‘ಪ್ರಧಾನಮಂತ್ರಿಗಳು ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಮಾಡುತ್ತಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಸಂತೋಷ. ಆದರೆ ಈ ಸಂದರ್ಭದಲ್ಲಿ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳ ಬಯಸುತ್ತೇನೆ.
ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಅಂದರೆ 2018 ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಭಾಷಣ ಮಾಡುತ್ತಾ ಕಾಂಗ್ರೆಸ್ ಸರ್ಕಾರ 10 % ಕಮಿಷನ್ ಸರ್ಕಾರ, ಸೀದಾರಮಯ್ಯ ಸರ್ಕಾರ ಎಂದು ಆಧಾರರಹಿತ ಆರೋಪ ಮಾಡಿದ್ದರು. ಆಗ ಸಿದ್ದರಾಮಯ್ಯ ಅರ ವಿರುದ್ಧವಾಗಲಿ, ಸಂಪುಟ ಸಚಿವರ ವಿರುದ್ಧ ಯಾವುದೇ ಆರೋಪ ಹಾಗೂ ದೂರು ದಾಖಲಾಗಿರಲಿಲ್ಲ. ಆದರೂ ರಾಜಕೀಯ ಕಾರಣಗಳಿಗೆ ಕಾಂಗ್ರೆಸ್ ಸರ್ಕಾರವನ್ನು 10% ಸರ್ಕಾರ ಎಂದಿದ್ದರು. ಆದರೆ, ಈಗ ರಾಜ್ಯದಲ್ಲಿರುವ ನಿಮ್ಮ ಸರ್ಕಾರ 40 % ಸರ್ಕಾರ ಎಂದು ವಿಶ್ವವಿಖ್ಯಾತಿ ಪಡೆದಿದ್ದು, ಈ ಅಮೋಘ ಸಾಧನೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ಪ್ರಶ್ನಿಸಿದ್ದಾರೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಒಂದು ವರ್ಷದ ಹಿಂದೆ ನೇರವಾಗಿ ನಿಮಗೆ ಪತ್ರ ಬರೆಯುತ್ತಾರೆ. ಇನ್ನು ಆತ್ಮಹತ್ಯೆಗೂ ಮುನ್ನ ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ 40 % ಕಮಿಷನ್ ಕಿರುಕುಳ ಕುರಿತು ನಿಮ್ಮನ್ನು ಭೇಟಿ ಮಾಡಲು ಪ್ರಯತ್ನಿಸಿ ಸಾಧ್ಯವಾಗದೇ ಪತ್ರ ಬರೆದರೂ ಈ ಭ್ರಷ್ಟಾಚಾರಗಳ ನೀವು ಮೌನಿ ಬಾಬಾ ಆಗಿದ್ದು ಯಾಕೆ?
ಪಿಎಸ್ಐ, ಸಹಾಯಕ ಪ್ರಾಧ್ಯಪಕರು, ಅರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ನೇಮಕಾತಿಯಲ್ಲಿ ಅಕ್ರಮ ತಾಂಡವವಾಡುತ್ತಿದೆ. ಆದರೂ ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆಗಳಿಂದ ತನಿಖೆ ಯಾಕಿಲ್ಲ? ನಿಮಗೆ ನಿಮ್ಮ ಸಚಿವರ ಭ್ರಷ್ಟಾಚಾರ ಕಾಣಿಸುತ್ತಿಲ್ಲವೇ? ಭ್ರಷ್ಟಾಚಾರ ವಿರುದ್ಧದ ಹೋರಾಟ ಎಂದರೆ, ಕಾಂಗ್ರೆಸ್ ನಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದು ಮಾತ್ರವೇ?

2022 ರ ವೇಳೆಗೆ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ನೀವು ಹೇಳಿದ್ದ ಮಾತು ನೆನಪಿದೆಯೇ? ರೈತರ ಆದಾಯದ ಬದಲು 700 ರೂ. ಇದ್ದ ರಸಗೊಬ್ಬರ 2 ಸಾವಿರ ಮುಟ್ಟಿದೆ, ಯಂತ್ರೋಪರಣಗಳ ಬಳಕೆ ವೆಚ್ಚ ಡಬಲ್ ಆಗಿರುವುದರ ಬಗ್ಗೆ ಏನು ಹೇಳುತ್ತೀರಿ ಮೋದಿಯವರೇ? ಇವರು ಕೊಡುವ ಸಬ್ಸಿಡಿ ರಸಗೊಬ್ಬರಕ್ಕೆ ಸಾಲುವುದಿಲ್ಲ.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ನೀವು ಹೇಳಿದ್ದಿರಿ, ಆದರೆ ರಾಜ್ಯದಲ್ಲಿ ಹಿಜಾಬ್, ಆಜಾನ್, ಹಲಾಲ್, ಆರ್ಥಿಕ ಜಿಹಾದ್ ಹೆಸರಿನಲ್ಲಿ ಅಲ್ಪ ಸಂಖ್ಯಾತರ ಮೇಲೆ ನಿಮ್ಮ ಸಂಘಪರಿವಾರದವರೇ ಕೋಮು ದೌರ್ಜನ್ಯ ನಡೆಯುತ್ತಿದ್ದು, ಈ ವಿಚಾರದಲ್ಲಿ ನಿಮ್ಮ ನಿಲುವೇನು?
