ಬಿಜೆಪಿ ಸರ್ಕಾರ ತರಾತುರಿಯಲ್ಲಿ ಜಾರಿಗೆ ತರಲು ಹೊರಟಿರುವ ಮತಾಂತರ ನಿಷೇಧ ಮಸೂದೆ ಈ ವ್ಯವಸ್ಥೆಗೆ ತಂದೊಡ್ಡಿರುವ ತೊಡಕುಗಳು ಒಂದೆರಡಲ್ಲ. ಆದರೆ, ಈ ಮಸೂದೆ ಅಧಿವೇಶನದಲ್ಲಿ ಮಂಡನೆಯಾಗಿ ಅಂಗೀಕಾರವಾಗುವ ಮೊದಲೂ ಕೂಡ ಮತಾಂತರದ ನೆಪವೊಡ್ಡಿ ಕ್ರೈಸ್ತರ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಸಲಾಗುತ್ತಿತ್ತು. ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಎಂಬ ಸರ್ಕಾರಿಯೇತರ ಸಂಸ್ಥೆ ಈ ಬಗ್ಗೆ ನಡೆಸಿರುವ ಅಧ್ಯಯನ ಈ ಬಗೆಗಿನ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
PUCL ನಡೆಸಿರುವ ಸರ್ವೇಯಲ್ಲಿ 2021ರಲ್ಲಿ 13 ಕ್ರೈಸ್ತರ ಮೇಲೆ ಮತಾಂತರ ಮಾಡಿರುವ ಆರೋಪದಡಿಯಲ್ಲಿ ಕೇಸು ದಾಖಲಿಸಲಾಗಿದೆ ಎಂದು ಹೇಳುತ್ತಿದೆ. ಇದೇ ವೇಳೆ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ಮಾಡಿರುವ 11 ಹಿಂದುತ್ವ ಕಾರ್ಯಕರ್ತರ ಮೇಲೂ ದೂರು ದಾಖಲಿಸಲಾಗಿದೆ. ಆದರೆ 13 ಮಂದಿ ಕ್ರೈಸ್ತರ ಮೇಲೆ ಕೇಸು ದಾಖಲಿಸಿದವರ ಪೈಕಿ 8 ಮಂದಿ ʻಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂಬ ಆರೋಪದಡಿ ಜೈಲಿಗೆ ಕಳುಹಿಸಲಾಗಿದೆ. 11 ಮಂದಿ ಹಿಂದುತ್ವ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾದರೂ, ಅವರಾರು ಪೊಲೀಸ್ ಠಾಣೆಯ ಮೆಟ್ಟಿಲೂ ಏರಿಲ್ಲ ಎಂದು PUCL ಹೇಳುತ್ತಿದೆ.
ಇದಕ್ಕೆ ಪೂರಕ ಎಂಬಂತೆ ಹುಬ್ಬಳಿಯಲ್ಲಿ ನಡೆದ ಘಟನೆಯೊಂದನ್ನೂ ಆಧಾರವಾಗಿ ನೀಡಿದೆ. ಹುಬ್ಬಳ್ಳಿಯ 40 ವರ್ಷದ ಸೋಮು ಅವರ್ಧಿ ಎಂಬ ಕ್ರೈಸ್ತ ವ್ಯಕ್ತಿ ಕಳೆದ ಐದು ವರ್ಷಗಳಿಂದ ಕ್ರೈಸ್ತ ಧಾರ್ಮಿಕತೆಯನ್ನು ಆಚರಿಸಿಕೊಂಡು ಬರುತ್ತಿದ್ದು, ಪ್ರತಿವಾರದ ಕೊನೆಯಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದರು. ಆದರೆ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಹಿಂದುತ್ವ ಕಾರ್ಯಕರ್ತರು, ಹುಬ್ಬಳ್ಳಿಯ ಹೊರ ವಲಯದಲ್ಲಿರುವ ಭೈರದೇವರಕೊಪ್ಪ ಎಂಬಲ್ಲಿ ಕ್ರೈಸ್ತರ ಸಾಮೂಹಿಕ ಪ್ರಾರ್ಥನಾ ಮಂದಿರದ ಮೇಲೆ ಜೈ ಶ್ರೀರಾಮ್ ಘೋಷಣೆ ಕೂಗಿ ದಾಳಿ ಇಟ್ಟಿದ್ದಾರೆ.
