ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಬಿ-ಜಿ ರಾಮ್ ಜಿ ಕಾಯ್ದೆ ಅನುಷ್ಠಾನ ತಡೆ ಹಿಡಿಯುವ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದ ಅಂಶಗಳು:

• ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಆಜೀವಿಕಾ ಮಿಶನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಕಾಯ್ದೆಯು, ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ. ಮೂಲ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಜನರ ಉದ್ಯೋಗದ ಬೇಡಿಕೆ ಮತ್ತು ಹಕ್ಕು ಆಧಾರಿತವಾಗಿತ್ತು.
• ಹೊಸ ಕಾಯ್ದೆಯು ಉದ್ಯೋಗದ ದಿನಗಳನ್ನು 100 ರಿಂದ 125 ಕ್ಕೆ ಏರಿಸಿದರೂ, ಯೋಜನೆ ಅನುಷ್ಠಾನದಲ್ಲಿ ಕೇಂದ್ರದ ನಿಗದಿತ ಅನುದಾನದ ಖಾತ್ರಿಯಿರುವುದಿಲ್ಲ. ಕೇಂದ್ರ ಸರ್ಕಾರದ ಹಣಕಾಸು ಹೊಣೆಗಾರಿಕೆಯನ್ನು ಪ್ರತಿ ರಾಜ್ಯದ “ಅಧಿಸೂಚಿತ” ಪ್ರದೇಶಕ್ಕೆ “ಮಾನದಂಡ ಹಂಚಿಕೆ” ಗೆ ಸೀಮಿತಗೊಳಿಸಲಾಗಿದೆ. ಇದರಲ್ಲಿ ಕೇಂದ್ರವು 60% ಮಾತ್ರ ನೀಡುತ್ತದೆ (ಬಹುತೇಕ ರಾಜ್ಯಗಳಲ್ಲಿ). ಇದರಿಂದಾಗಿ, 125 ದಿನಗಳ ಕಾಯ್ದೆಬದ್ಧ ಭರವಸೆ ಪೂರ್ಣವಾಗಿರದೆ, ಕೇಂದ್ರವು ನಿಗದಿ ಮಾಡುವ ಹಣಕಾಸು ಮಿತಿಗೆ ಒಳಪಟ್ಟಿರುತ್ತದೆ. ಇದರಿಂದ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ನಿಜವಾದ ಬೇಡಿಕೆ ಇದ್ದರೂ ಹಣದ ಅಭಾವ ಉಂಟಾಗಬಹುದು.

• ಹೊಸ ಕಾಯ್ದೆಯ ಪ್ರಕಾರ ಕೇಂದ್ರ ಸರ್ಕಾರವು “ವಸ್ತುನಿಷ್ಠ ನಿಯತಾಂಕಗಳ” ಆಧಾರದ ಮೇಲೆ ರಾಜ್ಯವಾರು ಮಾನದಂಡ ಹಂಚಿಕೆ ನಿಗದಿ ಮಾಡುತ್ತದೆ. ಈ ನಿಯತಾಂಕಗಳು ಕಾಯ್ದೆಯಲ್ಲಿ ಸೇರಿರದೆ, ಯಾವುದೇ ಸಮಯದಲ್ಲಿ ಬದಲಾಯಿಸಬಹುದು
• ಇದರಿಂದಾಗಿ ಬೇಡಿಕೆ-ಚಾಲಿತ ವ್ಯವಸ್ಥೆಯು, ಸರಬರಾಜು-ಚಾಲಿತ, ಮೇಲಿನಿಂದ-ಕೆಳಗಿನ ವ್ಯವಸ್ಥೆಯಾಗಿ ಮಾರ್ಪಡುವ ಅಪಾಯವಿದೆ. ಇದು ಮೂಲ ಕಾಯ್ದೆಯಲ್ಲಿರುವ ಸಹಭಾಗಿತ್ವದ ವಿಧಾನಕ್ಕೆ (ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಮಿಕ ಬಜೆಟ್, ಗ್ರಾಮಗಳ ಬೇಡಿಕೆಗೆ ಅನುಗುಣವಾದ ಹಂಚಿಕೆ) ವಿರುದ್ಧವಾಗಿದೆ.
