ರಾಜ್ಯ ಬಿಜೆಪಿಯಲ್ಲಿ ಸದ್ಯ ಜೋರಾಗಿ ಕೇಳಿ ಬರುತ್ತಿರುವ ಕೂಗು ಎಂದರೆ ಅದು ಸಂಪುಟ ವಿಸ್ತರಣೆ. ಈ ನಡುವೆ ಶಾಸಕರಾದ ರೇಣುಕಾಚಾರ್ಯ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಎಂದು ಒತ್ತಡ ತಂತ್ರ ಹೇರಲು ಮುಂದಾಗಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಹಳೆಯ ಮುಖಗಳಿಗೆ ಹೆಚ್ಚು ಮನ್ನಣೆ ಸಿಗುತ್ತದೆ. ಹೊಸ ಮುಖಗಳಿಗೆ ಸಚಿವರಾಗಲು ಅರ್ಹತೆ ಇಲ್ಲವೇ ಎಂದು ಬಿಜೆಪಿ ಹೈಕಮಾಂಡ್ ಅನ್ನು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಮೈತ್ರಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ ನಾನು ಹಾಗೂ ಯತ್ನಾಳ್ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಇನ್ನಿಲ್ಲದ ಪ್ರಯತ್ನ ಮಾಡಿದ್ದೇವೆ. ನಮ್ಮ ಇಬ್ಬರ ಹೋರಾಟ ಹೈಕಮಾಂಡ್ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು, ನಮ್ಮ ಕ್ಷೇತ್ರದ ಸಮಸ್ಯೆಗಳ ಕುರಿತು ಸಚಿವರುಗಳಿಗೆ ಕರೆ ಮಾಡಿದರೆ ಅವರ ಆಪ್ತ ಸಹಾಯಕರು ಕರೆಯನ್ನು ಸ್ವೀಕರಿಸಿ ನಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಶಾಸಕರ ಪರಿಸ್ಥಿತಿ ಹೇಳಿತೀರದು. ಈಗಲೇ ಸಚಿವ ಸಂಪುಟ್ ವಿಸ್ತರಣೆಯಾಗಬೇಕು. ಈ ವಿಚಾರವಾಗಿ ಖುದ್ದು ನಾನು ಹೈಕಮಾಂಡ್ ಅನ್ನು ಭೇಟಿ ಮಾಡುವೆ ಎಂದಿದ್ದಾರೆ.

ನನ್ನ ಹಾಗೂ ಯತ್ನಾಳ್ ಪ್ರಯತ್ನ ಏನಿದ್ದರೂ ಹೊಸ ಮುಖಗಳಿಗೆ ಪಕ್ಷದಲ್ಲಿ ಮನ್ನಣೆ ಸಿಗುವಂತೆ ಮಾಡುವುದು. ನಾವು ಪಕ್ಷದ ವಿರುದ್ದ ಅಥವಾ ನಾಯಕತ್ವದ ವಿರುದ್ದ ಮಾತನಾಡುತ್ತಿಲ್ಲ ಎಂದು ವಿವರಿಸಿದರು.
ಮಾಜಿ ಸಿಎಂ ಬಿಎಸ್ ವೈ ಪುತ್ರ ವಿಜಯೇಂದ್ರಗೆ ಸಚಿವ ಸ್ಥಾನದ ಕುರಿತ ಪ್ರಶ್ನೆಗೆ ಹೆಚ್ಚಿಗೆ ಪ್ರತಿಕ್ರಿಯಿಸದೇ ಅದು ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಚಾರ ಎಂದರು.