ರಾಜ್ಯಾದ್ಯಂತ ಭಾರೀ ಜನಬೆಂಬಲ ಗಳಿಸುತ್ತಿರುವ ಜೆಡಿಎಸ್ ಈ ಬಾರಿ ಕಾಂಗ್ರೆಸ್-ಬಿಜೆಪಿ ಪಕ್ಷಗಳಿಗೆ ಸಡ್ಡು ಹೊಡೆದು ರಾಜಕಾರಣ ಮಾಡುತ್ತಿದೆ. ಈಗಾಗಲೇ 92 ಜನ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವ ಕುಮಾರಸ್ವಾಮಿ, ಪಂಚರತ್ನ ಯೋಜನೆಗಳ ಬಗ್ಗೆ ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಇಡೀ ಕರ್ನಾಟಕವನ್ನೇ ಸುತ್ತುತ್ತಿದ್ದಾರೆ. ದಕ್ಷಿಣ ಕರ್ನಾಟಕದ ಹಳೇ ಮೈಸೂರು ಭಾಗವನ್ನು ಪೂರ್ಣ ಮಾಡಿದ ಬಳಿಕ ಇದೀಗ 2ನೇ ಹಂತದಲ್ಲಿ ಉತ್ತರ ಕರ್ನಾಟಕ ಭಾಗದಿಂದ ಮಧ್ಯ ಕರ್ನಾಟಕ ದಾವಣಗೆರೆ ತಲುಪಿದೆ. ಇದೀಗ ಫೆಬ್ರವರಿ 4 ರಂದು ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಪ್ರತಿ ಬಾರಿಯೂ ಕಾಂಗ್ರೆಸ್- ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ಬಳಿಕ ಆ ಪಕ್ಷದಲ್ಲಿ ಟಿಕೆಟ್ ಸಿಗದವರನ್ನು ಸೆಳೆದು ಜೆಡಿಎಸ್ ಅಭ್ಯರ್ಥಿ ಮಾಡುತ್ತದೆ ಎನ್ನುವ ಆರೋಪ ಇತ್ತು. ಆದರೆ ಈ ಬಾರಿ ಇಬ್ಬರಿಗಿಂತಲೂ ಮೊದಲೇ ಟಿಕೆಟ್ ಘೋಷಣೆ ಮಾಡುವ ಮೂಲಕ ರಾಜಕೀಯದಲ್ಲಿ ಹೊಸ ತಂತ್ರಗಾರಿಕೆ ಮಾಡಿದೆ.
ಹಾಸನದಲ್ಲಿ ಗೊಂದಲ ಇಲ್ಲ, 2ನೇ ಪಟ್ಟಿಯಲ್ಲಿ ಘೋಷಣೆ..!
ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣ ಆಕಾಂಕ್ಷಿಯಾಗಿದ್ದು, ನಾನೇ ಸ್ಪರ್ಧೆ ಮಾಡ್ತೇನೆ. ಈ ಬಗ್ಗೆ ಈಗಾಗಲೇ ನಿರ್ಧಾರ ಆಗಿದೆ ಎಂದಿದ್ದರು. ಆ ಬಳಿಕ ಕುಮಾರಸ್ವಾಮಿ ಅಲ್ಲಗಳೆದ ಕೂಡಲೇ ಇಬ್ಬರು ಮಕ್ಕಳಾದ ಪ್ರಜ್ವಲ್ ಹಾಗು ಸೂರಜ್ ಕುಮಾರಸ್ವಾಮಿ ವಿರುದ್ಧವೇ ಹೇಳಿಕೆ ನೀಡಿದ್ದರು. ಅಂತಿಮವಾಗಿ ಎಲ್ಲದ್ದಕ್ಕೂ ತೆರೆ ಎಳೆಯುವ ಉದ್ದೇಶದಿಂದ ಹೆಚ್.ಡಿ ರೇವಣ್ಣ ಕುಮಾರಸ್ವಾಮಿ ಹಾಗು ರೇವಣ್ಣ ಮಧ್ಯೆ ಯಾವುದೇ ಒಡಕಿಲ್ಲ. ಹಾಸನ ಜಿಲ್ಲೆಯ ಕ್ಷೇತ್ರಗಳ ವಿಚಾರದಲ್ಲೂ ಕುಮಾರಸ್ವಾಮಿ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಆಗಿರುತ್ತದೆ. ಕೆಲವೊಮ್ಮೆ ಪಕ್ಷವನ್ನು ಉಳಿಸುವ ಅನಿವಾರ್ಯತೆ ಇದ್ದಾಗ ನಮ್ಮ ಕುಟುಂಬಸ್ಥರನ್ನು ಕಣಕ್ಕೆ ಇಳಿಸಿದ್ದೇವೆ ಅಷ್ಟೆ ಎನ್ನುವ ಮೂಲಕ ಕುಮಾರಸ್ವಾಮಿಯೇ ಅಂತಿಮ ಎಂದು ಷರಾ ಬರೆದಿದ್ದರು. ಇದೀಗ ಹಾಸನ ಜಿಲ್ಲೆಯ ಮೂರು ಕ್ಷೇತ್ರಗಳ ಮೇಲೆ ಕುತೂಹಲ ಹೆಚ್ಚಾಗಿದೆ.

ಹಾಸನ, ಅರಸೀಕೆರೆ, ಅರಕಲಗೂಡು ಅಭ್ಯರ್ಥಿ ಯಾರು..!?