ಡಬಲ್ ಇಂಜಿನ್ ಸರ್ಕಾರ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿಯಲ್ಲಿ ತೇಲಿಸಲಿದೆ ಎಂದು ಬೀಗಿದ್ದಿರಿ ಅಲ್ಲವೇ? ರಾಜ್ಯದಲ್ಲಿ ನಿಮ್ಮ ಸರ್ಕಾರದ 5 ಸಾಧನೆ ಪಟ್ಟಿ ನೀಡುವಿರಾ? ಎಂದು ಕೇಳಿದ್ದಾರೆ.
ಕೋವಿಡ್ ಸಮಯದಲ್ಲಿ ನೀವು ಹೇಳಿದಂತೆ ಜಾಗಟೆ ಬಾರಿಸಿ, ಚಪ್ಪಾಳೆ ಹೊಡೆದು, ದೀಪ ಹಚ್ಚಿದೆವು. ಆದರೆ ತುರ್ತು ಸಮಯದಲ್ಲಿ ಆಕ್ಸಿಜನ್ ಪೂರೈಸದೇ ರಾಜ್ಯದ ಚಾಮರಾಜನಗರದಲ್ಲಿ 34 ಮಂದಿ ಪ್ರಾಣ ನುಂಗಿದ್ದು ಯಾಕೆ? ಆಕ್ಸಿಜನ್, ರೆಮಡಿಸಿವಿಯರ್, ಬೆಡ್, ವೆಂಟಿಲೇಟರ್ ಸಿಗಲಿಲ್ಲ. ಕಡೆಗೆ ಸ್ಮಾಶಾನದಲ್ಲೂ ಜಾಗಸಿಗಲಿಲ್ಲ. ಆಕ್ಸಿಜನ್ ಕೊರತೆಯಿಂದ ಯಾರೂ ಸತ್ತೇ ಇಲ್ಲ ಎಂದು ನಿಮಗೆ ಸುಳ್ಳು ವರದಿ ಕೊಟ್ಟ ನಿಮ್ಮ ಸರ್ಕಾರದ ವಿರುದ್ಧ ಕ್ರಮ ಇಲ್ಲ ಯಾಕೆ? ರಾಜ್ಯದಲ್ಲಿ 4 ಲಕ್ಷಕ್ಕೂ ಹೆಚ್ಚು ಮಂದಿ ಕೋವಿಡ್ ಗೆ ಬಲಿಯಾಗಿದ್ದರೂ 40 ಸಾವಿರ ಎಂದು ಸುಳ್ಳು ಲೆಕ್ಕ ತೋರಿದ್ದು ಯಾಕೆ?
ಕಾಂಗ್ರೆಸ್ ಪ್ರತಿಭಟನೆಯಿಂದ ಕೋವಿಡ್ ಸೋಂಕು ಹರಡುತ್ತದೆ ಎಂದು ನಿಮ್ಮ ಸಚಿವ ಸುಧಾಕರ್ ಹೇಳುತ್ತಿದ್ದಾರೆ. ನೀವು ಬೆಂಗಳೂರಿನ ಕೊಮ್ಮಘಟ್ಟದಲ್ಲಿ 50 ಸಾವಿರ ಜನರನ್ನು ಸೇರಿಸಿ ಸಾರ್ವಜನಿಕ ಸಭೆ ಮಾಡುತ್ತಿದ್ದೀರಿ, 12 ಸಾವಿರಕ್ಕೂ ಹೆಚ್ಚು ಜನರ ಜತೆ ಮೈಸೂರಿನಲ್ಲಿ ಯೋಗ ಮಾಡಲಿದ್ದೀರಿ, ನಿಮ್ಮ ಈ ಕಾರ್ಯಕ್ರಮಗಳಿಂದ ಕೊರೋನಾ ಹರಡುವುದಿಲ್ಲವೇ? ಸುಧಾಕರ್ ಅವರೇ ಮಾಸ್ಕ್ ಇಲ್ಲದೆ ಮಕ್ಕಳ ಜತೆ ಇದ್ದಾರೆ. ಇನ್ನು 25 ಕಿ.ಮೀ ಗೂ ಹೆಚ್ಚು ರೋಡ್ ಶೋ ಮಾಡಲು ನಿರ್ಧರಿಸಿದ್ದರು, ನಿನ್ನೆ ಬಿದ್ದ ಮಳೆಗೆ ಗುಂಡ್ಡಿ ಹೆಚ್ಚಾಗಿರುವ ಕಾರಣ ಆ ಕಾರ್ಯಕ್ರಮ ರದ್ದು ಮಾಡಿದ್ದಾರೆ. ಇವರು ಹಾಕಿದ ತೇಪೆ ಕಿತ್ತುಹೋಗಿದೆ. ಇವರಿಗಾಗಿ ಪಾಲಿಕೆಯವರು 12 ಕಿ.ಮೀ ರಸ್ತೆಗೆ ಡಾಂಬರ್ ಹಾಕಿ ಸಿದ್ಧಪಡಿಸಿದ್ದರು ಎಂದು ಕಿಡಿಕಾರಿದ್ದಾರೆ.