ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಗಲ್ಲು ಶಿಕ್ಷೆ ವಿಧಿಸಿದೆ.

ಕಳೆದ ವರ್ಷ ಭುಗಿಲೆದ್ದಿದ್ದ ವಿದ್ಯಾರ್ಥಿ ಚಳುವಳಿಯನ್ನು ಹತ್ತಿಕ್ಕಲು ಆಗಿನ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಂಡಿತ್ತು. ಈ ಜಟಾಪಟಿಯಲ್ಲಿ ನೂರಾರು ವಿದ್ಯಾರ್ಥಿಗಳನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಸಾವಿರಾರು ವಿದ್ಯಾರ್ಥಿಗಳಿಗೆ ಜೈಲಿನಲ್ಲಿ ಚಿತ್ರಹಿಂಸೆ ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ನಿರ್ದಯವಾಗಿ ಪ್ರತಿಭಟನಾಕಾರರನ್ನು ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಮರಣದಂಡನೆ ಶಿಕ್ಷೆ ವಿಧಿಸಿ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಆದೇಶಿಸಿದೆ.
ಬಾಂಗ್ಲಾದೇಶದಲ್ಲಿ ಪದಚ್ಯುತಿ ನಂತರ ಶೇಖ್ ಹಸೀನಾ ರಕ್ಷಣೆಗಾಗಿ ಭಾರತಕ್ಕೆ ಬಂದಿದ್ದರು. ಸದ್ಯ ಭಾರತದಲ್ಲಿ ರಾಜತಾಂತ್ರಿಕ ರಕ್ಷಣೆಯಲ್ಲಿರುವ ಶೇಖ್ ಹಸೀನಾ ಅವರನ್ನು ವಾಪಸ್ ಕಳುಹಿಸಬೇಕು ಎಂದು ಬಾಂಗ್ಲಾದೇಶವು ಒತ್ತಾಯಿಸಿದ್ದರೂ ಹಸೀನಾ ಹಿಂತಿರುಗಿಲ್ಲ. ಇದೀಗ ಅವರಿಗೆ ಗಲ್ಲು ಶಿಕ್ಷೆ ಘೋಷಣೆಯಾಗಿದ್ದು, ಹಸೀನಾರನ್ನು ವಾಪಸ್ ಕಳುಹಿಸುವ ಬಗ್ಗೆ ಭಾರತ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.













