ಆಯುಷ್ಮಾನ್ ಭಾರತ ಯೋಜನೆಯಿಂದ ಬಡವರಿಗೆ ಹೆಚ್ಚು ಅನುಕೂಲ: ಬಸವರಾಜ ಬೊಮ್ಮಾಯಿ

ಸಮಗ್ರವಾಗಿ ಎಲ್ಲರ ಆರೋಗ್ಯ ಸುಧಾರಣೆಗೆ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಆಯುಷ್ಮಾನ ಭಾರತ ಯೋಜನೆ ಯಶಸ್ವಿಯಾಗಬೇಕಾದರೆ ಎಲ್ಲರ ಸಹಕಾರ ಅಗತ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಇಂದು ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ತಾವರಗಿ, ದೂದಹಳ್ಳಿ, ಶ್ರೀರಾಮನಕೊಪ್ಪ, ಬೋಗಾವಿ, ಗ್ರಾಮಗಳಲ್ಲಿ ನೂತನ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದರು.
ಆರೋಗ್ಯ ಬಹಳ ಮುಖ್ಯ. ನಮಗೆ ವಯಸ್ಸಿದ್ದಾಗ ಆರೊಗ್ಯದ ಕಡೆಗೆ ಗಮನ ಹರಿಸುವುದಿಲ್ಲ. ಆದರೆ, ವಯಸ್ಸಾದ ಮೇಲೆ ಆ ಬಗ್ಗೆ ಯೋಚನೆ ಮಾಡುತ್ತೇವೆ. ಆದರೆ ನಾವು ಆರಂಭದಲ್ಲಿಯೇ ಆರೊಗ್ಯದ ಬಗ್ಗೆ ಗಮನ ಹರಿಸಿದರೆ ವಯಸ್ಸಾದ ಮೇಲೆ ತೊಂದರೆಗೀಡಾಗುವ ಅವಶ್ಯಕತೆ ಇರುವುದಿಲ್ಲ ಎಂದರು. ಆರೋಗ್ಯಕ್ಕೆ ಆಹಾರಕ್ಕೆ ನೇರವಾದ ಸಂಬಂಧ ಇದೆ. ಶುಚಿಯಾಗಿರುವ, ಪೌಷ್ಟಿಕವಾಗಿರುವ ಆಹಾರವನ್ನು ತೆಗೆದುಕೊಂಡರೆ ಆರೋಗ್ಯಯುತವಾಗಿರುತ್ತೇವೆ. ದೇವರ ಸೃಷ್ಟಿಯಲ್ಲಿ ನಮ್ಮಲ್ಲಿ ಏನಾದರೂ ರೋಗರುಜಿನಗಳಿದ್ದರೆ ರೋಗ ನಿರೋಧಕ ಶಕ್ತಿ ಭಗವಂತ ನಮಗೆ ಕೊಟ್ಟಿದ್ದಾನೆ. ಪ್ರತಿಯೊಬ್ಬರ ದೇಹದಲ್ಲಿ ಡಾಕ್ಟರ್ ಇರುತ್ತಾನೆ. ಡಾಕ್ಟರ್ ಗೆ ನಾವು ಸಹಕಾರ ಕೊಡಬೇಕು. ಒಳಗಡೆ ಡಾಕ್ಟರನ್ನು ಕಡೆಗಣಿಸಿದರೆ ಹೊರಗಡೆ ಡಾಕ್ಟರನ್ನು ಅವಲಂಬಿಸಬೇಕಾಗುತ್ತದೆ.

