ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನಿರ್ದೇಶಕರಾಗಿದ್ದು, ಖರ್ಗೆ ಹಾಗೂ ಇತರರು ಟ್ರಸ್ಟಿಗಳಾಗಿದ್ದಾರೆ. ಇದೊಂದು ಸುಳ್ಳು ಮೊಕದ್ದಮೆ. ನನಗೆ ಕಾನೂನು ರೀತಿಯ ವಿಚಾರಣೆಗೆ ನಮ್ಮ ತಕರಾರಿಲ್ಲ. ಕಾಂಗ್ರೆಸ್ ಕಾನೂನನ್ನು ಗೌರವಿಸುತ್ತದೆ. ಆದರೆ ಯಾವುದೇ ಸಾಕ್ಷಿ ಇಲ್ಲದಿದ್ದರೂ ದ್ವೇಷದ ರಾಜಕಾರಣಕ್ಕೆ ಬಿಜೆಪಿ ಸರ್ಕಾರ ಕಿರುಕುಳ ನೀಡುತ್ತಿದ್ದು, ಇದನ್ನು ನಾವು ವಿರೋಧಿಸುತ್ತಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಇಡಿ ಅವರು ನಮ್ಮ ನಾಯಕರಿಗೆ ಸಮನ್ಸ್ ಹೊರಡಿಸಿ ವಿಚಾರಣೆ ಮಾಡುತ್ತಿರುವುದನ್ನು ವಿರೋಧಿಸುತ್ತೇವೆ. ಬ್ರಿಟೀಷರ ಕಾಲದಲ್ಲಿ ಇಂತಹ ಪ್ರಕರಣ ನಡೆದಿತ್ತು ಎಂದು ಓದಿದ್ದೆ. ಗಾಂಧೀಜಿ ಅವರ ನೇತೃತ್ವದಲ್ಲಿ ಅನೇಕ ಹೋರಾಟ ನಡೆದಿವೆ. ನೆಹರೂ ಅವರು 9 ವರ್ಷ ಜೈಲಿಗೆ ಹೋಗಿ, ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ್ದಾರೆ. ಇದೆಲ್ಲವೂ ಇತಿಹಾಸದ ಪುಟಗಳಲ್ಲಿ ಸೇರಿವೆ. ಇಂತಹ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದೀರಿ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಪ್ರತಿ ವರ್ಷ ಬ್ರಿಟೀಷರ ಕಾಲದಿಂದಲೂ ಸಭೆ ಮಾಡುತ್ತಿದೆ. ಕಳೆದ 3 ದಿನಗಳಿಂದ ಎಐಸಿಸಿ ಕಚೇರಿಯನ್ನು ದೌರ್ಜನ್ಯದಿಂದ ಸ್ವಾದೀನಕ್ಕೆ ಪಡೆದಿದ್ದಾರೆ. ಯಾವುದೇ ಪದಾಧಿಕಾರಿಗಳು, ಕಾರ್ಯಕರ್ತರು ಹೋಗುವಂತಿಲ್ಲ, ಹೋದರೆ ಹೊಡೆದು, ಬಂಧಿಸುತ್ತಿದ್ದಾರೆ. ಇದನ್ನು ಪೊಲೀಸ್ ರಾಜ್ಯ ಎನ್ನಬೇಕೇ? ಅಘೋಷಿತ ತುರ್ತು ಪರಿಸ್ಥಿತಿ ಎನ್ನಬೇಕೆ? ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.
ಎಐಸಿಸಿ ಕಚೇರಿಗೆ ಪೊಲೀಸರು ನುಗ್ಗಿ ಅಲ್ಲಿದ್ದವರನ್ನು ಬಂಧಿಸಿರುವಂತೆ ಈ ಹಿಂದೆ ನಡೆದಿತ್ತಾ? ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವಾ? ಇದು ಸರ್ವಾಧಿಕಾರಿ ಸರ್ಕಾರವೇ? ಇಲ್ಲಿ ಪ್ರಜಾಪ್ರಭುತ್ವ ಇಲ್ಲದಂತಾಗಿದೆ. ಪ್ರತಿಭಟನೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕು. ಅದನ್ನು ಹತ್ತಿಕ್ಕಲು ಸರ್ಕಾರಕ್ಕಾಗಲಿ, ಬೇರೆಯವರಿಗಾಗಲಿ ಅಧಿಕಾರ ಇಲ್ಲ. ಶಾಂತಿಯುತವಾಗಿ ನಮ್ಮ ನಾಯಕರು ಪ್ರತಿಭಟನೆ ಮಾಡುತ್ತಿದ್ದಾರೆ. ಪಕ್ಷದ ಕಚೇರಿಗೆ ಹೋಗುತ್ತಿರುವವರ ಮೇಲೆ ಹಲ್ಲೆ ಮಾಡುತ್ತಿರುವುದೇಕೆ? ಡಿ.ಕೆ ಸುರೇಶ್ ಹಾಲಿ ಸಂಸದ ಅವರಿಗೆ ಅಪರಾಧಿಗೂ ಆ ರೀತಿ ನಡೆಸಿಕೊಳ್ಳುವುದಿಲ್ಲ. ಆ ರೀತಿ ದಿನೇಶ್ ಗುಂಡೂರಾವ್, ಹೆಚ್ ಕೆ ಪಾಟೀಲ್ ಅವರನ್ನು ನಡೆಸಿಕೊಂಡಿದೆ. ಇಡೀ ಪಕ್ಷ ಒಕ್ಕೋರಲಿನಿಂದ ಇದನ್ನು ಖಂಡಿಸುತ್ತೇವೆ ಎಂದಿದ್ದಾರೆ.

