ಜೋಗ ಜಲಪಾತದ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಇನ್ನಷ್ಟು ಐಷಾರಾಮಿ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಜಲಪಾತ ಪ್ರದೇಶವನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಆ ಸಂಬಂಧ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿಸಿ, ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಆದರೆ, ಸದ್ಯ ಅಳಿವಿನಂಚಿನ ಸಂತತಿ ಎಂದು ಗುರುತಿಸಲಾಗಿರುವ ಅಪರೂಪದ ಲಯನ್ ಟೈಲ್ಡ್ ಮಕಾಕಿ(ಸಿಂಗಳೀಕ-ಎಲ್ ಟಿಎಂ) ಸಂರಕ್ಷಿತ ಪ್ರದೇಶವೆಂದು ಹೊಸದಾಗಿ ಘೋಷಣೆಯಾಗಿರುವ ಶರಾವತಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಆರಂಭವಾಗಿರುವ ಈ ಜೋಗ ಅಭಿವೃದ್ಧಿ ಕಾಮಗಾರಿಗಳಿಗೆ ಪರಿಸರ ಇಲಾಖೆಯ ಅನುಮತಿಯನ್ನೇ ಪಡೆದಿಲ್ಲ!
ಬರೋಬ್ಬರಿ 185 ಕೋಟಿ ರೂ.ಮೊತ್ತದ ಈ ಬೃಹತ್ ಕಾಮಗಾರಿ ಬಹುತೇಕ ಜೋಗ ಜಲಪಾತದ ವ್ಯಾಪ್ತಿಯ ಶರಾವತಿ ಕಣಿವೆಯಲ್ಲಿ ಭಾರೀ ಪರಿಸರ ಹಾನಿಗೆ ಕಾರಣವಾಗಲಿದೆ ಮತ್ತು ಆ ಪ್ರದೇಶದ ಒಟ್ಟಾರೆ ಪರಿಸರ ಸಮತೋಲನಕ್ಕೆ ದೊಡ್ಡ ಪ್ರಮಾಣದಲ್ಲಿ ಧಕ್ಕೆ ತರಲಿದೆ ಎಂಬುದು ಪರಿಸರಾಸಕ್ತರ ಆತಂಕ. ಅಷ್ಟೇ ಅಲ್ಲ, ಈ ಹೊಸ ಯೋಜನೆಯೂ ಸೇರಿದಂತೆ ಸರಿಸುಮಾರು ಕಳೆದ ಒಂದೂವರೆ ದಶಕದಿಂದ ಚಾಲ್ತಿಯಲ್ಲಿರುವ ಜೋಗ ಅಭಿವೃದ್ಧಿಯ ಹೆಸರಿನ ಶರಾವತಿ ಕಣಿವೆ ಕಾಂಕ್ರೀಟೀಕರಣದ ಹಲವು ಯೋಜನೆಗಳನ್ನು ಸ್ಥಳೀಯರು ಕೂಡ ಖಡಾಖಂಡಿತವಾಗಿ ವಿರೋಧಿಸುತ್ತಲೇ ಬಂದಿದ್ದಾರೆ.
