯಾದ ಹಿನ್ನೆಲೆ ಶಾಲೆ ಆರಂಭಗೊಂಡು ದಿನಗಳೇ ಕಳೆದಿದೆ. ಹೀಗೆ ಶಾಲೆ ಆರಂಭವಾದ ಬೆನ್ನಲ್ಲೇ ಮಕ್ಕಳಲ್ಲಿ ಅಪೌಷ್ಟಿಕತೆ ಕೊರತೆ ಇದೆ ಎಂಬ ಚರ್ಚೆಗಳು ಶುರುವಾಗಿತ್ತು. ಇದೀಗ ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಶಿಕ್ಷಣ ಇಲಾಖೆ ಮಕ್ಕಳಿಗೆ ಬಿಸಿಯೂಟ ಕಾರ್ಯಕ್ರಮಕ್ಕೆ ಮತ್ತೆ ಚಾಲನೆ ನೀಡಲು ಮುಂದಾಗಿದೆ. ಈ ಬಗ್ಗೆ ಪ್ರತಿಧ್ವನಿಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಎಕ್ಸ್‌ಕ್ಲೂಸಿವ್ ಆಗಿ ಮಾಹಿತಿ ನೀಡಿದ್ದಾರೆ.
ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಿದ ಹಿನ್ನೆಲೆ ತಜ್ಞರ ಸಲಹೆ ಪಡೆದ ಶಿಕ್ಷಣ ಇಲಾಖೆ !
ಕೊರೋನಾ ವೈರಸ್ ಜನರ ಜೀವ ಮತ್ತು ಜೀವನದ ಜೊತೆಗೆ ಮಕ್ಕಳ ಭವಿಷ್ಯಕ್ಕೂ ಕೊಳ್ಳಿ ಇಟ್ಟಂತೆ ಕಾಡಿತ್ತು. ಕೊರೋನಾ ಕಾರಣದಿಂದ ರಾಜ್ಯದಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆಯ ಸಮಸ್ಯೆ ಎದುರಾಗಿತ್ತು. ವೈರಲ್ ಇನ್ಫೆಕ್ಷನ್ ಜೊತೆ ನಾನಾ ಸಮಸ್ಯೆಗೆ ಮಕ್ಕಳು ಈ ಅವಧಿಯಲ್ಲಿ ತುತ್ತಾಗುತ್ತಿದ್ದಾರೆ. ಹೀಗಾಗಿ ರಾಜ್ಯ ಶಿಕ್ಷಣ ಇಲಾಖೆ ಮಕ್ಕಳಿಗೆ ಮತ್ತೆ ಬಿಸಿಯೂಟ ಆರಂಭಿಸುಲು ಮುಂದಾಗಿದೆ. ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಯ ಆತಂಕದಲ್ಲಿ ಮಕ್ಕಳಿಗೆ ಈಗ ಅಪೌಷ್ಟಿಕತೆ ಸಮಸ್ಯೆ ಎದುರಾಗಿದ್ದು ಮಕ್ಕಳಿಗೆ ವೈರಲ್ ಇನ್ಫೆಕ್ಷನ್ ಸೇರಿದಂತೆ ನಾನಾ ಖಾಯಿಲೆಗಳು ಹಾವಳಿ ಹೆಚ್ಚಾಗಿದೆ. ಸದ್ಯ ಪೌಷ್ಟಿಕತೆ ಸುಳಿಯಲ್ಲಿ ರಾಜ್ಯದ 4 ಲಕ್ಷ ಮಕ್ಕಳು ಇದ್ದು, ಅಪೌಷ್ಟಿಕ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಆಗಿರುವ ಬಗ್ಗೆಯೂ ತಜ್ಷರು ಕಳವಳ ವ್ಯಕ್ತಪಡಿಸಿದ್ದರು.
ಹೀಗಾಗಿ ಮಕ್ಕಳಿಗೆ, ಪೌಷ್ಟಿಕಾಂಶಯುಕ್ತ ಆಹಾರ ನೀಡಲು ಪ್ರಾಮುಖ್ಯತೆ ಕೊಡಬೇಕು ಅಂತಾ ತಜ್ಞರ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿತ್ತು. ಇದನ್ನ ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಮಕ್ಕಳಿಗೆ ಮತ್ತೆ ಮದ್ಯಾಹ್ನದ ಬಿಸಿ ಊಟ ನೀಡಲು ಮುಂದಾಗಿದೆ.
ಕೊರೊನಾ ಕಾಟಕ್ಕೆ ಕಳೆದ ಎರಡು ವರ್ಷದಿಂದ ಬಿಸಿಯೂಟ ನಿಲ್ಲಿಸಲಾಗಿತ್ತು. ಬಿಸಿಯೂಟದಿಂದ ಮಕ್ಕಳಿಗೆ ಸಿಗುತ್ತಿದ್ದ ಪೌಷ್ಟಿಕತೆಗೆ ಹೊಡೆತ ಬೀದಿತ್ತು. ಬಿಸಿಯೂಟದ ಬದಲಿಗೆ ಮಕ್ಕಳ ಮನೆಗೆ ಆಹಾರ ಧಾನ್ಯ ತಲುಪಿಸುವ ಯೋಜನೆ ಸರ್ಕಾರ ರೂಪಿಸಿತ್ತಾದರೂ, ಅದು ಯಶಸ್ವಿಯಾಗಲಿಲ್ಲ.