ಮೊನ್ನೆ ಪ್ರತಿಭಟನೆಯಲ್ಲಿ 30 ಸಾವಿರಕ್ಕೂ ಹೆಚ್ಚು ಜನ ಸೇರಿದ್ದೆವು. ನಮ್ಮನ್ನು ಬಂಧಿಸಿದ್ದರು. ನಮ್ಮನ್ನು ಜೈಲಿಗೆ ಕಳುಹಿಸುವುದಾದರೆ ಕಳಿಸಿ, ನಾವು ಹೇದರುವುದಿಲ್ಲ. ಪೋಲೀಸ್ ಠಾಣೆಯಲ್ಲಿ 8-10 ಗಂಟೆ ಇಟ್ಟುಕೊಳ್ಳುವುದು ಅಪರಾಧ. ಸಂವಿಧಾನ ಬದಲಿಸುತ್ತೀರಾ?. ನೀವು ಶಾಶ್ವತವಾಗಿ ಅಧಿಕಾರದಲ್ಲಿರುತ್ತೀರಿ ಎಂದು ಭಾವಿಸಿದ್ದೀರಿ. ನಿಮಗೆ ಕೇಡುಗಾಲ ಬಂದಿದೆ. ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಂತೆ ನೀವು ನಡೆದುಕೊಳ್ಳುತ್ತಿದ್ದೀರಿ. ನಾಳೆ ಪಕ್ಷದ ವತಿಯಿಂದ ರಾಜಭವನಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪಕ್ಷದ ಎಲ್ಲ ನಾಯಕರು ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ನಾಡಿದ್ದು, ಜಿಲ್ಲಾ ಕೇಂದ್ರಗಳಲ್ಲಿ ಇದೇ ತರಹದ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾನೂನುಬಾಹಿರ ಕ್ರಮ ನಿಲ್ಲಿಸದಿದ್ದರೆ ನಿರಂತರ ಹೋರಾಟ ಮಾಡಬೇಕಾಗುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಹೋರಾಟ ಹೊಸತಲ್ಲ. ದೇಶಕ್ಕೆ ಹೋರಾಟದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟಿದ್ದು, ಕಾಂಗ್ರೆಸ್. ಬಿಜೆಪಿ ಹಾಗೂ ಅದರ ಅಂಗ ಸಂಸ್ಥೆಗಳು ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿಲ್ಲ. ಮೋದಿ, ಅಮಿತ್ ಶಾ ಸ್ವಾತಂತ್ರ್ಯ ಬಂದ ನಂತರ ಹುಟ್ಟಿದ್ದಾರೆ. ಅವರು ಇಂದು ಅಧಿಕಾರಕ್ಕೆ ಬಂದಿದ್ದರೆ ಅದಕ್ಕೆ ಕಾಂಗ್ರೆಸ್ ಹೋರಾಟ ಕಾರಣ. ಅವರು ಬ್ರಿಟೀಷರ ಜತೆ ಕೈಜೋಡಿಸಿದ್ದವರು ಎಂದು ಟೀಕಿಸಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಘಟನೆಯನ್ನು ನಾವು ತೀವ್ರವಾಗಿ ಖಂಡಿಸುತ್ತದೆ. ರಾಜ್ಯದ ಜನ ಖಂಡಿಸುತ್ತಾರೆ. ರಾಜ್ಯದ ಜನ ಪ್ರಜಾಪ್ರಭುತ್ವಕ್ಕೆ ಒಡೆತ ಬಿದ್ದಾಗ ಯಾವತ್ತೂ ಸುಮ್ಮನೆ ಕೂತಿಲ್ಲ. ಜನ ದಂಗೆ ಏಳುವ ಕಾಲ ಸಮೀಪಿಸುತ್ತಿದ್ದು, ಬಿಜೆಪಿಗರೇ ಎಚ್ಚರದಿಂದ ಇರಿ ಎಂದು ಎಚ್ಚರಿಸಿದ್ದಾರೆ.