ಅಷ್ಟೇ ಅಲ್ಲ, ಸರ್ವ ಋತು ಜಲಪಾತ, ಝಿಪ್ ಲೈನ್, ಐಷಾರಾಮಿ ಪಂಚಾತಾರಾ ಹೋಟೆಲ್, ರೋಪ್ ವೇ, ಈಜುಕೊಳ, ಶಾಪಿಂಗ್ ಕಾಂಪ್ಲೆಕ್ಸ್ ಸೇರಿದಂತೆ ಹಲವು ಪ್ರವಾಸಿ ಆಕರ್ಷಣೆಯ ಯೋಜನೆಗಳಿಗೆ 2016ರಿಂದಲೇ ಕೇಂದ್ರ ಪರಿಸರ ಇಲಾಖೆ, ರಾಜ್ಯ ಮತ್ತು ಕೇಂದ್ರ ವನ್ಯಜೀವಿ ಮಂಡಳಿಗಳು ಅನುಮತಿ ನಿರಾಕರಿಸುತ್ತಲೇ ಬಂದಿವೆ. ಮುಖ್ಯವಾಗಿ ಈ ಕಾಮಗಾರಿಗಳು ನಡೆಯುವುದು ಜಗತ್ತಿನ ಅತಿ ಸೂಕ್ಷ್ಮ ಪರಿಸರ ಪ್ರದೇಶಗಳಲ್ಲಿ ಒಂದಾಗಿರುವ ಶರಾವತಿ ಕಣಿವೆಯಲ್ಲಿ; ಅದರಲ್ಲೂ ಶರಾವತಿ ಅಭಯಾರಣ್ಯ ಮತ್ತು ಎಲ್ ಟಿಎಂ ಸಂರಕ್ಷಿತ ಪ್ರದೇಶದ ಅಧಿಸೂಚಿತ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಎಂಬುದು ಅರಣ್ಯ ಮತ್ತು ಪರಿಸರ ಸಚಿವಾಲಯದ ಆಕ್ಷೇಪದ ಹಿಂದಿನ ಕಾರಣ.
ಆದರೆ, ಶಿವಮೊಗ್ಗ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜೋಗ ಅಭಿವೃದ್ಧಿ ಪ್ರಾಧಿಕಾರ(ಜೆಡಿಎ) ತಯಾರಿಸಿ ವಿವರ ಯೋಜನಾ ವರದಿ(ಡಿಪಿಆರ್) ಆಧರಿಸಿ ಕೆಪಿಸಿಎಲ್ ಅಡಿಯಲ್ಲಿ 185 ಕೋಟಿ ಮೊತ್ತದ ಬೃಹತ್ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಈಗಾಗಲೇ ಶಂಕರನಾರಾಯಣ ಕನ್ ಸ್ಟ್ರಕ್ಷನ್ಸ್(ಎಸ್ ಎನ್ ಸಿ) ಕಂಪನಿಗೆ ಕಾಮಗಾರಿ ಟೆಂಟರ್ ನೀಡಲಾಗಿದೆ. ಕಂಪನಿ ಈಗಾಗಲೇ ನಿರ್ಮಾಣ ಪೂರ್ವಭಾವಿ ಕಾಮಗಾರಿಗಳನ್ನೂ ಆರಂಭಿಸಿದೆ. ಈಗ ತಿಂಗಳ ಹಿಂದೆ ಜೋಗ ಅಭಿವೃದ್ಧಿಯ ಯೋಜನೆಯ ಭಾಗವಾಗಿಯೇ ಆರಂಭವಾದ ಪಂಚತಾರಾ ಹೋಟೆಲ್ ನಿರ್ಮಾಣ ಕಾಮಗಾರಿಯನ್ನು ಯಾವ ಪರಿಸರ ನಿರಾಕ್ಷೇಪಣಾ ವರದಿಯನ್ನೂ ಪಡೆಯದೆ ಏಕಾಏಕಿ ಆರಂಭಿಸಲಾಗಿದೆ.
