- ರಾಜ್ಯದಲ್ಲಿ ಟ್ರಾನ್ಸ್ ಫಾರ್ಮರ್ ಸಮಸ್ಯೆ ಇಲ್ಲ: ಸಮರ್ಪಕ ವಿದ್ಯುತ್ ಪೂರೈಕೆ ಇಂಧನ ಇಲಾಖೆ ಗುರಿ
ಚಿಕ್ಕಮಗಳೂರು, ಜ. 26, 2025: ರಾಜ್ಯದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಮತ್ತು ರೈತರ ಕೃಷಿ ಪಪ್ ಸೆಟ್ ಗಳಿಗೆ ಹಗಲು ವೇಳೆ ವಿದ್ಯುತ್ ಪೂರೈಸಲು ಕುಸುಮ್-ಸಿ ಯೋಜನೆಯಡಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕುಸುಮ್- ಬಿ ಯೋಜನೆಯಡಿ ರೈತರಿಗೆ ಸೋಲಾರ್ ಪಂಪ್ ಸೆಟ್ ಗಳನ್ನು ಒದಗಿಸುವುದು ಮತ್ತು ಕುಸುಮ್- ಸಿ ಯೋಜನೆಯಡಿ ರೈತರ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಸುವ ಫೀಡರ್ ಗಳನ್ನು ಸೋಲರೈಸೇಷನ್ ಮಾಡಲಾಗುತ್ತಿದೆ. ಕುಸುಮ್-ಸಿ ಯೋಜನೆಯಡಿ ಖಾಸಗಿ ಸಹಭಾಗಿತ್ವದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಿ ರೈತರಿಗೆ ಪೂರೈಸಲಾಗುತ್ತದೆ”, ಎಂದು ತಿಳಿಸಿದರು.
“ರಾಜ್ಯದಲ್ಲಿ ಪ್ರಸ್ತುತ 17,500 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಇದೆ. ಅದಕ್ಕೆ ತಕ್ಕಂತೆ ವಿದ್ಯುತ್ ಪೂರೈಕೆಗೂ ಕ್ರಮ ಕೈಗೊಳ್ಳಲಾಗಿದೆ. ಕುಸುಮ್- ಬಿ ಯೋಜನೆಯಡಿ ಸೋಲಾರ್ ಪಂಪ್ ಸೆಟ್ ಗಳನ್ನು ಒದಗಿಸುವುದು ಮತ್ತು ಕುಸುಮ್-ಸಿ ಯೋಜನೆಯಡಿ ಫೀಡರ್ ಸೋಲರೈಸೇಷನ್ ಮೂಲಕ ರೈತರಿಗೆ ವಿದ್ಯುತ್ ಪೂರೈಸುವುದರಿಂದ ಬೇಡಿಕೆಯ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತಿದೆ”, ಎಂದು ತಿಳಿಸಿದರು.
“ಕುಸುಮ್-ಸಿ ಯೋಜನೆಯಡಿ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ 4 ಎಕರೆ ಜಾಗ ಬೇಕಾಗುತ್ತದೆ. ಸರ್ಕಾರಿ ಜಾಗ ಇದ್ದರೆ ಅದನ್ನು ಉಚಿತವಾಗಿ ಗುತ್ತಿಗೆದಾರರಿಗೆ ನೀಡಲಾಗುವುದು. ಅವರು ಪ್ರತಿ ಎಕರೆಗೆ ವಾರ್ಷಿಕ 25 ಸಾವಿರ ರೂ.ನಂತೆ ನೀಡಬೇಕು.ಆ ಮೊತ್ತವನ್ನು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಇಟ್ಟು ಸೋಲಾರ್ ಘಟಕ ಇರುವ ಗ್ರಾಮದ ಸರ್ಕಾರಿ ಶಾಲೆ, ಅಂಗನವಾಡಿ ಅಭಿವೃದ್ಧಿ ಅಥವಾ ನೀರು ಪೂರೈಕೆ ಕಾಮಗಾರಿಗೆ ಬಳಸಿಕೊಳ್ಳಲಾಗುವುದು. ಸರ್ಕಾರಿ ಭೂಮಿ ಲಭ್ಯವಿಲ್ಲದಿದ್ದರೆ ಖಾಸಗಿಯವರಿಂದ ಭೂಮಿ ಪಡೆದು ಅವರಿಗೆ ಪ್ರತಿ ಎಕರೆಗೆ ವಾರ್ಷಿಕ 25 ಸಾವಿರ ರು. ಪಾವತಿಸಲಾಗುವುದು”, ಎಂದು ಹೇಳಿದರು.
