
ಬೀದರ್ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಕಳೆದ ವಾರದಿಂದ ಮಳೆ ಸುರಿಯುತ್ತಿದೆ. ಮುಂಗಾರು ಬಿತ್ತನೆ ಮಾಡಿದ ರೈತರು ಎಡೆಕುಂಟೆ ಹೊಡೆಯುವುದರಲ್ಲಿ ತಲ್ಲೀನರಾಗಿದ್ದಾರೆ.
ಕಳೆದ ತಿಂಗಳು ಸುರಿದ ಮುಂಗಾರು ಮಳೆಯಿಂದ ಬಹುತೇಕ ರೈತರು ಸೋಯಾ, ಹೆಸರು ಉದ್ದು ಸೇರಿದಂತೆ ಇನ್ನಿತರ ಮುಂಗಾರು ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ.
ಬೆಳಿಗ್ಗೆಯ ಸಮಯದಲ್ಲಿ ಮಳೆ ಬಿಡುವು ನೀಡುತ್ತಿರುವುದರಿಂದ ರೈತರು ಎಡೆಕುಂಟೆ ಹೊಡೆಯುತ್ತಿದ್ದಾರೆ.
‘ಬೆಳೆ ಬಿತ್ತನೆ ಮಾಡಿದ ಒಂದು ತಿಂಗಳ ನಂತರ ಎಡೆಕುಂಟೆ ಹೊಡೆಯುತ್ತಾರೆ. ಆಗಾಗ ಬೀಳುತ್ತಿರುವ ಮಳೆಯಿಂದಾಗಿ ಬೆಳೆಗಳು ಸಮೃದ್ಧವಾಗಿ ಬೆಳೆದಿವೆ. ಬೆಳೆಗಳ ನಡುವಿನ ಕಳೆಯನ್ನು ಎಡೆಕುಂಟೆ ಹೊಡೆಯುವ ಮೂಲಕ ನಾಶ ಪಡಿಸುತ್ತಾರೆ. ಹೀಗೆ ಎಡೆ ಕುಂಟೆ ಹೊಡೆಯುವಾಗ ಮಣ್ಣು ಬೆಳೆಗಳ ಬುಡಕ್ಕೆ ಹೋಗಿ ಬೀಳುತ್ತದೆ. ಇದರಿಂದ ಬೇರುಗಳು ದೃಢವಾಗಿ ನೇರವಾಗಿ ಬೆಳೆಯುತ್ತವೆ’ ಎಂದು ಹಿರಿಯರಾದ ಧನರಾಜ ತಿಳಿಸುತ್ತಾರೆ.
ಹೆಚ್ಚು ಭೂಮಿ ಹೊಂದಿರುವ ರೈತರು ಎತ್ತುಗಳಿಂದ ಎಡೆ ಕುಂಟೆಯಲ್ಲಿ ತೊಡಗಿದರೆ, ಕಡಿಮೆ ಭೂಮಿಯ ರೈತರು ‘ಸೈಕಲ್ ವೀಡರ್’ ಬಳಸಿ ಎಡೆ ಕುಂಟೆ ಹೊಡೆಯುತ್ತಿದ್ದಾರೆ.
‘ಎತ್ತುಗಳನ್ನು ಬಳಸಿ ಎಡೆಕುಂಟೆ ಹೊಡೆಯಲು ಮೂರ್ನಾಲ್ಕು ಜನ ಬೇಕು. ಅಲ್ಲದೇ ಕೂಲಿಕಾರ್ಮಿಕರಿಗೂ ದಿನಗೂಲಿ ನೀಡಿ, ಬಾಡಿಗೆ ಎತ್ತುಗಳನ್ನು ಪಡೆದು ಕೃಷಿ ಎಡೆಕುಂಟೆ ಹೊಡೆಯುವುದು ಬಡ ಹಾಗೂ ಸಣ್ಣ ರೈತರಿಗೆ ಕಷ್ಟಸಾಧ್ಯವಾಗಿತ್ತು. ರೈತರ ಇಂತಹ ಕಷ್ಟಗಳಿಗೆ ಸೈಕಲ್ ವೀಡರ್ ಎಡೆಕುಂಟೆ ಪರಿಹಾರವಾಗಿದೆ’ ಎಂದು ರೈತ ಅನಿಲ ಜಾಧವ್ ಸಂತಸ ವ್ಯಕ್ತಪಡಿಸುತ್ತಾರೆ.