ಝಿಪ್ ಲೈನ್ ಕಾಮಗಾರಿ ಕೂಡ ಗುಟ್ಟಾಗಿ ಆರಂಭವಾಗಿದೆ ಎಂಬುದು ಸ್ಥಳೀಯ ಪರಿಸರಾಸಕ್ತರ ಆರೋಪ. ಇಂತಹ ಮಾತುಗಳಿಗೆ ಪೂರಕವಾಗಿ ಸ್ಥಳದಲ್ಲಿ ಈಗಾಗಲೇ ವಿವಿಧ ಕಾಮಗಾರಿಗಳು ಆರಂಭವಾಗಿದ್ದು, ಆ ಸಂಬಂಧ ಯಾವುದೇ ಪರಿಸರ ನಿರಪೇಕ್ಷಣಾ ವರದಿ ಪಡೆದಿಲ್ಲ ಎಂಬುದನ್ನೂ ಅರಣ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ. ನಿಯಮದ ಪ್ರಕಾರ ಕೇಂದ್ರ ಪರಿಸರ ಸಚಿವಾಲಯದಿಂದ ಪರಿಸರ ಪರಿಣಾಮ ಸಮಾಲೋಚನಾ ಸಭೆ ನಡೆಸಿ, ಜನಾಭಿಪ್ರಾಯ ಮತ್ತು ತಜ್ಞರ ಸಲಹೆ ಬಳಿಕ ಯೋಜನೆಗೆ ಇಲಾಖೆಯ ಪರವಾನಗಿ ಪಡೆಯಬೇಕು. ಆದರೆ, 2016ರಿಂದ ಈವರೆಗೆ ಜೋಗ ಅಭಿವೃದ್ಧಿ ಪ್ರಾಧಿಕಾರದ ಹಲವು ಪ್ರಸ್ತಾವನೆಗಳಿಗೆ ಕೇಂದ್ರ ಪರಿಸರ ಇಲಾಖೆ ತಿರಸ್ಕಾರದ ಮುದ್ರೆ ಒತ್ತಿದೆ. 2018ರಲ್ಲಿ ಕೂಡ ಕೇಂದ್ರ ಪರಿಸರ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಜನಾಭಿಪ್ರಾಯ ಮತ್ತು ಸ್ಥಳ ಪರಿಶೀಲನೆಯ ಬಳಿಕ ಅರಣ್ಯ 0.44 ಹೆಕ್ಟೇರ್ ಭೂಮಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಅವಕಾಶ ನೀಡಲು ತೀರ್ಮಾನಿಸಲಾಗುವುದು. ಆವರೆಗೆ ಆ ಸ್ಥಳದಲ್ಲಿ ಯಾವುದೇ ನಿರ್ಮಾಣ ಕಾಮಗಾರಿಗೆ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು.
ಆ ಹಿನ್ನೆಲೆಯಲ್ಲಿಯೇ ತಿಂಗಳ ಹಿಂದೆ ಆರಂಭವಾಗಿದ್ದ ಯೋಜನೆಯ ಪೂರಕ ಕಾಮಗಾರಿಗಳಿಗೆ ಸ್ಥಳೀಯ ಅರಣ್ಯಾಧಿಕಾರಿಗಳಿಗೆ ತಡೆ ಒಡ್ಡಿದ್ದಾರೆ. ಈ ಪ್ರದೇಶ ಶರಾವತಿ ಅಭಯಾರಣ್ಯದ ವ್ಯಾಪ್ತಿಗೆ ಬರುತ್ತಿದ್ದು, ನಿಯಮದ ಪ್ರಕಾರ ಅಲ್ಲಿ ಯಾವುದೇ ಅರಣ್ಯೇತರ ಚಟುವಟಿಕೆಗಳಿಗೆ ಅವಕಾಶವಿಲ್ಲ. ಜೊತೆಗೆ ಹೊಸದಾಗಿ ಘೋಷಿಸಲಾಗಿರುವ ಎಲ್ ಟಿಎಂ ಸಂರಕ್ಷಿತ ವಲಯದ ಪರಿಸರ ಸೂಕ್ಷ್ಮ ಪ್ರದೇಶದ ಗಡಿ ನಿಗದಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಹಾಗಾಗಿ ಸದ್ಯಕ್ಕೆ ಯಾವುದೇ ಕಾಮಗಾರಿ ನಡೆಸುವಂತಿಲ್ಲ ಎಂದು ಅಧಿಕಾರಿಗಳಿಗೆ ಗುತ್ತಿಗೆದಾರರಿಗೆ ತಾಕೀತು ಮಾಡಿದ್ದಾರೆ. ಅಲ್ಲದೆ, ಈ ಸಂಬಂಧ ಜೋಗ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದಿರುವ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಪರಿಸರ ಸೂಕ್ಷ್ಮ ಪ್ರದೇಶದ ವಿಷಯದಲ್ಲಿ ಅಂತಿಮ ನಿರ್ಧಾರವಾಗುವವರೆಗೆ ಜೋಗದ ವ್ಯಾಪ್ತಿಯ ಕಾಮಗಾರಿಗಳಿಗೆ ಕೂಡಲೇ ತಡೆ ನೀಡಿ ಎಂದು ಹೇಳಿದ್ದಾರೆ. ಈ ಮೊದಲು, 185 ಕೋಟಿ ರೂ. ಮೊತ್ತದ ಯೋಜನೆಯ ಪ್ರಸ್ತಾವನೆಯ ಹಂತದಲ್ಲೆ ಯೋಜನೆ ಜಾರಿಗೊಳಿಸಲು ಆಯ್ಕೆಮಾಡಿದ್ದ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೇ ಇದು ದುಬಾರಿ ಯೋಜನೆ, ಜೋಗದಂತಹ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಬೃಹತ್ ನಿರ್ಮಾಣಗಳ ಇಂತಹ ಯೋಜನೆಯ ಅಗತ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ಮೊದಲು ಶರಾವತಿ ಅಭಯಾರಣ್ಯವಾಗಿದ್ದ ಶರಾವತಿ ಕೊಳ್ಳದ ಪ್ರದೇಶವನ್ನು ಇದೀಗ ಶರಾವತಿ ಎಲ್ ಟಿಎಂ ಸಂರಕ್ಷಿತ ಪ್ರದೇಶ ಎಂದು ಘೋಷಿಸಿದ್ದರೂ, ಕಳೆದ ಎರಡು ವರ್ಷಗಳಿಂದ ಎಲ್ ಟಿಎಂ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ಪ್ರದೇಶದ ಗಡಿಗಳನ್ನು ಗುರುತಿಸಲಾಗಿಲ್ಲ. ಆ ಗಡಿ ಗುರುತಿಸುವ ವಿಷಯದಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ನಿರ್ವಹಣಾ ಸಮಿತಿ ನಿರ್ಧಾರ ಕೈಗೊಳ್ಳಬೇಕಾಗಿದೆ. ಗಡಿ ಗುರುತಿಸುವಿಕೆ ಅಂತಿಮವಾದ ಬಳಿಕವಷ್ಟೇ ಜೋಗದ ಅಭಿವೃದ್ಧಿ ಯೋಜನೆಯ ಬೃಹತ್ ಕಾಮಗಾರಿಗಳು ಸಾಮಾನ್ಯ ಮೀಸಲು ಅರಣ್ಯ ವ್ಯಾಪ್ತಿಗೆ ಬರುತ್ತವೆಯೇ? ಅಥವಾ ಎಲ್ ಟಿಎಂ ಸಂರಕ್ಷಿತ ವಲಯದ ವ್ಯಾಪ್ತಿಗೆ ಬರುತ್ತವೆಯೇ ಎಂಬುದು ನಿರ್ಧಾರವಾಗಲಿದೆ.