ಮಕ್ಕಳ ಮನೆಗೆ ಆಹಾರ ಧಾನ್ಯ ವಿತರಣೆ ಸಮರ್ಪಕವಾಗಿ ಆಗುತ್ತಿರಲಿಲ್ಲ. ಇದರಿಂದಾಗಿ ಲಕ್ಷಾಂತರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ತಜ್ಞರ ಸಲಹೆ ಬೆನ್ನಲ್ಲೇ ಶಿಕ್ಷಣ ಇಲಾಖೆ ಮತ್ತೆ ರಾಜ್ಯದಲ್ಲಿ ಮಕ್ಕಳಿಗೆ ಬಿಸಿಯೂಟ ನೀಡಲು ಮುಂದಾಗಿದೆ. ಈಗಾಗಲೇ ಎಲ್ಲಾ ಬಿಇಒ ಹಾಗು ಜಿಲ್ಲಾ ನಿರ್ದೇಶಕರಿಗೆ ಬಿಸಿಯೂಟ ಕಾರ್ಯಕ್ರಮದ ಮರು ಆರಂಭಕ್ಕೆ ಬೇಕಾದ ಸಿದ್ಧತೆಗೆ ಸೂಚಿಸಿದ್ದು ದಸರಾ ರಜೆಯ ಬಳಿಕ ಬಿಸಿಯೂಟ ಆರಂಭಿಸಲಾಗುವುದು ಅಂತ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪ್ರತಿಧ್ವನಿಗೆ ಮಾಹಿತಿ ನೀಡಿದ್ದಾರೆ.
ಶಿಕ್ಷಣ ಇಲಾಖೆಗೆ ತಜ್ಞರ ಸಲಹೆ ಏನು ?
- ಅಪೌಷ್ಟಿಕ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿದೆ
- ಅಪೌಷ್ಟಿಕತೆ ಎದುರಿಸುತ್ತಿರುವ ಮಕ್ಕಳಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿ ಇರಲಿದೆ
- ಕೊರೊನಾ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತದೆ
- ಅಪೌಷ್ಟಿಕ ಮಕ್ಕಳಲ್ಲಿ ನ್ಯುಮೋನಿಯಾ ವೈರಲ್ ಇನ್ಫೆಕ್ಷನ್ ಸೇರಿದಂತೆ ವಿವಿಧ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ
- ಹೀಗಾಗಿ ಮಕ್ಕಳಿಗೆ ಪೌಷ್ಠಿಕತೆಯ ಆಹಾರ ಅವಶ್ಯಕತೆ ಇದೆ
- ಸಾಧ್ಯವಾದಷ್ಟು ಬೇಗಾ ಬಿಸಿಯೂಟ ರಾಜ್ಯದಲ್ಲಿ ಆರಂಭಿಸಲು ಸಲಹೆ
ಕೊರೋನಾ ಎರಡನೇ ಅಲೆ ತಗ್ಗಿರುವ ನಡುವೆಯೇ ಮಕ್ಕಳಲ್ಲಿ ವೈರಲ್ ಇನ್ಫೆಕ್ಷನ್ ಹಾವಳಿ ಹೆಚ್ಚಾಗಿತ್ತು. ಲಕ್ಷಾಂತರ ಮಕ್ಕಳಲ್ಲಿ ಅಪೌಷ್ಠಿಕತೆ ಎದುರಾಗಿತ್ತು. ಹೀಗಾಗಿ ತಜ್ಞರು ಶಿಕ್ಷಣ ಇಲಾಖೆಗೆ ಸಲಹೆ ನೀಡಿದ್ದು, ಕಳೆದ ಎರಡು ವರ್ಷದಿಂದ ನಿಲ್ಲಿಸಲಾಗಿದ್ದ ಬಿಸಿಯೂಟ ದಾಸೋಹವನ್ನ ಇಲಾಖೆ ಮತ್ತೆ ಆರಂಭಿಸಲು ಮುಂದಾಗಿದೆ. ಹೀಗೆ ಮಕ್ಕಳ ಹಿತ ದೃಷ್ಟಿಯಿಂದ ಮತ್ತೆ ಬಿಸಿಯೂಟ ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವರು ಚಾಲನೆ ನೀಡುತ್ತಿದ್ದಾರೆ. ದಸರಾ ಮುಗಿದ ಬೆನ್ನಲ್ಲೇ ಶಾಲಾ ಮಕ್ಕಳಿಗೆ ಮತ್ತೆ ಶಾಲೆಯಲ್ಲಿ ಬಿಸಿಯೂಟ ಸಿಗಲಿದೆ. ಇದರ ಜೊತೆಗೆ ಮೊಟ್ಟೆ, ಹಾಲು ಸೇರಿದಂತೆ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ಆಹಾರಗಳು ನೀಡಲಿದೆ ಶಿಕ್ಷಣ ಇಲಾಖೆ.