ಹಾಸನ ಕ್ಷೇತ್ರದಲ್ಲಿ ಈಗಾಗಲೇ ವಿವಾದ ಸೃಷ್ಟಿಯಾಗಿದ್ದು ಅಂತಿಮವಾಗಿ ಭವಾನಿ ರೇವಣ್ಣನೇ ಅಭ್ಯರ್ಥಿ ಆಗ್ತಾರೋ ಅಥವಾ ಮಾಜಿ ಶಾಸಕ ದಿವಂಗತ ಹೆಚ್.ಎಸ್ ಪ್ರಕಾಶ್ ಅವರ ಪುತ್ರ ಹೆಚ್.ಪಿ ಸ್ವರೂಪ್ ಅಭ್ಯರ್ಥಿ ಆಗ್ತಾರೋ ಅನ್ನೋ ಕುತೂಹಲ ಹೆಚ್ಚಾಗಿದೆ. ಇದರ ಜೊತೆಗೆ ಈಗಾಗಲೇ ಮಾನಸಿಕವಾಗಿ ಜೆಡಿಎಸ್ ಪಕ್ಷದಿಂದ ದೂರ ಉಳಿದುಕೊಂಡು ಕಾಂಗ್ರೆಸ್ ಪಕ್ಷದ ಟಿಕೆಟ್ಗಾಗಿ ಎದುರು ನೋಡುತ್ತಿರುವ ಅರಸೀಕೆರೆಯ ಶಿವಲಿಂಗೇಗೌಡ ಹಾಗು ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ ರಾಮಸ್ವಾಮಿ ಬದಲಿಗೆ ಅಭ್ಯರ್ಥಿ ಘೋಷಣೆ ಆಗುತ್ತೋ ಅಥವಾ ಅವರೇ ಪಕ್ಷ ಬಿಟ್ಟು ಹೋಗುವ ತನಕ ಜೆಡಿಎಸ್ ಕಾಯುವ ನಿರ್ಧಾರ ಮಾಡುತ್ತದೋ..? ಎನ್ನುವುದು ಕುತೂಹಲ ಮೂಡಿಸಿದೆ. ಈಗಾಗಲೇ ಹಾಸನಜಿಲ್ಲೆಯ ಕ್ಷೇತ್ರಗಳಿಗೂ ಫೆಬ್ರವರಿ 4 ರಂದು ಟಿಕೆಟ್ ಘೋಷಣೆ ಎಂದಿದ್ದು ಯಾರು ಯಾರಿಗೆ ಟಿಕೆಟ್ ಎನ್ನುವುದು ಅಂತಿಮ ಆಗಬೇಕಿದೆ.
ಇಂದು ಪಂಚರತ್ನ ಯಾತ್ರೆ ಹರಿಹರದಲ್ಲಿ ಅಂತ್ಯ..!
ದಾವಣಗೆರೆಯ ಹರಿಹರ ತಲುಪಿರುವ ಕುಮಾರಸ್ವಾಮಿಯ ಪಂಚರತ್ನ ಯಾತ್ರೆ ಇಂದು ಸಂಜೆ ನಡೆಯುವ ಬೃಹತ್ ಸಮಾವೇಶದ ಮೂಲಕ ಅಂತ್ಯವಾಗಲಿದೆ. ಮುಂದೆ ಫೆಬ್ರವರಿ 8ರಿಂದ ಮತ್ತೆ ಯಾತ್ರೆ ಪುನಾರಂಭ ಆಗಲಿದ್ದು, ಚಿತ್ರದುರ್, ತುಮಕೂರು, ಚಕ್ಕಮಗಳೂರು, ಹಾಸನ ನಂತರ ಮೈಸೂರು ಜಿಲ್ಲೆಯನ್ನು ಪ್ರವೇಶ ಮಾಡಿ ಮೈಸೂರಿನಲ್ಲಿ ಬೃಹತ್ ಸಮಾವೇಶ ಮಾಡಲು ನಿರ್ಧಾರ ಮಾಡಲಾಗಿದೆ. ಕುಮಾರಸ್ವಾಮಿ ಹೋಗುವ ಕಡೆಯಲ್ಲಾ ಸಾವಿರಾರು ಜನರು ಸೇರುತ್ತಿದ್ದು, ಈ ಬಾರಿ ಹೊಸ ನಿರೀಕ್ಷೆ ಮೂಡಿಸಿದೆ. ಕುಮಾರಸ್ವಾಮಿ ಹೇಳುತ್ತಿರುವ 5 ಯೋಜನೆಗಳಿಂದ ಇಡೀ ಸಮಾಜವನ್ನು ಸಂಕಷ್ಟದಿಂದ ಪಾರು ಮಾಡುವ yಓಜನೆ ಹೇಳಲಾಗ್ತಿದೆ. ಅಷ್ಟೇ ಅಲ್ಲದೆ ವಯೋ ವೃದ್ಧರಿಗೆ ಕುಮಾರಸ್ವಾಮಿ 5 ಸಾವಿರ ರೂಪಾಯಿ ಧನಸಹಾಯ ನೀಡುವ ಯೋಜನೆ ಜಾರಿ ಹಾಗು ರೈತರಿಗೆ ಪ್ರತಿ ವರ್ಷ ಎಕರೆಗೆ 10 ಸಾವಿರ ರೂಪಾಯಿ ನೀಡುವ ಮೂಲಕ ಸಂಕಷ್ಟ ಬಗೆಹರಿಸುತ್ತೇನೆ ಎಂದಿರುವುದು ಮಹತ್ವ ಪಡೆದುಕೊಂಡಿದೆ.