ಆದರೆ, ಅಂತಹ ಮಹತ್ವದ ನಿರ್ಧಾರಕ್ಕೆ ಮುನ್ನವೇ 185 ಕೋಟಿ ರೂ ಬೃಹತ್ ಮೊತ್ತದ ಕಿಕ್ ಬ್ಯಾಕ್ ಮೇಲೆ ಕಣ್ಣಿಟ್ಟು ಜಿಲ್ಲೆಯ ರಾಜಕಾರಣಿಗಳು ತರಾತುರಿಯಲ್ಲಿ ಸೂಕ್ಷ್ಮ ಪರಿಸರ ಪ್ರದೇಶ ಮತ್ತು ದೇಶದ ಅರಣ್ಯ ಕಾಯ್ದೆಯ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ಗುತ್ತಿಗೆದಾರರಿಗೆ ಕುಮ್ಮಕ್ಕು ನೀಡಿ ಕಾಮಗಾರಿ ಆರಂಭಿಸಿದ್ದಾರೆ. ಆ ಹಿನ್ನೆಲೆಯಲ್ಲಿಯೇ ಮಲೆನಾಡಿನ ಪರಿಸರಾಸಕ್ತರು ಈಗಾಗಲೇ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳ ಮೂಲಕ ಜೋಗ ಪ್ರದೇಶವನ್ನು ವಿಶ್ವ ಪರಂಪರೆ ತಾಣ ಎಂದು ಘೋಷಿಸಿ, ಅಲ್ಲಿನ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ವನ್ಯಜೀವಿ ವಿಭಾಗದ ಉನ್ನತಾಧಿಕಾರಿಗಳಿಗೂ ಈ ಬಗ್ಗೆ ಮನವಿ ಸಲ್ಲಿಸಿ, ಎಲ್ ಟಿಎಂ ಸಂರಕ್ಷಿತ ಪ್ರದೇಶದ ಪರಿಸರಸೂಕ್ಷ್ಮ ಪ್ರದೇಶ ನಿಗದಿಯ ವಿಷಯದಲ್ಲಿ ಕೂಡಲೇ ನಿರ್ಧಾರ ಕೈಗೊಂಡು ಅತಿ ಸೂಕ್ಷ್ಮ ಪ್ರದೇಶದಲ್ಲಿ ಕಾಂಕ್ರೀಟ್ ಕಾಡು ನಿರ್ಮಾಣವಾಗುವುದನ್ನು ತಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಇಷ್ಟೆಲ್ಲಾ ವಿರೋಧ, ಅಪಸ್ವರದ ನಡುವೆಯೂ ಪರಿಸರ ಹಾನಿಯ ಈ ಯೋಜನೆಯನ್ನು ಎಲ್ಲಾ ನಿಯಮ, ಕಾನೂನುಗಳನ್ನು ಗಾಳಿಗೆ ತೂರಿ ಜಾರಿಗೆ ತರುತ್ತಿರುವುದರ ಹಿಂದೆ ಏನಿದೆ? ಎಂಬ ಪ್ರಶ್ನೆಗೆ, ಸ್ವಾನ್ ಆ್ಯಂಡ್ ಮ್ಯಾನ್ ಪರಿಸರ ಸಂಸ್ಥೆಯ ಅಖಿಲೇಶ್ ಚಿಪ್ಪಳಿ, “ಇದು ಖಂಡಿತವಾಗಿಯೂ ಪಶ್ಚಿಮಘಟ್ಟ ವ್ಯಾಪ್ತಿಯ ಅತಿ ಸೂಕ್ಷ್ಮ ಪರಿಸರದ ಮೇಲಿನ ಪ್ರಹಾರ. ಜೋಗಕ್ಕೆ ಬರುವ ಪ್ರವಾಸಿಗರಿಗೆ ಸದ್ಯ ಇರುವ ಸೌಕರ್ಯಗಳಲ್ಲಿ ಯಾವ ಕೊರತೆಯೂ ಇಲ್ಲ. ಬಂದು ನಿಸರ್ಗ ಸೌಂದರ್ಯವನ್ನು ಕಣ್ತುಂಬಿಕೊಂಡು ಹೋಗುವವರಿಗೆ ಇಲ್ಲಿ ಸ್ಕೈಬಾರ್, ರೆಸ್ಟೋರೆಂಟ್, ಪಬ್, ಈಜುಕೊಳಗಳನ್ನು ಒಳಗೊಂಡು ಮೂರು ಹಂತದ ವೀಕ್ಷಣಾಲಯಗಳು, ರೋಪ್ ವೇ, ಝಿಪ್ ಲೈನ್ ಗಳು ಯಾಕೆ ಬೇಕು? ಈಗಿರುವ ಜಾಗದಲ್ಲೇ ಸುಸಜ್ಜಿತ ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆಗಳನ್ನು ಮಾಡಿದರೆ ಸಾಕಲ್ಲವೆ? ಆದರೆ, ಅಷ್ಟು ಸರಳವಾಗಿ ಜೋಗವನ್ನು ಇಟ್ಟರೆ, ಅದರ ಹೆಸರಲ್ಲಿ ಚುನಾವಣೆಗೆ ದುಡ್ಡು ಮಾಡುವುದು ಹೇಗೆ? ಎಂಬುದು ರಾಜಕಾರಣಿಗಳ ಯೋಚನೆ. ಹಾಗಾಗಿಯೇ ಜನರ ತೆರಿಗೆ ಹಣ ಮತ್ತು ಪರಿಸರ ಲೂಟಿಯ ಈ ದುಬಾರಿ ಯೋಜನೆ” ಎಂದು ಹೇಳುತ್ತಾರೆ.
