ತಮಿಳುನಾಡು ರಾಜ್ಯಕ್ಕೆ ಕಾವೇರಿ ನದಿಯ ನೀರು ಹರಿಸುವುದಾಗಿ ಹೇಳಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಈ ಬಗ್ಗೆ ಬುಧವಾರ (ಆಗಸ್ಟ್ 16) ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು ಡಿ.ಕೆ.ಶಿವಕುಮಾರ್ ಅವರಿಗೆ ನಿರ್ಧಾರ ಬದಲಿಸುವಂತೆ ಮನವಿ ಮಾಡಿದ್ದಾರೆ.
“ತಮಿಳುನಾಡು ಕುರುವೈ ಬೆಳೆಗೆ ಎರಡು ಪಟ್ಟು ಕಾವೇರಿ ನೀರು ಬಳಕೆ ಮಾಡಿದೆ. ನಾಲ್ಕು ಪಟ್ಟು ಕುರುವೈ ಬೆಳೆ ಕ್ಷೇತ್ರ ವಿಸ್ತರಣೆ ಮಾಡಿದೆ. ಕರ್ನಾಟಕ ಸರ್ಕಾರ ಇದನ್ನು ಸಿಡಬ್ಲ್ಯುಎಂಎ ಸಭೆಯಲ್ಲಿ ಪ್ರತಿಭಟಿಸಲಿಲ್ಲ. ತಮಿಳುನಾಡು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಹಾಕಿದ ತಕ್ಷಣ ನೀರು ಬಿಟ್ಡಿರುವುದು ಅಕ್ಷಮ್ಯ” ಎಂದು ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
“ರಾಜ್ಯದ ರೈತರಿಗೆ ಈ ಮೊದಲು ನೀರು ಬಿಡದೇ ನಮ್ಮ ರಾಜ್ಯದ ರೈತರ ಪಾಲನ್ನು ಅಣೆಕಟ್ಟಿನಲ್ಲಿ ಶೇಖರಿಸಿ, ರಾಜ್ಯದ ರೈತರಿಗೆ ನೀರು ಕೊಡುವ ತೀರ್ಮಾನ ವಿಳಂಬ ಮಾಡಿ ಈಗ ನಮ್ಮ ರೈತರ ಪಾಲಿನ ನೀರನ್ನು ತಮಿಳುನಾಡಿಗೆ ಹರಿಸುವ ಸ್ಥಿತಿಯನ್ನು ನೀವು ತಂದೊಡ್ಡಿದ್ದೀರಿ” ಎಂದು ಬೇಸರ ವ್ಯಕ್ತಪಡಿಸಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿಯ ನೀರನ್ನು ಬಿಡಲು ಸಾಧ್ಯವಿಲ್ಲ ಎಂಬ ಹೇಳಿಕೆ ಕೊಟ್ಟ ಮರುದಿನವೇ ಉಪಮುಖ್ಯಮಂತ್ರಿ ನೇತೃತ್ವದ ನೀರಾವರಿ ಇಲಾಖೆ ತಮಿಳುನಾಡಿಗೆ ನೀರು ಬಿಟ್ಟಿದೆ. ರಾಜ್ಯದಲ್ಲಿ ನೀರು ನಿರ್ವಹಣೆಯಲ್ಲಿ ಒಮ್ಮತ ಇಲ್ಲ. ನಮ್ಮ ರಾಜ್ಯದ ನೀರಿನ ಪಾಲನ್ನು ರಕ್ಷಣೆ ಮಾಡುವಂತ ಛಲವೂ ಕಾಣಿಸುತ್ತಿಲ್ಲ” ಎಂದು ರಾಜ್ಯ ಸರ್ಕಾರದ ವಿರುದ್ಧ ಕುಟುಕಿದರು.
“ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಿ, ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ಈ ವಿಚಾರದಲ್ಲಿ ರಾಜ್ಯದ ರೈತರ ಹಿತ ಕಾಯಬೇಕು” ಎಂದು ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಾನು ಆರೂವರೆ ಕೋಟಿ ಕನ್ನಡಿಗರ ವಕ್ತಾರ: ಎಚ್.ಡಿ.ಕುಮಾರಸ್ವಾಮಿ
ಸದ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮಿಳುನಾಡು ರಾಜ್ಯಕ್ಕೆ ಕಾವೇರಿಯ ನೀರು ಹರಿಸಲು ಒಪ್ಪುವ ಜತೆಗೆ ಒಂದು ಷರತ್ತನ್ನು ವಿಧಿಸಿದ್ದಾರೆ. “ನಿಮಗೆ ನಾವು 10 ಟಿಎಂಸಿ ನೀರು ಹರಿಸುತ್ತೇವೆ. ಆದರೆ ನೀವು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸಹಕರಿಸಬೇಕು” ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಬೆಳೆಗಳು ಬೆಳೆದು ನಿಂತಿದ್ದು, ನಿತ್ಯ 24000 ಕ್ಯೂಸೆಕ್ ನೀರು ಅಗತ್ಯವಾಗಿದೆ. ಆದ್ದರಿಂದ ಆ ಕಾವೇರಿ ನೀರನ್ನು ಕರ್ನಾಟಕ ಬಿಡಲು ಸೂಚನೆ ನೀಡಬೇಕು ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.