• ಹೊಸ ಕಾಯ್ದೆಯಲ್ಲಿನ ಹಣಕಾಸು ಹಂಚಿಕೆಯೂ ಸಹ ಕಳವಳಕಾರಿಯಾಗಿದೆ. ಮೂಲ ಕಾಯ್ದೆಯ ಚೌಕಟ್ಟಿನಲ್ಲಿ ಹೆಚ್ಚಿನ ರಾಜ್ಯಗಳಲ್ಲಿ 90:10 (ಕೇಂದ್ರ-ರಾಜ್ಯ) ಹಂಚಿಕೆ ಇದೆ. ಹೊಸ ಕಾಯ್ದೆಯು ಇದನ್ನು 60:40 ಗೆ ಬದಲಾಯಿಸಿ, ಕಾನೂನುಬದ್ಧ ಭರವಸೆಯನ್ನು ಸಾಮಾನ್ಯ ಯೋಜನೆಯಾಗಿ ಮಾರ್ಪಡಿಸುತ್ತದೆ. ಇದು ರಾಜ್ಯ ಹಣಕಾಸಿನ ಮೇಲೆ ಹೆಚ್ಚುವರಿ ಹೊರೆಯನ್ನು ಹೇರುತ್ತದೆ. ರಾಜ್ಯ ಸರ್ಕಾರಗಳೊಂದಿಗೆ ಅರ್ಥಪೂರ್ಣ ಸಮಾಲೋಚನೆ ಇಲ್ಲದೆ ಈ ಬದಲಾವಣೆ ಮಾಡಲಾಗಿದೆ.

• ಹೊಸ ಕಾಯ್ದೆಯು ರಾಜ್ಯವು ತನ್ನ ಮಾನದಂಡ ಹಂಚಿಕೆಯನ್ನು ಮೀರಿ ಖರ್ಚು ಮಾಡಿದಲ್ಲಿ, ಆ ಖರ್ಚನ್ನು ಕೇಂದ್ರ ನಿಗದಿ ಮಾಡುವ ವಿಧಾನದ ಪ್ರಕಾರ ರಾಜ್ಯ ಸರ್ಕಾರವೇ ಭರಿಸಬೇಕು ಎಂದು ಹೇಳುತ್ತದೆ. ಇದರಿಂದ ಕೇಂದ್ರ ನಿಗದಿ ಮಿತಿಗಿಂತ ಹೆಚ್ಚಿನ ಬೇಡಿಕೆಗಳ ಅನುಷ್ಠಾನಕ್ಕೆ ರಾಜ್ಯಗಳು ಶೇ.100ರಷ್ಟು ಹೊಣೆಗಾರಿಕೆ ಹೊರಬೇಕಾಗುತ್ತದೆ.
• ಕಾಯ್ದೆಯು ರಾಜ್ಯಗಳು ಬಿತ್ತನೆ ಮತ್ತು ಬೆಳೆ ಕಟಾವಿನ ಅವಧಿಯ 60 ದಿನಗಳನ್ನು ಮುಂಚಿತವಾಗಿ ಅಧಿಸೂಚಿಸುವಂತೆ ನಿರ್ದೇಶಿಸುತ್ತದೆ. ಈ ಅವಧಿಯಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಾಗಿರಬಹುದಾದರೂ, ಇದು ಕೃಷಿ ಕಾರ್ಮಿಕರ, ಆದಿವಾಸಿ, ದುರ್ಬಲ ಸಮುದಾಯಗಳ ಮಜೂರಿ ಕೂಲಿಯ ಹಕ್ಕನ್ನು ಕಸಿಯುವ ಸಾಧ್ಯತೆಯಿದೆ. ಇದರಿಂದ ಜೀವನೋಪಾಯಕ್ಕಾಗಿ ಒತ್ತಡದಿಂದ ಕಡಿಮೆ ಕೂಲಿ ಕೆಲಸ ಮಾಡುವ ಆ ಮೂಲಕ ನಗರಗಳಿಗೆ ವಲಸೆ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ.
• ಹೊಸ ಕಾಯ್ದೆ ಮೂಲ ಉದ್ಯೋಗ ಖಾತ್ರಿ ಯೋಜನೆಯ ಆಶಯಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಹೊಸ ಕಾಯ್ದೆ “ಕೆಲಸದ ಹಕ್ಕು” ನಿಂದ “ಅನುಮತಿ ಇದ್ದರೆ ಮಾತ್ರ ಕೆಲಸ” ಕ್ಕೆ, “ಗ್ರಾಮೀಣ ಪ್ರದೇಶಗಳಾದ್ಯಂತ ಕೆಲಸ”ದಿಂದ “ಅನುಮತಿ ಇರುವೆಡೆ ಮಾತ್ರ ಕೆಲಸ” ಕ್ಕೆ, ಮತ್ತು “ವರ್ಷದಾದ್ಯಂತ ಕೆಲಸ” ನಿಂದ “ಕೃಷಿ ಚಟುವಟಿಕೆ ಋತುವಿನಲ್ಲಿ ಕೆಲಸವಿಲ್ಲ” ಎಂಬ ನಿಯಮಾವಳಿಯನ್ನು ಸೃಷ್ಟಿಸಿದೆ. ಇದು ಗ್ರಾಮೀಣ ಭಾಗದಲ್ಲಿ ಸಂಪನ್ಮೂಲ ಸೃಷ್ಟಿಯ ಆಶಯವನ್ನು ಗುತ್ತಿಗೆದಾರರ ಕೇಂದ್ರಿತ ಮಾದರಿಗೆ ದಾರಿ ಮಾಡಿಕೊಡುವ ಅಪಾಯವಿದೆ.