ರಾಜ್ಯದಲ್ಲಿ ಟ್ರಾನ್ಸ್ ಫಾರ್ಮರ್ ಸಮಸ್ಯೆ ಇಲ್ಲ:
“ರಾಜ್ಯದಲ್ಲಿ ಟ್ರಾನ್ಸ್ ಫಾರ್ಮರ್ ಗಳ ಕೊರತೆ ಇಲ್ಲ. ಈಗಾಗಲೇ ರಾಜ್ಯಾದ್ಯಂತ ಟ್ರಾನ್ಸ್ ಫಾರ್ಮರ್ ಬ್ಯಾಂಕ್ ಗಳನ್ನು ಸ್ಥಾಪಿಸಿ ದಾಸ್ತಾನು ಮಾಡಲಾಗಿದೆ. ಟ್ರಾನ್ಸ್ ಫಾರ್ಮರ್ ಗಳ ಸಮಸ್ಯೆ ಎದುರಾದರೆ ಟೋಲ್ ಫ್ರೀ ನಂಬರ್ 1912ಗೆ ಕರೆ ಮಾಡಿದ 72 ಗಂಟೆಗಳಲ್ಲಿ ಟ್ರಾನ್ಸ್ ಫಾರ್ಮರ್ ಆಳವಡಿಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ”, ಎಂದರು.
“ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂಧನ ಇಲಾಖೆಯ ಪ್ರಗತಿ ಪರಿಶೀಲನ ಸಭೆ ನಡೆಸಿದ್ದೇನೆ. ಎಲ್ಲಿಯೂ ಟ್ರಾನ್ಸ್ ಫಾರ್ಮರ್ ಗಳ ಕೊರತೆ ಇರುವ ಬಗ್ಗೆ ಮಾಹಿತಿ ಬಂದಿಲ್ಲ. ಜನರಿಗೆ ಸಮರ್ಪಕವಾಗಿ ವಿದ್ಯುತ್ ಒದಗಿಸುವುದು ಇಂಧನ ಇಲಾಖೆಯ ಗುರಿಯಾಗಿದೆ”, ಎಂದರು.
“ರಾಜ್ಯದಲ್ಲಿ 4.50 ಲಕ್ಷ ಅಕ್ರಮ ಪಂಪ್ ಸೆಟ್ ಗಳಿದ್ದವು. ಈ ಪೈಕಿ 2.5 ಲಕ್ಷ ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗಿದೆ. ಉಳಿದ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಬೇಕಾಗಿದೆ. ಹೀಗಾಗಿ ವಿದ್ಯುತ್ ಲೈನ್ ನಿಂದ 500 ಮೀಟರ್ ಒಳಗಡೆ ಇರುವ ಕೊಳವೆ ಬಾವಿಗಳಿಗೆ ಸಂಪರ್ಕ ಸಕ್ರಮಗೊಳಿಸಲಾಗುವುದು. 500 ಮೀಟರ್ ಗಿಂತ ದೂರ ಇರುವ ಕೊಳವೆ ಬಾವಿಗಳಿಗೆ ಕುಸುಮ್- ಬಿ ಯೋಜನೆ ಅಡಿ ಸೌರ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ”, ಎಂದು ಮಾಹಿತಿ ನೀಡಿದರು.
“ಗಣರಾಜ್ಯೋತ್ಸವ ಅಂಗವಾಗಿ ಮೂರು ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಏರ್ಪಡಿಸಿರುವುದರಿಂದಾಗಿ ಗಣರಾಜ್ಯೋತ್ಸವ ಒಂದು ರೀತಿಯ ಹಬ್ಬವಾಗಿ ಪರಿವರ್ತನೆಯಾಗಿದೆ. ಇಲ್ಲಿ ನಮ್ಮ ಸಂಸ್ಕೃತಿ ಹಾಗೂ ಆಹಾರ ಪದ್ಧತಿಯನ್ನು ಪರಿಚಯ ಮಾಡುವ ಕೆಲಸ ಮಾಡಲಾಗಿದೆ ಎಂದರು.ಅವರಿಗೆ ಮನವಿ ಮಾಡಲಾಗಿದೆ”, ಎಂದು ಹೇಳಿದರು.