ಹೌದು ‘ಪ್ರತಿಧ್ವನಿ’ಗೆ ಲಭ್ಯವಾಗಿರುವ 185 ಕೋಟಿ ರೂ. ಮೊತ್ತದ ಯೋಜನೆಯ ವಿವರ ವರದಿಯ ಪ್ರಕಾರ, ಮೂರು ಅಂತಸ್ತಿನ ವಿಶಾಲ ವೀಕ್ಷಣಾಲಯ ನಿರ್ಮಾಣವಾಗಲಿದೆ. ಆ ವೀಕ್ಷಣಾಲಯದ ಮೊದಲ ಮಹಡಿಯಲ್ಲಿ ಆಂಪಿ ಥಿಯೇಟರ್ ಮಾದರಿಯ ವೀಕ್ಷಣಾಲಯ, ರೆಸ್ಟ್ ರೂಂ, ಎರಡನೇ ಮಹಡಿಯಲ್ಲಿ ಹೋಟಲ್, ಕೆಫಿಟೀರಿಯಾಗಳು, ಸೀಟಿಂಗ್ ಏರಿಯಾ, ಮೂರನೇ ಮಹಡಿಯಲ್ಲಿ ಓಪನ್ ಬಾರ್, ಕ್ಲೋಸ್ ರೆಸ್ಟೋರೆಂಟ್, ಫುಡ್ ಕಿಯೋಸ್ಕ್ ಗಳ ಜೊತೆಗೆ ಜಲಪಾತಕ್ಕೆ ಮುಖಾಮುಖಿಯಾಗಿ ವೀಕ್ಷಣಾ ಪ್ರದೇಶವನ್ನು ಹೊಂದಲಿದೆ. ಜೊತೆಗೆ ಈ ಅಭಿವೃದ್ಧಿ ಯೋಜನೆಯಡಿ ಸೈನ್ಸ್ ಮ್ಯೂಸಿಯಂ, ಸಾವನಿಯರ್ ಶಾಪ್, ಪಂಚತಾರಾ ಹೋಟೆಲ್, ಈಜುಕೊಳ, ಪಾರ್ಕಿಂಗ್ ಬೇ, ಬೃಹತ್ ಶರಾವತಿ ಪ್ರತಿಮೆ ಸೇರಿದಂತೆ ಹಲವು ಪ್ರವಾಸಿ ಆಕರ್ಷಣೆಗಳನ್ನು ನಿರ್ಮಾಣವಾಗಲಿವೆ. ಈ ನಿರ್ಮಾಣಗಳಿಗಾಗಿ ಈಗಾಗಲೇ ಇರುವ ಹೋಟೆಲ್, ಪ್ರವೇಶದ್ವಾರ, ವೀಕ್ಷಣಾ ಗೋಪುರ, ಕಣಿವೆಗೆ ಇಳಿಯುವ ಮೆಟ್ಟಿಲು ಸೇರಿದಂತೆ ಹಲವು ಕಟ್ಟಡ ಮತ್ತು ರಚನೆಗಳನ್ನು ನೆಲಸಮ ಮಾಡಲಾಗುವುದು!