ಅಕ್ಟೋಬರ್ 17ರಂದು 40 ಯುವಕರ ಗುಂಪೊಂದು ಕೇಸರಿ ಶಾಲು ಧರಿಸಿ ಕ್ರೈಸ್ತರ ಪ್ರಾರ್ಥನೆ ಶುರುವಾಗುವ ಹೊತ್ತಲ್ಲೇ ಜೈ ಶ್ರೀರಾಮ್ ಘೋಷಣೆ ಕೂಗಲು ಶುರು ಮಾಡಿದ್ದಾರೆ. ಅಲ್ಲದೆ ಆ ದಿನದ ಕ್ರೈಸ್ತ ಬಂಧುಗಳ ಪ್ರಾರ್ಥನೆಗೆ ಅಡ್ಡಿ ಮಾಡಿದ್ದಲ್ಲದೆ, ದಾಂಧಲೆ ಎಬ್ಬಿಸಿ ಮಂದಿರದ ಒಳಗೆ ಪ್ರವೇಶಿಸಿ ಸೋಮು ಸೋಮು ಅವರ್ಧಿಗೆ, ʻʻಮತಾಂತರವಾಗಲು ನಿನಗೆಷ್ಟು ಹಣ ನೀಡಿದ್ದಾರೆ. ಇಲ್ಲಿರುವ ಮಹಿಳೆಯರೇಕೆ ಕುಂಕುಮ, ಹೂವು ಮುಡಿದುಕೊಂಡಿಲ್ಲʼʼ ಎಂದು ಹಿಂದುತ್ವದ ಕಾರ್ಯಕರ್ತರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸೋಮು ಅವರ್ಧಿ ಹೇಳಿದ್ದಾರೆ.
ಈ ವೇಳೆ ಸೋಮು ಅವರ್ಧಿ ಪೊಲೀಸರಿಗೆ ಕರೆ ಮಾಡಿ ಸಹಾಯ ಯಾಚಿಸಿಕೊಂಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ದಾಳಿಯಿಟ್ಟ ಗುಂಪನ್ನು ವಿಚಾರಿಸುವುದು ಬಿಟ್ಟು ನನ್ನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ದಿ ನ್ಯೂಸ್ ಮಿನಿಟ್‌ಗೆ ಸೋಮು ಅವರ್ಧಿ ಹೇಳಿಕೆ ನೀಡಿದ್ದಾರೆ. ಅಲ್ಲದೆ ತಕ್ಷಣವೇ ಸುಮಾರು 100ಕ್ಕೂ ಅಧಿಕ ಹಿಂದೂತ್ವ ಕಾರ್ಯಕರ್ತರ ಜೊತೆಗೆ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಸೇರಿದಂತೆ ಅಂದು ಪೊಲೀಸ್ ಠಾಣೆಯ ಮುಂದೆ ಸೋಮು ಅವರ್ಧಿ ಬಂಧಿಸುವಂತೆ ಪ್ರತಿಭಟನೆಯನ್ನೂ ಮಾಡಿದ್ದರು.
ಪ್ರತಿಭಟನೆ ನಡೆಯುತ್ತಿದ್ದಂತೆ ಪೊಲೀಸರು ಸೋಮು ಅವರ್ಧಿ ಅನ್ನು ಧಾರ್ಮಿಕ ನಂಬಿಕೆಗೆ ಧಕ್ಕೆ ತರಲಾಗಿದೆ ಎಂದು IPC 295A, SC/ST ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿ ಎಫ್‌ಐಆರ್ ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು. ಸುಮಾರು 10 ದಿನಗಳ ಜೈಲು ವಾಸದ ನಂತರ ಈ ಪ್ರಕರಣದಲ್ಲಿ ಸೋಮು ಅವರ್ಧಿ ಸದ್ಯ ಬಿಡುಗಡೆಗೊಂಡಿದ್ದಾರೆ. ಅಲ್ಲದೆ ಈ ಘಟನೆ ನಡೆದ ಬಳಿಕ ಭೈರದೇವರಕೊಪ್ಪದಲ್ಲಿ ಕ್ರೈಸ್ತ ಬಂಧುಗಳ ಸಾಮೂಹಿಕ ಪ್ರಾರ್ಥನೆಯೇ ನಿಂತು ಹೋಗಿದೆ.
ಆದರೀಗ ಡಿಸೆಂಬರ್ 23ರಂದು ಚಳಿಗಾಳದ ಅಧಿವೇಶನದಲ್ಲಿ ಆಡಳಿತಾರೂಢ ಬಿಜೆಪಿ ಮತಾಂತರ ನಿಷೇಧ ಮಸೂದೆ ಮಂಡಿಸಿ, ಇಂಥಾ ಪುಂಡ ಪೋಕಿರಿಗಳು ಗೂಂಡಾಗಿರಿಗೆ ಕಾನೂನಿನ ತೊಗಲು ಅಂಟಿಸಿಕೊಟ್ಟಿದೆ. ಜೊತೆಗೆ ಪೊಲೀಸರಿಗೂ ʻತನಿಖೆ ಹಾಗೂ ಪ್ರಕರಣʼ ದಾಖಲಿಸುವ ಹಾದಿಯನ್ನು ಸುಗಮ ಮಾಡಿಕೊಟ್ಟಿದೆ. ಸದ್ಯ ಬಿಜೆಪಿ ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿರುವ ಈ ಮತಾಂತರ ನಿಷೇಧ ಮಸೂದೆ ಹೆಚ್ಚು ಕಮ್ಮಿ ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಗುಜರಾತ್ ನಲ್ಲಿ ಜಾರಿಗೆ ತರಲಾಗಿರುವ ಮತಾಂತರ ನಿಷೇಧ ಕಾಯಿದೆಯ ಪ್ರತಿಯಂತೆಯೇ ಇದೆ.