ಆಹಾರದಿಂದ ಒಳ್ಳೆ ಆರೋಗ್ಯ ದೊರೆಯುತ್ತದೆ. ಭಾರತದಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು ದೊಡ್ಡ ಸವಾಲು, ನಮ್ಮ ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇದೆ. ಇಷ್ಟು ಜನಸಂಖ್ಯೆ ಇರುವ ದೇಶದಲ್ಲಿ ಎಲ್ಲರಿಗೂ ಆರೊಗ್ಯ ಕೊಡುವುದು ಸುಲಭದ ಮಾತಲ್ಲ. ಆದರೆ, ಸಣ್ಣ ಸಣ್ಣ ದೇಶಗಳಲ್ಲಿ ಆರೋಗ್ಯ ಕಾಪಾಡುವುದು ಸುಲಭ. ಇದನ್ನು ಮನಗಂಡು 2018 ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಡಿ ದೇಶಕ್ಕೆ ಆರೋಗ್ಯದ ವಿಮಾ ಯೋಜನೆ ಮಾಡಿ, ಪ್ರತಿಯೊಬ್ಬ ನಾಗರಿಕರಿಗೆ ವಿಶೇಷವಾಗಿ ಬಡವರಿಗೆ ಆರೋಗ್ಯ ಕೊಡಲು ಐದು ಲಕ್ಷ ರೂ ವರೆಗೆ ಉಚಿತ ಚಿಕಿತ್ಸೆ ನೀಡುವ ಆಯುಷ್ಮಾನ ಭಾರತ ಯೋಜನೆ ಜಾರಿಗೆ ತಂದರು. ಇದರಿಂದ 10 ಕೋಟಿ ಕುಟುಂಬಗಳು ಪ್ರಯೋಜನ ಪಡೆದಿವೆ. ರಾಜ್ಯಗಳು ಕೂಡ ಈ ಯೋಜನೆಗೆ ಕೈ ಜೋಡಿಸಿದವು ಎಂದರು.
25 ಹೊಸ ರೋಗ ಸೇರ್ಪಡೆ
ಕಳೆದ ಬಜೆಟ್ ನಲ್ಲಿ ಸುಮಾರು 25 ಹೊಸ ರೋಗಗಳನ್ನು ಈ ಯೋಜಬೆ ವ್ಯಾಪ್ತಿಗೆ ಸೇರಿಸಿದ್ದಾರೆ. ಡಯಾಲಿಸಿಸ್, ಹಾರ್ಟ್ ಅಟ್ಯಾಕ್ ಆದರೆ, ಕಿಡ್ನಿ ಸಮಸ್ಯೆ, ಲಿವರ್ ಸಮಸ್ಯೆ ಎಲ್ಲವೂ ಸೇರಿಸಿದ್ದಾರೆ. ಆಯುಷ್ಮಾನ ಯೋಜನೆಯಿಂದ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಿಗೆ ಆದಾಯವೂ ಇದೆ. ಆದ್ದರಿಂದ ತಾಲೂಕಿನ ಆಸ್ಪತ್ರೆಗಳ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಮತ್ತು ರೋಗಿಗಳಿಗೆ ಅನುಕೂಲವಾಗುತ್ತದೆ.ಅಲ್ಲದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಆಗಿದೆ. ಹೀಗಾಗಿ ಸಮಗ್ರವಾಗಿ ಎಲ್ಲರ ಆರೋಗ್ಯ ಸುಧಾರಣೆಗೆ ಪ್ರಧಾನಿ ಮೋದಿಯವರು ಮಾಡಿರುವ ಆಯುಷ್ಮಾನ ಭಾರತ ಯೋಜನೆ ಯಶಸ್ವಿಯಾಗಬೇಕಾದರೆ ಎಲ್ಲರ ಸಹಕಾರ ಅಗತ್ಯ. ಆ ಸಹಕಾರ ಸಿಗುವ ವಿಶ್ವಾಸ ಇದೆ ಎಂದು ಹೇಳಿದರು.

ಹಿರೆಕೇರೂರು ತಾಲೂಕಿನಲ್ಲಿ ಇವತ್ತು ಐದು ಕಡೆ ಆಯುಷ್ಮಾನ್ ಕೇಂದ್ರ ಉದ್ಘಾಟನೆ ಮಾಡುತ್ತಿದ್ದೇವೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಅಡಿಗಲ್ಲು ಹಾಕಿದ್ದೆ, ಈಗ ನಾನೇ ಉದ್ಘಾಟನೆ ಮಾಡುತ್ತಿದ್ದೇನೆ. ಇದು ನನಗೆ ಸಂತೋಷ ತಂದಿದೆ. ಸಾಮಾನ್ಯವಾಗಿ ಹೊಸ ಸರ್ಕಾರ ಬಂದಾಗ ಹಾಲಿ ಸಿಎಂ ಕಡೆಯಿಂದ ಉದ್ಘಾಟನೆ ಮಾಡಿಸುತ್ತಾರೆ. ನಿಮ್ಮೆಲ್ಲರ ಆಶೀರ್ವಾದ ದಿಂದ ನಾನು ಈ ಕ್ಷೇತ್ರದ ಸಂಸದ ಆಗಿದ್ದೇನೆ. ಹಾಗೂ ಹಿರೇಕೆರೂರು ಶಾಸಕರಾದ ಯು.ಬಿ. ಬಣಕಾರ ಅವರು ಎಲ್ಲರೂ ಸೇರಿ ಕೆಲಸ ಮಾಡೋಣ ಅಂತ ಹೇಳಿ ನನ್ನಿಂದ ಈ ಕಟ್ಟಡ ಉದ್ಘಾಟನೆ ಮಾಡಿಸಿದ್ದಾರೆ. ನಾನು ಬಹಳ ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. , ಅನಾರೋಗ್ಯಕ್ಕೀಡಾದವರಿಗೆ ಈ ಕೇಂದ್ರ ಪರಿಹಾರ ಕೊಡುತ್ತದೆ ಎನ್ನುವ ವಿಶ್ವಾಸ ಇದೆ ಎಂದರು.

