ಬಿಟ್ ಕಾಯಿನ್ ವಿಚಾರವಾಗಿ ಪ್ರಧಾನಮಂತ್ರಿಗಳ ಜತೆ ಮಾತನಾಡಿದ್ದೇನೆ, ಅವರು ಇದು ಪ್ರಮುಖ ವಿಚಾರವಲ್ಲ ಎಂದಿರುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಬೆಂಕಿ ಇಲ್ಲದೆ ಹೊಗೆ ಆಡುತ್ತದೆಯೇ? ಸಿಸಿಬಿ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ 31 ಬಿಟ್ ಕಾಯಿನ್ ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಆ ಬಿಟ್ ಕಾಯಿನ್ ಈಗ ಎಲ್ಲಿದೆ? ಯಾರ ಬಳಿ ಇದೆ? ಯಾರು ಸೀಜ್ ಮಾಡಿದ್ದಾರೆ? ಅದರ ಪಂಚನಾಮಗಳಾಗಿವೆಯೇ? ಇವೆಲ್ಕವನ್ನೂ ಸರ್ಕಾರ ಜನರ ಮುಂದೆ ಇಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ವಿರೋಧ ಪಕ್ಷವಾಗಿ ಮಾಧ್ಯಮಗಳ ವರದಿ, ಅಧಿಕಾರಿಗಳಿಂದ ಪಡೆದ ಮಾಹಿತಿಗಳ ಆಧಾರದ ಮೇಲೆ ನಾವು ಆರೋಪ ಮಾಡುತ್ತೇವೆ. ಮಾಧ್ಯಮಗಳು ಕೂಡ ಸುಖಾಸುಮ್ಮನೆ ವರದಿ ಮಾಡುತ್ತವೆಯೇ? ಎಂದು ಪ್ರಶ್ನಿಸಿದ್ದಾರೆ.
ಇದು ಗಂಭೀರ ವಿಚಾರವಲ್ಲದಿದ್ದರೆ ಇದನ್ನು ಪ್ರಧಾನಮಂತ್ರಿಗಳ ಜತೆ ಚರ್ಚೆ ಮಾಡುವ ಅಗತ್ಯವೇನಿತ್ತು? ಉನ್ನತ ಮಟ್ಟದ ಚರ್ಚೆಯಾಗಿದೆ ಎಂದರೆ ಇದು ಪ್ರಮುಖ ವಿಚಾರ ಅಲ್ಲವೇ? ಈ ಪ್ರಕರಣದಲ್ಲಿ ಯಾವ ಅಧಿಕಾರಿಗಳು, ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬ ಮಾಹಿತಿ ನಮ್ಮ ಬಳಿಯೂ ಇದೆ ಎಂದು ಹೇಳಿದ್ದಾರೆ.
ಗೃಹ ಮಂತ್ರಿಗಳು ಕಾಂಗ್ರೆಸ್ ನಾಯಕರ ಮಕ್ಕಳು ಭಾಗಿಯಾಗಿದ್ದಾರೆ ಎನ್ನುತ್ತಾರೆ. ಹಾಗಾದರೆ ಎಲ್ಲರ ಹೆಸರನ್ನೂ ಬಯಲು ಮಾಡಲಿ, ಅವರನ್ನು ಬಂಧಿಸಲಿ. ಕೆಲವು ಮಾಧ್ಯಮಗಳಲ್ಲಿ ಕಾಂಗ್ರೆಸ್ ನಾಯಕರ ಮಕ್ಕಳು ಭಾಗಿಯಾಗಿದ್ದಾರೆ ಎಂದು ವರದಿ ಬರೆಸಿದ್ದಾರೆ. ಅದನ್ನು ಬರೆಸಿದ್ದು ಯಾರು ಎಂದು ನಮಗೆ ಗೊತ್ತಿಲ್ಲವೇ? ಅವರು ಏನು ಬೇಕಾದರೂ ಬರೆಸಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.