ಅತ್ತ ಹುಬ್ಬಳ್ಳಿಯಲ್ಲಿ ಸೋಮು ಅವರ್ಧಿ ಮೇಲೆ ದಾಳಿ ನಡೆದ ರೀತಿಯಲ್ಲೇ ಇತ್ತ ಕೊಡಗಿನ ಶನಿವಾರಸಂತೆಯಲ್ಲೂ ಅದೇ ಮಾದರಿಯಲ್ಲಿ ಹಿಂದುತ್ವವಾದಿಗಳು ಕ್ರೈಸ್ತ ಪ್ರಾರ್ಥನಾ ಮಂದಿರದ ಮೇಲೆ ದಾಳಿ ಇಟ್ಟು ದೊಂಬಿ ಎಬ್ಬಿಸಿದ್ದರು. ಪಾದ್ರಿ ಮಂಜುನಾಥ್ ಎಂಬರು ಪ್ರತಿವಾರ ನಡೆಸಿಕೊಂಡು ಬರುವ ಸಾಮೂಹಿಕ ಪ್ರಾರ್ಥನೆಯ ವೇಳೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ದಾಳಿಯಿಟ್ಟು ಪ್ರಾರ್ಥನೆಗೆ ಅಡ್ಡಿ ಪಡಿಸಿದ್ದಾರೆ. ಕಳೆದ ಏಳು ವರ್ಷಗಳಿಂದ ನಾನು ಇಲ್ಲಿ ಪ್ರಾರ್ಥನೆಗೆ ನೇತೃತ್ವಕೊಡುತ್ತಿದ್ದು, ʻʻಈ ಏಳು ವರ್ಷದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಇಂಥಾ ಘಟನೆ ನಡೆದಿದೆ. ಪ್ರಾರ್ಥನೆ ಪ್ರಾರಂಭವಾದ ಹೊತ್ತಲ್ಲೇ ಗುಂಪೊಂದು ಆಗಮಿಸಿ ಮೊಬೈಲ್ ಗಳಲ್ಲಿ ಸೆರೆ ಹಿಡಿದು ಪ್ರಾರ್ಥನೆ ನಿಲ್ಲಿಸುವಂತೆ ಬೆದರಿಕೆ ಹಾಕಿದ್ದಾರೆʼʼ ಎಂದು ಪಾದ್ರಿ ಮಂಜುನಾಥ್ ಹೇಳಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪಾದ್ರಿ ಮಂಜುನಾಥ್ ಎರಡು ವಾರಗಳ ಕಾಲ ಜೈಲು ಸೇರಿದ್ದರು. ಹೀಗೆ ರಾಜ್ಯದ ಮೂಲೆ ಮೂಲೆಯ್ಲೂ ಇಂಥ ಘಟನೆಗಳು ಹೇರಳವಾಗಿ ನಡೆದಿದೆ ಎಂದು PUCL ವರದಿ ಹೇಳಿದೆ.
2021ರ ಅವಧಿಯಲ್ಲಿ ಇಡೀ ರಾಜ್ಯದಲ್ಲಿ ಇಂಥಾ ಸುಮಾರು 39 ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿಗಳು ನಡೆದಿದೆ. ಹಿಂದುತ್ವದ ಕಾರ್ಯಕರ್ತರು ಹಾಗೂ ಪೊಲೀಸರ ಜೊತೆಗೆ ಮಾಧ್ಯಮಗಳೂ ಕೈಜೋಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ನಡೆದಿರುವ ಈ ಎಲ್ಲಾ ಪ್ರಕರಣಗಳಲ್ಲಿ ದಾಳಿ ನಡೆಸಿದ್ದು ಬಲಪಂಥೀಯ ಸಂಘಟನೆಗಾಳಿದ್ದರೂ ಕೂಡ ದೂರು ದಾಖಲಾಗಿದ್ದು ಕ್ರೈಸ್ತ ಬಂಧುಗಳ ಮೇಲೆ ಎನ್ನುವುದು ಇಲ್ಲಿನ ಗಮನಾರ್ಹ ವಿಷಯ. ಅಲ್ಲದೆ ಧಾರ್ಮಿಕ ನಂಬಿಕೆಗೆ ಧಕ್ಕೆ ತರಲಾಗಿದೆ ಎಂದು IPC 295A ಹಾಗೂ SC/ST ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲೇ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರ ಏಕ ಸ್ವಾಮ್ಯದ ನಡವಳಿಕೆಗಳು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.