2023ರ ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಕರ್ನಾಟಕದ ಸ್ತಬ್ಧಚಿತ್ರವನ್ನ ನಿರಾಕರಿಸಿರುವ ಕೇಂದ್ರ ಸರ್ಕಾರದ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
ಈ ವರ್ಷದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ ಸ್ಥಬ್ದಚಿತ್ರಕ್ಕೆ ಬಿಜೆಪಿ ಸರ್ಕಾರ ಅವಕಾಶ ನಿರಾಕರಿಸಿರುವುದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕಕ್ಕೆ ಮಾಡಿರುವ ಅವಮಾನ ಕನ್ನಡಿಗರೆಲ್ಲರೂ ಇದನ್ನು ಒಕ್ಕೊರಲಿನಿಂದ ಖಂಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಸತತ ಹದಿಮೂರು ವರ್ಷಗಳ ಕಾಲ ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕದ ಸ್ಥಬ್ದ ಚಿತ್ರಗಳು ನಮ್ಮ ಇತಿಹಾಸ ಸಂಸ್ಕೃತಿ ಮತ್ತು ಪ್ರಕೃತಿಯ ಹಿರಿಮೆಗಳನ್ನು ಪ್ರದರ್ಶಿಸಿ ಇಡೀ ದೇಶದ ಶ್ಲಾಘನೆಗೆ ಪಾತ್ರವಾಗಿದೆ ಇದೇ ಮೊದಲ ಬಾರಿ ಬಿಜೆಪಿ ಸರ್ಕಾರ ಈ ಗೌರವಕ್ಕೆ ಧಕ್ಕೆ ತಂದಿದೆ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರದ ಎದುರು ಮಾಂಡಲೀಕರಂತೆ ವರ್ತಿಸುತ್ತಿರುವ ಕರ್ನಾಟಕದ ಬಿಜೆಪಿ ನಾಯಕರು ರಾಜ್ಯದ ಘನತೆ-ಗೌರವಗಳನ್ನು ದೆಹಲಿ ನಾಯಕರಿಗೆ ಅಡ ಇಟ್ಟಿರುವುದು ದುರದೃಷ್ಟಕರ ಎಂದು ಬೇಸರಿಸಿದ್ದಾರೆ.
ಮಾತು ಮಾತಿಗೆ ಡಬಲ್ ಎಂಜಿನ್ ಸರ್ಕಾರ ಎಂದು ರಾಜ್ಯ ಬಿಜೆಪಿ ನಾಯಕರು ಎದೆ ಬಡಿದುಕೊಳ್ಳುತ್ತಿದ್ದಾರೆ. ರಾಜ್ಯದ ಹಕ್ಕು ಮತ್ತು ಗೌರವದ ಪ್ರಶ್ನೆ ಎದುರಾದಾಗ ಮಾತ್ರ ಕರ್ನಾಟಕದ ಎಂಜಿನ್ ಗುಜರಿ ಆಗುತ್ತದೆ ಎಂದು ಟ್ವೀಟ್ ಮಾಡುವ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಆಕ್ರೋಶ ಹೊರಹಾಕಿದ್ದಾರೆ.