ಅಂದರೆ, ಈ ಯೋಜನೆ ಸಂಪೂರ್ಣ ಜಾರಿಯಾಗಿ ಕಾಮಗಾರಿಗಳು ಪೂರ್ಣಗೊಳ್ಳುವ ಹೊತ್ತಿಗೆ ಜೋಗ ಜಲಪಾತ, ಈಗಿನಂತೆ ಶರಾವತಿ ಕಣಿವೆಯ ಪ್ರಾಕೃತಿಕ ಅಧ್ಬುತವಾಗಿ ಉಳಿಯುವುದೇ ಅನುಮಾನ. ಬದಲಾಗಿ ಒಂದು ಐಷಾರಾಮಿ, ಸಂಪೂರ್ಣ ವಾಣಿಜ್ಯ ದಂಧೆಯ ಪ್ರವಾಸಿ ತಾಣವಾಗಿ ಪರಿವರ್ತನೆಯಾಗಲಿದೆ. ಹೀಗೆ ಪಂಚತಾರಾ ಶೈಲಿಯಲ್ಲಿ ಬದಲಾಗುವ ಜೋಗದ ಪ್ರವೇಶ ರಾಜ್ಯದ ಮೂಲೆಮೂಲೆಯಿಂದ ಬರುವ ಬಡವರು, ಜನಸಾಮಾನ್ಯರಿಗೆ ಎಟುಕುವುದೇ ಎಂಬುದು ಮತ್ತೊಂದು ಪ್ರಶ್ನೆ.
ಒಂದು ಕಡೆ ಪರಿಸರದ ಹಾನಿಯ ಪ್ರಶ್ನೆ. ಅಪರೂಪದ ಸಿಂಗಳೀಕ, ಹಾರುವ ಓತಿ, ಕೆಂದಳಿಲು, ಕಾಡುಕೋಣ, ಕರಿ ಚಿರತೆ, ಗ್ರೇಟ್ ಇಂಡಿಯನ್ ಹಾರ್ನ್ ಬಿಲ್, ಕಾಳಿಂಗ ಸರ್ಪ ಮುಂತಾದ ಅಪರೂಪದ ಜೀವ ಸಂತತಿಗಳ ನೆಲೆಯ ನಾಶದ ಆತಂಕ. ಮತ್ತೊಂದು ಕಡೆ ರಾಜ್ಯದ ಜನಸಾಮಾನ್ಯರಿಂದ ಪ್ರಕೃತಿದತ್ತ ಅಭ್ಉತ ಜಲಪಾತವೊಂದನ್ನು ದೂರ ಮಾಡುವ ಅಪಾಯ ಈ 185 ಕೋಟಿ ಯೋಜನೆ ಹೊತ್ತು ತಂದಿರುವ ಶಾಪಗಳು. ಆದರೆ, ಆ ಯೋಜನೆಯನ್ನು ಜಾರಿಗೊಳಿಸಿಯೇ ಸಿದ್ಧ ಎಂಬ ಹಠಕ್ಕೆ ಬಿದ್ದು, ಕಾಮಗಾರಿ ಆರಂಭಿಸಲು ಧಾವಂತ ಮಾಡುತ್ತಿರುವ ರಾಜಕಾರಣಿಗಳಿಗೆ ಚುನಾವಣೆ ಹೊತ್ತಿಗೆ ಕಾಸು ಮಾಡಿಕೊಳ್ಳುವ ತರಾತುರಿ. ಹಾಗಾಗಿ ಮಲೆನಾಡಿನ ಪರಿಸರಾಸಕ್ತರು ಈಗ ಗಟ್ಟಿ ದನಿ ಎತ್ತಿದ್ದಾರೆ. ಜೋಗವನ್ನು ಅದರ ಸೂಕ್ಷ್ಮತೆ ಮತ್ತು ಸರಳತೆಯೊಂದಿಗೆ ಉಳಿಸಿಕೊಳ್ಳುವುದು ಕೇವಲ ಪರಿಸರದ ಕಾರಣಕ್ಕೆ ಮಾತ್ರವಲ್ಲ; ಜನ ಸಾಮಾನ್ಯರ ಹಿತದೃಷ್ಟಿಯಿಂದಲೂ ಅನಿವಾರ್ಯ ಎಂಬುದು ಅವರ ವಾದ!