ಕೋಲಾರ ವಿಧಾನಸಭಾ ಕ್ಷೇತ್ರದಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ. ಇದ್ರ ನಡುವೆ ಇಂದು ಕೋಲಾರಕ್ಕೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಭೇಟಿ ನೀಡಿದ್ರು. ಕಾಂಗ್ರೆಸ್ ಕಾರ್ಯಕರ್ತರರಿಂದ ಅದ್ಧೂರಿ ಸ್ವಾಗತ ಸ್ವೀಕರಿಸಿ ಯತೀಂದ್ರ ಸಿದ್ದರಾಮಯ್ಯ, ಕೋಲಾರಮ್ಮ ದೇಗುಲದಲ್ಲಿ ತಂದೆ ತಾಯಿ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. ಆ ಬಳಿಕ ಕೋಲಾರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆಗೆ ತಯಾರಿ ಹಿನ್ನೆಲೆ, ಸಿದ್ದರಾಮಯ್ಯ ಉಳಿದುಕೊಳ್ಳುವ ಮನೆ ವೀಕ್ಷಣೆ ಮಾಡಿದ್ರು. ರಾಷ್ಟ್ರಿಯ ಹೆದ್ದಾರಿ 75 ರ ಪಕ್ಕದಲ್ಲೇ ಇರುವ ಬಸವನತ್ತ ಬಳಿ ಶಂಕರ್ ಎಂಬುವವರ ತೋಟದ ಮನೆ ವೀಕ್ಷಣೆ ಮಾಡಿದ ಯತೀಂದ್ರ ಸಿದ್ದರಾಮಯ್ಯ, ವಾಸ್ತು ತಜ್ಞರ ಜೊತೆಗೆ ಚರ್ಚೆ ನಡೆಸಿ, ವಾಸ್ತು ಸರಿ ಇರುವುದನ್ನು ಖಚಿತಪಡಿಸಿಕೊಂಡ್ರು. ಪೂರ್ವ ದಿಕ್ಕಿನ ಬಾಗಿಲು ಇರುವ ಮನೆ ನೋಡಿದ್ದು, ಸಿದ್ದರಾಮಯ್ಯ ಅಂತಿಮ ಮಾಡಲಿದ್ದಾರೆ. ನಮಗೆ ವಾಸ್ತು ಮೇಲೆ ನಂಬಿಕೆ ಇಲ್ಲ, ಆದರೂ ಕೇಳಿದ್ದೇವೆ ಎಂದಿದ್ದಾರೆ.
ಸಿದ್ದರಾಮಯ್ಯ ಸೋಲಿಸಲು ಆಣೆ ಪ್ರಮಾಣದ ಮೊರೆ..!!
ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಯಿಂದ ಅಖಾಡ ರಂಗೇರಿದ್ದು, ಕೋಲಾರ ಉಸ್ತುವಾರಿ ಸಚಿವ ಮುನಿರತ್ನರಿಂದ ಆಣೆ ಪ್ರಮಾಣ ಪಾಲಿಟಿಕ್ಸ್ ಮೊರೆ ಹೋಗಿದ್ದಾರೆ. ಟಿಕೆಟ್ ಕೈ ತಪ್ಪಿದ್ರು BJP ಪಕ್ಷ ಬಿಟ್ಟೋಗಲ್ಲ, ಎಂದು ಆಣೆ ಪ್ರಮಾಣ ಮಾಡಿಸಿದ್ದಾರೆ ಸಚಿವ ಮುನಿರತ್ನ. ಕೋಲಾರ ಹೊರವಲಯದ ಖಾಸಗಿ ರೆಸಾರ್ಟ್‌ನಲ್ಲಿ ಆಣೆ ಪ್ರಮಾಣ ಮಾಡಿಸಿದ್ದರು. ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ ಹೆಚ್ಚಾಗಿದ್ದು, ಮಾಜಿ ಶಾಸಕರಾದ ಎಂ ನಾರಾಯಣಸ್ವಾಮಿ, ವೆಂಕಟಮುನಿಯಪ್ಪ ಹಾಗು ಬಿ.ವಿ ಮಹೇಶ್, ವಿ ಶೇಷು, ಅಮರೇಶ್ ಸೇರಿದಂತೆ 6 ಮಂದಿ ಆಕಾಂಕ್ಷಿಗಳಿದ್ದು, ಎಂ ನಾರಾಯಣಸ್ವಾಮಿಗೆ ಟಿಕೆಟ್ ಕೈ ತಪ್ಪಿದ್ರೆ ಜೆಡಿಎಸ್ ಪಕ್ಷಕ್ಕೆ ಸೇರುವ ಸಾಧ್ಯತೆ ಇದೆ. ಕಳೆದ 2018ರಲ್ಲೂ ಇದೇ ರೀತಿ ಟಿಕೆಟ್ ಸಿಗದಿದ್ದಾಗ ಜೆಡಿಎಸ್ ಸೇರಿದ್ದರು. ಪಕ್ಷಾಂತರ ಭೀತಿ ಹಿನ್ನಲೆಯಲ್ಲಿ ಏನೇ ಬೆಳವಣಿಗೆ ಆದರು, ಕೋಲಾರಮ್ಮ ದೇವಿ ಆಣೆ ಪಕ್ಷಕ್ಕೆ ದ್ರೋಹ ಮಾಡಲ್ಲ ಎಂದು ಆಣೆ ಮಾಡಿಸಿದ್ದಾರೆ ಮುನಿರತ್ನ
ಬಿಜೆಪಿ ನಾಯಕರಿಗೆ ಸಡ್ಡು ಹೊಡೆದ ಜೆಡಿಎಸ್ ಪಕ್ಷ..!
ಕೋಲಾರದಲ್ಲಿ ಸಚಿವ ಮುನಿರತ್ನ ಆಣೆ ಪ್ರಮಾಣ ಪಾಲಿಟಿಕ್ಸ್ ಮಾಡಿಸಿದ ಬೆನ್ನಲ್ಲೇ ಜೆಡಿಎಸ್ ಕಾರ್ಯಕರ್ತರೂ ಆಣೆ ಪ್ರಮಾಣ ಪ್ರಮಾಣ ಮಾಡಿದ್ದಾರೆ. ಕೋಲಾರ ನಗರದ ನರಸಿಂಹ ಸ್ವಾಮಿ ದೇಗುಲದಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ದು, ಜಿಲ್ಲೆಯ ಅಭಿವೃದ್ಧಿ ಮಾಡದವರಿಗೆ ಮತ ಹಾಕುವುದಿಲ್ಲ, ಮುಂಬೈಗೆ ಹೋದವರಿಗೆ, ಕ್ಷೇತ್ರದ ಹೊರಗಿನವರಿಗೆ ಮತ ಕೊಡುವುದಿಲ್ಲ. ಪಕ್ಷಾಂತರಿಗಳಿಗೆ, ಹಣಕ್ಕಾಗಿ ಮಾರಿಕೊಂಡವರಿಗೆ ಓಟು ಹಾಕುವುದಿಲ್ಲ. ಬಿಜೆಪಿ ವೇದಿಕೆಗಳಿಗೆ ಸೀಮಿತವಾದ ಸಚಿವರ ಪಕ್ಷಕ್ಕೂ ಮತ ಕೊಡುವುದಿಲ್ಲ ಎನ್ನುವ ಮೂಲಕ ಬಿಜೆಪಿ ಹಾಗು ಕಾಂಗ್ರೆಸ್ ಪಕ್ಷಕ್ಕೆ ಕೌಂಟರ್ ಕೊಡುವ ಕೆಲಸ ಮಾಡಲಾಗಿದೆ. ಮುನಿರತ್ನ ಕಾಂಗ್ರೆಸ್‌ನಲ್ಲಿ ಗೆದ್ದ ಬಳಿಕ ಆಪರೇಷನ್ ಕಮಲದಲ್ಲಿ ಬಾಂಬೆಗೆ ಹೋಗಿದ್ರೆ ಇತ್ತ ಸಿದ್ದರಾಮಯ್ಯ ಹೊರಗಿನಿಂದ ಬಂದು ಕ್ಷೇತ್ರದಲ್ಲಿ ಮತ ಕೇಳ್ತಿದ್ದಾರೆ.