ಕೆಲವು ದಾಖಲೆಗಳೊಂದಿಗೆ ಪ್ರಿಯಾಂಕ್ ಖರ್ಗೆ ಅವರು ಮಾಡಿರುವ ಆರೋಪದ ಬಗ್ಗೆ ಪಕ್ಷದ ತೀರ್ಮಾನ ಹಾಗೂ ಯಾವ ರೀತಿ ಮುಂದೆ ಹೋರಾಟ ಮಾಡುತ್ತದೆ ಎಂಬ ಪ್ರಶ್ನೆಗೆ, ‘ಪಕ್ಷವಾಗಿ ನಾವು ಕೂತು ತೀರ್ಮಾನಿಸುತ್ತೇವೆ. ನಮಗೆ ಕೆಲವು ಮಾಹಿತಿ ಇದ್ದು, ನಾವೂ ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಮಕ್ಕಳು ಇದ್ದಾರೆ, ಕಾಂಗ್ರೆಸ್ ನಾಯಕರು ಎಚ್ಚರಿಕೆಯಿಂದ ಮಾತನಾಡಲಿ ಎಂದು ನೀಡಿರುವ ಎಚ್ಚರಿಕೆಗೆ, ‘ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರೆ, ಸುಮ್ಮನೆ ಬಂಧಿಸಿ ಒಳಗೆ ಹಾಕಲಿ. ಯಾರನ್ನೂ ಪ್ರಶ್ನೆ ಮಾಡುವ ಅಗತ್ಯವಿಲ್ಲ. ಯಾರ ಮಕ್ಕಳಾದರೂ ಇರಲಿ. ತಪ್ಪು ಮಾಡಿರುವವರನ್ನು ಒಳಗೆ ಹಾಕಲಿ, ಅದರಲ್ಲಿ ಏನಿದೆ? ಗೃಹಮಂತ್ರಿಗಳು ಆಡಿರುವ ಮಾತಿಗೆ ನಾವು ಸುಮ್ಮನೆ ಕೂರುತ್ತೀವಾ? ಸಮಯ ಬಂದಾಗ ಭಾಗಿಯಾಗಿರುವ ಎಲ್ಲರ ಹೆಸರೂ ಹೇಳುತ್ತೇವೆ’ ಎಂದು ಎಚ್ಚರಿಸಿದ್ದಾರೆ.
ಸದ್ಯ ಬಿಡುಗಡೆಯಾಗಿರುವ ಪೊಲೀಸ್ ಅಧಿಕಾರಿಗಳ ಸಂಭಾಷಣೆ ಆಡಿಯೋದಲ್ಲಿ, ‘ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳಿಂದ ಸಚಿವರವರೆಗೂ ಎಲ್ಲರೂ ಭಾಗಿಯಾಗಿದ್ದಾರೆ’ ಎಂಬ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಆಡಿಯೋ ಬಿಡುಗಡೆಯಾಗಿದೆ, ಪೊಲೀಸರು ಭಾಗಿಯಾಗಿದ್ದಾರೆ ಎಂದು ಮಾಧ್ಯಮಗಳೇ ಹೇಳುತ್ತಿವೆ. ಹೀಗಾಗಿ ಸಮಯ ಬಂದಾಗ ಎಲ್ಲ ವಿಚಾರಗಳು ಹೊರಬರುತ್ತವೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ನಿಮಗೆ ಸರ್ಕಾರದ ಅಧಿಕಾರಿಗಳೇ ಮಾಹಿತಿ ನೀಡುತ್ತಾದ್ದಾರೆಯೇ ಎಂಬ ಪ್ರಶ್ನೆಗೆ, ‘ನೀವು ಈ ವಿಚಾರವಾಗಿ ಅನೇಕ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ವರದಿ ಮಾಡುತ್ತಿದ್ದೀರಿ. ಆ ಮಾಹಿತಿ ಕೊಟ್ಟವರು ಯಾರು? ನಿಮಗೆ ಪೊಲೀಸ್ ಇಲಾಖೆಯಲ್ಲಿ ಮೂಲಗಳಿರುವಂತೆ ನಮಗೂ ಮೂಲಗಳಿವೆ’ ಎಂದು ಡಿ.ಕೆ.ಶಿವಕುಮಾರ್ ಉತ್ತರಿಸಿದ್ದಾರೆ.