• ಹೊಸ ಕಾಯ್ದೆಯಲ್ಲಿ ಹೆಚ್ಚಿನ ತಾಂತ್ರಿಕ ಹಸ್ತಕ್ಷೇಪಕ್ಕೆ ಅವಕಾಶವಿದ್ದು, ಇದರಿಂದ ಬಡತನ ರೇಖೆಗಿಂತ ಕೆಳಗಿರುವ ಮತ್ತು ಡಿಜಿಟಲ್ ಸೌಲಭ್ಯವಿಲ್ಲದ ಗ್ರಾಮೀಣ ನಾಗರಿಕರನ್ನು, ವಿಶೇಷವಾಗಿ ದಲಿತ ಮತ್ತು ಆದಿವಾಸಿ ಸಮುದಾಯಗಳನ್ನು ಯೋಜನೆಯಿಂದ ದೂರ ಮಾಡಬಹುದು.
• ವಿಬಿ-ಜಿ ರಾಮ್ ಜಿ ಕಾಯ್ದೆಯ ಜಾರಿಯು ಸಂವಿಧಾನದ 258 ಮತ್ತು 280ನೇ ವಿಧಿಗಳನ್ನು ಉಲ್ಲಂಘಿಸುತ್ತದೆ. ಸಂವಿಧಾನದ ಈ ವಿಧಿಗಳು ಕೇಂದ್ರ ಪ್ರಾಯೋಜಿತ ಯೋಜನೆಗಳಡಿ ಹಣಕಾಸು ಚೌಕಟ್ಟು ವಿಧಿಸುವ ಮುನ್ನ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ, ಹಣಕಾಸು ಒಕ್ಕೂಟ, ಮತ್ತು ಸ್ಥಳೀಯ ಆಡಳಿತ ಬಲಗೊಳಿಸುವಿಕೆಗೆ ಮಹತ್ವ ನೀಡುತ್ತದೆ. ಆದರೆ ಕೇಂದ್ರ ಸರ್ಕಾರದ ಧೋರಣೆ ಸಹಕಾರಿ ಒಕ್ಕೂಟದ ಅಡಿಪಾಯಕ್ಕೆ ಅಪಾಯಕಾರಿಯಾಗಿದೆ.

• ಉದ್ಯೋಗ ಭರವಸೆ ಕಾನೂನು ಕೇವಲ ಒಂದು ಕಲ್ಯಾಣ ಕ್ರಮವಲ್ಲ; ಇದೊಂದು ಐತಿಹಾಸಿಕ, ವಿಶ್ವಮಾನ್ಯತೆ ಪಡೆದ, ಹಕ್ಕು-ಆಧಾರಿತ ಶಾಸನವಾಗಿದೆ. ಇದು ಗ್ರಾಮ ಸ್ವರಾಜ್ ಮತ್ತು ಅಂತ್ಯೋದಯದ ಪ್ರತೀಕವಾದ ಮಹಾತ್ಮಾ ಗಾಂಧೀಜಿಯ ಹೆಸರನ್ನು ಹೊಂದಿರುವುದು ಅರ್ಥಪೂರ್ಣವಾಗಿದೆ. ಆದರೆ ಪ್ರಸ್ತುತ ಕಾನೂನಿನಲ್ಲಿ ಮಹಾತ್ಮಾ ಗಾಂಧಿ ಅವರ ಹೆಸರನ್ನು ತೆಗೆದುಹಾಕಿರುವುದು ದುರದೃಷ್ಟಕರ ಸಂದೇಶ ನೀಡುತ್ತಿದ್ದು, ಹೊಸ ಕಾಯ್ದೆಯ ನೈತಿಕ ಅಧಿಕಾರವನ್ನು ದುರ್ಬಲಗೊಳಿಸಿದೆ.
• ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ವಿಬಿ-ಜಿ ರಾಮ್ ಜಿ ಕಾಯ್ದೆಯ ಅನುಷ್ಠಾನವನ್ನು ತಡೆಹಿಡಿಯಲು, ಜೀವನೋಪಾಯದ ಹಕ್ಕನ್ನು ಬಲಪಡಿಸಲು ಮತ್ತು ಸಂವಿಧಾನಬದ್ಧವಾಗಿ ರಾಜ್ಯ ಸರ್ಕಾರಗಳೊಂದಿಗಿನ ಸಮಾಲೋಚನೆಗಳನ್ನು ನಡೆಸುವ ನಿಟ್ಟಿನಲ್ಲಿ ತಾವು ವೈಯಕ್ತಿಕವಾಗಿ ಮುಂದಾಗಬೇಕು ಎಂದು ಮುಖ್ಯಮಂತ್ರಿ ಅವರು ಪತ್ರದಲ್ಲಿ ಕೋರಿದ್ದಾರೆ.