ತನ್ನ ಗಂಡ ಶಾಸಕನಾಗಲಿ ಎಂದು ದೇವರಿಗೆ ಪತ್ರ ಸಂದೇಶ..!
ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಬಿಜೆಪಿ ಟಿಕೆಟ್ ಆಕಾಂಕ್ಷಿ ಹೂಡಿ ವಿಜಯ್ ಕುಮಾರ್ ಪರವಾಗಿ ಪತ್ನಿ ಈ ರೀತಿಯ ಕೋರಿಕೆ ಸಲ್ಲಿಸಿದ್ದಾರೆ. ಮಾಲೂರಿನ ಅಧಿದೇವತೆ ಮಾರಿಕಾಂಬ ದೇಗುಲದಲ್ಲಿ ಪತ್ರ ಬರೆದು ಹುಂಡಿಗೆ ಹಾಕಿದ್ದಾರೆ ಹೂಡಿ ವಿಜಯ್ ಕುಮಾರ್ ಪತ್ನಿ ಶ್ವೇತಾ ವಿಜಯ್ ಕುಮಾರ್. ಬಳಿಕ ಕುಡಿಯನೂರು ಸೋಮೇಶ್ವರ ಜಾತ್ರೆಯಲ್ಲಿ ಬಾಳೆಹಣ್ಣಿನ ಮೇಲೆ ಪತಿ ಹೆಸರು ಬರೆದು ಕೋರಿಕೆ ಸಲ್ಲಿಕೆ ಮಾಡಿದ್ದಾರೆ. ಪತಿ ಹೂಡಿ ವಿಜಯ್ ಕುಮಾರ್ ಶಾಸಕರಾಗಿ ಆಯ್ಕೆಯಾಗಿ, ತಾಲೂಕಿನ ಜನರ ಸೇವೆ ಮಾಡಲೆಂದು ಕೋರಿಕೆ ಸಲ್ಲಿಕೆ ಮಾಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸಿದ್ದರಾಮಯ್ಯ ಸಮಾಜವಾದಿ ನಾಯಕ ಎನಿಸಿಕೊಂಡರೂ ವಾಸ್ತು ನೋಡುವುದನ್ನು ಬಿಡಲಿಲ್ಲ. ಇನ್ನು ಬಿಜೆಪಿ ದೇವರ ಮೇಲೆ ಆಣೆ ಪ್ರಮಾಣ ಮಾಡಿದೆ. ಜೆಡಿಎಸ್ ಕೂಡ ಪ್ರಮಾಣಕ್ಕೆ ಕೌಂಟರ್ ಪ್ರಮಾಣ ಮಾಡಿದೆ. ಇನ್ನು ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ ಪತ್ನಿ ದೇವರಿಗೇ ಪತ್ರ ಬರೆದು ಕೋರಿಕೆ ಸಲ್ಲಿಸಿದ್ದಾರೆ. ಇದನ್ನೆಲ್ಲಾ ನೋಡಿದಾಗ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಸಾರ್ವಭೌಮ ಎನಿಸಿಕೊಳ್ಳುತ್ತಾನೆ. ಆದರೆ ಎಲ್ಲವನ್ನೂ ದೇವರ ಮುಂದೆ ನಿರ್ಧಾರ ಮಾಡುವುದಾದರೆ ಚುನಾವಣೆ ಅವಶ್ಯತೆ ಇದೆಯಾ..? ಎನಿಸುತ್ತದೆ.