ಬಡವರಿಗೆ ಅನುಕೂಲವಾಗಲಿ
ಕರ್ನಾಟಕದಲ್ಲಿ ಒಟ್ಟು ಎರಡು ಕೋಟಿ ಆಯುಷ್ಮಾನ್ ಕಾರ್ಡ್ ಗಳಿವೆ. ಸುಮಾರು 63 ಲಕ್ಷ ಜನರು ಈಗಾಗಲೇ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 9.76 ಲಕ್ಷ ಆಯುಷ್ಮಾನ್ ಕಾರ್ಡ್ ವಿತರಿಸಲಾಗಿದೆ. ರೋಗಿಗಳು ನೇರವಾಗಿ ಆಸ್ಪತ್ರೆಗೆ ಬರುವ ವ್ಯವಸ್ಥೆ ಆಗಬೇಕು. ಇದರ ಜೊತೆಗೆ ಬಡವರಿಗೆ ಕಡಿಮೆ ದರದಲ್ಲಿ ಔಷಧ ಸಿಗಲಿ ಅಂತ ಜನೌಷಧಿ ಕೇಂದ್ರ ಗಳನ್ನು ಮಾಡಿದರು. ಅದು ಎಲ್ಲ ಕಡೆ ಯಶಸ್ವಿಯಾಗಿ ನಡೆಯುತ್ತಿದೆ. ಅಷ್ಟೆಯಲ್ಲ ನಾವು ಕಾರ್ಮಿಕರಿಗೆ ಹಾಗೂ ಹಿರಿಯ ನಾಗರಿಕರಿಗೆ ವಿಶೇಷ ವಿಮಾ ಯೋಜನೆ ಮಾಡಿದ್ದೇವೆ. ಅಟಲ್ ಪೆನಷನ್ ಯೋಜನೆ, ಕಾರ್ಮಿಕರಿಗೆ ಇ ಶ್ರಮ್ ಪೋರ್ಟಲ್ ನಲ್ಲಿ ಯೋಜನೆ ಮಾಡಿದ್ದೇವೆ. ಇದರ ಬಗ್ಗೆ ಮಾಹಿತಿ ಪಡೆದು ಅದರ ಎಲ್ಲ ಲಾಭವನ್ನು ವಿವಿಧ ವಲಯದಲ್ಲಿ ಕೆಲಸ ಮಾಡುವವರು ಪಡೆಯಬೇಕು.

ಹಿರೆಕೆರೂರು ತಾಲೂಕಿನಲ್ಲಿ ಆಯುಷ್ಮಾನ್ ಯೋಜನೆಯಿಂದ ಬಡವರಿಗೆ ಹೆಚ್ಚಿನ ಅನುಕೂಲವಾಗಲಿ, ಬಡವರಿಗೆ ತುರ್ತು ಚಿಕಿತ್ಸೆ ಸಿಗುವಂತಾಗಲಿ, ಆಸ್ಪತ್ರೆಗೆ ಅಗತ್ಯವಿರುವ ಸಿಬ್ಬಂದಿಯನ್ನು ಆರೋಗ್ಯ ಇಲಾಖೆ ಒದಗಿಸುವ ವಿಶ್ವಾಸ ಇದೆ. ಈ ಕಟ್ಟಡ ಅತ್ಯಂತ ಗುಣಮಟ್ಟದಿಂದ ಕೂಡಿದ್ದು, ಈ ಕೇಂದ್ರದ ಸದುಪಯೋಗ ಎಲ್ಲರಿಗೂ ಆಗಲಿ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಶಾಸಕರಾದ ಯು.ಬಿ.ಬಣಕಾರ, ಮಾಜಿ ಶಾಸಕರಾದ ಬಿ.ಸಿ ಪಾಟೀಲ್, ಡಿ.ಎಂ ಸಾಲಿ, ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಈರಪ್ಪ ಗುಬ್ಬೇರ, ಮುಖಂಡರಾದ ಮಲ್ಲಿಕಾರ್ಜುನ ಬುರಡಿಕಟ್ಟಿ, ಲಿಂಗರಾಜ ಚಪ್ಪರದಹಳ್ಳಿ, ಪಾಲಾಕ್ಷಗೌಡ ಪಾಟೀಲ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.